
ಬೆಂಗಳೂರು: ಆನ್ಲೈನ್ ಶಾಪಿಂಗ್ ಮಾಡುವಾಗ, ಗ್ರಾಹಕರು ಸಾಮಾನ್ಯವಾಗಿ ದೋಷಪೂರಿತ ವಸ್ತುಗಳನ್ನು ಸ್ವೀಕರಿಸಿದ ನಂತರ ಅದನ್ನು ವಾಪಸ್ ಮಾಡುತ್ತಾರೆ. ಆದರೆ, ಹೀಗೆ ಮರುಪಾವತಿ ಮಾಡುವುದನ್ನೇ ಸೈಬರ್ ವಂಚಕರು ಬಳಸಿಕೊಳ್ಳುವ ಶಾಕಿಂಗ್ ಘಟನೆಯೊಂದು ಬೆಂಗಳುರಿನಲ್ಲಿ ನಡೆದಿದೆ. ಬೆಂಗಳೂರಿನ ಮಹಿಳೆಯೊಬ್ಬರು ಮೊಸರು ಪ್ಯಾಕೆಟ್ ವಾಪಸ್ ಬಗ್ಗೆ ದೂರು ನೀಡುವಾಗ ಸೈಬರ್ ವಂಚಕರಿಗೆ ಬಲಿಯಾಗಿದ್ದಾರೆ. ಒಂದು ಮೊಸರು ಪ್ಯಾಕೆಟ್ ಬದಲಿಗೆ 98 ಸಾವಿರ ರೂಪಾಯಿ ಕಳೆದುಕೊಂಡಿದ್ದಾರೆ!
ವಂಚಕರು ಗ್ರಾಹಕ ಸೇವಾ ಪ್ರತಿನಿಧಿಗಳಂತೆ ನಟಿಸಿ ಅವರನ್ನು ಸಂಪರ್ಕಿಸಿ ಮರುಪಾವತಿಸುವುದಾಗಿ ಭರವಸೆ ನೀಡಿದರು. ಅಲ್ಪಾವಧಿಯಲ್ಲಿಯೇ, ಅವರ ಬ್ಯಾಂಕ್ ಖಾತೆಯಿಂದ ₹98,000 ವಿತ್ಡ್ರಾ ಮಾಡಲಾಗಿದೆ. ದೋಷಪೂರಿತ ಮೊಸರನ್ನು ವಾಪಸ್ ತೆಗೆದುಕೊಂಡು ಹೋಗಲು ಮಹಿಳೆ ಎಲ್ಲಿಯೋ ಸಿಕ್ಕ ನಂಬರ್ಗೆ ಫೋನ್ ಮಾಡಿದ್ದಾರೆ. ಫೋನ್ಗೆ ಉತ್ತರಿಸಿದ ವ್ಯಕ್ತಿಯು ದೋಷಯುಕ್ತ ಸರಕುಗಳಿಗೆ ಮರುಪಾವತಿ ಭರವಸೆ ನೀಡಿದರು. ಹಾಗೆ ಮಾಡಲು, ಅವರು ವಾಟ್ಸ್ಆ್ಯಪ್ನಲ್ಲಿ ಲಿಂಕ್ ಕಳುಹಿಸಿದರು ಮತ್ತು ಹರಿದ ಮೊಸರು ಪ್ಯಾಕೆಟ್ನ ಫೋಟೋವನ್ನು ಅಪ್ಲೋಡ್ ಮಾಡಲು ಕೇಳಿದರು. ಮಹಿಳೆ ಸೂಚನೆಗಳನ್ನು ಅನುಸರಿಸಿದರು.
