ದೀಪಾವಳಿ ಹಬ್ಬದ ವೇಳೆ ಪಟಾಕಿ ಸಿಡಿತದಿಂದ ಸಂಭವಿಸುವ ಕಣ್ಣಿನ ಗಾಯ ಪ್ರಕರಣಗಳನ್ನು ನಿರ್ವಹಿಸಲು ನಗರದ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಮುಂಜಾಗ್ರತಾ ಕ್ರಮವಾಗಿ 35 ಹಾಸಿಗೆಗಳನ್ನು ಸಜ್ಜುಗೊಳಿಸಲಾಗಿದೆ.
ಬೆಂಗಳೂರು (ಅ.30): ದೀಪಾವಳಿ ಹಬ್ಬದ ವೇಳೆ ಪಟಾಕಿ ಸಿಡಿತದಿಂದ ಸಂಭವಿಸುವ ಕಣ್ಣಿನ ಗಾಯ ಪ್ರಕರಣಗಳನ್ನು ನಿರ್ವಹಿಸಲು ನಗರದ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಮುಂಜಾಗ್ರತಾ ಕ್ರಮವಾಗಿ 35 ಹಾಸಿಗೆಗಳನ್ನು ಸಜ್ಜುಗೊಳಿಸಲಾಗಿದೆ. ಆಸ್ಪತ್ರೆಯ ತುರ್ತು ವಿಭಾಗ ದಿನದ 24 ತಾಸುಗಳ ಕಾಲ ಕಾರ್ಯ ನಿರ್ವಹಿಸಲಿದೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಆಸ್ಪತ್ರೆಯ ನಿರ್ದೇಶಕ ಡಾ। ಜಿ.ನಾಗರಾಜು, ಅಗತ್ಯ ಔಷಧ ದಾಸ್ತಾನಿನೊಂದಿಗೆ ಚಿಕಿತ್ಸೆ, ಶಸ್ತ್ರ ಚಿಕಿತ್ಸೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ವಿಶೇಷ ತಜ್ಞರನ್ನು ಒಳಗೊಂಡ ವೈದ್ಯರ ತಂಡ ಸೇವೆ ನೀಡಲು ಸಜ್ಜಾಗಿವೆ.
ಮಹಿಳೆಯರು ಹಾಗೂ ಪುರುಷರಿಗೆ ತಲಾ 10 ಹಾಗೂ ಮಕ್ಕಳಿಗೆ 15 ಹಾಸಿಗೆಗಳು ಸೇರಿ ಒಟ್ಟು 35 ಹಾಸಿಗೆಗಳನ್ನು ಪಟಾಕಿ ಗಾಯಾಳುಗಳ ಚಿಕಿತ್ಸೆಗೆ ಮೀಸಲಿಡಲಾಗಿದೆ ಎಂದು ತಿಳಿಸಿದರು. ಕಳೆದ ವರ್ಷ ಪಟಾಕಿ ಸಿಡಿತದ ಅವಘಡದಿಂದ 41 ಜನರಿಗೆ ಚಿಕಿತ್ಸೆ ನೀಡಲಾಗಿತ್ತು. ಅದರಲ್ಲಿ ಆರೇಳು ಜನರಿಗೆ ದೃಷ್ಟಿ ಸಮಸ್ಯೆಯಾಗಿದೆ. ಹೀಗಾಗಿ ಪಟಾಕಿ ಸಿಡಿಸುವಾಗ ಎಚ್ಚರಿಕೆ ವಹಿಸಬೇಕು. ಅದರಲ್ಲೂ ಮಕ್ಕಳು ಪಟಾಕಿ ಸಿಡಿಸುವಾಗ ಹೆಚ್ಚು ಎಚ್ಚರಿಕೆಯಿಂದ ಇರಬೇಕು ಎಂದು ಅವರು ಹೇಳಿದರು.
