Chikkamagaluru: ಸಾಂಪ್ರಾದಾಯಿಕ ಶೈಲಿಯಲ್ಲಿ ಗದ್ದೆ ನಾಟಿ ಮಾಡಿದ ಮಲೆನಾಡಿಗರು

Published : Jul 31, 2023, 08:23 PM IST
Chikkamagaluru: ಸಾಂಪ್ರಾದಾಯಿಕ ಶೈಲಿಯಲ್ಲಿ ಗದ್ದೆ ನಾಟಿ ಮಾಡಿದ ಮಲೆನಾಡಿಗರು

ಸಾರಾಂಶ

ದಿನದಿಂದ ದಿನಕ್ಕೆ ಪಾಶ್ಚಿಮಾತ್ಯ ಸಂಸ್ಕೃತಿಯನ್ನ ಮೈಗೂಡಿಸಿಕೊಳ್ಳುತ್ತಿರೋ ಆಧುನಿಕ ಸಮಾಜದ ಮಧ್ಯೆ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಪುರಾತನ ಸಂಸ್ಕೃತಿಯ ಮೂಲಕ ಗದ್ದೆ ನಾಟಿ ಮಾಡಿ ಗಮನ ಸೆಳೆದಿದ್ದಾರೆ. 

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಜು.31): ದಿನದಿಂದ ದಿನಕ್ಕೆ ಪಾಶ್ಚಿಮಾತ್ಯ ಸಂಸ್ಕೃತಿಯನ್ನ ಮೈಗೂಡಿಸಿಕೊಳ್ಳುತ್ತಿರೋ ಆಧುನಿಕ ಸಮಾಜದ ಮಧ್ಯೆ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಪುರಾತನ ಸಂಸ್ಕೃತಿಯ ಮೂಲಕ ಗದ್ದೆ ನಾಟಿ ಮಾಡಿ ಗಮನ ಸೆಳೆದಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹೊರನಾಡಿನ ದೊಡ್ಡಮನೆ ರಾಜೇಂದ್ರ ಪ್ರಸಾದ್ ಹೆಗ್ಗಡೆಯವರ ದೇವರಗದ್ದೆಯಲ್ಲಿ ಭತ್ತದ ಗದ್ದೆಯಲ್ಲಿ ಸುಮಾರು 1000ಕ್ಕೂ ಹೆಚ್ಚು ಜನ ಏಕಕಾಲದಲ್ಲಿ ಭತ್ತದ ಗದ್ದೆ ನಾಟಿ ಮಾಡಿದ್ದಾರೆ. 

ಸಾಂಪ್ರಾದಾಯಿಕ ಶೈಲಿಯಲ್ಲಿ ಗದ್ದೆ ನಾಟಿ: ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಹೊರನಾಡು ಗ್ರಾಮದಲ್ಲಿ ಕಳೆದ 21 ತಲೆಮಾರುಗಳಿಂದ ಅಂದ್ರೆ ಸುಮಾರು 500 ವರ್ಷಗಳಿಂದ ನಡೆದುಕೊಂಡು ಬಂದ ಗ್ರಾಮೀಣ ಭಾಗದ ಸಂಪ್ರದಾಯ ಇಂದಿಗೂ ಜೀವಂತವಾಗಿದೆ. ಪ್ರತಿ ವರ್ಷ ಗದ್ದೆ ನಾಟಿ ಮಾಡುವ ಸಮಯದಲ್ಲಿ ಹೊರನಾಡು ಗ್ರಾಮದ ದೊಡ್ಡಮನೆ ರಾಜೇಂದ್ರ ಹೆಗ್ಗಡೆ ಎಂಬುವರ ಮನೆಯ ಗದ್ದೆ ನಾಟಿ ಮಾಡಿದ ಬಳಿಕವೇ ಊರಿನ ಉಳಿದ ಗದ್ದೆಗಳನ್ನ ನಾಟಿ ಮಾಡೋದು. ದೊಡ್ಡಮನೆ ಗದ್ದೆಯ ನಾಟಿ ಮಾಡುವ ದಿನ ಗ್ರಾಮದ ಪ್ರತಿಯೊಂದು ಮನೆಯಿಂದಲೂ ಒಬ್ಬೊಬ್ಬರು ಹೋಗಿ ನಾಟಿ ಮಾಡುವ ಸಂಪ್ರದಾಯಕ್ಕೆ ಐದು ಶತಮಾನಗಳ ಇತಿಹಾಸವಿದೆ. ಗಂಡಸರು-ಹೆಂಗಸರು ಎಲ್ಲಾರೂ ಗದ್ದೆಯನ್ನ ನಾಟಿ ಮಾಡುತ್ತಾರೆ. ಮರು ದಿನದಿಂದ ಗ್ರಾಮದ ಬೇರೆ ಗದ್ದೆಗಳನ್ನ ನಾಟಿ ಮಾಡುತ್ತಾರೆ.

