ಬೆಂಗಳೂರು 'ವಾರ್ಡ್ ಒನ್' ಅಭಿಯಾನ: ಒಂದೇ ದಿನದಲ್ಲಿ 197 ಟನ್ ತ್ಯಾಜ್ಯ ತೆರವು, 21 ರಸ್ತೆ ಗುಂಡಿ ಕ್ಲೋಸ್!

Published : Nov 02, 2026, 08:30 AM IST
Bengaluru Ward one campaign

ಸಾರಾಂಶ

ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛತೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗಾಗಿ 'ವಾರ್ಡ್ ಒನ್' ಎಂಬ ಮಹಾ ಅಭಿಯಾನವನ್ನು ನವೆಂಬರ್ 1ರಂದು ಆರಂಭಿಸಲಾಗಿದೆ. ಮೊದಲ ದಿನವೇ ರಸ್ತೆ ಗುಂಡಿ ಮುಚ್ಚುವುದು, ತ್ಯಾಜ್ಯ ತೆರವು ಮತ್ತು ಫುಟ್‌ಪಾತ್ ದುರಸ್ತಿಯಂತಹ ಕಾರ್ಯಗಳಲ್ಲಿ ಈ ಆಂದೋಲನವು ದಾಖಲೆಯ ಪ್ರಗತಿ ಸಾಧಿಸಿದೆ.

ಬೆಂಗಳೂರು (ನ.02): ಬೆಂಗಳೂರಿನ ಸ್ವಚ್ಛತೆ ಕಾಪಾಡುವುದು, ಪಾದಚಾರಿ ಮಾರ್ಗಗಳ ದುರಸ್ತಿ, ರಸ್ತೆ ಗುಂಡಿ ಮುಚ್ಚುವುದು ಹಾಗೂ ಸಾರ್ವಜನಿಕ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸುವ ಮಹತ್ತರ ಉದ್ದೇಶದಿಂದ ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ‘ವಾರ್ಡ್ ಒನ್’ (Ward One) ಮಹಾ ಅಭಿಯಾನಕ್ಕೆ ನವೆಂಬರ್ 1 ರಂದು ಅಧಿಕೃತ ಚಾಲನೆ ದೊರೆತಿದೆ.

ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರ ನಿರ್ದೇಶನದಂತೆ ಹಾಗೂ ಪಾಲಿಕೆ ಆಯುಕ್ತರಾದ ಶ್ರೀ ಪೊಮ್ಮಲ ಸುನೀಲ್ ಕುಮಾರ್ ಅವರ ನೇತೃತ್ವದಲ್ಲಿ ಆರಂಭವಾಗಿರುವ ಈ ಆಂದೋಲನವು, ಮೊದಲ ದಿನವೇ ನಗರದ 23 ಕಿಲೋಮೀಟರ್ ರಸ್ತೆಗಳಲ್ಲಿ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಿ ದಾಖಲೆಯ ಪ್ರಗತಿ ಸಾಧಿಸಿದೆ.

ಮೊದಲ ದಿನವೇ ಭರ್ಜರಿ ಫಲಿತಾಂಶ: ಅಂಕಿ-ಸಂಖ್ಯೆಗಳು ಇಲ್ಲಿವೆ ನೋಡಿ

ಅಭಿಯಾನದ ಮೊದಲ ದಿನವೇ ನೂರಾರು ಪೌರಕಾರ್ಮಿಕರು, ಜೆಸಿಬಿ, ಟ್ರ್ಯಾಕ್ಟರ್‌ಗಳು ಹಾಗೂ ವಿವಿಧ ಇಲಾಖೆಗಳ ಸಿಬ್ಬಂದಿ ರಸ್ತೆಗಿಳಿದು ಕಾರ್ಯನಿರ್ವಹಿಸಿದ್ದು, ಪ್ರಮುಖ ಸಾಧನೆಗಳು ಹೀಗಿವೆ:

21 ರಸ್ತೆ ಗುಂಡಿಗಳಿಗೆ ಮುಕ್ತಿ: ವಾಹನ ಸವಾರರಿಗೆ ಕಿರಿಕಿರಿಯುಂಟುಮಾಡುತ್ತಿದ್ದ 21 ರಸ್ತೆ ಗುಂಡಿಗಳನ್ನು ಒಂದೇ ದಿನದಲ್ಲಿ ಶಾಶ್ವತವಾಗಿ ಮುಚ್ಚಲಾಗಿದೆ.

