
ಬೆಂಗಳೂರು (ಫೆ.23): ಪ್ರತಿಷ್ಠಿತ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿಯೊಬ್ಬರು ಬೆಳಗ್ಗೆ ಎಂದಿನಂತೆ ಕಾರಿನಲ್ಲಿ ಆಫೀಸಿಗೆ ಹೋಗುವಾಗ ದಿಢೀರನೇ ಹೃದಯಾಘಾತ ಆಗಿದ್ದು, ಕೂಡಲೇ ಟ್ರಾಫಿಕ್‌ಜಾಮ್‌ನಲ್ಲಿಯೂ ಕಾರನ್ನು ರಸ್ತೆ ಬದಿಗೆ ತಂದು ನಿಲ್ಲಿಸಿದ್ದಾರೆ. ಆದರೆ, ಕಾರನ್ನು ಇಳಿದು ಬೇರೆಯವರ ಸಹಾಯ ಕೋರುವ ಮೊದಲೇ ಹೃದಯಸ್ತಂಬನಕ್ಕೆ ಟೆಕ್ಕಿ ಸಾವಿಗೀಡಾಗಿದ್ದಾನೆ. ಟ್ರಾಫಿಕ ಇರುವ ರಸ್ತೆಯಲ್ಲಿ ಕಾರು ನಿಲ್ಲಿಸಿದ್ದನ್ನು ಪ್ರಶ್ನೆ ಮಾಡಲು ಬಂದ ಪೊಲೀಸರಿಗೆ ಕಾರಿನಲ್ಲಿದ್ದವರು ಸತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಹೌದು, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆಫೀಸಿಗೆ ಹೊರಟವನಿಗೆ ಕಾರ್ ನಲ್ಲೇ ಹೃದಯಾಘಾತ ಆಗಿರುವ ಘಟನೆ ಬ್ರೂಕ್ ಫೀಲ್ಡ್‌ನ ಬಳಿ ಗುರುವಾರ ನಡೆದಿದೆ. ಐಟಿ ಉದ್ಯೋಗಿ ಸಂತೋಷ್ ಪ್ರಸಾದ್ (37) ಮೃತ ವ್ಯಕ್ತಿ. ಇಂದಿರಾನಗರದಲ್ಲಿ ಕುಟುಂಬ ಸಮೇತ ವಾಸವಿದ್ದ ಸಂತೋಷ್. ಗುರುವಾರ ಬೆಳಗಿನ ಜಾವ ಕಾರಿನಲ್ಲಿ ಕಚೇರಿಗೆ ಹೋಗುತ್ತಿದ್ದರು. ಆದರೆ, ಬ್ರೂಕ್ ಫಿಲ್ಡ್ ರಸ್ತೆಯಲ್ಲಿ ಟ್ರಾಫಿಕ್ ನಡುವೆ ಹೋಗುವಾಗ ಎದೆನೋವು ಕಾಣಿಸಿಕೊಂಡಿದೆ. ಬಳಿಕ ಕಾರ್ ನ್ನ ರಸ್ತೆ ಬದಿಗೆ ಪಾರ್ಕ್ ಮಾಡಿದ್ದಾರೆ. ಕಾರಿನಲ್ಲಿಯೇ ಹೃದಯಾಘಾತವಾಗಿ ಸಾವನ್ನಪ್ಪಿದ್ದರಿಂದ ಸಂಜೆ ತನಕ ಸಂತೋಷ್ ಕಾರಿನಿಂದ ಕೆಳಗಡೆ ಇಳಿದಿಲ್ಲ.
ಇದನ್ನೂ ಓದಿ: ಕೋಟಿ ಜನರು ಸ್ನಾನ ಮಾಡಿದ್ರೂ ಗಂಗೆ ಅಶುದ್ಧವಾಗಲ್ಲ, ಸ್ವಯಂ ಶುದ್ಧೀಕರಣ ಶಕ್ತಿ ಹೊಂದಿರುವ ನದಿ: ವಿಜ್ಞಾನಿ
ರಸ್ತೆ ಬದಿ ಬಿಸಿಲಿನಲ್ಲಿ ಎಷ್ಟೇ ಹೊತ್ತು ಕಾರು ನಿಲ್ಲಿಸಿದರೂ ಕಾರಿನಲ್ಲಿದ್ದ ವ್ಯಕ್ತಿ ಕೆಳಗೆ ಇಳಿಯದ ಹಿನ್ನೆಲೆಯಲ್ಲಿ ಸ್ಥಳೀಯರಿಗೆ ಅನುಮಾನ ಬಂದಿದೆ. ಕೂಡಲೇ, ಟ್ರಾಫಿಕ್ ಪೊಲೀಸರಿಗೆ ಮಾಹಿತಿ ನೀಡಿ, ತುಂಬಾ ಹೊತ್ತು ನಿಂತಿದ್ದ ಕಾರಿನ ಗ್ಲಾಸ್ ಹೊಡೆದು ನೋಡಿದ್ದಾರೆ. ಕಾರಿನ ಒಳಗಡೆ ಸಂತೋಷ್ ಮೃತಪಟ್ಟಿರೋದು ಪತ್ತೆಯಾಗಿದೆ. ಇದಾದ ನಂತರ ಸ್ಥಳಕ್ಕೆ ಬಂದ HAL ಠಾಣೆ ಪೊಲೀಸರಿಂದ ಪರಿಶೀಲನೆ ಮಾಡಲಾಗಿದೆ. ಆಗ ಸಂತೋಷ್ ಹಾರ್ಟ್ ಅಟ್ಯಾಕ್ ಆಗಿ ಮೃತಪಟ್ಟಿರಬಹುದು ಎಂದು ತಿಳಿದು ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.
ಕಾರಿನ ನಂಬರ್ ಹಾಗೂ ಮೊಬೈಲ್‌ನಿಂದ ಮಾಹಿತಿ ಪಡೆದ ಪೊಲೀಸರು ಸಂತೋಷ್‌ನ ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಆಗ ಮನೆಯವರು ಮೃತ ಸಂತೋಷ್ ಅವರಿಗೆ ಹೈ ಶುಗರ್ ಕೂಡ ಇತ್ತು ಎಂಬುದನ್ನು ತಿಳಿಸಿದ್ದಾರೆ. ಈ ಘಟನೆ ಬಗ್ಗೆ ಹೆಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಯುಡಿಆರ್ (UDR) ದಾಖಲು ಆಗಿದೆ.
ಇದನ್ನೂ ಓದಿ: ತೆಲಂಗಾಣ ಸುರಂಗ ದುರಂತ, ಮಣ್ಣಿನಲ್ಲಿ ಸಿಲುಕಿರುವ 8 ಜನರ ರಕ್ಷಣೆಗೆ ಮೊಣಕಾಲುದ್ದ ಕೆಸರು ಅಡ್ಡಿ!