ಜುಲೈನಿಂದಲೇ ಫ್ರೀ ವಿದ್ಯುತ್‌: ಸಚಿವ ಕೆ.ಜೆ.ಜಾರ್ಜ್‌

ಮೂಡಿಗೆರೆ, ಕಳಸ, ಕೊಪ್ಪ, ಶೃಂಗೇರಿ, ಎನ್.ಆರ್.ಪುರ, ಬಲಿಗೆ, ಬಾಳೆಹೊನ್ನೂರು, ಬಸರೀಕಟ್ಟೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಿಂದ ಬಂದಿದ್ದ ಸಾವಿರಾರು ಜನ ನೂರಾರು ಎಕರೆ ಪ್ರದೇಶದ ಭತ್ತದ ಗದ್ದೆಯಲ್ಲಿ ಏಕಕಾಲದಲ್ಲಿ ನಾಟಿ ಮಾಡಿದ್ದಾರೆ. ಸಂಪ್ರಾದಾಯಿಕ ಶೈಲಿಯಲ್ಲಿ ಜನಪದ ಗೀತೆ ಹಾಡುತ್ತಾ ಸಾವಿರಾರು ಪರುಷರು-ಮಹಿಳೆಯರು ನಾಟಿ ಮಾಡಿದ್ದಾರೆ. ರಾಜೇಂದ್ರ ಪ್ರಸಾದ್ ಹೆಗ್ಗಡೆಯವರ ಗದ್ದೆಯಲ್ಲಿ ನಾಟಿ ಮಾಡಿದ ಬಳಿಕವೇ ಸುತ್ತಮುತ್ತಲಿನ ಗದ್ದೆಗಳಲ್ಲಿ ನಾಟಿ ಕಾರ್ಯ ಆರಂಭ ಮಾಡೋದು. ಎಲ್ಲರೂ ತಮ್ಮ ಗದ್ದೆಯನ್ನ ಹದ ಮಾಡಿ ರೆಡಿ ಮಾಡಿರುತ್ತಾರೆ. ಆದರೆ, ನಾಟಿ ಮಾಡಿರುವುದಿಲ್ಲ. ರಾಜೇಂದ್ರ ಪ್ರಸಾದ್ ಅವರ ಗದ್ದೆಯಲ್ಲಿ ನಾಟಿ ಮಾಡಿದ ಬಳಿಕವೇ ತಮ್ಮ ಗದ್ದೆಗಳಲ್ಲಿ ನಾಟಿ ಕಾರ್ಯ ಮಾಡೋದು. 

ಮಲೆನಾಡಿನಲ್ಲಿ ಮುಂಗಾರು ಮಳೆ ಬಿಡುವು: ಜನ ಜೀವನ ಸಹಜ ಸ್ಥಿತಿಯತ್ತ

ಹಣವಿಲ್ಲದೇ ಕೆಲಸ: ದೊಡ್ಡಮನೆ ರಾಜೇಂದ್ರ ಪ್ರಸಾದ್ ಹೆಗ್ಗಡೆಯವರ ಹೆಗ್ಗಡೆಯವರನ್ನ ಅನಾದಿ ಕಾಲದಿಂದ ಗ್ರಾಮದ ಜನ ಗೌರವಿಸಿಕೊಂಡು ಬಂದಿದ್ದಾರೆ. ಇವರನ್ನ ಪಾಳೇಗಾರರು, ಗೌಡರು, ಪಟೇಲರು ಎಂಬ ಮುಂತಾದ ಹೆಸರಿನಿಂದಲೂ ಕರೆಯುತ್ತಾರೆ.ಸಂಪ್ರದಾಯ ಕಣ್ಮರೆಯಾಗುತ್ತಿದೆ. ಅಲ್ಲೊಂದು-ಇಲ್ಲೊಂದು ಹಳ್ಳಿಯಲ್ಲಿ ನಮ್ಮ ಪರಂಪರೆಯ ಹೆಜ್ಜೆ ಗುರುತುಗಳು ಉಳಿದಿವೆ. ಆದ್ರೆ, ಈ ರೀತಿ 500 ವರ್ಷಗಳಿಂದ ಹಳ್ಳಿಯೊಂದರಲ್ಲಿ ಒಂದು ಸಂಪ್ರದಾಯ ಆಧುನಿಕತೆಯ ಭರಾಟೆಯ ಮಧ್ಯೆ ಇಂದಿಗೂ ನಿರಂತರವಾಗಿದೆ.ಇಲ್ಲಿಗೆ ಬಂದಂತಹಾ ಯಾರೊಬ್ಬರು ಕೂಡ ಒಂದೇ ಒಂದು ರೂಪಾಯಿ ಹಣ ಪಡೆದಿಲ್ಲ. ಬಂದಂತಹಾ ಎಲ್ಲರಿಗೂ ದೊಡ್ಡಮನೆ ಕುಟುಂಬ ಊಟದ ವ್ಯವಸ್ಥೆ ಕಲ್ಪಿಸಿತ್ತು. ಈ ಗದ್ದೆಯಲ್ಲಿ ಬೆಳೆದ ಭತ್ತವನ್ನ ಹೊರನಾಡು ಅನ್ನಪೂಣೇಶ್ವರಿ ದೇಗುಲದಲ್ಲಿ ದೇವಿಯ ನೈವೇದ್ಯಕ್ಕೆ ಬಳಸುತ್ತಾರೆ.

PREV
Read more Articles on
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!