
ದಾವಣಗೆರೆ: ನೀರಾವರಿ ಸಲಹಾ ಸಮಿತಿ ಸಭೆ ಕರೆಯದೆ ಏಕಾಏಕಿ ಭದ್ರಾ ಜಲಾಶಯದಿಂದ ಎಡದಂಡೆ ಹಾಗೂ ಬಲದಂಡೆ ನಾಲೆಗಳಿಗೆ 10 ದಿನಗಳ ಕಾಲ 1 ಟಿಎಂಸಿ ನೀರು ಹರಿಸಲು ರಾಜ್ಯ ಸರ್ಕಾರ ಆದೇಶಿಸಿರುವುದು ದಾವಣಗೆರೆ ಜಿಲ್ಲೆಯಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರದ ಈ ನಿರ್ಧಾರವನ್ನು ವಿರೋಧಿಸಿ ಬೀದಿಗಿಳಿದಿರುವ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದು, ಪೊಲೀಸರು ಅವರನ್ನು ಮಾರ್ಗಮಧ್ಯೆಯೇ ವಶಕ್ಕೆ ಪಡೆದಿದ್ದಾರೆ. ಮತ್ತೊಂದೆಡೆ, ಸ್ವಪಕ್ಷದ ಸರ್ಕಾರದ ವಿರುದ್ಧವೇ ತಿರುಗಿಬಿದ್ದಿರುವ ಹೊನ್ನಾಳಿ ಕಾಂಗ್ರೆಸ್ ಶಾಸಕ ಡಿ.ಜಿ. ಶಾಂತನಗೌಡ, ನೀರು ಬಿಡುಗಡೆ ತಡೆಯದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ನೀಡಿ ರಾಜೀನಾಮೆ ಪತ್ರವನ್ನು ಪ್ರದರ್ಶಿಸಿದ್ದಾರೆ.
ಭದ್ರಾ ಜಲಾಶಯದಿಂದ ಸದ್ಯ 10 ದಿನಗಳ ಕಾಲ ನೀರು ಬಿಡುಗಡೆ ಮಾಡುವ ಆದೇಶವನ್ನು ತಕ್ಷಣ ಹಿಂಪಡೆಯಬೇಕು ಎಂದು ಒತ್ತಾಯಿಸಿ ಭಾರತೀಯ ರೈತ ಒಕ್ಕೂಟದ ನೇತೃತ್ವದಲ್ಲಿ ರೈತ ಮುಖಂಡ ನಾಗೇಶ್ವರ್ ರಾವ್ ಹಾಗೂ ಇತರ ರೈತರು ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ಮನೆಗೆ ಮುತ್ತಿಗೆ ಹಾಕಲು ತೆರಳಿದ್ದರು. ಆದರೆ, ದಾವಣಗೆರೆ ಹೊರವಲಯದ ಶಾಮನೂರು ಸೇತುವೆ ಬಳಿಯೇ ಪೊಲೀಸರು ರೈತರನ್ನು ತಡೆದು ವಶಕ್ಕೆ ಪಡೆದರು.
