
ಬೆಂಗಳೂರು (ಏ.29): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಾಮಾನ್ಯ ಜನರಿಂದ ತೆರಿಗೆ ವಸೂಲಿ ಮಾಡುವ ಸರ್ಕಾರಿ ಇಲಾಖೆಗಳೇ ಈಗ ತೆರಿಗೆಗಳ್ಳರ ಪಟ್ಟಿಗೆ ಸೇರಿವೆ! ಹೌದು, ಬೆಂಗಳೂರಿನ ಪ್ರತಿಷ್ಠಿತ ಸರ್ಕಾರಿ ಕಟ್ಟಡಗಳಿಂದ ಸುಮಾರು 472.66 ಕೋಟಿ ರೂಪಾಯಿಗಳಿಗೂ ಅಧಿಕ ಸೇವಾ ತೆರಿಗೆ (Service Tax) ಬಾಕಿ ಉಳಿದಿದ್ದು, ಈಗ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಈ ಬಾಕಿ ವಸೂಲಿಗೆ 'ಸ್ಪೆಷಲ್ ಡ್ರೈವ್' ಆರಂಭಿಸಿದೆ.
ಆಶ್ಚರ್ಯವೆಂದರೆ, ರಾಜ್ಯದ ಆಡಳಿತ ಕೇಂದ್ರವಾದ ವಿಧಾನಸೌಧ ಮತ್ತು ರಾಜ್ಯಪಾಲರ ಅಧಿಕೃತ ನಿವಾಸ ರಾಜಭವನ ಕೂಡ ತೆರಿಗೆ ಪಾವತಿಸುವಲ್ಲಿ ಹಿಂದೆ ಬಿದ್ದಿವೆ. ವಿಧಾನಸೌಧದಿಂದ 2.15 ಕೋಟಿ ರೂ., ವಿಕಾಸಸೌಧದಿಂದ 4.24 ಕೋಟಿ ರೂ. ಹಾಗೂ ಬಹುಮಹಡಿ ಕಟ್ಟಡದಿಂದ 3.38 ಕೋಟಿ ರೂ. ತೆರಿಗೆ ಬಾಕಿ ಬರಬೇಕಿದೆ. ಅಷ್ಟೇ ಏಕೆ, ಈ ಕಟ್ಟಡಗಳ ಒಳಗಿರುವ ಕ್ಯಾಂಟೀನ್‌ಗಳೂ ಸಹ ಲಕ್ಷಾಂತರ ರೂಪಾಯಿ ತೆರಿಗೆಯನ್ನು ಬಾಕಿ ಉಳಿಸಿಕೊಂಡಿವೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಂದಾಯ ವಿಭಾಗದ ವಿಶೇಷ ಆಯುಕ್ತರಾದ ಮನೀಶ್ ಮೌದ್ಗಿಲ್ ಅವರು ಈ ಬಗ್ಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಹಲವು ವರ್ಷಗಳಿಂದ ತೆರಿಗೆ ಪಾವತಿಸದೆ ಜಿಬಿಎ ಅಥವಾ ಬಿಬಿಎಂಪಿಗೆ ವಂಚಿಸುತ್ತಿರುವ ಇಲಾಖೆಗಳ ವಿರುದ್ಧ ಕಠಿಣ ಕ್ರಮ ಜರುಗಿಸಲು ಸೂಚಿಸಿದ್ದಾರೆ. ಇಲಾಖೆಗಳ ಮುಖ್ಯಸ್ಥರಿಗೆ ತಕ್ಷಣವೇ "ಬೇಡಿಕೆ ನೋಟೀಸ್" ಜಾರಿಗೊಳಿಸಲು ಮತ್ತು ಬಾಕಿ ಹಣ ವಸೂಲಿ ಮಾಡಲು 5 ನಗರ ಪಾಲಿಕೆಗಳ ವ್ಯಾಪ್ತಿಯ ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ.
ಅನೇಕ ಕಟ್ಟಡಗಳಿಗೆ ತೆರಿಗೆಯನ್ನು ಕಡಿಮೆ ನಿಗದಿಪಡಿಸಿರುವ ದೂರುಗಳೂ ಕೇಳಿಬಂದಿದ್ದು, ಅಂತಹ ಪ್ರಕರಣಗಳನ್ನು ಮರುಪರಿಶೀಲಿಸಲು ಆಯುಕ್ತರು ಸೂಚಿಸಿದ್ದಾರೆ. ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಸರ್ಕಾರಿ ಸ್ವತ್ತುಗಳನ್ನು ಗುರುತಿಸಿ ಅವುಗಳಿಗೂ ತೆರಿಗೆ ವಿಧಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರತಿ ಸರ್ಕಾರಿ ಸ್ವತ್ತಿಗೆ ಪ್ರತ್ಯೇಕ ದಾಖಲೆ (DCB - Demand Collection Balance) ನಿರ್ವಹಿಸುವುದು ಈಗ ಕಡ್ಡಾಯವಾಗಿದೆ. ತೆರಿಗೆ ಪಾವತಿಸಲು ವಿಳಂಬ ಮಾಡುವ ಇಲಾಖೆಗಳ ಮುಖ್ಯಸ್ಥರನ್ನು ಅಧಿಕಾರಿಗಳು ನೇರವಾಗಿ ಭೇಟಿ ಮಾಡಿ ವಸೂಲಿ ಮಾಡುವಂತೆ ಸೂಚಿಸಲಾಗಿದೆ. 2025-26ರ ಸಾಲಿನ ತೆರಿಗೆಯನ್ನು ಸೇರಿಸಿದರೆ ಈ ಬಾಕಿ ಮೊತ್ತ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಒಟ್ಟಿನಲ್ಲಿ, ಸಾಮಾನ್ಯ ಜನರಿಗೆ ತೆರಿಗೆ ಬರೆ ಎಳೆಯುವ ಸರ್ಕಾರಿ ವ್ಯವಸ್ಥೆ, ತನ್ನದೇ ಕಟ್ಟಡಗಳ ತೆರಿಗೆಯನ್ನು ಯಾವಾಗ ಪಾವತಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.