ಬೆಂಗಳೂರು ನೀರು ಸರಬರಾಜು ಕೊಳವೆ ಮಾರ್ಗದಲ್ಲಿ ತುರ್ತು ದುರಸ್ತಿ, ನಾಳೆ ಈ ಬಡಾವಣೆಗಳಲ್ಲಿ ನೀರು ಪೂರೈಕೆ ಸ್ಥಗಿತ!

Published : May 29, 2026, 04:05 PM IST
Bengaluru Water Supply

ಸಾರಾಂಶ

ಬೆಂಗಳೂರಿನ ಮೈಸೂರು ರಸ್ತೆ ವ್ಯಾಪ್ತಿಯಲ್ಲಿ ಕಾವೇರಿ ಪೈಪ್‌ಲೈನ್‌ನಲ್ಲಿನ ಸೋರಿಕೆಯಿಂದಾಗಿ ತುರ್ತು ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ, ಕಸ್ತೂರಬಾ ನಗರ, ಬಾಪೂಜಿನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ 8 ಗಂಟೆಗಳ ಕಾಲ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಜಲಮಂಡಳಿ ತಿಳಿಸಿದೆ.

ಬೆಂಗಳೂರು (ಮೇ 29): ಬೆಂಗಳೂರಿನ ಮೈಸೂರು ರಸ್ತೆ (Bengaluru Mysuru Road) ವ್ಯಾಪ್ತಿಯ ನಿವಾಸಿಗಳಿಗೆ ಬೆಂಗಳೂರು ಜಲಮಂಡಳಿಯು (BWSSB) ಮಹತ್ವದ ಸೂಚನೆಯೊಂದನ್ನು ನೀಡಿದೆ. ಕಾವೇರಿ 2ನೇ ಹಂತದ ಮುಖ್ಯ ಕುಡಿಯುವ ನೀರಿನ ಪೈಪ್‌ಲೈನ್‌ನಲ್ಲಿ (Kaveri 2nd stage drinking watere pipeline) ಉಂಟಾಗಿರುವ ತುರ್ತು ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸುವ ಹಿನ್ನೆಲೆಯಲ್ಲಿ, ನಾಳೆ ನಗರದ ಹಲವು ಪ್ರಮುಖ ಪ್ರದೇಶಗಳಲ್ಲಿ ಸುಮಾರು 8 ಗಂಟೆಗಳ ಕಾಲ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ಪೈಪ್‌ಲೈನ್‌ನಲ್ಲಿ ಭಾರೀ ಸೋರಿಕೆ:

ಮೈಸೂರು ರಸ್ತೆ ಸೇವಾ ವ್ಯಾಪ್ತಿಗೆ ಬರುವ ಕಾವೇರಿ 2ನೇ ಹಂತದ 600 ಮಿ.ಮೀ. ವ್ಯಾಸದ ಮುಖ್ಯ ಪೈಪ್‌ಲೈನ್‌ನಲ್ಲಿ ಭಾರೀ ರಂಧ್ರ ಉಂಟಾಗಿದ್ದು, ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ಪೋಲಾಗುತ್ತಿದೆ. ಹನುಮಂತನಗರ ಪೊಲೀಸ್ ಕ್ವಾರ್ಟರ್ಸ್ ಎದುರಿನ ಮುಖ್ಯ ರಸ್ತೆಯಲ್ಲಿ ಈ ಸೋರಿಕೆ ಕಾಣಿಸಿಕೊಂಡಿದ್ದು, ಹೆಚ್ಚಿನ ಒತ್ತಡದಿಂದ ನೀರು ಚಿಮ್ಮುತ್ತಿದೆ. ಇದರಿಂದಾಗಿ ಪ್ರತಿನಿತ್ಯ ಸರಬರಾಜಾಗುವ ಸುಮಾರು 14 ಎಂ.ಎಲ್.ಡಿ (MLD) ನೀರಿನ ಪ್ರಮಾಣದಲ್ಲಿ ಇಳಿಕೆಯಾಗುತ್ತಿದ್ದು, ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳಿಗೂ ಸಂಚಾರಕ್ಕೆ ತೀವ್ರ ಅಡಚಣೆಯಾಗುತ್ತಿದೆ.

