ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿ ಕಚೇರಿಗೆ ನುಗ್ಗಿದ ಮಹಿಳೆಯಿಂದ ಸಂಘಟನೆ ಮುಖ್ಯಸ್ಥೆ ಎಂದು ಜೀವ ಬೆದರಿಕೆ!

Published : May 18, 2026, 12:39 PM IST
Bengaluru Woman Threatens Real Estate Businessman

ಸಾರಾಂಶ

ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ವೆಂಕಟರಾಜು ಅವರಿಗೆ, ತನ್ನನ್ನು ಸಂಘಟನೆಯ ಮುಖ್ಯಸ್ಥೆ ಎಂದು ಹೇಳಿಕೊಂಡ ಸಂಗೀತ ರಾಮ್ ಎಂಬ ಮಹಿಳೆ ಜೀವ ಬೆದರಿಕೆ ಹಾಕಿದ್ದಾರೆ. ಜಮೀನು ವ್ಯವಹಾರಕ್ಕೆ ಸಂಬಂಧಿಸಿ ಕಚೇರಿಗೆ ನುಗ್ಗಿ 10 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟು, ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಧಮ್ಕಿ ಹಾಕಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.

ಬೆಂಗಳೂರು: ನಗರದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಗೆ ಮಹಿಳೆಯೊಬ್ಬರು ಜೀವ ಬೆದರಿಕೆ ಹಾಕಿರುವ ಗಂಭೀರ ಘಟನೆ ಬೆಳಕಿಗೆ ಬಂದಿದೆ. ಕೊಡಿಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಈ ಪ್ರಕರಣವು ನಗರದಲ್ಲಿ ಆತಂಕಕ್ಕೆ ಕಾರಣವಾಗಿದ್ದು, ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸಂಗೀತ ರಾಮ್ ಎಂಬ ಮಹಿಳೆ, ತಾನು “ಕರ್ನಾಟಕ ಯುವಸೇನೆ ಮುಖ್ಯಸ್ಥೆ” ಹಾಗೂ “ಮಹಿಳಾ ಸಂಘದ ಅಧ್ಯಕ್ಷೆ” ಎಂದು ಹೇಳಿಕೊಂಡು ರಿಯಲ್ ಎಸ್ಟೇಟ್ ಉದ್ಯಮಿ ವೆಂಕಟರಾಜು ಅವರಿಗೆ ಧಮ್ಕಿ ಹಾಕಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಈ ವೇಳೆ ಆಕೆಯೊಂದಿಗೆ ಇಬ್ಬರು ಪುರುಷರು ಕೂಡ ಇದ್ದರು ಎನ್ನಲಾಗಿದ್ದು, ಮೂವರು ಸೇರಿ ಕಚೇರಿಗೆ ನುಗ್ಗಿ ಬೆದರಿಕೆ ಹಾಕಿದ್ದಾರೆ ಎಂದು ದೂರುದಲ್ಲಿ ಉಲ್ಲೇಖಿಸಲಾಗಿದೆ.

