
ಬೆಂಗಳೂರು (ಜ.21): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಎಷ್ಟೇ ದುಡಿದರೂ ತಾವು ಆರ್ಥಿಕವಾಗಿ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿ ಹೊಂದುತ್ತಿಲ್ಲ, ಮಕ್ಕಳ ಶಿಕ್ಷಣ ಉನ್ನತ ಮಟ್ಟಕ್ಕೆ ತಲುಪುತ್ತಿಲ್ಲ, ಮನೆಯವರಿಗೆ ಆಗಾಗ್ಗೆ ಅನಾರೋಗ್ಯ ಕಾಡುತ್ತಿದೆ ಅಲ್ವಾ? ಹಾಗಾದರೆ ನಿಮ್ಮ ಮನೆಗೆ ಯಾರೋ ಮಾಟಮಂತ್ರ ಮಾಡಿಸಿದ್ದಾರೆ. ನಿಮ್ಮ ಮನೆಯಲ್ಲಿ ಪೂಜೆ ಮಾಡಬೇಕು ಎಂದು ಪೂಜೆಗೆ ಬಂದವನು ಎಲ್ಲರಿಗೂ ಮಂಕುಬೂದಿ ಎರಚಿ ಮನೆಯಲ್ಲಿದ್ದ ಎಲ್ಲ ಹಣ ಮತ್ತು ಚಿನ್ನಾಭರಣಗಳನ್ನು ದೋಚಿಕೊಂಡು ಹೋಗುತ್ತಿದ್ದ ಕಳ್ಳಸ್ವಾಮಿಯನ್ನು ಪೊಲೀಸರು ಬಂಧಿಸಿದ್ದಾರೆ.
ಹೌದು, ಸಿಲಿಕಾನ್ ಸಿಟಿ ಬೆಂಗಳೂರಿನ ವಿವಿಧ ಬಡಾವಣೆಗಳು ಸೇರಿದಂತೆ ರಾಜ್ಯದ ವಿವಿಧೆಡೆ ನಿಮ್ಮ ಮನೆಗೆ ಮಾಟಮಂತ್ರ ಮಾಡಿಸಿದ್ದಾರೆ ಪೂಜೆ ಮಾಡ್ತೀನಿ ಅಂತಾ ಕಳ್ಳತನ ಮಾಡುವ ಕಳ್ಳಸ್ವಾಮಿಯನ್ನು ಪೊಲೀಸರು ಬಂಧಿಸಿದ್ದಾರೆ. ಬುಡಬುಡಿಕೆ ವೇಷಾಧಾರಿಯಾಗಿ ಬಂದಿದ್ದ ವಂಚಕನನ್ನು ಪೊಲೀಸರು ಹಡೆಮುರಿಕಟ್ಟಿ ಜೈಲಿಗಟ್ಟಿದ್ದಾರೆ. ಬಂಧಿತ ಆರೋಪಿ ವೆಂಕಟರಮಣ. ಈ ಬುಡುಬುಡಿಕೆ ವೇಶ ಧರಿಸಿ ಒಂಟಿ ಮಹಿಳೆಯರಿರುವ ಮನೆಗೆ ಎಂಟ್ರಿ ಕೊಡುತ್ತಿದ್ದನು. ನಿಮ್ಮ ಮನೆಗೆ ಮಾಟ ಮಂತ್ರ ಮಾಡಲಾಗಿದೆ, ಪೂಜೆ ಮಾಡದಿದ್ದರೆ ಮನೆಯವರೆಲ್ಲ ಸಾಯುತ್ತೀರ ಎಂದು ಬೆದರಿಸುತ್ತಿದ್ದನು.