ಅರ್ಧ ದಾರಿಯಲ್ಲೇ ತಡೆದ ಪೊಲೀಸರ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ರೈತ ಮುಖಂಡ ನಾಗೇಶ್ವರ್ ರಾವ್, ಸಚಿವರ ನಿವಾಸದ ಗೇಟ್ ಬಳಿ ಸಚಿವರನ್ನು ಕರೆಸುವಂತೆ ಪಟ್ಟು ಹಿಡಿದರು. "ಇಸ್ಪೀಟ್, ಮಟ್ಕಾ ದಂಧೆ ನಡೆಸುವವರನ್ನು ಬಿಟ್ಟು ಅನ್ನದಾತರ ಮೇಲೆ ಪೊಲೀಸರು ದೌರ್ಜನ್ಯ ಎಸಗುತ್ತಿದ್ದಾರೆ. ನಮಗೆ ನೀರು ಕೊಡಲು ಸಾಧ್ಯವಾಗದಿದ್ದರೆ ಗಾಂಜಾ ಬೆಳೆಯಲಾದರೂ ಅನುಮತಿ ಕೊಡಿ" ಎಂದು ರೈತರು ಕಿಡಿಕಾರಿದರು. ಹಿರಿಯೂರು ಉಪಚುನಾವಣೆ ಹಿನ್ನೆಲೆಯಲ್ಲಿ ಅಪ್ಪರ್ ಭದ್ರಾಗೆ 4 ಟಿಎಂಸಿ ನೀರು ಹರಿಸಲಾಗಿತ್ತು. ಈಗ ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ ಅವರ ಒತ್ತಡಕ್ಕೆ ಮಣಿದು 10 ದಿನ ನೀರು ಬಿಡಲಾಗುತ್ತಿದೆ. ಕೇವಲ 10 ದಿನ ನೀರು ಬಿಟ್ಟರೆ ಬಲದಂಡೆ ನಾಲೆಯ ಕೊನೆಯ ಭಾಗದ ರೈತರಿಗೆ ಹನಿ ನೀರೂ ತಲುಪುವುದಿಲ್ಲ. ಆದ್ದರಿಂದ ದಿನಾಂಕ ನಿಗದಿಪಡಿಸಿ ಸತತ 110 ದಿನಗಳ ಕಾಲ ನೀರು ಹರಿಸಬೇಕು ಎಂದು ರೈತರು ಆಗ್ರಹಿಸಿದರು.
ಭದ್ರಾ ನೀರು ಹಂಚಿಕೆ ವಿಚಾರದಲ್ಲಿ ಸರ್ಕಾರದ ನಡೆಯನ್ನು ಖಂಡಿಸಿ ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ಶಾಸಕ ಡಿ.ಜಿ. ಶಾಂತನಗೌಡ, "ಇದು ಸರ್ಕಾರದ ಅತ್ಯಂತ ಅವೈಜ್ಞಾನಿಕ ಹಾಗೂ ತಲೆ ಇಲ್ಲದ ತೀರ್ಮಾನವಾಗಿದೆ. ಭದ್ರಾ ಡ್ಯಾಂ ಕೇವಲ ಭದ್ರಾವತಿಯ ಆಸ್ತಿಯಲ್ಲ. 1 ಟಿಎಂಸಿ ನೀರು ಬಿಟ್ಟರೆ ಅದು ಕೇವಲ ಭದ್ರಾವತಿ ತಾಲೂಕಿಗೆ ಮಾತ್ರ ಸೀಮಿತವಾಗುತ್ತದೆ" ಎಂದು ಅಸಮಾಧಾನ ಹೊರಹಾಕಿದರು.
ಘಟನೆಯ ಹಿನ್ನೆಲೆ ವಿವರಿಸಿದ ಅವರು, "ನೂರಾರು ರೈತರು ನೀರಿಗಾಗಿ ಮನವಿ ಮಾಡಿದಾಗ, ಇದೇ ತಿಂಗಳ 19ರಂದು ಕ್ಯಾಬಿನೆಟ್ ಸಭೆ ಇದ್ದು, ಆದಷ್ಟು ಬೇಗ ಐಸಿಸಿ ಸಭೆ ಕರೆದು ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದ್ದೆ. ಆದರೆ ನಿನ್ನೆ ಸಂಜೆ 5 ಗಂಟೆಗೆ ದಿಶಾ (DISHA) ಸಭೆಯಲ್ಲಿದ್ದಾಗ, 15ನೇ ತಾರೀಖು ರಾತ್ರಿಯೇ 1,500 ಕ್ಯೂಸೆಕ್ ನೀರು ಬಿಡುಗಡೆ ಮಾಡಿರುವ ಮಾಹಿತಿ ಬಂತು. ಅಧಿಕಾರಿಗಳನ್ನು ಪ್ರಶ್ನಿಸಿದಾಗ ಯಾವುದೇ ಆದೇಶ ಪ್ರತಿ ಇಲ್ಲದೆಯೇ ನೀರು ಬಿಟ್ಟಿರುವುದು ತಿಳಿಯಿತು. ಸಂಸದರು, ಜಿಲ್ಲಾಧಿಕಾರಿ ಹಾಗೂ ಎಸ್ಪಿ ಸಮ್ಮುಖದಲ್ಲಿ ನೀರು ನಿಲ್ಲಿಸುವುದಾಗಿ ಹೇಳಿದ್ದ ಅಧಿಕಾರಿಗಳು, ಇಂದು ಬೆಳಗ್ಗೆ ಜಲಸಂಪನ್ಮೂಲ ಸಚಿವರ ಪತ್ರ ಉಲ್ಲೇಖಿಸಿ 10 ದಿನಗಳ ಕಾಲ 1 ಟಿಎಂಸಿ ನೀರು ಹರಿಸಲು ಅಧಿಕೃತ ಆದೇಶ ಹೊರಡಿಸಿದ್ದಾರೆ" ಎಂದು ಆರೋಪಿಸಿದರು. ನಾನು ಬೂಟಾಟಿಕೆ ರಾಜಕೀಯ ಮಾಡುವುದಿಲ್ಲ, ತಕ್ಷಣ ನೀರು ಬಿಡುಗಡೆ ತಡೆಹಿಡಿಯದಿದ್ದರೆ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ನನ್ನ ರಾಜೀನಾಮೆ ಸಲ್ಲಿಸುವುದು ಖಚಿತ ಎಂದು ಶಾಂತನಗೌಡ ಗುಡುಗಿದರು.
