ರಾಜ್ಯವ್ಯಾಪಿ ಉತ್ತಮ ಮಳೆ ಹಿನ್ನೆಲೆಯಲ್ಲಿ ಈ ವಾರವೇ ಭದ್ರಾ ಕಾಡಾ ಸಮಿತಿ ಸಭೆ ನಡೆಸಿ, ಆಗಸ್ಟ್ ಮೊದಲ ವಾರದಿಂದಲೇ ಭದ್ರಾ ನಾಲೆಗಳಿಗೆ ನೀರು ಹರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ತಿಳಿಸಿದ್ದಾರೆ.
ದಾವಣಗೆರೆ (ಜು.31): ರಾಜ್ಯವ್ಯಾಪಿ ಉತ್ತಮ ಮಳೆ ಹಿನ್ನೆಲೆಯಲ್ಲಿ ಈ ವಾರವೇ ಭದ್ರಾ ಕಾಡಾ ಸಮಿತಿ ಸಭೆ ನಡೆಸಿ, ಆಗಸ್ಟ್ ಮೊದಲ ವಾರದಿಂದಲೇ ಭದ್ರಾ ನಾಲೆಗಳಿಗೆ ನೀರು ಹರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ತಿಳಿಸಿದ್ದಾರೆ. ಯಾವ ದಿನದಿಂದ ನಾಲೆಗಳಿಗೆ ನೀರು ಹರಿಸಬೇಕೆಂಬ ಬಗ್ಗೆ ಭದ್ರಾ ಕಾಡಾ ಸಮಿತಿ ಸಭೆಯಲ್ಲೇ ದಿನಾಂಕ ನಿಗದಿಪಡಿಸಲಾಗುವುದು ಎಂದು ಪತ್ರಿಕಾ ಹೇಳಿಕೆ ನೀಡಿದ್ದಾರೆ.
ದೇವರ ಕೃಪೆಯಿಂದ ರಾಜ್ಯವ್ಯಾಪಿ ಸರಿಯಾದ ಸಮಯಕ್ಕೆ ಮಳೆಯಾಗಿದ್ದರಿಂದ ರೈತರ ಮೊಗದಲ್ಲೂ ಮಂದಹಾಸ ಮೂಡಿದೆ. ಭದ್ರಾ ಅಣೆಕಟ್ಟೆಯಲ್ಲಿ ಈಗ 161.6 ಅಡಿ ನೀರು ಇದ್ದು, ಒಳ ಹರಿವು ಉತ್ತಮವಾಗಿದೆ. ಶೀಘ್ರವೇ ನೀರಾವರಿ ಸಲಹಾ ಸಮಿತಿ ರಚಿಸಲಾಗುವುದು. ಮುಂಗಾರು ಆರಂಭದಲ್ಲಿ ಮಳೆ ವಿಳಂಬವಾದರೂ, ನಂತರ ಜುಲೈನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಬಂದಿದ್ದರಿಂದ ಭದ್ರಾ ಡ್ಯಾಂಗೆ ಉತ್ತಮವಾಗಿ ನೀರು ಹರಿದು ಬರುತ್ತಿದೆ ಎಂದು ತಿಳಿಸಿದ್ದಾರೆ.
