ಬೆಂಗಳೂರಿನ ಈ ಪೊಲೀಸ್ ಠಾಣೆಯಲ್ಲಿ ಪೊಲೀಸರೇ ಇಲ್ವಂತೆ! ಗೃಹ ಸಚಿವರೇ ಎಲ್ಲಿದ್ದೀರಿ?

By Sathish Kumar KHFirst Published Nov 22, 2023, 5:54 PM IST
Highlights

ರಾಜ್ಯ ರಾಜಧಾನಿ ಬೆಂಗಳೂರಿನ ರಾಜಾಜಿನಗರ ಪೊಲೀಸ್‌ ಠಾಣೆಯು ಕಳೆದೊಂದು ತಿಂಗಳಿಂದ ಪೊಲೀಸ್‌ ಇನ್ಸ್‌ಪೆಕ್ಟರ್‌ ಇಲ್ಲದೇ ಅನಾಥವಾಗಿದೆ. ಗೃಹ ಸಚಿವರೇ ಎಲ್ಲಿದ್ದೀರಿ? ಬೆಂಗಳೂರೇ ಹೀಗಾದರೆ, ಗ್ರಾಮೀಣ ಪ್ರದೇಶಗಳ ಪಾಡೇನು? ಎಂದು ವಿಪಕ್ಷ ನಾಯಕರು ಕೇಳಿದ್ದಾರೆ.

ಬೆಂಗಳೂರು (ನ.22): ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರತಿಷ್ಠಿತ ಪೊಲೀಸ್ ಠಾಣೆಯಾದ ರಾಜಾಜಿನಗರ ಪೊಲೀಸ್ ಠಾಣೆಯು ಕಳೆದೊಂದು ತಿಂಗಳಿನಿಂದ ಪೊಲೀಸ್‌ ಇನ್ಸ್‌ಪೆಕ್ಟರ್‌ ಇಲ್ಲದೇ ಅನಾಥವಾಗಿದೆ. ಈ ಬಗ್ಗೆ ಗೃಹ ಸಚಿವರು, ಪೊಲೀಸ್‌ ಆಯುಕ್ತರಿಗೆ ಸ್ಥಳೀಯ ಶಾಸಕ ಎಸ್. ಸುರೇಶ್‌ ಕುಮಾರ್ ಮನವಿ ಮಾಡಿದರೂ ದಕ್ಷ ಅಧಿಕಾರಿಯನ್ನು ನಿಯೋಜನೆ ಮಾಡಿಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೌದು, ರಾಜ್ಯದಲ್ಲಿ ಬೆಂಗಳೂರು ನಗರದಲ್ಲಿ ಪೊಲೀಸ್‌ ಆಗಿ ಪೋಸ್ಟಿಂಗ್‌ ಪಡೆಯಲು ಬಹಳಷ್ಟು ಜನರು ಜಿದ್ದಾಜಿದ್ದಿ ನಡೆಸುತ್ತಿರುತ್ತಾರೆ. ಆದರೆ, ಬೆಂಗಳೂರಿನ ರಾಜಾಜಿನಗರ ಕೇಂದ್ರ ಭಾಗದಲ್ಲಿಯೇ ಇರುವ ರಾಜಾಜಿನಗರ ಪೊಲೀಸ್‌ ಠಾಣೆಯಲ್ಲಿ ಕಳೆದ ಒಂದು ತಿಂಗಳಿಂದ ಪೊಲೀಸ್‌ ಇನ್ಸ್‌ಪೆಕ್ಟರ್‌ ಇಲ್ಲದೇ ಅನಾಥವಾಗಿದೆ ಎನ್ನುವುದನ್ನು ಕೇಳಿದರೆ ಬೆಂಗಳೂರು ನಿವಾಸಿಗಳಿಗೆ ಸೋಜಿಗವಾಗುತ್ತದೆ. ಇನ್ನು ನಗರದ ಕೇಂದ್ರ ಭಾಗದಲ್ಲಿರುವ ರಾಜಾಜಿನಗರ ಪೊಲೀಸ್‌ ಠಾಣೆಯಲ್ಲಿ ಹಲವು ಅಪರಾಧ ಪ್ರಕರಣಗಳು ನಡೆಯುತ್ತಿದ್ದರೂ ಅವುಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡಿ ವಿಲೇವಾರಿ ಮಾಡಲು ದಕ್ಷ ಅಧಿಕಾರಿಯೇ ಇಲ್ಲವೆಂದು ಹೇಳಲಾಗುತ್ತಿದೆ.

