ಸ್ವಚ್ಛ ಗಾಳಿಯ ದಿಕ್ಕಿನಲ್ಲಿ ಬೆಂಗಳೂರಿನ ಹೆಜ್ಜೆ: ರಾಷ್ಟ್ರೀಯ ಮಟ್ಟದಲ್ಲಿ ಕೋರಮಂಗಲ ವಾರ್ಡ್‌ಗೆ ಮನ್ನಣೆ!

Published : Nov 16, 2026, 06:54 PM IST
Ramalinga Reddy

ಸಾರಾಂಶ

ಭಾರತ ಸರ್ಕಾರದ ಸ್ವಚ್ಛ ವಾಯು ಸಮೀಕ್ಷೆ 2026ರಲ್ಲಿ ಬೆಂಗಳೂರಿನ ಬಿಟಿಎಂ ಕ್ಷೇತ್ರದ ಕೋರಮಂಗಲ ವಾರ್ಡ್ 151 ರಾಷ್ಟ್ರೀಯ ಮನ್ನಣೆ ಪಡೆದಿದೆ. ಸ್ವಚ್ಛ ಗಾಳಿ ಮತ್ತು ಪರಿಸರ ಸಂರಕ್ಷಣೆಯ ಸಾಧನೆಯ ವಿವರ ಇಲ್ಲಿದೆ.

ಬೆಂಗಳೂರು (ನ.16): ಸುಂದರ ಬೆಂಗಳೂರು.. ಸ್ವಚ್ಛ ಗಾಳಿ, ಆರೋಗ್ಯಕರ ಬದುಕು! ಈ ಆಶಯಕ್ಕೆ ಮತ್ತಷ್ಟು ಬಲ ತುಂಬುವಂತಹ ಸಾಧನೆಯನ್ನು ಬೆಂಗಳೂರು ನಗರ ಮಾಡಿದೆ. ಭಾರತ ಸರ್ಕಾರದ ಸ್ವಚ್ಛ ವಾಯು ಸಮೀಕ್ಷೆ 2026ರ ರಾಜ್ಯಮಟ್ಟದ ಪ್ರಶಸ್ತಿ ಮತ್ತು ರಾಷ್ಟ್ರೀಯ ಮನ್ನಣೆಯಲ್ಲಿ ಕರ್ನಾಟಕ ಗಮನ ಸೆಳೆದಿದ್ದು, ಬೆಂಗಳೂರಿನ ಬಿಟಿಎಂ ವಿಧಾನಸಭಾ ಕ್ಷೇತ್ರದ ಕೋರಮಂಗಲ ವಾರ್ಡ್ ಸಂಖ್ಯೆ 151 ವಿಶೇಷ ಗೌರವಕ್ಕೆ ಪಾತ್ರವಾಗಿದೆ.

30,000ಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ವಾರ್ಡ್‌ಗಳ ವಿಭಾಗದಲ್ಲಿ ಕೋರಮಂಗಲ ವಾರ್ಡ್ ಸಂಖ್ಯೆ 151 ರಾಷ್ಟ್ರೀಯ ಪ್ರಶಸ್ತಿ ವಿಜೇತ ವಾರ್ಡ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರ ಬಿಟಿಎಂ ವಿಧಾನಸಭಾ ಕ್ಷೇತ್ರಕ್ಕೆ ಈ ಮನ್ನಣೆ ದೊರೆತಿರುವುದು ಕ್ಷೇತ್ರದ ಜನರಿಗೆ ಹೆಮ್ಮೆಯ ಸಂಗತಿಯಾಗಿದೆ.

ನಗರ ಪ್ರದೇಶಗಳಲ್ಲಿ ವಾಯುಮಾಲಿನ್ಯ ನಿಯಂತ್ರಣ, ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆ ಇಂದು ಬಹುದೊಡ್ಡ ಸವಾಲುಗಳಾಗಿವೆ. ಇಂತಹ ಸಂದರ್ಭದಲ್ಲಿ ಕೋರಮಂಗಲ ವಾರ್ಡ್‌ನಲ್ಲಿ ಸ್ವಚ್ಛ ಗಾಳಿ ಅಭಿಯಾನ, ಸುಸ್ಥಿರ ನಗರಾಭಿವೃದ್ಧಿ, ಘನತ್ಯಾಜ್ಯ ನಿರ್ವಹಣೆ ಹಾಗೂ ಪರಿಸರ ಸಂರಕ್ಷಣೆಗೆ ಕೈಗೊಂಡಿರುವ ಪ್ರಯತ್ನಗಳಿಗೆ ಈ ಮನ್ನಣೆ ಸಂದಿದೆ.

