2ನೇ ಏರ್‌ಪೋರ್ಟ್ ತುಮಕೂರು ಜಿಲ್ಲೆಯಲ್ಲಾಗಲಿ: 3 ತಾಲೂಕುಗಳಲ್ಲಿ ನಿರ್ಮಾಣಕ್ಕೆ ಪ್ರಸ್ತಾವನೆ

Published : Jul 22, 2026, 07:38 AM IST
Bengaluru 2nd Airport

ಸಾರಾಂಶ

ಬೆಂಗಳೂರಿಗೆ ಪರ್ಯಾಯವಾಗಿ ಬೆಳೆಯುತ್ತಿರುವ ತುಮಕೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪಿಸಲು ಮಾಜಿ ಸಂಸದ ಜಿ.ಎಸ್. ಬಸವರಾಜು ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಯೋಜನೆಯು ಕೈಗಾರಿಕೆಗಳು ಮತ್ತು ಉತ್ತರ ಕರ್ನಾಟಕಕ್ಕೆ ಅನುಕೂಲಕರವಾಗಿದ್ದು, ಇದಕ್ಕೆ ಹಲವು ರಾಜಕೀಯ ನಾಯಕರು ಮತ್ತು ಸಂಘ-ಸಂಸ್ಥೆಗಳು ಬೆಂಬಲ ಸೂಚಿಸಿವೆ ಎಂದು ಅವರು ತಿಳಿಸಿದ್ದಾರೆ.

ತುಮಕೂರು: ಬೆಂಗಳೂರಿಗೆ ಪರ್ಯಾಯ ನಗರವಾಗಿ ಬೆಳೆಯುತ್ತಿರುವ ತುಮಕೂರಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆ ಮಾಡಿದರೆ ಕೈಗಾರಿಕೋದ್ಯಮಿಗಳು ಸೇರಿದಂತೆ ಉತ್ತರ ಕರ್ನಾಟದ ಭಾಗಕ್ಕೂ ಅನುಕೂಲವಾಗಲಿದೆ. ಹಾಗಾಗಿ ತುಮಕೂರು ಜಿಲ್ಲೆಯಲ್ಲೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಂಸದ ಜಿ.ಎಸ್. ಬಸವರಾಜು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಕನಕಪುರದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ವಿಶೇಷ ಆಸಕ್ತಿ ವಹಿಸಿದ್ದಾರೆ. ಆದರೆ ಉದ್ದೇಶಿತ ಎಲ್ಲಾ ಪ್ರಸ್ತಾವನೆಗಳ ವೈಮಾನಿಕ ದೂರಕ್ಕಿಂತ, ತುಮಕೂರು ಪ್ರಸ್ತಾವನೆ ದೂರ ಇದ್ದರೂ, ರಾಜ್ಯ ಸರ್ಕಾರ ಗುರುತಿಸಿರುವ ಎಲ್ಲಾ ಸ್ಥಳಗಳಿಗಿಂತ ಉತ್ತಮವಾಗಿದೆ. ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ ದೊರಕಲಿದೆ. ಕರ್ನಾಟಕ ರಾಜ್ಯದ ಬಹುತೇಕ ಪ್ರದೇಶಗಳಿಗೆ ಅನೂಕೂಲವಾಗಲಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಯಾಕೆ ತುಮಕೂರು?

