Bengaluru: ರಿಹ್ಯಾಬ್ ಸೆಂಟರ್ ಮಾಲೀಕನ ಭೀಕರ ಕೊಲೆ ಮಾಡಿದ ರೋಗಿಗಳು, ಕಾರು, ಬೈಕ್ ಕದ್ದು ಎಸ್ಕೇಪ್!

Published : Jun 19, 2026, 04:41 PM IST
Bengaluru rehab center murder

ಸಾರಾಂಶ

ಬೆಂಗಳೂರಿನ ಚಂದ್ರಾಲೇಔಟ್‌ನಲ್ಲಿರುವ 'ನ್ಯೂ ಲೈಫ್ ರಿಹ್ಯಾಬ್ ಸೆಂಟರ್' ಮಾಲೀಕ ಶಿವಲಿಂಗಯ್ಯ ಅವರನ್ನು, ಅಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಮಾಲೀಕರ ನಂಬಿಕೆ ಗಳಿಸಿ ಇನ್‌ಚಾರ್ಜ್ ಆಗಿದ್ದ ನಿತಿನ್ ಎಂಬಾತನೇ ಈ ಕೃತ್ಯದ ಪ್ರಮುಖ ಆರೋಪಿಯಾಗಿದ್ದು, ತನ್ನ ಗ್ಯಾಂಗ್ ಜೊತೆ ಸೇರಿ ಈ ಭೀಕರ ಹತ್ಯೆಗೈದು ಪರಾರಿಯಾಗಿದ್ದಾನೆ.

ಬೆಂಗಳೂರು: ಸಿಲಿಕಾನ್ ಸಿಟಿಯ ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭೀಕರ ಕೊಲೆ ನಡೆದಿದೆ. ಚಿಕಿತ್ಸೆ ಪಡೆದು ಗುಣಮುಖರಾಗಲು ಬಂದವರೇ ತಮಗೆ ಆಶ್ರಯ ನೀಡಿದ್ದ ರಿಹ್ಯಾಬ್ ಸೆಂಟರ್ (ಪುನರ್ವಸತಿ ಕೇಂದ್ರ) ಮಾಲೀಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿರುವ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ. ಚಂದ್ರಾಲೇಔಟ್‌ನಲ್ಲಿರುವ ‘ನ್ಯೂ ಲೈಫ್ ರಿಹ್ಯಾಬ್ ಸೆಂಟರ್’ನ ಮಾಲೀಕರಾದ ಶಿವಲಿಂಗಯ್ಯ (60 ವರ್ಷ) ಕೊಲೆಯಾದ ದುರ್ದೈವಿ. ರಿಹ್ಯಾಬ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಿತಿನ್, ಕಾರ್ತಿಕ್, ಸೋಹೇಲ್ ಪಾಷಾ ಸೇರಿದಂತೆ ನಾಲ್ಕು ಜನ ಆರೋಪಿಗಳು ಈ ಭೀಕರ ಕೃತ್ಯವೆಸಗಿ ಪರಾರಿಯಾಗಿದ್ದಾರೆ.

