ಬೆಂಗಳೂರು: ಕಸ ಎಸೆದವರಿಗೆ ಅನಿರೀಕ್ಷಿತ ರಿಟರ್ನ್ ಗಿಫ್ಟ್! ಒಂದೇ ದಿನ 2.80 ಲಕ್ಷ ರೂ ದಂಡ ಸಂಗ್ರಹ

Published : Oct 31, 2025, 01:15 PM IST
Bengaluru Garbage

ಸಾರಾಂಶ

ಬೆಂಗಳೂರಿನಲ್ಲಿ ರಸ್ತೆ ಬದಿ ಕಸ ಎಸೆಯುವವರ ವಿರುದ್ಧ BSWML 'ಮನೆ ಮುಂದೆ ಕಸ ಸುರಿಯುವ' ಅಭಿಯಾನ ಆರಂಭಿಸಿದೆ. ಈ ಕಠಿಣ ಕ್ರಮದ ಮೂಲಕ, ನಿಯಮ ಉಲ್ಲಂಘಿಸಿದ ಮನೆಗಳ ಮುಂದೆ ಕಸ ಸುರಿದು, ದಂಡ ವಸೂಲಿ ಮಾಡಲಾಗುತ್ತಿದೆ.  

ಬೆಂಗಳೂರು: ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಸದ ಸಮಸ್ಯೆ ಈಗ ಹೊಸ ತಿರುವು ಪಡೆದಿದೆ. ರಸ್ತೆ ಬದಿಯಲ್ಲಿ ಕಸ ಎಸೆಯುವವರ ವಿರುದ್ಧ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ (BSWML) ಕಠಿಣ ಕ್ರಮಕ್ಕೆ ಮುಂದಾಗಿದೆ. ಮನೆ ಮುಂದೆ “ಕಸ ಸುರಿಯುವ ಹಬ್ಬ” ಪ್ರಾರಂಭವಾದ ಈ ನೂತನ ಜಾಗೃತಿ ಕಾರ್ಯಕ್ರಮ ಈಗ ನಗರದಾದ್ಯಂತ ಚರ್ಚೆಯ ವಿಷಯವಾಗಿದೆ.

ಬೆಳಿಗ್ಗೆ ಪ್ರತಿ ಮನೆಗೆ ಕಸದ ಆಟೋ ಟಿಪ್ಪರ್‌ಗಳು ಭೇಟಿ ನೀಡಿ ಕಸ ಸಂಗ್ರಹಣೆ ಮಾಡುತ್ತಿದ್ದರೂ, ಕೆಲವರು ಇಂದಿಗೂ ರಸ್ತೆ ಬದಿ, ಪಾದಚಾರಿ ಮಾರ್ಗ ಹಾಗೂ ಖಾಲಿ ಜಾಗಗಳಲ್ಲಿ ಕಸ ಎಸೆದು ನಗರ ನೈರ್ಮಲ್ಯ ಹಾಳು ಮಾಡುತ್ತಿದ್ದಾರೆ. ಈ ಕ್ರಮದ ವಿರುದ್ಧವಾಗಿ ಜನರಲ್ಲಿ ಶಿಸ್ತಿನ ಭಾವನೆ ಮೂಡಿಸಲು ಜಿಬಿಎ ಹೊಸ ವಿಧಾನವನ್ನು ಅಳವಡಿಸಿಕೊಂಡಿದೆ.

218 ಮನೆಗಳ ಮುಂದೆ ಕಸ ಸುರಿದು ಅಭಿಯಾನ

ಇದಿನಂತೆಯೇ ಕಸ ಸುರಿಯುವ ಹಬ್ಬದ ಮೂಲಕ ನೆನ್ನೆ 218 ಮನೆಗಳ ಮುಂದೆ ಕಸ ಸುರಿಯಲಾಗಿದ್ದು, ಒಟ್ಟು 2.80 ಲಕ್ಷ ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಈ ಮಾಹಿತಿಯನ್ನು ಜಿಬಿಎ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರೀಗೌಡ ಅವರು ತಿಳಿಸಿದ್ದಾರೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಎಲ್ಲಾ ಐದು ನಗರ ಪಾಲಿಕೆಗಳಲ್ಲಿ ರಸ್ತೆ ಬದಿಯಲ್ಲಿ ಕಸ ಎಸೆಯುವವರನ್ನು ಗುರುತಿಸಿ, ಅವರ ಮನೆ ಮುಂದೆ ಕಸ ಸುರಿಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಕೈಗೊಳ್ಳಲಾಗಿದೆ. ಈ ಕ್ರಮದಿಂದ ಜನರಲ್ಲಿ ಕಸದ ಭಯ ಆರಂಭವಾಗಿದೆ ಎಂದು ಅವರು ತಿಳಿಸಿದ್ದಾರೆ.