ಇದರ ನಂತರ, ಇನ್ನೊಬ್ಬ ವ್ಯಕ್ತಿ ಅವರನ್ನು ಸಂಪರ್ಕಿಸಿ, ಮರುಪಾವತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದೇನೆ ಎಂದು ಹೇಳಿಕೊಂಡು ಅವರ ಡಿಜಿಟಲ್ ಪಾವತಿ ಖಾತೆಯನ್ನು ತೆರೆಯಲು ಮತ್ತು ಅವರ ಬ್ಯಾಲೆನ್ಸ್ ಪರಿಶೀಲಿಸಲು ಕೇಳಿಕೊಂಡರು. ಮಹಿಳೆಯ ಪ್ರಕಾರ, ಖಾತೆಯ ಪಾಸ್ವರ್ಡ್ ಅನ್ನು ನಮೂದಿಸಿದಾಗ, ಅಪ್ಲಿಕೇಶನ್ ಅವರ ಪರದೆಯಿಂದ ಕಣ್ಮರೆಯಾಯಿತು. ಸ್ವಲ್ಪ ಸಮಯದ ನಂತರ, ಅವರ ಬ್ಯಾಂಕ್ ಖಾತೆಯಿಂದ ₹98,000 ಕಡಿತಗೊಳಿಸಲಾಗಿದೆ ಎಂದು ಅವರಿಗೆ ತಿಳಿಯಿತು.
ವರದಿಯ ಪ್ರಕಾರ, ಬೆಂಗಳೂರಿನ ವಸಂತ ನಗರದಲ್ಲಿ ವಾಸಿಸುವ 56 ವರ್ಷದ ಗೃಹಿಣಿಯೊಬ್ಬರು ಅಕ್ಟೋಬರ್ 17 ರಂದು ಕ್ವಿಕ್-ಕಾಮರ್ಸ್ ಪ್ಲಾಟ್ಫಾರ್ಮ್ ಬಿಲ್ಲಿಂಕಿಟ್ನಿಂದ ಮೊಸರು ಆರ್ಡರ್ ಮಾಡಿದರು. ವಿತರಣೆಯನ್ನು ಸ್ವೀಕರಿಸಿದ ನಂತರ, ಪ್ಯಾಕೆಟ್ ಹರಿದಿರುವುದನ್ನು ಅವರು ಕಂಡುಕೊಂಡರು. ಮಹಿಳೆ ವಿತರಣಾ ಏಜೆಂಟ್ಗೆ ದೂರು ನೀಡಿದಾಗ, ಅವರು ಗ್ರಾಹಕ ಸೇವೆಯನ್ನು ಸಂಪರ್ಕಿಸಲು ಸಲಹೆ ನೀಡಿದರು. ನಂತರ ಮಹಿಳೆ ಕಂಪನಿಯ ಗ್ರಾಹಕ ಸೇವೆ ಸಂಖ್ಯೆಯನ್ನು ಆನ್ಲೈನ್ನಲ್ಲಿ ಹುಡುಕಿದರು ಮತ್ತು ಅವರು ಕಂಡುಕೊಂಡ ಸಂಖ್ಯೆಗಳಲ್ಲಿ ಒಂದಕ್ಕೆ ಕರೆ ಮಾಡಿದರು. ಆದರೆ ಅಸಲಿಗೆ ಅವರು ಮಾಡಿದ್ದು ಅರ್ಥಾತ್ ಆನ್ಲೈನ್ನಲ್ಲಿ ಹುಡುಕಿದ್ದು ವಂಚಕರ ಸಂಖ್ಯೆ!. ಇಂಥ ಸಂದರ್ಭದಲ್ಲಿ ಹೀಗೆ ಮೋಸ ಹೋಗಲಿ ಎನ್ನುವ ಕಾರಣಕ್ಕೆ ವಂಚಕರು ಗ್ರಾಹಕರ ಸೇವೆ ಹೆಸರಿನಲ್ಲಿ ತಮ್ಮ ನಂಬರ್ ಹಾಕಿರುತ್ತಾರೆ. ಗೊತ್ತಿಲ್ಲದವರು ಇದನ್ನೇ ಕಸ್ಟಮರ್ ಕೇರ್ ಎಂದು ನಂಬಿ ಕಾಲ್ ಮಾಡುತ್ತಾರೆ ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತಿದೆ. ಹೀಗೆ ಮೋಸ ಹೋಗುತ್ತಿರುವವರು ಹಲವರು. ವಂಚನೆಯನ್ನು ಪತ್ತೆಹಚ್ಚಿದ ನಂತರ, ಮಹಿಳೆ ಪೊಲೀಸರಿಗೆ ದೂರು ನೀಡಿದರು, ಅದರ ನಂತರ ಸೈಬರ್ ಕ್ರೈಮ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ.