ನಂಬಿಸಿ ಇನ್‌ಚಾರ್ಜ್ ಆಗಿದ್ದವನೇ ಕೊಲೆ ಮಾಡಿದ

ವರದಿ ಪ್ರಕಾರ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ನಿತಿನ್ ಕಳೆದ ಒಂದೂವರೆ ವರ್ಷದ ಹಿಂದೆ ಇದೇ ನ್ಯೂ ಲೈಫ್ ರಿಹ್ಯಾಬ್ ಸೆಂಟರ್‌ಗೆ ರೋಗಿಯಾಗಿ ದಾಖಲಾಗಿದ್ದನು. ಕಾಲಕ್ರಮೇಣ ಮಾಲೀಕ ಶಿವಲಿಂಗಯ್ಯ ಅವರ ನಂಬಿಕೆಯನ್ನು ಗಳಿಸಿಕೊಂಡಿದ್ದ ಈತ, ಕೇಂದ್ರದಲ್ಲಿ ಇನ್‌ಚಾರ್ಜ್ ಮಾದರಿಯಲ್ಲಿ ಕೆಲಸ ನಿರ್ವಹಿಸುತ್ತಾ ಎಲ್ಲ ಜವಾಬ್ದಾರಿಗಳನ್ನು ನೋಡಿಕೊಳ್ಳುತ್ತಿದ್ದನು. ಆದರೆ, ಇಂದು ಮಧ್ಯಾಹ್ನ 1 ಗಂಟೆಯಿಂದ 1:30ರ ಸುಮಾರಿಗೆ ನಿತಿನ್ ಮತ್ತು ಆತನ ಗ್ಯಾಂಗ್ ಶಿವಲಿಂಗಯ್ಯ ಅವರ ಮೇಲೆ ಏಕಾಏಕಿ ಮುಗಿಬಿದ್ದಿದೆ.

ರೂಮ್ ಲಾಕ್ ಮಾಡಿ, ರಾಡ್ ಹಾಗೂ ಮಚ್ಚಿನಿಂದ ಭೀಕರ ದಾಳಿ

ಘಟನೆಗೆ ಸಂಬಂಧಿಸಿದಂತೆ ಪಶ್ಚಿಮ ವಿಭಾಗದ ಡಿಸಿಪಿ ಯತೀಶ್ ಅವರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ನೀಡಿದ್ದಾರೆ. ಈ ರಿಹ್ಯಾಬ್ ಸೆಂಟರ್ ಒಟ್ಟು ಎರಡು ಫ್ಲೋರ್‌ಗಳನ್ನು ಹೊಂದಿದ್ದು, ಮೊದಲ ಮಹಡಿಯಲ್ಲಿ ಈ ಕೊಲೆ ನಡೆದಿದೆ. ಆರೋಪಿಗಳು ಎರಡನೇ ಮಹಡಿಯಲ್ಲಿದ್ದ ಇತರ ಕೊಠಡಿಗಳ ಬಾಗಿಲನ್ನು ಹೊರಗಿನಿಂದ ಲಾಕ್ ಮಾಡಿ, ಯಾರೂ ರಕ್ಷಣೆಗೆ ಬಾರದಂತೆ ಸಂಚು ರೂಪಿಸಿದ್ದರು. ತದನಂತರ ಮೊದಲ ಮಹಡಿಯಲ್ಲಿ ಶಿವಲಿಂಗಯ್ಯ ಅವರ ಮೇಲೆ ಇನ್-ಚಾರ್ಜ್ ನಿತಿನ್ ಮತ್ತು ಆತನ ಗ್ಯಾಂಗ್ ಕಬ್ಬಿಣದ ರಾಡ್ ಹಾಗೂ ಮಚ್ಚುಗಳಂತಹ ಮಾರಕಾಸ್ತ್ರಗಳಿಂದ ತೀವ್ರವಾಗಿ ಹಲ್ಲೆ ನಡೆಸಿ, ಕೊಚ್ಚಿ ಕೊಲೆ ಮಾಡಿದ್ದಾರೆ.

ಮತ್ತೊಬ್ಬನ ಮೇಲೂ ಹಲ್ಲೆ, ಸಾವು ಬದುಕಿನ ಹೋರಾಟ

ಶಿವಲಿಂಗಯ್ಯ ಅವರನ್ನು ಭೀಕರವಾಗಿ ಹತ್ಯೆ ಮಾಡಿದ ಬಳಿಕ, ಆರೋಪಿಗಳು ಅಲ್ಲಿಯೇ ಇದ್ದ ಮತ್ತೊಬ್ಬ ವ್ಯಕ್ತಿಯ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಪ್ರಸ್ತುತ ಗಂಭೀರವಾಗಿ ಗಾಯಗೊಂಡಿರುವ ಆ ವ್ಯಕ್ತಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮಾಲೀಕನ ಕಾರು, ಬೈಕ್‌ನಲ್ಲೇ ಎಸ್ಕೇಪ್; ಅಪ್ರಾಪ್ತ ಸೇರಿ 8-9 ಜನ ಮಿಸ್ಸಿಂಗ್!