197 ಟನ್ ತ್ಯಾಜ್ಯ ತೆರವು: ನಗರದ ಸೌಂದರ್ಯ ಹಾಳುಗೆಡವುತ್ತಿದ್ದ 80 ಸ್ಥಳಗಳಿಂದ ಬರೋಬ್ಬರಿ 197 ಟನ್ ಕಟ್ಟಡ ನಿರ್ಮಾಣ (C&D) ತ್ಯಾಜ್ಯ ಹಾಗೂ 11 ಟನ್ ಸಾಮಾನ್ಯ ಕಸವನ್ನು ವಿಲೇವಾರಿ ಮಾಡಲಾಗಿದೆ.

22 ಬ್ಲಾಕ್ ಸ್ಪಾಟ್ ಕ್ಲಿಯರ್: ಸಾರ್ವಜನಿಕರು ನಿರಂತರವಾಗಿ ಕಸ ಎಸೆಯುತ್ತಿದ್ದ 22 ಕಸದ ಕಪ್ಪು ಚುಕ್ಕೆಗಳನ್ನು (Black Spots) ಸ್ವಚ್ಛಗೊಳಿಸಿ ಸುಂದರಗೊಳಿಸಲಾಗಿದೆ.

ಪಾದಚಾರಿ ಮಾರ್ಗಗಳ ಸುಧಾರಣೆ: 0.8 ಕಿ.ಮೀ ಉದ್ದದ ಫುಟ್‌ಪಾತ್ ದುರಸ್ತಿ ಮಾಡಲಾಗಿದ್ದು, ಪಾದಚಾರಿಗಳಿಗೆ ಅಡ್ಡಿಯಾಗಿದ್ದ 33 ಅನಧಿಕೃತ ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ.

ಫ್ಲೆಕ್ಸ್, ಬ್ಯಾನರ್ ತೆರವು: ನಗರದ ಸೌಂದರ್ಯಕ್ಕೆ ಧಕ್ಕೆ ತರುತ್ತಿದ್ದ 214 ಅನಧಿಕೃತ ಫ್ಲೆಕ್ಸ್‌ಗಳು ಮತ್ತು ಪೋಸ್ಟರ್‌ಗಳನ್ನು ಕಿತ್ತೊಗೆಯಲಾಗಿದೆ. ಜೊತೆಗೆ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ 52 ಹಳೆಯ ವಾಹನಗಳನ್ನು ಜಪ್ತಿ ಮಾಡಲಾಗಿದೆ.

ಯಾವೆಲ್ಲಾ ವಾರ್ಡ್‌ಗಳಲ್ಲಿ ಅಭಿಯಾನ ಆರಂಭ?

ಉತ್ತರ ನಗರ ಪಾಲಿಕೆಯ ಪ್ರಮುಖ ವಿಭಾಗಗಳ ಆಯ್ದ ವಾರ್ಡ್‌ಗಳಲ್ಲಿ ಈ ಅಭಿಯಾನ ಏಕಕಾಲದಲ್ಲಿ ಆರಂಭವಾಗಿದೆ:

  • ವಿದ್ಯಾರಣ್ಯಪುರ ವಿಭಾಗ (ವಾರ್ಡ್ 14): ರಾಜೀವ್ ಗಾಂಧಿ ನಗರ
  • ಬ್ಯಾಟರಾಯನಪುರ ವಿಭಾಗ (ವಾರ್ಡ್ 17): ಜಕ್ಕೂರು
  • ಸರ್ವಜ್ಞನಗರ ವಿಭಾಗ (ವಾರ್ಡ್ 23): ಹೆಣ್ಣೂರು
  • ಪುಲಿಕೇಶಿನಗರ ವಿಭಾಗ (ವಾರ್ಡ್ 47): ಪುಲಿಕೇಶಿನಗರ
  • ಯಲಹಂಕ ವಿಭಾಗ (ವಾರ್ಡ್ 5): ಯಲಹಂಕ ನ್ಯೂ ಟೌನ್
  • ಹೆಬ್ಬಾಳ ವಿಭಾಗ (ವಾರ್ಡ್ 57): ಭೂಪಸಂದ್ರ
  • ದಾಸರಹಳ್ಳಿ ವಿಭಾಗ (ವಾರ್ಡ್ 67): ಶೆಟ್ಟಿಹಳ್ಳಿ

ಅನಧಿಕೃತ ಕಸ ಎಸೆದವರಿಗೆ ಶಾಕ್: ₹2.17 ಲಕ್ಷ ದಂಡ!

