ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ವೇಳೆ ಕೋಲಾರ ಜಿಲ್ಲೆ ಕುರುಬರ ಸಂಘದ ಅಧ್ಯಕ್ಷ ರವಿಚಂದ್ರನ್ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ಬೆಂಗಳೂರು (ಆ.19): ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಮಾತನಾಡುತ್ತಾ ರಾಜ್ಯಪಾಲರ ವಿರುದ್ಧ ವಾಗ್ದಾಳಿ ಮಾಡುತ್ತಿದ್ದ ಕೋಲಾರ ಜಿಲ್ಲೆ ಕುರುಬರ ಸಂಘದ ಅಧ್ಯಕ್ಷ ರವಿಚಂದ್ರನ್ ಕುಸಿದುಬಿದ್ದು, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿಯೇ ಸಾವನ್ನಪ್ಪಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಪ್ರಾಸಿಕ್ಯೂಷನ್ ನೋಟೀಸ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲೆಯ ಕುರುಬರ ಸಂಘದ ಅಧ್ಯಕ್ಷರಾಗಿರುವ ರವಿಚಂದ್ರನ್ ಅವರು ಕೆಲ ಕಾಂಗ್ರೆಸ್ ನಾಯಕರ ನೇತೃತ್ವದಲ್ಲಿ ಬೆಂಗಳೂರಿನ ಕಬ್ಬನ್ ಪಾರ್ಕ್ ಅವರಣದಲ್ಲಿರುವ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ಕುರಿತು ಮಾತನಾಡುತ್ತಿದ್ದರು. ಆದರೆ, ರಾಜ್ಯಪಾಲರ ವಿರುದ್ಧ ಮಾತನಾಡುತ್ತಲೇ ಒಮ್ಮೆ ಶಾಕ್ ಹೊಡೆದವರಂತೆ ಮೈ ನಡುಗಿಸಿದ್ದಾರೆ. ಇದಾದ ಮರುಕ್ಷಣವೇ ಚೇರಿನ ಮೇಲಿಂದ ಕುಸಿದು ಬಿದ್ದಿದ್ದಾರೆ. ಇನ್ನು ಅವರನ್ನು ಹತ್ತಿರ ಪೊರ್ಟೀಸ್ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲಿಯೇ ರವಿಚಂದ್ರನ್ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಮಾಧ್ಯಮಗಳ ಮುಂದೆ ಲೈವ್‌ನಲ್ಲೇ ಹೃದಯಾಘಾತ: ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಲೈವ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದಾರೆ. ಆಗ ಎಲ್ಲ ಕ್ಯಾಮೆರಾಗಳ ಮುಂದೆ ಮೈಕ್ ಹಿಡಿದು ಮಾತನಾಡುತ್ತಿರುವಾಗ ಒಮ್ಮೆ ಹೃದಯಾಘಾತ ಆಗಿದ್ದು, ಶಾಕ್ ಹೊಡೆದವರಂತೆ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಅವರಿಗೆ ಸಾವರಿಸಿಕೊಳ್ಳಲೂ ಸಾಧ್ಯವಾಗಿಲ್ಲ. ಕೈಯಲ್ಲಿದ್ದ ಮೈಕ್ ಅನ್ನು ಬಿಗಿಯಾಗಿ ಹಿಡಿದುಕೊಳ್ಳುತ್ತಲೇ ಬೇರೆ ಯಾವುದೇ ಸಪೋರ್ಟ್ ಅನ್ನೂ ಹಿಡಿದುಕೊಳ್ಳಲಾಗದೇ ತಾವು ಕುಳಿತ ಮುಂಭಾಗಕ್ಕೆ ಕುಸಿದು ಬಿದ್ದಿದ್ದಾರೆ. ಇನ್ನು ಅಲ್ಲಿದ್ದವರು ಕೂಡಲೇ ಕನ್ನಿಂಗ್ ಹ್ಯಾಮ್ ರಸ್ತೆಯ ಪೊರ್ಟೀಸ್ ಆಸ್ಪತ್ರೆಗೆ ವಾಹನದಲ್ಲಿ ಕರೆದೊಯ್ಯಲು ಮುಂದಾಗಿದ್ದಾರೆ. ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯದಲ್ಲಿ ಕುರುಬರ ಸಂಘದ ಅಧ್ಯಕ್ಷ ರವಿಚಂದ್ರನ್ ಅವರು ಪ್ರಾಣ ಬಿಟ್ಟಿದ್ದಾರೆ.
ಮಡಿಕೇರಿ ವ್ಯಾಪಾರಿ ಕುಳಿತಲ್ಲೇ ಪ್ರಾಣಬಿಟ್ಟ; ಒಂದು ಕ್ಷಣದಲ್ಲಿ ಜೀವ ಹೊತ್ತೊಯ್ದ ಜವರಾಯ
ಕೋಲಾರದ ಚಿಂತಾಮಣಿ ಮೂಲದ ಸಿ.ಕೆ ರವಿಚಂದ್ರನ್ ಅವರು ಮಾಜಿ ಮುಖ್ಯಮಂತ್ರಿ ದಿವಂಗತ ಬಂಗಾರಪ್ಪ ಜೊತೆ ಓಡನಾಟ ಹೊಂದಿದ್ದರು. ಜೊತೆಗೆ, ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಸಹ ಓಡಾನಾಟ ಇತ್ತು. ಇತ್ತಿಚ್ಚಿಗೆಷ್ಟೆ ಕಾಂಗ್ರೆಸ್ ಸೇರಿಕೊಂಡಿದ್ದ ರವಿಚಂದ್ರನ್, ಪ್ರಚಾರ ಸಮಿತಿ ಸದಸ್ಯರಾಗಿದ್ದರು. ಬೆಂಗಳೂರು ನಗರದ ಆರ್.ಆರ್. ನಗರದ ಚನ್ನಸಂದ್ರದಲ್ಲಿ ವಾಸವಾಗಿದ್ದರು. ಅಮ್ಮ ಕಾನ್ವೆಂಟ್ ಎಂಬ ಸ್ಕೂಲ್ ನಡೆಸುತ್ತಿದ್ದರು. ರಾಜ್ಯಪಾಲರು ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಕೊಟ್ಟ ಹಿನ್ನಲೆಯಲ್ಲಿ ಇಂದು ಕುರುಬ ಸಂಘದಿಂದ ಸುದ್ದಿಗೋಷ್ಠಿ ಕರೆದಿದ್ದು, ಮಾತನಾಡುವಾಗಲೇ ಕುಸಿದುಬಿದ್ದು ದುರ್ಘಟನೆ ಸಂಭವಿಸಿದೆ.