undefined
ಬೆಂಗಳೂರಿನಲ್ಲಿ 1 ಕೋಟಿ ದಾಟಿದ ಮತದಾರರ ಸಂಖ್ಯೆ: ಹೊಸದಾಗಿ 4 ಲಕ್ಷ ಸೇರ್ಪಡೆ
ಅನೇಕ ಆಸ್ಪತ್ರೆಗಳಲ್ಲಿ ವ್ಯವಸ್ಥೆ: ಪಟಾಕಿ ಅವಘಡಗಳನ್ನು ವಿಶೇಷವಾಗಿ ನಿರ್ವಹಿಸಲು ನಗರದ ನಾರಾಯಣ ನೇತ್ರಾಲಯ, ನೇತ್ರಧಾಮ, ಶಂಕರ, ಡಾ। ಅಗರವಾಲ್ ಸೇರಿದಂತೆ ನಗರದ ಅನೇಕ ಕಣ್ಣಿನ ಆಸ್ಪತ್ರೆಗಳು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿವೆ. ಹಸಿರು ಪಟಾಕಿಗಳಲ್ಲೂ ಮನುಷ್ಯನ ದೇಹಕ್ಕೆ ಹಾನಿ ಉಂಟು ಮಾಡುವ ರಾಸಾಯನಿಕಗಳಿರುತ್ತವೆ. ಮಾಲಿನ್ಯ ಪ್ರಮಾಣ ಕಡಿಮೆಯಾದರೂ, ಸ್ಫೋಟ ಮತ್ತು ಶಬ್ಧದ ತೀವ್ರತೆ ಸಾಮಾನ್ಯ ಪಟಾಕಿಗಳಂತೆಯೇ ಇರುತ್ತದೆ. ಹಾಗಾಗಿ ಜಾಗ್ರತೆಯಿಂದ ಇರಬೇಕು ಎಂದು ವೈದ್ಯರು ಎಚ್ಚರಿಸಿದ್ದಾರೆ.
ಹಬ್ಬಕ್ಕೆ ಮೊದಲೇ ಕಣ್ಣಿಗೆ ಗಾಯ: ದೀಪಾವಳಿ ಆರಂಭಕ್ಕೂ ಮೊದಲೇ ಪಟಾಕಿ ಅವಘಡ ಸಂಭವಿಸಿ ನಗರದ ಯುವಕನೊಬ್ಬ ಮಿಂಟೊ ಕಣ್ಣಿನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಮವಾರ ರಾತ್ರಿ 10 ಗಂಟೆಗೆ ಕಮ್ಮನಹಳ್ಳಿಯಲ್ಲಿ ರಸ್ತೆಯಲ್ಲಿ ಪಟಾಕಿ ಸಿಡಿಸುತ್ತಿದ್ದಾಗ ಕಣ್ಣಿಗೆ ಸಿಡಿದು ಗಾಯವಾಗಿದೆ. ರಾತ್ರಿಯೇ ಮಿಂಟೋ ಆಸ್ಪತ್ರೆಗೆ ದಾಖಲಾಗಿರುವ ಯುವಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ದರ್ಶನ್‌ಗೆ ಬೇಲಾ? ಜೈಲಾ? ಇಂದು ಆದೇಶ: ಬೆನ್ನು ಸರ್ಜರಿಗೆ ಚಿಕಿತ್ಸೆ ಪಡೆಯದಿದ್ರೆ ಮೂತ್ರ ನಿಯಂತ್ರಣ ಸಮಸ್ಯೆ
ವಿಕ್ಟೋರಿಯಾದಲ್ಲಿ ಚಿಕಿತ್ಸೆಗೆ ಸಿದ್ಧತೆ: ಪಟಾಕಿಯಿಂದ ಸಂಭವಿಸುವ ಸುಟ್ಟಗಾಯಗಳಿಗೆ ಚಿಕಿತ್ಸೆ ನೀಡಲು ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿರುವ ಮಹಾಬೋಧಿ ಸುಟ್ಟಗಾಯಗಳ ಚಿಕಿತ್ಸಾ ಕೇಂದ್ರದಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಗತ್ಯ ವೈದ್ಯರು, ಶುಶ್ರೂಷಕರು ಹಾಗೂ ಸಹಾಯಕ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ದಿನದ 24 ಗಂಟೆ ತುರ್ತು ವೈದ್ಯಕೀಯ ಸೇವೆ ಲಭ್ಯವಿರಲಿದೆ. ತೀವ್ರ ನಿಗಾ ಘಟಕ ಸೌಲಭ್ಯವೂ ಇರಲಿದೆ ಎಂದು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಡೀನ್ ಡಾ। ಕೆ.ರಮೇಶ್ ಕೃಷ್ಣ ತಿಳಿಸಿದ್ದಾರೆ. ಮಿಂಟೋ ಆಸ್ಪತ್ರೆ ಸಹಾಯವಾಣಿ ಸಂಖ್ಯೆ: 080-26707176/ 94817 40137.