ಮೊದಲ ಬಾರಿ ಕಸ ಸುರಿದವರ ವಿರುದ್ಧ 1,000 ರೂ. ದಂಡ ವಿಧಿಸಲಾಗಿದ್ದು, ಅದೇ ತಪ್ಪು ಮರುಕಳಿಸಿದರೆ 5,000 ರೂ. ದಂಡ ವಿಧಿಸುವುದರ ಜೊತೆಗೆ ಅವರ ಮನೆ ಮುಂದೆ ಮತ್ತೆ ಕಸ ಸುರಿಯಲಾಗುತ್ತದೆ. ಮನೆ ಮುಂದೆ ಕಸ ಸುರಿಯುವ ಮೂಲಕ ತಮಟೆ ಬಾರಿಸಿ ಜಾಗೃತಿ ಮೂಡಿಸುವುದು ನಮ್ಮ ಉದ್ದೇಶ. ಇದೇ ರೀತಿಯಾಗಿ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವುದನ್ನು ಸಂಪೂರ್ಣ ತಡೆಗಟ್ಟಲು ಪ್ರಯತ್ನಿಸುತ್ತಿದ್ದೇವೆ ಎಂದು ಕರೀಗೌಡ ಹೇಳಿದ್ದಾರೆ.

ವಿಡಿಯೋ ಮೂಲಕ ಸೆರೆ ಹಿಡಿದು ಅಭಿಯಾನ

ಮಾರ್ಷಲ್‌ಗಳು ರಸ್ತೆ ಬದಿಯಲ್ಲಿ ಕಸ ಎಸೆಯುವವರ ದೃಶ್ಯಗಳನ್ನು ವಿಡಿಯೋ ಮೂಲಕ ಸೆರೆ ಹಿಡಿದು, ನಂತರ ಆ ವ್ಯಕ್ತಿಗಳ ಮನೆ ಮುಂದೆ ಕಸ ಸುರಿಸುವ ಮೂಲಕ ನೇರವಾಗಿ ಎಚ್ಚರಿಕೆ ನೀಡಿದ್ದಾರೆ. ಗಂಗಾನಗರ ಸೇರಿದಂತೆ ಹಲವು ವಾರ್ಡ್‌ಗಳಲ್ಲಿ ಇಂದು ಈ ಅಭಿಯಾನ ನಡೆಯಿತು.

ಒಟ್ಟು 190 ವಾರ್ಡ್‌ಗಳಲ್ಲಿ ಪ್ರತಿ ವಾರ್ಡ್‌ನಿಂದ ಒಂದು ಮನೆ ಆಯ್ದು, 190 ಮನೆಗಳ ಮುಂದೆ ಕಸ ಸುರಿಸುವ ಮೂಲಕ ಈ ಅಭಿಯಾನವನ್ನು ಜಿಬಿಎ ಮುಂದುವರೆಸಿದೆ. ದಂಡದ ಮೊತ್ತವು 1,000 ರೂ.ದಿಂದ 10,000 ರೂ.ವರೆಗೆ ವಿಧಿಸಲಾಗಿದ್ದು, ಬಳಿಕ ಕಸ ತೆರವು ಕಾರ್ಯವನ್ನೂ ಜಿಬಿಎ ಸಿಬ್ಬಂದಿಯೇ ನಿರ್ವಹಿಸುತ್ತಿದ್ದಾರೆ.

ನಗರದ ಕಸದ ಸಮಸ್ಯೆ ಇದೀಗ ದೇಶ-ವಿದೇಶ ಮಟ್ಟದಲ್ಲಿಯೂ ಸುದ್ದಿಯಾಗಿದೆ. ಈ ಹಿನ್ನೆಲೆಯಲ್ಲಿ ನಗರ ಮರ್ಯಾದೆ ಕಾಪಾಡುವ ನಿಟ್ಟಿನಲ್ಲಿ ಜಿಬಿಎ ಅಧಿಕಾರಿಗಳು ತಕ್ಷಣ ಕಾರ್ಯಚರಣೆಗೆ ಮುಂದಾಗಿರುವುದು ನಗರ ನಿವಾಸಿಗಳಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಕಸವನ್ನು ರಸ್ತೆ ಬದಿಯಲ್ಲಿ ಬಿಸಾಡಿದರೆ ಅದೇ ಕಸ ನಿಮ್ಮ ಮನೆ ಮುಂದೆಯೇ ಮರಳಿ ಬರುತ್ತದೆ ಎಂಬ ಸಂದೇಶ ಈಗ ಬೆಂಗಳೂರಿನ ನಾಗರಿಕರ ಮನಸ್ಸಿನಲ್ಲಿ ನಿಲ್ಲುವಂತಾಗಿದೆ. ಈ ಹೊಸ ಕ್ರಮದಿಂದ ಮುಂದಿನ ದಿನಗಳಲ್ಲಿ ನಗರ ಮತ್ತಷ್ಟು ಸ್ವಚ್ಛವಾಗುವ ನಿರೀಕ್ಷೆಯಿದೆ.

PREV
Read more Articles on
click me!

Recommended Stories

ಬಂಗಾರಪ್ಪ ಅವರ ಹೆಸರಿಗೆ ತಕ್ಕ ರೀತಿ ಮಧು ಮಾತನಾಡಲಿ: ಆರಗ ಜ್ಞಾನೇಂದ್ರ ತಿರುಗೇಟು
ಸಮಸ್ಯೆಗಳ ನಿವಾರಣೆ, ಸವಾಲುಗಳಿಗೆ ಧಾರ್ಮಿಕ ಗುರುಗಳಿಂದ ಪರಿಹಾರ: ಬಿ.ವೈ.ವಿಜಯೇಂದ್ರ