
ರಾಮನಗರ (ಜು.13): ಉದ್ದೇಶಿತ ಬಿಡದಿ ಟೌನ್ ಶಿಪ್ ನಿರ್ಮಾಣದ ವಿರುದ್ಧ ರೈತರ ಹೋರಾಟ ಇಂದು ಉಗ್ರರೂಪ ತಾಳಿದೆ. ಜಂಟಿ ಅಳತೆ ಕಾರ್ಯಕ್ಕೆ (JMC) ಮುಂದಾದ ಅಧಿಕಾರಿಗಳ ವಿರುದ್ಧ ಕೆರಳಿದ ರೈತ ಮಹಿಳೆಯರು ಪೊರಕೆಯಿಂದ ತಳಿಸಿದ ಘಟನೆ ಬೈರಮಂಗಲದಲ್ಲಿ ನಡೆದಿದೆ.
ಬಿಡದಿ ಟೌನ್ ಶಿಪ್ ಯೋಜನೆಯನ್ನು ವಿರೋಧಿಸಿ ಇಂದು ಕರೂರು ಮತ್ತು ಭಾರಂಗಿ ವ್ಯಾಪ್ತಿಯ ರೈತರು ಬೈರಮಂಗಲ ಸರ್ಕಲ್‌ನಲ್ಲಿ 'ಪೊರಕೆ ಚಳುವಳಿ' ಹಮ್ಮಿಕೊಂಡಿದ್ದರು. ನೂರಾರು ರೈತ ಮಹಿಳೆಯರು ಕೈಯಲ್ಲಿ ಪೊರಕೆ ಹಿಡಿದು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನೆಗೆ ಸಜ್ಜಾಗಿದ್ದರು.
ಒಂದೆಡೆ ರೈತರು ಪ್ರತಿಭಟನೆ ನಡೆಸುತ್ತಿದ್ದರೆ, ಇನ್ನೊಂದೆಡೆ ಬಿಡದಿಯ ಕೊಡಿಯಾಲ ವ್ಯಾಪ್ತಿಯಲ್ಲಿ ಜೆಎಂಸಿ (JMC) ಸರ್ವೆ ಮಾಡಲು ಅಧಿಕಾರಿಗಳು ಬೇರೆ ಮಾರ್ಗದ ಮೂಲಕ ಸ್ಥಳಕ್ಕೆ ಆಗಮಿಸಿದ್ದರು. ಪ್ರತಿಭಟನೆಯ ನಡುವೆಯೂ ಸರ್ವೆ ಕಾರ್ಯ ಆರಂಭಿಸಲು ಅಧಿಕಾರಿಗಳು ಮತ್ತು ಸಿಬ್ಬಂದಿ ಮುಂದಾದರು. ಈ ವಿಷಯ ತಿಳಿಯುತ್ತಿದ್ದಂತೆಯೇ ಪ್ರತಿಭಟನಾ ನಿರತ ರೈತರು ಮತ್ತು ಮಹಿಳೆಯರು ಸರ್ವೆ ನಡೆಯುತ್ತಿದ್ದ ಸ್ಥಳದತ್ತ ಓಡಿ ಬಂದರು.
ಸ್ಥಳದಲ್ಲಿದ್ದ ಪೊಲೀಸ್ ಮತ್ತು ಅಧಿಕಾರಿಗಳ ಜೊತೆ ರೈತರು ಚರ್ಚಿಸುತ್ತಿದ್ದಾಗಲೇ, ಮತ್ತೊಂದೆಡೆ ಸಿಬ್ಬಂದಿಗಳು ಸರ್ವೆ ಕಾರ್ಯ ಮುಂದುವರಿಸಿದ್ದರು. ಇದನ್ನು ತಡೆಯಲು ಹೋದ ರೈತ ಮಹಿಳೆಯರನ್ನು ಸರ್ವೆ ಸಿಬ್ಬಂದಿಗಳು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದ ಆಕ್ರೋಶಗೊಂಡ ಮಹಿಳೆಯರು ತಾವು ಹಿಡಿದಿದ್ದ ಪೊರಕೆಯಿಂದಲೇ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಏಟು ನೀಡಿದರು. ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಘಟನೆಯ ನಂತರ ಬೈರಮಂಗಲದಲ್ಲಿ ರೈತರು ಸಭೆ ನಡೆಸಿದ್ದು, ಇಂದಿನ ಘಟನೆಯ ಬಗ್ಗೆ ಸುದೀರ್ಘವಾಗಿ ಚರ್ಚಿಸಿದರು. ನಾಳೆ (ಜುಲೈ 14) ಬೆಳಗ್ಗೆ ಮತ್ತೆ ಬೈರಮಂಗಲ ಸರ್ಕಲ್‌ನಲ್ಲಿ ಸಭೆ ಸೇರಲು ನಿರ್ಧರಿಸಲಾಗಿದೆ. ಇಂದಿನಂತಹ ಅಹಿತಕರ ಘಟನೆಗಳು ಮರುಕಳಿಸದಂತೆ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ರೈತ ಮುಖಂಡರು ತೀರ್ಮಾನಿಸಿದ್ದಾರೆ. ಅಧಿಕಾರಿಗಳು ಮತ್ತೆ ಸರ್ವೆಗೆ ಬಂದರೆ ಸ್ಥಳದಲ್ಲೇ ಹೋಗಿ ಮನವಿ ಸಲ್ಲಿಸುವ ಮೂಲಕ ವಿರೋಧ ವ್ಯಕ್ತಪಡಿಸಲು ರೈತರು ಸಜ್ಜಾಗಿದ್ದಾರೆ. ಟೌನ್ ಶಿಪ್ ಹೆಸರಿನಲ್ಲಿ ಫಲವತ್ತಾದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ.
ಬಿಡದಿ ಟೌನ್ ಶಿಪ್ ವಿಷಯವಾಗಿ ಸರ್ಕಾರ ರೈತರ ಒಪ್ಪಿಗೆ ಇಲ್ಲದೇ, ಯಾವುದೇ ರೀತಿಯ ಮಾಹಿತಿ ನೀಡದೆ ಜೆಎಂಸಿ ಸರ್ವೇ ಮಾಡಲು ಹೊರಟಿರುವುದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ.
ರೈತರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ವಿಫಲವಾಗಿರುವ ಸರ್ಕಾರ, ಏನಾದರೂ ಮಾಡಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಹೊರಟಿರುವುದು ದುರ್ದೈವದ ಸಂಗತಿ.
ಈ ಕೂಡಲೇ… pic.twitter.com/7DkK9CWjrX— Nikhil Kumar (@Nikhil_Kumar_k) July 13, 2026