8 ಗಂಟೆಗಳ ಕಾಲ ಶಟ್‌ಡೌನ್:

ಈ ಕುರಿತು ಮಾಹಿತಿ ನೀಡಿರುವ ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ಅವರು, 'ಸಾರ್ವಜನಿಕ ಹಿತದೃಷ್ಟಿ ಮತ್ತು ಕುಡಿಯುವ ನೀರಿನ ಉಳಿತಾಯದ ಉದ್ದೇಶದಿಂದ ಈ ತುರ್ತು ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಸೌತ್ ಎಂಡ್ ರಸ್ತೆಯ ಸುರಾನ ಕಾಲೇಜು ಬಳಿ ಇರುವ 24 ಅಂಗುಲದ ಕವಾಟವನ್ನು (Valve) 8 ಗಂಟೆಗಳ ಕಾಲ ಬಂದ್ ಮಾಡಿ (Local Shutdown), ಸಮರೋಪಾದಿಯಲ್ಲಿ ದುರಸ್ತಿ ಕಾಮಗಾರಿ ನಡೆಸಲಾಗುವುದು' ಎಂದು ತಿಳಿಸಿದ್ದಾರೆ.

ಯಾವೆಲ್ಲಾ ಪ್ರದೇಶಗಳಲ್ಲಿ ನೀರು ಇರುವುದಿಲ್ಲ?

ಈ ದುರಸ್ತಿ ಕಾರ್ಯ ನಡೆಯುವ 8 ಗಂಟೆಗಳ ಅವಧಿಯಲ್ಲಿ ಮೈಸೂರು ರಸ್ತೆ ವ್ಯಾಪ್ತಿಯ ಈ ಕೆಳಗಿನ ಬಡಾವಣೆಗಳಲ್ಲಿ ನೀರಿನ ಪೂರೈಕೆ ಸಂಪೂರ್ಣ ಸ್ಥಗಿತಗೊಳ್ಳಲಿದೆ ಅಥವಾ ವ್ಯತ್ಯಯವಾಗಲಿದೆ:

  • ಕಸ್ತೂರಬಾ ನಗರ
  • ಬಾಪೂಜಿನಗರ
  • ಶಾಮಣ್ಣ ಗಾರ್ಡನ್
  • ಮಂಜುನಾಥನಗರ
  • ಹೊಸಗುಡ್ಡದಹಳ್ಳಿ
  • ಹಳೇಗುಡ್ಡದಹಳ್ಳಿ
  • ಅರಾಫತ್ ನಗರ

ಸಾರ್ವಜನಿಕರಿಗೆ ಜಲಮಂಡಳಿಯ ಮನವಿ:

ಪೈಪ್‌ಲೈನ್ ಸೋರಿಕೆಯಿಂದಾಗಿ ರಸ್ತೆಯೂ ಹಾಳಾಗುವ ಸಾಧ್ಯತೆ ಇರುವುದರಿಂದ, ವಿಳಂಬ ಮಾಡದೆ ತಕ್ಷಣವೇ ಕಾಮಗಾರಿ ಆರಂಭಿಸಲಾಗಿದೆ. ಈ ತುರ್ತು ದುರಸ್ತಿಯಿಂದ ಸಾರ್ವಜನಿಕರಿಗೆ ಆಗುವ ಅನಾನುಕೂಲತೆಗಾಗಿ ಜಲಮಂಡಳಿ ವಿಷಾದ ವ್ಯಕ್ತಪಡಿಸಿದೆ. ಕಾಮಗಾರಿ ಪೂರ್ಣಗೊಂಡ ತಕ್ಷಣವೇ ಎಂದಿನಂತೆ ಸುಗಮವಾಗಿ ನೀರು ಸರಬರಾಜು ಮಾಡಲಾಗುವುದು. ಅಲ್ಲಿಯವರೆಗೆ ಸಾರ್ವಜನಿಕರು ಹಾಗೂ ಗ್ರಾಹಕರು ಮಂಡಳಿಯೊಂದಿಗೆ ಸಹಕರಿಸಬೇಕು ಮತ್ತು ನೀರನ್ನು ಮಿತವಾಗಿ ಬಳಸಬೇಕು ಎಂದು ಕೋರಲಾಗಿದೆ.

PREV
Read more Articles on
click me!

Recommended Stories

ಭೀಮಾತೀರದಲ್ಲಿ ರಕ್ತದೋಕುಳಿ: ವಿಜಯಪುರದಲ್ಲಿ ಆಸ್ತಿ ವಿವಾದಕ್ಕೆ 6 ಜನರ ಭೀಕರ ಹ*ತ್ಯೆ!
ಆಟೋದೊಳಗೆ ಮಿನಿ ಶಾಪಿಂಗ್​ ಮಾಲ್​: ಬೆಂಗಳೂರು ಚಾಲಕನ ತಲೆಗೆ ಭೇಷ್​ ಎಂದ ಪ್ರಯಾಣಿಕರು