ವಿಶೇಷವಾಗಿ, ಪರಿಸರ ಸಂರಕ್ಷಣೆಯಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಮತ್ತು ಸ್ಥಳೀಯ ಮಟ್ಟದಲ್ಲಿ ಜಾರಿಗೊಳಿಸಿರುವ ಸ್ವಚ್ಛತಾ ಕ್ರಮಗಳು ಈ ಸಾಧನೆಗೆ ಪ್ರಮುಖ ಆಧಾರವಾಗಿವೆ. ಸ್ವಚ್ಛ ಹಾಗೂ ಆರೋಗ್ಯಕರ ಪರಿಸರ ನಿರ್ಮಾಣ ಕೇವಲ ಸರ್ಕಾರದ ಜವಾಬ್ದಾರಿಯಲ್ಲ, ನಾಗರಿಕರ ಸಹಭಾಗಿತ್ವವೂ ಅಷ್ಟೇ ಮುಖ್ಯ ಎಂಬ ಸಂದೇಶವನ್ನು ಈ ಸಾಧನೆ ಸಾರುತ್ತದೆ.

ರಾಷ್ಟ್ರೀಯ ಮನ್ನಣೆ ಮತ್ತೊಂದು ಹೆಜ್ಜೆ

ಸದ್ಯ ಸ್ವಚ್ಛ ಗಾಳಿ, ಹಸಿರು ಪರಿಸರ ಮತ್ತು ಉತ್ತಮ ಜೀವನಮಟ್ಟದ ಗುರಿಯತ್ತ ಬೆಂಗಳೂರು ಸಾಗುತ್ತಿರುವುದಕ್ಕೆ ಕೋರಮಂಗಲ ವಾರ್ಡ್‌ನ ಈ ರಾಷ್ಟ್ರೀಯ ಮನ್ನಣೆ ಮತ್ತೊಂದು ಹೆಜ್ಜೆಯಾಗಿದೆ. ಸುಂದರ ಬೆಂಗಳೂರು ನಿರ್ಮಾಣದ ಕನಸು ನನಸಾಗಬೇಕಾದರೆ ಇಂತಹ ಪರಿಸರ ಸ್ನೇಹಿ ಪ್ರಯತ್ನಗಳು ನಗರದ ಪ್ರತಿಯೊಂದು ವಾರ್ಡ್‌ನಲ್ಲೂ ನಿರಂತರವಾಗಿ ಮುಂದುವರಿಯಬೇಕು. ಸ್ವಚ್ಛ ಗಾಳಿ ನಮ್ಮ ಹಕ್ಕು, ಆರೋಗ್ಯಕರ ಪರಿಸರ ನಮ್ಮೆಲ್ಲರ ಹೊಣೆ!

PREV
Read more Articles on
click me!

Recommended Stories

ದಿವಾನರ ಸ್ವಂತ ಮನೆ 'ಕುಮಾರ ಕೃಪಾ' ಸರ್ಕಾರಿ ಗೆಸ್ಟ್ ಹೌಸ್ ಆಗಿದ್ದೇಗೆ? ಈಗ 'ಗಂಗಾ' ಆಗಿ ಬದಲಾದ ಕಥೆ!
SC/ST ಅನುದಾನ ಹಂಚಿಕೆಯಲ್ಲಿ ಭಾರಿ ಲೋಪ: 8 ಯೋಜನೆಗಳಿಗೆ ಬರೋಬ್ಬರಿ ₹4,337 ಕೋಟಿ ಹೆಚ್ಚುವರಿ ಹಣ ಹಂಚಿಕೆ ಬಯಲು