ಜಿಲ್ಲೆಯಲ್ಲಿ ಸರ್ಕಾರಿ ಜಮೀನು ಜಾಸ್ತಿ ಇದೆ, ಉದ್ದೇಶಿತ ಬೇರೆ ಪ್ರಸ್ತಾವನೆಗಳ ಜಮೀನಿಗೆ ಹೋಲಿಸಿದರೆ, ಇಲ್ಲಿ ಜಮೀನು ಬೆಲೆ ಕಡಿಮೆ ಇದೆ. ಕೈಗಾರಿಕಾ ಕ್ರಾಂತಿಗೆ ಪೂರಕವಾಗಲಿದೆ. ಯಾವ ಸ್ಥಳ ಸೂಕ್ತ ಎಂಬುದನ್ನು ಕೇಂದ್ರ ಸರ್ಕಾರ ನಿರ್ಧರಿಸಲಿ. 19 ಜಿಲ್ಲೆಗಳ ಹೆಬ್ಬಾಗಿಲು, ಬೆಂಗಳೂರು-ಪುಣೆ ಎಕನಾಮಿಕ್ ಕಾರಿಡಾರ್, ಚನೈ- ಚಿತ್ರದುರ್ಗ ಇಂಡಸ್ಟ್ರಿಯಲ್ ಕಾರಿಡಾರ್, ಉದ್ದೇಶಿತ ಬೀದರ್-ಬೆಂಗಳೂರು ಎಕ್ಸಪ್ರೆಸ್‌ ಹೈವೇ, ಸುಮಾರು 12500 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಇಂಡಸ್ಟ್ರಿಯಲ್ ನೋಡ್ ಅಭಿವೃದ್ದಿಗೂ ಪೂರಕವಾಗಲಿದೆ ಎಂದು ಅಭಿಪ್ರಾಯಪಟ್ಟರು.

ನಾನು ತುಮಕೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕೆಂದು 2020 ರಿಂದಲೂ ಒತ್ತಾಯಿಸುತ್ತಾ ಬಂದಿದ್ದೇನೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ವಿಜಯೇಂದ್ರರವರು ತುಮಕೂರಿನಲ್ಲಿ ನಿರ್ಮಾಣ ಮಾಡಲು ಬಹಿರಂಗವಾಗಿ ಘೋಷಣೆ ಮಾಡಿದ್ದಾರೆ. ಬಿಜೆಪಿ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲೂ ಸೇರ್ಪಡೆ ಮಾಡಲು ನಾನೇ ಮನವಿ ಮಾಡಿದ್ದೆ. ಜತೆಗೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಕೇಂದ್ರ ಸಚಿವ ವಿ. ಸೋಮಣ್ಣನವರು ಈ ಪ್ರಸ್ತಾಪಕ್ಕೆ ಬಹಿರಂಗವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಮತ್ತು ಉತ್ತರ ಕರ್ನಾಟಕದ ಅನೇಕ ಸಂಘ ಸಂಸ್ಥೆಗಳು ಸಹಮತ ವ್ಯಕ್ತಪಡಿಸಿದ್ದಾರೆ. ಇದೊಂದು ಜಿಲ್ಲೆಯ ಮತ್ತು ಮಧ್ಯ ಕರ್ನಾಟಕದ ಹಿತದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಎಂದರು.

ರಾಜ್ಯ ಸರ್ಕಾರಕ್ಕೆ ಹಲವಾರು ಬಾರಿ ಮನವಿ

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು-2 ನಿರ್ಮಾಣ ನನ್ನ ಕನಸಾಗಿತ್ತು. ಎಲ್ಲರಿಗಿಂತ ಮೊದಲೇ, ತುಮಕೂರು ಜಿಲ್ಲಾ ದಿಶಾ ಸಮಿತಿಯಲ್ಲಿ ಚರ್ಚಿಸಿ, ತುಮಕೂರು ಸ್ಥಳ ಗುರುತಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಹಲವಾರು ಬಾರಿ ಮನವಿ ಮಾಡಲಾಗಿತ್ತು. ಆರಂಭದಿಂದ ಕಡತದ ಅನುಸರಣೆಯನ್ನು ರಾಜ್ಯಮಟ್ಟದ ದಿಶಾ ಸಮಿತಿ ಮಾಜಿ ಸದಸ್ಯರಾದ ಕುಂದರನಹಳ್ಳಿ ರಮೇಶ್ ಅನುಸರಣೆ ಮಾಡುತ್ತಾ ಬಂದಿದ್ದಾರೆ ಎಂದು ಹೇಳಿದರು.

ಅರವಿಂದ್ ಬೆಲ್ಲದ್ ಸೇರಿದಂತೆ ಉತ್ತರ ಕರ್ನಾಟಕದ 19 ಜಿಲ್ಲೆಗಳ 37 ಜನ ಚುನಾಯಿತ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಕೇಂದ್ರ ಸರ್ಕಾರಕ್ಕೆ ತುಮಕೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು-2 ನಿರ್ಮಾಣ ಮಾಡಲು ಮನವಿ ಮಾಡಿದ್ದಾರೆ. ಯಾವುದೇ ಬೃಹತ್ ವಿಶೇಷ ಯೋಜನೆಗೆ ವೈಜ್ಞಾನಿಕ ಅಭಿವೃದ್ಧಿ ಲಾಬಿ ಅಗತ್ಯ ಎಂದರು.