ಸರ್ಕಾರದ ಈ ಏಕಪಕ್ಷೀಯ ನಿರ್ಧಾರಕ್ಕೆ ಕಾಂಗ್ರೆಸ್ ಶಾಸಕ ಕೆ.ಎಸ್. ಬಸವಂತಪ್ಪ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಭದ್ರಾ ಜಲಾಶಯ ಇಡೀ ಅಚ್ಚುಕಟ್ಟು ಪ್ರದೇಶಕ್ಕೆ ಸೇರಿದ್ದು. ಯಾವುದೇ ಸಚಿವರು ಅಥವಾ ಸ್ಥಳೀಯ ಶಾಸಕರ ಗಮನಕ್ಕೆ ತರದೆ ಜಲಸಂಪನ್ಮೂಲ ಇಲಾಖೆ ಅವೈಜ್ಞಾನಿಕ ಆದೇಶ ಹೊರಡಿಸಿದೆ. ಕೇವಲ ಒಂದು ಟಿಎಂಸಿ ನೀರು ನಾಲೆಯ ಹತ್ತು ಕಿಲೋಮೀಟರ್ ವ್ಯಾಪ್ತಿಗೂ ತಲುಪುವುದಿಲ್ಲ" ಎಂದರು.
"ಇನ್ನೂ ಬೇಸಿಗೆಯೇ ಆರಂಭವಾಗಿಲ್ಲ, ಆಗಲೇ ಬೇಸಿಗೆ ಬೆಳೆಗೆ ಎಂದು ನೀರು ಬಿಡುಗಡೆ ಮಾಡಿರುವುದು ಸರಿಯಲ್ಲ. ನಮ್ಮ ಭಾಗದಲ್ಲೂ ಅಡಿಕೆ ಮತ್ತು ತೆಂಗಿನ ತೋಟಗಳು ನೀರಿಲ್ಲದೆ ಒಣಗುತ್ತಿವೆ. ಹಿರಿಯ ಶಾಸಕರಾದ ಡಿ.ಜಿ. ಶಾಂತನಗೌಡ ಅವರು ರಾಜೀನಾಮೆ ನೀಡುವ ಮಾತನ್ನಾಡುತ್ತಿದ್ದು, ಅವರ ಮನವೊಲಿಸಲು ಪ್ರಯತ್ನಿಸುತ್ತೇನೆ. ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಜಿಲ್ಲೆಯ ಎಲ್ಲಾ ಶಾಸಕರು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ನೀರು ಬಿಡುಗಡೆ ತಡೆಯುವಂತೆ ಮತ್ತು ಐಸಿಸಿ ಸಭೆ ಕರೆದು ವೈಜ್ಞಾನಿಕ ತೀರ್ಮಾನ ಕೈಗೊಳ್ಳುವಂತೆ ಒತ್ತಾಯಿಸುತ್ತೇವೆ" ಎಂದು ಬಸವಂತಪ್ಪ ಸ್ಪಷ್ಟಪಡಿಸಿದರು.