ಇಂತಹ ಘಟನೆಗಳನ್ನು ತಪ್ಪಿಸಲು, ಬಿಲ್ಲಿಂಗಿಟ್ನ ಅಧಿಕೃತ ಅಪ್ಲಿಕೇಶನ್ನಲ್ಲಿ ಲಭ್ಯವಿರುವ ಬೆಂಬಲ ಆಯ್ಕೆಗಳನ್ನು ಮಾತ್ರ ಬಳಸಿ. ಕಂಪನಿಯು ತನ್ನ ವೆಬ್ಸೈಟ್ನಲ್ಲಿ ಅಧಿಕೃತ ಗ್ರಾಹಕ ಸೇವೆ ಫೋನ್ ಸಂಖ್ಯೆಯನ್ನು ಹೊಂದಿಲ್ಲ ಎಂದು ಸ್ಪಷ್ಟಪಡಿಸುತ್ತದೆ. ಅಪರಿಚಿತ ಸಂಖ್ಯೆಗಳಿಂದ ಲಿಂಕ್ಗಳನ್ನು ತೆರೆಯಬೇಡಿ ಮತ್ತು ನಿಮ್ಮ OTP, UPI ಪಿನ್, ಪಾಸ್ವರ್ಡ್ ಅಥವಾ ಬ್ಯಾಂಕಿಂಗ್ ಗೌಪ್ಯ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಒಂದು ವೇಳೆ ನೀವು ತಪ್ಪಾದ ಕಸ್ಟಮರ್ ಕೇರ್ಗೆ ಕಾಲ್ಮಾಡಿದ್ದರೂ, ಅವರು OTP, UPI ಪಿನ್, ಪಾಸ್ವರ್ಡ್ ಇತ್ಯಾದಿ ಕೇಳಿದರು ಎಂದರೆ ಅವರು ಅಸಲಿ ಕಸ್ಟಮರ್ ಕೇರ್ನವರು ಅಲ್ಲವೇ ಅಲ್ಲ, ಅವರು ವಂಚಕರು ಎನ್ನೋದು ಗೊತ್ತಾಗಿ ಕಾಲ್ ಕಟ್ ಮಾಡಿ. ಇಲ್ಲದಿದ್ದರೆ ನಿಮ್ಮ ಬ್ಯಾಂಕ್ ಲೂಟಿಯಾಗುತ್ತದೆ.
ನಿಮ್ಮ ಖಾತೆಯಿಂದ ಅನಧಿಕೃತ ವಹಿವಾಟು ನಡೆದರೆ, ತಕ್ಷಣ ನಿಮ್ಮ ಬ್ಯಾಂಕ್ಗೆ ತಿಳಿಸಿ ಮತ್ತು ಸೈಬರ್ ಕ್ರೈಮ್ ಸಹಾಯವಾಣಿ 1930 ಗೆ ದೂರು ದಾಖಲಿಸಿ. ನೆನಪಿಡಿ, ಅಪರಿಚಿತ ವ್ಯಕ್ತಿಯ ಮರುಪಾವತಿ ವಿಧಾನವನ್ನು ಕುರುಡಾಗಿ ನಂಬುವುದು ದುಬಾರಿಯಾಗಬಹುದು.