ಮೂರು ತಾಲೂಕುಗಳಲ್ಲಿ ನಿರ್ಮಾಣಕ್ಕೆ ಪ್ರಸ್ತಾವನೆ

ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸುವಾಗ ಮಧುಗಿರಿ, ಕೊರಟಗೆರೆ, ಸಿರಾ ಮತ್ತು ತುಮಕೂರು ತಾಲ್ಲೂಕು ಜಮೀನುಗಳಲ್ಲಿ ಈಗಾಗಲೇ ಗುರುತಿಸಿ ಸರ್ಕಾರಕ್ಕೆ ಸಲ್ಲಿರುವ ಪ್ರಸ್ತಾವನೆಯನ್ನು ಕಳುಹಿಸಲಾಗಿತ್ತು. ಆದರೆ ನಿಖರವಾಗಿ ಎಷ್ಟು ಎಕರೆ ಸರ್ಕಾರಿ ಜಮೀನು ಇದೆ, ಎಷ್ಟು ಜನ ರೈತರು ಬಗರ್ ಹುಕುಂ ಯೋಜನೆಯಡಿ ಅರ್ಜಿ ಹಾಕಿದ್ದಾರೆ. ಎಷ್ಟು ಎಕರೆ ಹಿಡುವಳಿ ಜಮೀನು ಅವಶ್ಯಕತೆ ಇದೆ ಎಂಬ ಬಗ್ಗೆ ಸಮೀಕ್ಷೆ ನಡೆಸಿಲ್ಲ ಎಂದರು.

ಕೇಂದ್ರ ಐಟಿ ಸಚಿವರಾದ ಅಶ್ವಿನಿ ವೈಷ್ಣವ್ ರವರು ತುಮಕೂರಿನಲ್ಲಿ ಸಿಲಿಕಾನ್ ಮಾದರಿ ಸಿಟಿ ಸ್ಥಾಪಿಸಿ ಎಂದು ರಾಜ್ಯದ ಎಂ.ಬಿ. ಪಾಟೀಲ್ ರವರಿಗೆ ಸಭೆಯಲ್ಲಿಯೇ ಹೇಳಿದ್ದರೂ ಇದುವರೆಗೂ ಪ್ರಸ್ತಾವನೆ ಸಲ್ಲಿಸದೇ ಇರುವುದು ವಿಷಾದಕರ ಸಂಗತಿ ಎಂದಿದ್ದಾರೆ. ಜಮೀನು ಗುರುತಿಸಿ ಎರಡು ಯೋಜನೆಗಳಿಗೂ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದು ಸೂಕ್ತವಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಕುಂದರಹಳ್ಳಿ ರಮೇಶ್, ಶಿವರುದ್ರಪ್ಪ, ಮಲ್ಲಿಕಾರ್ಜುನಯ್ಯ ಬಿ.ಬಿ., ಮಹದೇವಯ್ಯ, ವೀರಭದ್ರಯ್ಯ, ರಕ್ಷಿತ್ ಮತ್ತಿತರರು ಉಪಸ್ಥಿತರಿದ್ದರು.

PREV
Read more Articles on
click me!

Recommended Stories

ವಿಕ್ರಮ್‌ 1 ಉಡಾವಣೆ: ಬೀದರ್‌ನ ಎಂಜಿನಿಯರಿಂಗ್‌ ವಿದ್ಯಾರ್ಥಿ ನರಸಿಂಗ್‌ ಶಿಂಧೆ ಸಾಧನೆ
ಮಂಡ್ಯ ಶಾಕಿಂಗ್: ನಾಗಮಂಗಲ ಒಂದರಲ್ಲೇ 2000 ಅಕ್ರಮ ಬಾಂಗ್ಲಾ ವಲಸಿಗರು? ಚುನಾವಣಾ ಆಯೋಗಕ್ಕೆ ದೂರು