ಕೊಲೆ ಕೃತ್ಯ ಎಸಗಿದ ಬಳಿಕ ಆರೋಪಿಗಳು ಮಾಲೀಕ ಶಿವಲಿಂಗಯ್ಯ ಅವರಿಗೆ ಸೇರಿದ ಕಾರು ಮತ್ತು ಬೈಕ್ ಕೀಲಿಗಳನ್ನು ಕಿತ್ತುಕೊಂಡು, ಅದೇ ವಾಹನಗಳಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆಯ ಬೆನ್ನಲ್ಲೇ ರಿಹ್ಯಾಬ್ ಸೆಂಟರ್‌ನಿಂದ ಸುಮಾರು 8 ರಿಂದ 9 ಜನ ನಾಪತ್ತೆಯಾಗಿದ್ದಾರೆ ಎಂದು ಡಿಸಿಪಿ ಯತೀಶ್ ತಿಳಿಸಿದ್ದಾರೆ. ಈ ಮಿಸ್ಸಿಂಗ್ ಆದವರ ಪಟ್ಟಿಯಲ್ಲಿ ಒಬ್ಬ ಅಪ್ರಾಪ್ತ ವಯಸ್ಕ ಕೂಡ ಸೇರಿದ್ದಾನೆ ಎನ್ನಲಾಗಿದ್ದು, ಇವರೆಲ್ಲರೂ ಆರೋಪಿಗಳಿಗೆ ಸಹಕರಿಸಿದ್ದಾರಾ ಅಥವಾ ಭಯದಿಂದ ಓಡಿಹೋಗಿದ್ದಾರಾ ಎಂಬ ಶಂಕೆ ವ್ಯಕ್ತವಾಗಿದೆ.

ಸ್ಥಳಕ್ಕೆ ಡಿಸಿಪಿ ಭೇಟಿ, ತನಿಖೆ ತೀವ್ರ

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಚಂದ್ರಾಲೇಔಟ್ ಪೊಲೀಸರು ಹಾಗೂ ಪಶ್ಚಿಮ ವಿಭಾಗದ ಡಿಸಿಪಿ ಯತೀಶ್ ಅವರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ (FSL) ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯಗಳನ್ನು ಕಲೆಹಾಕುತ್ತಿದ್ದಾರೆ. ಕೊಲೆಗೆ ನಿಖರವಾದ ಕಾರಣ ಏನೆಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಕೊಲೆಗಡುಕ ರೋಗಿಗಳ ಬಂಧನಕ್ಕಾಗಿ ಪೊಲೀಸರು ಪ್ರತ್ಯೇಕ ತಂಡಗಳನ್ನು ರಚಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಜಾಲಾಡುತ್ತಿದ್ದಾರೆ.

PREV
Read more Articles on
click me!

Recommended Stories

ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಬಿಗ್ ಟ್ವಿಸ್ಟ್: ಇಡೀ ಪ್ರಕರಣದಿಂದ ಹಿಂದೆ ಸರಿಯಲು ನಿರ್ಧರಿಸಿದ ದರ್ಶನ್ ಪರ ವಕೀಲ!
ನಾಲ್ಕೂವರೆ ವರ್ಷದಿಂದ ಯಾವುದೇ ಕಾರಿಡಾರ್‌ಗೆ ಸಿಗದ ಒಪ್ಪಿಗೆ, ಬೆಂಗಳೂರು ಮೆಟ್ರೋಗೆ ಗ್ರಹಣ