ಪೂಜೆ ಮಾಡುವ ನೆಪದಲ್ಲಿ ಮನೆಯೊಳಗೆ ಬರುತ್ತಿದ್ದ ಈ ಬುಡುಬಿಡಿಕೆ ಸ್ವಾಮಿ, ಮನೆಯಲ್ಲಿರುವ ಚಿನ್ನಾಭರಣ ಪೂಜೆ ಮಾಡಿದರೆ ಸಮಸ್ಯೆ ಪರಿಹಾರವಾಗುತ್ತೆ ಎನ್ನುತ್ತಿದ್ದನು. ನಂತರ ಮಹಿಳೆಯರು ಮನೆಯಲ್ಲಿರುವ ಎಲ್ಲ ಚಿನ್ನಾಭರಣಗಳನ್ನು ಹಾಘೂ ಹಣವನ್ನು ತಂದು ಸ್ವಾಮೀಜಿ ಹೇಳಿದ ಎರಡು ಕುಡಿಕೆಯಲ್ಲಿ ಹಾಕುತ್ತಿದ್ದರು. ನಂತರ, ಬುಡುಬುಡಿಕೆ ಸ್ವಾಮಿ ಪೂಜೆ ಮಾಡಲು ಆರಂಭಿಸುತ್ತಿದ್ದನು. ಪೂಜೆ ಸಾಮಾಗ್ರಿಗಳನ್ನು ತರಲು ಹೇಳಿ ಮನೆಯವರನ್ನು ಒಳಗೆ ಕಳಿಸುವ ಬುಡುಬುಡಿಕೆ ಸ್ವಾಮಿ ಬಂಗಾರವಿರುವ ಕುಡಿಕೆಗಳನ್ನ ಚೀಲದಲ್ಲಿ ತುಂಬಿಕೊಂಡು, ಖಾಲಿ ಮಡಿಕೆಗಳನ್ನು ಆ ಜಾಗಕ್ಕೆ ಇಡುತ್ತಾನೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಬಸ್ಗಾಗಿ ಕಾಯುತ್ತಿದ್ದ ಮಹಿಳೆಯನ್ನ ಕರೆದೊಯ್ದು ಸಾಮೂಹಿಕ ಬಲಾತ್ಕಾರ!
ನಂತರ ಮನೆಯವರ ಕಣ್ಣಮುಂದೆಯೇ ಎರಡೂ ಮಡಿಕೆಗಳನ್ನು ಪೂಜೆ ಮಾಡುತ್ತಿದ್ದನು. ಇದಾದ ನಂತರ ಎಲ್ಲ ಪೂಜೆ ಮಾಡಿಯಾಗಿದೆ. ಇನ್ನುಮೇಲೆ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ನೀವು ಶ್ರದ್ಧಾಭಕ್ತಿಯಿಂದ ಈ ಪೂಜೆ ಮಾಡಿದ ಮಡಿಕೆಗಳನ್ನು ದೇವರ ಮನೆಯಲ್ಲಿ ಇಟ್ಟು ಎರಡು ದಿನ ಪೂಜಿಸಿ ನಂತರ ಅವುಗಳನ್ನು ತೆರಯಬೇಕು. ಎರಡು ದಿನದ ಒಳಗೆ ಈ ಮಡಿಕೆಗಳನ್ನು ತೆರೆದರೆ ನಿಮ್ಮ ಮನೆಗೆ ಮತ್ತೆ ದೊಡ್ಡ ಗಂಡಾಂತರ ಬರಲಿದೆ ಎಂದು ಹೇಳುತ್ತಿದ್ದನು. ಮನೆಗೆ ಪೂಜೆ ಮಾಡಿಸಿದ್ದಕ್ಕಾಗಿ ಹಣವನ್ನೂ ಪಡೆದುಕೊಂಡು ಅಲ್ಲಿಂದ ಪರಾರಿ ಆಗುತ್ತಿದ್ದನು. ಹೀಗೆ, ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ ಜನರಿಗೆ ಪೂಜೆಯ ನೆಪದಲ್ಲಿ ಯಾಮಾರಿಸಿದ್ದನು.
ಇನ್ನು ಬೆಂಗಳೂರಿನಲ್ಲಿ ಕಳೆದ 2024ರ ಮಾರ್ಚ್‌ನಲ್ಲಿ ಬೊಮ್ಮನಹಳ್ಳಿ ವ್ಯಾಪ್ತಿಯ ಒಂದು ಮನೆಯಲ್ಲಿ ಹೀಗೆ ಪೂಜೆ ಮಾಡಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಹಣವನ್ನು ದೋಚಿಕೊಂಡು ಪರಾರಿ ಆಗಿದ್ದ ಸ್ವಾಮೀಜಿಯನ್ನು ಪೊಲೀಸರು ಹುಡುಕುತ್ತಿದ್ದರು. ಈ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಬೊಮ್ಮನಹಳ್ಳಿ ಪೊಲೀಸರು ಇದೀಗ ಆರೋಪಿ ಬುಡುಬುಡಿಕೆ ಕಳ್ಳಸ್ವಾಮಿ ವೆಂಕಟರಮಣನನ್ನು ಬಂಧಿಸಿದ್ದಾರೆ. ಆರೋಪಿಯಿಮದ 8.5 ಲಕ್ಷ ರೂ. ಮೌಲ್ಯದ 115 ಗ್ರಾಂ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ನಿದ್ರೆಯಿಂದ ಏಳದ ಸರ್ಕಾರ, ದರೋಡೆ ತೋಟವಾಗಿ ಬದಲಾದ ಸರ್ವಜನಾಂಗದ ಶಾಂತಿಯ ತೋಟ!