
ಬೆಂಗಳೂರು (ಜೂ.05): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಿನ್ನೆ (ಬುಧವಾರ) ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಭೀಕರ ಕಾಲ್ತುಳಿತ ದುರಂತದಲ್ಲಿ 11 ಮಂದಿ ಪ್ರಾಣ ಕಳೆದುಕೊಂಡಿದ್ದರು. ಇದರಲ್ಲಿ ತಮಿಳುನಾಡು ಮೂಲದ ದೇವಿ ಎಂಬ ಟೆಕ್ಕಿ ಸಾವನಪ್ಪಿದರು. ಮೃತಪಟ್ಟ ದೇವಿ ಆರ್‌ಸಿಬಿ ವಿಜಯೋತ್ಸವದಲ್ಲಿ ಭಾಗವಹಿಸಲು ತಾವು ಕೆಲಸ ಮಾಡುತ್ತಿದ್ದ ಕಚೇರಿಯಿಂದ ಅನುಮತಿ ಪಡೆದು ಹೋಗಿದ್ದರು. ಬುಧವಾರ ಬೆಳಗ್ಗೆ ಕೆಲಸಕ್ಕೆಂದು ಕಚೇರಿಗೆ ತೆರಳಿದ್ದ ದೇವಿ, ಸಂಜೆ ಆರ್‌ಸಿಬಿ ವಿಜಯೋತ್ಸವದಲ್ಲಿ ಪಾಲ್ಗೊಳ್ಳಲು ಅನುಮತಿ ನೀಡುವಂತೆ ತಮ್ಮ ಬಾಸ್‌ಗೆ ಕೇಳಿಕೊಂಡಿದ್ದರು.
ದೇವಿಯ ಮನವಿಯನ್ನು ಒಪ್ಪಿದ ಆಕೆಯ ಬಾಸ್, ಎರಡು ಗಂಟೆಯ ಬಿಡುವು ನೀಡಿದ್ದರು. ಬಿಡುವು ಸಿಕ್ಕ ಖುಷಿಯಲ್ಲಿ ತಮ್ಮ ಲ್ಯಾಪ್‌ಟಾಪ್ ಮತ್ತು ಬ್ಯಾಗ್‌ನ್ನು ಕಚೇರಿಯ ಟೇಬಲ್ ಮೇಲೆಯೇ ಬಿಟ್ಟು ಹೋಗಿದ್ದ ದೇವಿ, ಕಾಲ್ತುಳಿತಕ್ಕೆ ಸಿಕ್ಕು ಮೃತರಾಗಿದ್ದಾರೆ. ನಿನ್ನೆ (ಬುಧವಾರ) ಮಧ್ಯಾಹ್ನ 2.30ರ ವೇಳೆ ಬಾಸ್‌ನಿಂದ ಅನುಮತಿ ಪಡೆದು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದಿದ್ದ ದೇವಿ, ಕಾಲ್ತುಳಿತ ಸಂಭವಿಸಿದಾಗ ಜನರ ಮಧ್ಯೆ ಸಿಲುಕಿಕೊಂಡಿದ್ದರು. ಜನಜಂಗುಳಿಯಿಂದ ಹೊರಬರಲಾರದೇ, ಕಾಲ್ತುಳಿತಕ್ಕೆ ಸಿಕ್ಕು ದೇವಿ ಜೀವ ಕಳೆದುಕೊಂಡಿದ್ದರು.
ಇನ್ನು ದೇವಿಯನ್ನು ನೆನೆದು ಕಣ್ಣೀರು ಹಾಕುತ್ತಿರುವ ಆಕೆಯ ಸಹೋದ್ಯೋಗಿಗಳು, ಬಾಸ್ ಎರಡು ಗಂಟೆಯ ಬಿಡುವು ನೀಡಿದ್ದಾರೆ ಎಂಬ ಖುಷಿಯಲ್ಲಿ ದೇವಿ ನಗುನಗುತ್ತಾ ಕಚೇರಿಯಿಂದ ತೆರಳಿದ ಕ್ಷಣಗಳನ್ನು ನೆನೆದು ಭಾವುಕರಾಗುತ್ತಾರೆ. ಅವಳ ಲ್ಯಾಪ್‌ಟಾಪ್ ಇನ್ನೂ ಟೇಬಲ್ ಮೇಲಿದೆ ಮತ್ತು ಅವಳ ಬ್ಯಾಗ್ ಕೂಡ ಅಲ್ಲೇ ಇದೆ. ಆದರೆ ಈಗ ಆಕೆಯೇ ಇಲ್ಲ ಎಂದು ದೇವಿಯ ಸಹೋದ್ಯೋಗಿಗಳು ಕಣ್ಣೀರಿಟ್ಟಿದ್ದಾರೆ. ಇನ್ನು ಮಾರತ್‌ಹಳ್ಳಿಯ ಪಿಜಿಯಲ್ಲಿ ವಾಸವಾಗಿದ್ದ ದೇವಿ ತಂದೆ ತಾಯಿಗೆ ಒಬ್ಬಳೇ ಮಗಳಾಗಿದ್ದಳು. ಜೊತೆಗೆ ಅವರ ತಂದೆ ತಾಯಿ ಇಬ್ಬರಿಗೂ ವಯಸ್ಸಾಗಿದ್ದು, ದುಡಿದು ಕುಟುಂಬ ನಿರ್ವಹಣೆಯನ್ನು ಮಾಡ್ತಿದ್ದರು.
ತನಿಖೆಗೆ ಆಗ್ರಹಿಸಿದ ರಾಜ್ಯಪಾಲರು: ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ನಡೆದ ದುರಂತದ ಬಗ್ಗೆ ಕೂಲಂಕಷ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು. ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಎಚ್ಚರವಹಿಸಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಆಗ್ರಹಿಸಿದ್ದಾರೆ. ಈ ಕುರಿತು ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಆರ್‌ಸಿಬಿಯ ಐಪಿಎಲ್ ವಿಜಯೋತ್ಸವದ ಸಂಭ್ರಮಾಚರಣೆ ಸಮಯದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ದುರಂತದ ಕುರಿತು ನನಗೆ ವಿಷಾದವಿದೆ.
ಮೃತರ ಕುಟುಂಬಕ್ಕೆ ಸಂತಾಪ ಸೂಚಿಸುತ್ತೇನೆ. ದುರಂತದ ಬಗ್ಗೆ ಸರ್ಕಾರ ಕೂಲಂಕಷ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ದುರಂತದ ಜೀವಹಾನಿಯಿಂದ ತೀವ್ರ ದುಃಖಿತನಾಗಿದ್ದೇನೆ. ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಗೊಂಡವರು ಬೇಗನೆ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಘಟನೆಗೆ ಕಾರಣವಾದ ಲೋಪಗಳನ್ನು ಕೂಲಂಕಷವಾಗಿ ತನಿಖೆ ಮಾಡಿ ಸರ್ಕಾರ ಕ್ರಮಕೈಗೊಳ್ಳಬೇಕು. ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಬೇಕು ಎಂದು ಆಗ್ರಹಿಸಿದ್ದಾರೆ.