'ಕುಮಾರ್‌ಸೋಮಿ ಕರೆಂಟ್ ಕಳ್ಳ' ಪೋಸ್ಟರ್ ಅಂಟಿಸಿದವ ಸಿಕ್ಬಿಟ್ಟ: ಪೆನ್‌ಡ್ರೈವ್‌ನಲ್ಲಿ ಸಾಕ್ಷಿ ಕೊಟ್ಟ ಜೆಡಿಎಸ್ ಮುಖಂಡರು

ಇನ್ನು ಈ ಬಗ್ಗೆ ಶಾಸಕ ಎಸ್. ಸುರೇಶ್‌ ಕುಮಾರ್, ಈ ಬಗ್ಗೆ ಸರ್ಕಾರದ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು, ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಬಿ. ದಯಾನಂದ ಹಾಗೂ ಎಡಿಜಿಪಿ ಅವರ ಬಳಿ ರಾಜಾಜಿನಗರ ಪೊಲೀಸ್‌ ಠಾಣೆಗೆ ಒಬ್ಬ ದಕ್ಷ ಪೊಲೀಸ್‌ ಅಧಿಕಾರಿಯನ್ನು ನಿಯೋಜನೆ ಮಾಡುವಂತೆ ಮನವಿ ಸಲ್ಲಿಕೆ ಮಾಡಿದ್ದಾರೆ. ಈ ಬಗ್ಗೆ ಸ್ವತಃ ಪತ್ರವೊಂದನ್ನು ಸಿದ್ಧಪಡಿಸಿ ತಮ್ಮ ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಪೋಸ್ಟ್‌ ಮಾಡಿಕೊಂಡಿದ್ದಾರೆ.

ಶಾಸಕರ ಪತ್ರದಲ್ಲೇನಿದೆ? 
ಬೆಂಗಳೂರಿನ ರಾಜಾಜಿನಗರ ಪೊಲೀಸ್ ಠಾಣೆ ಕಳೆದ ಸುಮಾರು ಒಂದು ತಿಂಗಳಿನಿಂದ ಪೊಲೀಸ್ ಇನ್ಸ್‌ಪೆಕ್ಟರ್ ಇಲ್ಲದೆ ಒಂದು ರೀತಿ ಅನಾಥವಾಗಿದೆ. ದಿನಾಂಕ: 20.09.2023 ರಂದು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳು ಈ ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿದ್ದರು. ಅಂದಿನಿಂದ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಕಾಣೆಯಾಗಿದ್ದರು. ಅವರು ನಿರೀಕ್ಷಣಾ ಜಾಮೀನು ಪಡೆಯಲು ಪ್ರಯತ್ನಿಸಿದ ವಿದ್ಯಮಾನವೂ ನಡೆಯಿತು.

PSI Recruitment 2023: ಡಿ.23ಕ್ಕೆ ಪಿಎಸ್‌ಐ ಮರುಪರೀಕ್ಷೆ ನಡೆಸಲು ಕೆಇಎ ಆದೇಶ: ಬೆಂಗಳೂರಲ್ಲಿ ಮಾತ್ರ ಅವಕಾಶ

ನಂತರ ದಿನಾಂಕ: 02.11.2023 ರಂದು ಆ ಪೊಲೀಸ್ ಇನ್ಸ್‌ಪೆಕ್ಟರ್ ಅನ್ನು ಅಮಾನತ್ತು ಮಾಡಲಾಯಿತು. ನಾನು ಈ ಕುರಿತು ಗೃಹ ಸಚಿವರ ಬಳಿ, ನಗರದ ಪೊಲೀಸ್ ಆಯುಕ್ತರ ಬಳಿ ಹಾಗೂ ಎಡಿಜಿಪಿ (ಆಡಳಿತ) ರವರ ಬಳಿ ಈ ಠಾಣೆಗೆ ಓರ್ವ ಸೂಕ್ತ, ದಕ್ಷ ಅಧಿಕಾರಿಯನ್ನು ನೇಮಿಸಲು ಮನವಿ ಮಾಡಿದ್ದೇನೆ. ರಾಜ್ಯದ ರಾಜಧಾನಿಯ ಒಂದು ಪ್ರಮುಖ ಪೊಲೀಸ್ ಠಾಣೆ ಅನಾಥ ಸ್ಥಿತಿಯಲ್ಲಿ ಬಳಲುವುದು ಆರೋಗ್ಯಕರವಲ್ಲ. ಈ ಕೂಡಲೇ, ಈ ಠಾಣೆಗೆ ಓರ್ವ ದಕ್ಷ ಅಧಿಕಾರಿಯನ್ನು ನಿಯುಕ್ತಿಗೊಳಿಸಬೇಕೆಂದು ಆಗ್ರಹಿಸುತ್ತಿದ್ದೇನೆ ಎಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.

click me!