
ಬೆಂಗಳೂರು: ಬೆಂಗಳೂರು ಉಪನಗರ ರೈಲು ಕಾರ್ಯಾಚರಣೆಗೆ ಅನುಕೂಲವಾಗುವತೆ ಸೋಲದೇವನಹಳ್ಳಿಯಲ್ಲಿ ರೈಲು ನಿರ್ವಹಣಾ ಘಟಕ ನಿರ್ಮಿಸಲು ಬೆಂಗಳೂರು ಸಂಯೋಜಿತ ರೈಲು ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆ (ಬಿ-ರೈಡ್) ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಿದೆ. ಬೆಂಗಳೂರು ಉಪನಗರ ರೈಲು ಯೋಜನೆಗಾಗಿ 153 ಬೋಗಿಗಳ ಪೂರೈಕೆಗೆ ಚೆನ್ನೈ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಗೆ ಈಗಾಗಲೇ ಕಾರ್ಯಾದೇಶ ನೀಡಲಾಗಿದೆ. ಅದರ ಜತೆಗೆ ಆ ರೈಲುಗಳ ನಿರ್ವಹಣೆ ಮತ್ತು ಕಾರ್ಯಾಚರಣೆಗಾಗಿ ಸೋಲದೇವನಹಳ್ಳಿಯಲ್ಲಿ ನಿರ್ವಹಣಾ ಘಟಕ ಸ್ಥಾಪಿಸಲು ಉದ್ದೇಶಿಸಲಾಗಿದೆ.
ಚಿಕ್ಕಬಾಣಾವರ ಉಪನಗರ ರೈಲು ನಿಲ್ದಾಣದ ಸಮೀಪ ಈ ಘಟಕ ನಿರ್ಮಾಣವಾಗಲಿದ್ದು ಉಪನಗರ ರೈಲು ಯೋಜನೆಯ ಕಾರಿಡಾರ್ 2 ಮತ್ತು 4ರ ರೈಲುಗಳ ನಿರ್ವಹಣೆ ಮಾಡಲಾಗುತ್ತದೆ. ಒಟ್ಟಾರೆ 26 ಎಕರೆ ಭೂಮಿಯಲ್ಲಿ 200 ಕೋಟಿ ರು. ವೆಚ್ಚದಲ್ಲಿ ನೂತನ ನಿರ್ವಹಣಾ ಘಟಕ ಸ್ಥಾಪಿಸಲು ಉದ್ದೇಶಿಸಲಾಗಿದೆ.
ಈ ಕುರಿತಂತೆ ಮಾಹಿತಿ ನೀಡಿರುವ ಬಿ-ರೈಡ್ ವ್ಯವಸ್ಥಾಪಕ ನಿರ್ದೇಶಕ ಲಕ್ಷಣ್ ಸಿಂಗ್, ಸೋಲದೇವನಹಳ್ಳಿಯಲ್ಲಿ ರೈಲು ನಿರ್ವಹಣಾ ಘಟಕವು ಉಪನಗರ ರೈಲು ಯೋಜನೆಗೆ ಹೃದಯವಿದ್ದಂತೆ. ಇತ್ತೀಚೆಗಷ್ಟೇ ಯೋಜನೆಗಾಗಿ 153 ಅತ್ಯಾಧುನಿಕ ಬೋಗಿಗಳ ಪೂರೈಕೆಗೆ ಕಾರ್ಯಾದೇಶ ನೀಡಲಾಗಿದೆ. ಅದರ ಜತೆಗೆ ಇದೀಗ ವಿಶ್ವದರ್ಜೆ ಕಾರ್ಯಾಗಾರ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.
ನೂತನ ಘಟಕದಲ್ಲಿ ಸ್ಟೇಬ್ಲಿಂಗ್ ಲೈನ್, ವರ್ಕ್‌ಶಾಲ್ ಲೈನ್, ಇನ್ಸ್‌ಪೆಕ್ಷನ್ ಬೇ, ಸಂಪೂರ್ಣ ಸ್ವಯಂಚಾಲಿತ ಕೋಚ್ ವಾಷಿಂಗ್ ಪ್ಲ್ಯಾಂಟ್ ಇರಲಿವೆ. ಅದರೊಂದಿಗೆ ಪರಿಸರ ಕಾಳಜಿಯೊಂದಿಗೆ ಸೌರ ವಿದ್ಯುತ್ ಉತ್ಪಾದನಾ ಘಟಕ, ಮಳೆನೀರು ಕೊಯ್ಲು ವ್ಯವಸ್ಥೆಯನ್ನೂ ಅಳವಡಿಸಲಾಗುವುದು. ಜರ್ಮನಿಯ ಕೆಎಫ್‌ಡಬ್ಲ್ಯು ಡೆವಲಪ್‌ಮೆಂಟ್ ಬ್ಯಾಂಕ್‌ನ ಆರ್ಥಿಕ ನೆರವಿನೊಂದಿಗೆ ಅತ್ಯಾಧುನಿಕ ಘಟಕ ಸ್ಥಾಪಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.