ರಿಯಲ್ ಎಸ್ಟೇಟ್ ಕಚೇರಿಗೆ ನುಗ್ಗಿ ಗಲಾಟೆ

ಕೊತ್ತನೂರು ಸಮೀಪದ ಸಂಜಯನಗರದಲ್ಲಿರುವ ವೆಂಕಟರಾಜು ಅವರ ರಿಯಲ್ ಎಸ್ಟೇಟ್ ಕಚೇರಿಗೆ ನುಗ್ಗಿದ ಆರೋಪಿಗಳು, ಶಿವಾಜಿನಗರದಲ್ಲಿ ನಡೆದಿದ್ದ ಜಮೀನು ವ್ಯವಹಾರದ ವಿಚಾರವನ್ನು ಮುಂದಿಟ್ಟುಕೊಂಡು ಗಲಾಟೆ ನಡೆಸಿದ್ದಾರೆ. ವೆಂಕಟರಾಜು ಅವರು ಶಿವಾಜಿನಗರದಲ್ಲಿ ಸೈಟ್‌ ಒಂದನ್ನು ಅಗ್ರಿಮೆಂಟ್ ಮಾಡಿಕೊಂಡಿದ್ದು, ಅದೇ ವಿಚಾರಕ್ಕೆ ಸಂಬಂಧಿಸಿ ಈ ಬೆದರಿಕೆ ನೀಡಲಾಗಿದೆ ಎಂದು ತಿಳಿದುಬಂದಿದೆ. ನೀನು ಅಗ್ರಿಮೆಂಟ್ ಮಾಡಿಕೊಂಡಿದ್ದೀಯಾ, ಆದರೆ ಆ ಜಾಗಕ್ಕೆ ಹೋಗಬಾರದು. ನಮ್ಮ ತಂಟೆಗೆ ಬರಬಾರದೆಂದರೆ 10 ಲಕ್ಷ ರೂಪಾಯಿ ನೀಡಬೇಕು ಎಂದು ಆರೋಪಿಗಳು ಹಣದ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಅಲ್ಲದೆ, ಹಣ ನೀಡದಿದ್ದರೆ 15ರಿಂದ 20 ಜನರನ್ನು ಸೇರಿಸಿಕೊಂಡು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಹೇಳಲಾಗಿದೆ.

ಸಂಗೀತ ರಾಮ್ ಸೇರಿದಂತೆ ಮೂವರ ವಿರುದ್ಧ ತನಿಖೆ

ಇದಲ್ಲದೆ, ಈ ವಿಷಯವನ್ನು ಪೊಲೀಸರಿಗೆ ತಿಳಿಸಿದರೆ ಕಚೇರಿಗೆ ನುಗ್ಗಿ ಹಲ್ಲೆ ನಡೆಸುವುದಾಗಿ ಸಹ ಎಚ್ಚರಿಕೆ ನೀಡಿರುವುದಾಗಿ ತಿಳಿದುಬಂದಿದೆ. ಈ ರೀತಿಯ ಜೀವ ಬೆದರಿಕೆಯಿಂದ ಆತಂಕಗೊಂಡ ವೆಂಕಟರಾಜು ಅವರು ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸಂಗೀತ ರಾಮ್ ಸೇರಿದಂತೆ ಮೂವರ ವಿರುದ್ಧ ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳ ಗುರುತು ಮತ್ತು ಹಿನ್ನೆಲೆ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಶೀಘ್ರದಲ್ಲೇ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಘಟನೆ ನಗರದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರಗಳಿಗೆ ಸಂಬಂಧಿಸಿದ ಭದ್ರತೆ ಹಾಗೂ ಕಾನೂನು ಸುವ್ಯವಸ್ಥೆ ಕುರಿತು ಪ್ರಶ್ನೆಗಳನ್ನು ಎಬ್ಬಿಸಿದ್ದು, ಉದ್ಯಮಿಗಳು ಭಯಭೀತರಾಗಿರುವ ಪರಿಸ್ಥಿತಿ ನಿರ್ಮಾಣವಾಗಿದೆ.

PREV
Read more Articles on
click me!

Recommended Stories

ಬಿಡದಿ ಟೌನ್‌ಶಿಪ್ ವಿವಾದ:ಭೂ ಮಾಫಿಯಾ ಖಂಡಿಸಿ ಹೋರಾಟಕ್ಕಿಳಿದ ಹೆಚ್‌ಡಿಡಿ, ಸೋನಿಯಾ ಗಾಂಧಿ, ರಾಹುಲ್‌ಗೆ ದೇವೇಗೌಡ ಪತ್ರ
ಕಲಾದಗಿಯ 2004-05ನೇ ಸಾಲಿನ SSLC ವಿದ್ಯಾರ್ಥಿಗಳಿಂದ ಅಪೂರ್ವ ಗುರುವಂದನೆ & ಸ್ನೇಹ ಸಮ್ಮಿಲನ