
ಬೆಂಗಳೂರು: ನಗರದಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆ ಹಿನ್ನೆಲೆ ಟ್ರಾಫಿಕ್ ಪೊಲೀಸರೊಂದಿಗೆ ವಾಗ್ವಾದ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ಮಹಿಳೆ ಹಾಗೂ ಆಕೆಯ ಸಂಗಾತಿಯನ್ನು ಯಲಹಂಕ ನ್ಯೂ ಟೌನ್ ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಾಹಿತಿಯ ಪ್ರಕಾರ, ರಾಜಸ್ಥಾನ ಮೂಲದ ಇರಾಲ್ ವ್ಯಾಸ್ ಮತ್ತು ಕೇರಳ ಮೂಲದ ಮಹಮ್ಮದ್ ಸರ್ಬಜ್ ಎಂಬ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಟ್ರಾಫಿಕ್ ಪೊಲೀಸರು ವಾಹನವನ್ನು ಅಕ್ರಮವಾಗಿ ಪಾರ್ಕ್ ಮಾಡಿದ್ದಕ್ಕಾಗಿ ಕ್ಲ್ಯಾಂಪ್ ಹಾಕಿದಾಗ, ಆರೋಪಿಗಳು ಕೋಪಗೊಂಡು ಸ್ಥಳದಲ್ಲಿದ್ದ ಪೊಲೀಸರ ಮೇಲೆ ಆಕ್ರೋಶ ಹೊರಹಾಕಿದ್ದಾರೆ.
ಈ ವೇಳೆ ಇರಾಲ್ ವ್ಯಾಸ್ ಅವರು ಸಾರ್ವಜನಿಕವಾಗಿ ಅಸಭ್ಯ ಹಾಗೂ ಅವಾಚ್ಯ ಪದಗಳನ್ನು ಬಳಸಿ, ಪೊಲೀಸ್ ಸಿಬ್ಬಂದಿಯನ್ನು ಅವಮಾನಿಸಿದ್ದಾರೆ. "ಅರೆಸ್ಟ್ ಮಾಡಿ ನೋಡೋಣ" ಎಂದು ಸವಾಲು ಹಾಕಿದ ವಿಡಿಯೋ ಕೂಡ ವೈರಲ್ ಆಗಿದೆ. ಮಹಿಳೆ, ಮಹಿಳಾ ಪೊಲೀಸ್ ಅಧಿಕಾರಿಯರ ಮೇಲೂ ಅಸಭ್ಯ ಪದಗಳನ್ನು ಬಳಸಿರುವುದು ದೃಶ್ಯಗಳಲ್ಲಿ ಕಂಡುಬಂದಿದೆ.
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ, ಇರಾಲ್ ವ್ಯಾಸ್ ವಿರುದ್ಧ ಈ ಹಿಂದೆ ಸಹ ಇದೇ ರೀತಿಯ ವರ್ತನೆ ಮತ್ತು ಕಾನೂನು ಉಲ್ಲಂಘನೆ ಪ್ರಕರಣಗಳು ದಾಖಲಾಗಿರುವ ಮಾಹಿತಿ ಲಭಿಸಿದೆ. ಘಟನೆಯ ಸಮಯದಲ್ಲಿ, ವಾಹನ ಪಾರ್ಕಿಂಗ್ ವಿಚಾರಕ್ಕೆ ಪೊಲೀಸರು ಪ್ರಶ್ನೆ ಮಾಡಿದಾಗ, ಆರೋಪಿಗಳು ಮಧ್ಯಪ್ರವೇಶ ಮಾಡಿ ಗಲಾಟೆ ಆರಂಭಿಸಿರುವುದು ತಿಳಿದುಬಂದಿದೆ.
ಸದ್ಯ ಇಬ್ಬರನ್ನೂ ಪೊಲೀಸರು ಬಂಧಿಸಿ ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ. ಈ ಪ್ರಕರಣವನ್ನು ಸಾರ್ವಜನಿಕರು ವ್ಯಾಪಕವಾಗಿ ಟೀಕಿಸುತ್ತಿದ್ದು, "ಪೊಲೀಸ್ ಎನ್ನುವ ಭಯವೇ ಇಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹವೂ ವ್ಯಕ್ತವಾಗಿದೆ.