
ಗಂಗಾವತಿ (ಜು.03): ಪ್ರಸ್ತುತ ಮಳೆ ಕೊರತೆಯಿಂದಾಗಿ ಭದ್ರಾ ಜಲಾಶಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಸಂಗ್ರಹವಾಗಿರುವುದಿಲ್ಲ. ಆದಕಾರಣ ಮುಂಗಾರು ಹಂಗಾಮಿನ ಬೆಳೆಗಳಿಗೆ ಬಲದಂಡೆ ಮತ್ತು ಎಡದಂಡೆ ನಾಲೆಯಲ್ಲಿ ನೀರು ಹರಿಸಲು ಸಾಧ್ಯವಾಗುವುದಿಲ್ಲವೆಂದು ಕರ್ನಾಟಕ ನೀರಾವರಿ ನಿಗಮದ ಬಿ.ಆರ್. ಪ್ರಾಜೆಕ್ಟ್, ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ, ಹಾಗೂ ಅಧೀಕ್ಷಕ ಅಭಿಯಂತರರು ರೈತರಿಗೆ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ.
ಜಲಾಶಯದಲ್ಲಿ ಸಂಗ್ರಹವಾಗಿರುವ ನೀರನ್ನು ಕುಡಿಯಲು ಮಾತ್ರ ಬಳಸಲು ಸರ್ಕಾರದ ಆದೇಶವಾಗಿರುವ ಹಿನ್ನಲೆಯಲ್ಲಿ ಅಚ್ಚುಕಟ್ಟು ಭಾಗದ ಎಲ್ಲಾ ರೈತರು ಇಲಾಖೆಯೊಂದಿಗೆ ಸಹಕರಿಸಬೇಕು. ಮುಂಬರುವ ದಿನಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗಿ ಜಲಾಶಯ ಭರ್ತಿಯಾದಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ಆಯೋಜಿಸಿ ಬೆಳೆಗಳಿಗೆ ನೀರು ಹರಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಭದ್ರಾ ಜಲಾಶಯ ಖಾಲಿಯಾಗಿರುವುದರಿಂದ ತುಂಗಭದ್ರಾ ಜಲಾಶಯದ ಅಚ್ಚುಕಟ್ಟು ರೈತರು ಸಹ ಈಗ ಆತಂಕಗೊಂಡಿದ್ದು, ಜಲಾಶಯದ ಕ್ರಸ್ಟ್ ಗೆಟ್ ದುರಸ್ತಿಯಿಂದಾಗಿ ತುಂಗಭದ್ರಾ ಜಲಾಶಯದಲ್ಲಿ ನೀರು ಇದ್ದರು ಸಹ ಹಿಂಗಾರು ಬೇಸಿಗೆ ಬೆಳೆಗೆ ನೀರು ಹರಿಸದ ಪರಿಣಾಮ ರೈತರು ಕಳೆದ ವರ್ಷ ಒಂದೆ ಬೆಳೆಗೆ ಸಿಮೀತರಾಗಿದ್ದರು. ಈಗ ಜಲಾಶಯದಲ್ಲಿ ಹೊಸ ಗೇಟ್ ಜೋಡಿಸಿದ ಪರಿಣಾಮ ರೈತರು ಹರ್ಷಗೊಂಡಿದ್ದರು.
ಆದರೆ ಈಗ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆಯಾಗಿರುವುದರಿಂದ ಬೇಸಿಗೆ ಬೆಳೆ ಬೆಳೆಯವ ಅವಕಾಶ ಬರುತ್ತದೆಯೋ ಇಲ್ಲ ಎಂದು ಚಿಂತಿತರಾಗಿದ್ದಾರೆ. ಈ ನಡುವೆ ಭದ್ರಾ ಜಲಾಶಯದಲ್ಲಿ ನೀರು ಖಾಲಿಯಾಗಿರುವ ವಿಷಯ ತಿಳಿದು ಈಗ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಭತ್ತ ಬೆಳೆಯುವ ರೈತರು ಆತಂಕಕ್ಕಿಡಗಿದ್ದಾರೆ.