ಅಸಮರ್ಪಕ ತ್ಯಾಜ್ಯ ನಿರ್ವಹಣೆ ಹಾಗೂ ಘನತ್ಯಾಜ್ಯ ನಿಯಮಗಳನ್ನು ಉಲ್ಲಂಘಿಸಿದ 68 ವಾಣಿಜ್ಯ ಮಳಿಗೆಗಳನ್ನು ಪಾಲಿಕೆ ಅಧಿಕಾರಿಗಳು ದಿಢೀರ್ ತಪಾಸಣೆ ನಡೆಸಿದ್ದಾರೆ. ನಿಯಮ ಪಾಲಿಸದ ಅಂಗಡಿ ಮಾಲೀಕರಿಗೆ ಒಟ್ಟು ₹2,17,700 ದಂಡ ವಿಧಿಸಿ ಕಠಿಣ ಎಚ್ಚರಿಕೆ ನೀಡಿದ್ದಾರೆ.

ಹಲವು ಇಲಾಖೆಗಳ ಮಹಾ ಸಂಗಮ:

‘ವಾರ್ಡ್ ಒನ್’ ಕೇವಲ ಪಾಲಿಕೆಗಷ್ಟೇ ಸೀಮಿತವಾಗಿಲ್ಲ. ಬೆಸ್ಕಾಂ (BESCOM), ಬಿಡಬ್ಲ್ಯೂಎಸ್‌ಎಸ್‌ಬಿ (BWSSB), ಅರಣ್ಯ, ತೋಟಗಾರಿಕೆ, ಕೆರೆ ಇಲಾಖೆ, ಮೆಟ್ರೋ (BMRCL), ಬಿಡಿಎ (BDA) ಮತ್ತು ಸಂಚಾರ ಪೊಲೀಸ್ ಇಲಾಖೆಗಳು ಒಟ್ಟಾಗಿ ಈ ಕಾರ್ಯದಲ್ಲಿ ಕೈಜೋಡಿಸಿವೆ. ಪರಿಣಾಮವಾಗಿ, ಸಾರ್ವಜನಿಕರಿಂದ ಬಂದ 32 ದೂರುಗಳನ್ನು ಸ್ಥಳದಲ್ಲೇ ಪರಿಹರಿಸಲಾಗಿದೆ.

ಬೆಂಗಳೂರು ಉತ್ತರ ನಗರ ಪಾಲಿಕೆಯು ಸ್ವಚ್ಛ, ಸುಂದರ ಹಾಗೂ ಗುಂಡಿಮುಕ್ತ ರಸ್ತೆಗಳ ನಗರವನ್ನಾಗಿ ಮಾಡುವವರೆಗೂ ಈ ‘ವಾರ್ಡ್ ಒನ್’ ಕಾರ್ಯಾಚರಣೆ ನಿರಂತರವಾಗಿ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Read more Articles on
click me!

Recommended Stories

ರಾಜ್ಯೋತ್ಸವದ ಸಂಭ್ರಮದಲ್ಲಿ ಕರ್ನಾಟಕಕ್ಕೆ ಹೊಸ ಗರಿ: ಮಲೆನಾಡಿನ ಮರಗಂತಿ ಕಪ್ಪೆಗೆ ರಾಜ್ಯ ಉಭಯಜೀವಿ ಮನ್ನಣೆ
ಗೋಕರ್ಣ ಸಮುದ್ರದಲ್ಲಿ ಮುಳುಗಿ ಬೆಳ್ಳಂದೂರಿನ ಅಲೋರಿಯಾ ಇಕೋಸ್ಪೇಸ್‌ನ ಮೂವರು ಟೆಕ್ಕಿಗಳು ಸಾವು