
ಬೆಂಗಳೂರು ಗ್ರಾಮಾಂತರ: ದಾಬಸ್‍ಪೇಟೆ ಸೋಂಪುರ ಹೋಬಳಿಯ ಶಿವಗಂಗೆ ಗ್ರಾಪಂ ವ್ಯಾಪ್ತಿ ನಾರಾಯಣಪುರ ಗ್ರಾಮದಲ್ಲಿ ಹಾಲು ಉತ್ಪಾದಕ ರೈತರು ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ನೂರಾರು ಲೀಟರ್ ಹಾಲನ್ನು ಡೈರಿಯ ಒಳಗೆ ಮತ್ತು ರಸ್ತೆಯ ಮೇಲೆ ಚೆಲ್ಲಿ ಉಗ್ರವಾಗಿ ಪ್ರತಿಭಟನೆ ನಡೆಸಿದ್ದಾರೆ.
ದಸರಾ ಹಬ್ಬದ ಸಂದರ್ಭದಲ್ಲಿ ರೈತರಿಗೆ ಸಿಗಬೇಕಾದ ಬೋನಸ್ ಹಾಗೂ ಪ್ರೋತ್ಸಾಹಧನವನ್ನು ನೀಡದೆ ಆಡಳಿತ ಮಂಡಳಿ ವಂಚಿಸಿದ್ದಲ್ಲದೇ ಸಂಘದ ಅಧ್ಯಕ್ಷ ಮಂಜುನಾಥ್, ರೈತರ ಕಷ್ಟದ ದುಡ್ಡು ಹಾಗೂ ಉಳಿತಾಯ ಹಣದಲ್ಲಿ ಭಾರೀ ಪ್ರಮಾಣದ ಅವ್ಯವಹಾರ ಮತ್ತು ಅಕ್ರಮ ಎಸಗಿದ್ದಾರೆ. ರೈತರು ನೀಡುವ ಹಾಲಿಗೆ ಸೂಕ್ತ ಬೆಂಬಲ ಬೆಲೆ ಸಿಗುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದರು.
ಪ್ರತಿದಿನ ಕಷ್ಟಪಟ್ಟು ಕರೆದ ಹಾಲನ್ನು ತಾವೇ ಸ್ವತಃ ನೂರಾರು ಲೀಟರ್ ಪ್ರಮಾಣದಲ್ಲಿ ಡೈರಿಯ ನೆಲದ ಮೇಲೆ ಹಾಗೂ ರಸ್ತೆಯ ಮೇಲೆ ಚೆಲ್ಲುವ ಮೂಲಕ ರೈತರು ಸರ್ಕಾರದ ಹಾಗೂ ಹಿರಿಯ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.
ರೈತರು ಆಕ್ರೋಶ ಹೊರಹಾಕಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಸಂಘದ ಅಧ್ಯಕ್ಷ ಮಂಜುನಾಥ್ ಹಾಗೂ ಕಾರ್ಯದರ್ಶಿ ನೇತೃತ್ವದಲ್ಲಿ ನಡೆದಿರುವ ಹಣಕಾಸಿನ ಅವ್ಯವಹಾರದ ಬಗ್ಗೆ ಸಹಕಾರ ಇಲಾಖೆಯ ಹಿರಿಯ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಬಂದು ಸೂಕ್ತ ತನಿಖೆ ನಡೆಸಬೇಕು. ತಡೆಹಿಡಿಯಲಾಗಿರುವ ದಸರಾ ಬೋನಸ್ ಮತ್ತು ಸರ್ಕಾರದ ಪ್ರೋತ್ಸಾಹಧನವನ್ನು ತಕ್ಷಣವೇ ರೈತರ ಖಾತೆಗಳಿಗೆ ಜಮಾ ಮಾಡಬೇಕು. ರೈತರ ಹಣ ದುರುಪಯೋಗಪಡಿಸಿಕೊಂಡಿರುವ ಪ್ರಸ್ತುತ ಆಡಳಿತ ಮಂಡಳಿಯನ್ನು ವಜಾಗೊಳಿಸಿ, ರೈತರ ಹಿತ ಕಾಯುವ ಹೊಸ ಸಮಿತಿಗೆ ಅವಕಾಶ ನೀಡಬೇಕು ಎಂದು ರೈತರು ಒತ್ತಾಯಿಸಿದರು.