ಮೊದಲು 5 ಗ್ಯಾರಂಟಿಗೆ ಆದ್ಯತೆ, ಬಳಿಕ ಅಭಿವೃದ್ಧಿಗೆ ಒತ್ತು: ಸಚಿವ ಮಲ್ಲಿಕಾರ್ಜುನ್
ಬಿತ್ತನೆ ಹಿನ್ನೆಲೆ ನೀರು ಅವಶ್ಯ: ವಾಡಿಕೆಯಂತೆ ಭದ್ರಾ ಡ್ಯಾಂನಲ್ಲಿ ನೀರಿನ ಮಟ್ಟವು 162 ಅಡಿ ಇದ್ದರೆ ಭದ್ರಾ ನಾಲೆಗಳಿಗೆ ಮಳೆಗಾಲದ ಬೆಳೆಗಾಗಿ ನೀರು ಹರಿಸಲಾಗುತ್ತದೆ. ಈಗಾಗಲೇ ದಾವಣಗೆರೆ ಜಿಲ್ಲೆಯ ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಬಿತ್ತನೆ ಕಾರ್ಯ ಶುರುವಾಗಿದೆ. ಕೆಲ ಕಡೆ ರೈತರು ಬಿತ್ತನೆ ಮಾಡಿದ್ದು, ಉಳಿದ ರೈತರು ಭದ್ರಾ ನಾಲೆ ನೀರಿಗಾಗಿ ಕಾಯುತ್ತಿದ್ದಾರೆ. ಬಿತ್ತನೆ ಶುರುವಾದ ಹಿನ್ನೆಲೆಯಲ್ಲಿ ನೀರಿನ ಅವಶ್ಯಕತೆ ಇದೆ ಎಂದು ವಿವರಿಸಿದ್ದಾರೆ. ಆ.1ಕ್ಕೆ ನಾಲೆಗೆ ನೀರು ಹರಿಸಿ, ರೈತ ಒಕ್ಕೂಟ ಮನವಿ: ಭದ್ರಾ ಡ್ಯಾಂನಿಂದ ಭದ್ರಾ ನಾಲೆಗಳಿಗೆ ಆ.1ರಿಂದಲೇ ನೀರು ಹರಿಸಬೇಕು.
ಜಿಲ್ಲೆಯಲ್ಲಿ ಸುಮಾರು 60 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲು ಭದ್ರಾ ಡ್ಯಾಂ ಆಸರೆಯಾಗಿದೆ. ಈಗಾಗಲೇ ಅಚ್ಚುಕಟ್ಟು ಪ್ರದೇಶದ ಅರ್ಧದಷ್ಟುರೈತರು ಬೇರೆ ಮೂಲಗಳಿಂದ ನೀರು ಬಳಸಿ, ಭತ್ತದ ಸಸಿ ಬೆಳೆಸಿದ್ದಾರೆ. ಉಳಿದ ಅರ್ಧದಷ್ಟುರೈತರು ನಾಲೆಗೆ ನೀರು ಬಿಟ್ಟನಂತರ ಬೀಜ ಚೆಲ್ಲುವವರಿದ್ದಾರೆ. ಮುಂಗಡ ಭತ್ತ ನಾಟಿ ಮಾಡಿದ, ಈಗ ನಾಟಿ ಮಾಡಲಿರುವ ರೈತರಿಗೆ 2 ತಿಂಗಳ ಅಂತರವಾಗಲಿದೆ. ಭತ್ತದ ಕಟಾವಿಗೆ 2 ತಿಂಗಳು ಹೆಚ್ಚುವರಿ ನೀರು ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಆ.1ರಿಂದಲೇ ನಾಲೆಗೆ ನೀರು ಹರಿಸುವಂತೆ ರೈತ ಒಕ್ಕೂಟವು ಜಿಲ್ಲಾಡಳಿತಕ್ಕೂ ಒತ್ತಾಯಿಸಿದೆ.
ಪಠ್ಯದಲ್ಲಿ ಸುಗಮ ಸಂಗೀತ ಸೇರ್ಪಡೆಗೊಳಿಸಿ: ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ
ದಾವಣಗೆರೆ ಜಿಲ್ಲೆಯ ಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ಆಗಸ್ಟ್ ಮೊದಲ ವಾರದೊಳಗಾಗಿ ನೀರು ಹರಿಸಲು ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದು, ಭದ್ರಾ ಕಾಡಾ ಸಮಿತಿ ಸಭೆ ಕರೆದು, ರೈತರಿಗೆ ಅನುಕೂಲವಾಗುವಂತೆ ನಿರ್ಣಯ ಕೈಗೊಳ್ಳುತ್ತೇವೆ.
-ಎಸ್.ಎಸ್.ಮಲ್ಲಿಕಾರ್ಜುನ, ಜಿಲ್ಲಾ ಉಸ್ತುವಾರಿ ಸಚಿವ