ಬೆಂಗಳೂರು : ಮನೆ ನಿರ್ಮಿಸುವವರೇ ಎಚ್ಚರ!

By Kannadaprabha News  |  First Published Jan 18, 2020, 8:46 AM IST

ಬೆಂಗಳೂರಿನಲ್ಲಿ ಮನೆ ನಿರ್ಮಾಣ ಮಾಡುವವರು ಒಮ್ಮೆ ಗಮನಿಸಿ, ನೀವು ಈ ಬಗ್ಗೆ  ಗಮನಹರಿಸಲೇಬೇಕು. ಇಲ್ಲವಾದಲ್ಲಿ ಭಾರೀ ಪ್ರಮಾಣದಲ್ಲಿ ದಂಡ ತೆರಬೇಕಾಗುತ್ತದೆ. 


ಬೆಂಗಳೂರು [ಜ.18]:  ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಸಲ್ಲಿಸಿದ ನೀಲನಕ್ಷೆಯಂತೆ ಕಟ್ಟಡ ನಿರ್ಮಿಸದ ಮಾಲೀಕರಿಗೆ ಇನ್ಮುಂದೆ ಎರಡು ಪಟ್ಟು ತೆರಿಗೆ ವಿಧಿಸಲಾಗುವುದು.

ನಕ್ಷೆ ಮಂಜೂರಾತಿ ನಿಮಯವನ್ನು ಉಲ್ಲಂಘಿಸುವ ಕಟ್ಟಡ ಮಾಲೀಕರಿಗೆ ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳು ದುಪ್ಪಟ್ಟು ತೆರಿಗೆ ವಿಧಿಸುವ ನಿಯಮವು ಬಿಬಿಎಂಪಿಗೂ ಅನ್ವಯವಾಗಲಿದೆ.

Latest Videos

undefined

ಬಿಬಿಎಂಪಿ ವ್ಯಾಪ್ತಿಯ ಕಟ್ಟಡಗಳು ನೀಲನಕ್ಷೆಯಂತೆ ನಿರ್ಮಿಸದಿರುವ ಕಟ್ಟಡಗಳಿಗೆ ದುಪ್ಪಟ್ಟು ತೆರಿಗೆ ವಿಧಿಸಲು ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಕರ್ನಾಟಕ ಮುನ್ಸಿಪಾಲ್‌ ಕಾರ್ಪೋರೇಷನ್‌ ಕಾಯ್ದೆಗೆ ತಿದ್ದುಪಡಿ ತಂದಿದ್ದು, ನಕ್ಷೆ ಮಂಜೂರಾತಿ ನಿಯಮ ಉಲ್ಲಂಘನೆ ಮಾಡುವವರಿಗೆ ಎರಡು ಪಟ್ಟು ತೆರಿಗೆ ವಿಧಿಸಲು ಶುಕ್ರವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಿದ್ದ ಬಿಬಿಎಂಪಿ:

ಪಾಲಿಕೆ ವ್ಯಾಪ್ತಿಯಲ್ಲಿನ ಬಹುತೇಕ ಕಟ್ಟಡ ಮಾಲೀಕರು ನಕ್ಷೆ ಮಂಜೂರಾತಿ ನಿಯಮಗಳನ್ನು ಉಲ್ಲಂಘಿಸುತ್ತಿರುವುದು ಸಾಮಾನ್ಯ ವಿಚಾರವಾಗಿದೆ. ಇದನ್ನು ಮನಗಂಡ ಬಿಬಿಎಂಪಿಯು ನಿಯಮ ಉಲ್ಲಂಘಿಸಿ ಕಟ್ಟಡಗಳ ನಿರ್ಮಾಣ ಮಾಡುವವರಿಗೆ ಎರಡು ಪಟ್ಟು ತೆರಿಗೆಯನ್ನು ದಂಡದ ರೂಪದಲ್ಲಿ ವಿಧಿಸಲು ಕಾಯ್ದೆಗೆ ತಿದ್ದುಪಡಿ ತರುವಂತೆ ಕೋರಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅಕ್ರಮ-ಸಕ್ರಮದಲ್ಲಿ ದಂಡ ಪಾವತಿಸಿ ನಿಯಮ ಮೀರಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಬಹುದು. ಆದರೆ, ನಕ್ಷೆ ಉಲ್ಲಂಘನೆಯನ್ನು ಸರಿಪಡಿಸಿಕೊಳ್ಳಲು ಅಕ್ರಮ-ಸಕ್ರಮದಲ್ಲಿ ಅವಕಾಶ ಇಲ್ಲ. ಹೀಗಾಗಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ.

ಭಾರತ-ಆಸ್ಪ್ರೇಲಿಯಾ ಏಕದಿನ ಪಂದ್ಯಕ್ಕೆ ಹೆಚ್ಚು ಬಸ್‌ ಸೇವೆ...

ತಮ್ಮ ಕಟ್ಟಡ ಹೀಗಿರಲಿದೆ ಎಂದು ಬಿಬಿಎಂಪಿಗೆ ನೀಲಿ ನಕ್ಷೆ ತೋರಿಸಿ ಮನಬಂದಂತೆ ನಿರ್ಮಿಸಲು ಹೊಸ ಕಾಯ್ದೆಯಿಂದ ಪಾಠ ಕಲಿಸಬಹುದಾಗಿದೆ. ಅಲ್ಲದೇ, ಮನಸೋ ಇಚ್ಛೆ ಮಹಡಿಗಳನ್ನು ಹೆಚ್ಚಿಸಲು ನಿಯಂತ್ರಣ ಮಾಡಬಹುದಾಗಿದೆ. ಮುಂದಿನ ದಿನದಲ್ಲಾದರೂ ನಿಯಮ ಉಲ್ಲಂಘನೆ ಮಾಡಿ ಕಟ್ಟಡ ನಿರ್ಮಿಸುವುದಕ್ಕೆ ಕಡಿವಾಣ ಬೀಳಲಿದೆ ಎಂಬ ಆಶಾಭಾವನೆ ಇದ್ದು, ಎಷ್ಟರ ಮಟ್ಟಿಗೆ ಜಾರಿಯಾಗಲಿದೆ ಎಂಬುದನ್ನು ಕಾದು ನೋಡಬೇಕು.

ಅಕ್ರಮ-ಸಕ್ರಮಕ್ಕೆ ಸಂಬಂಧವಿಲ್ಲ

ಸಂಪುಟ ಸಭೆ ಬಳಿಕ ಈ ವಿಷಯ ತಿಳಿಸಿದ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಅಕ್ರಮ-ಸಕ್ರಮಕ್ಕೂ ಇದು ಸಂಬಂಧ ಇಲ್ಲ. ಕಟ್ಟಡ ನಿರ್ಮಾಣ ಮಾಡಲು ಒಂದು ನೀಲನಕ್ಷೆ ನೀಡಿ ಬಿಬಿಎಂಪಿಯಿಂದ ಅನುಮತಿ ಪಡೆದ ಬಳಿಕ ಮಾಲೀಕರು ಮನಬಂದಂತೆ ನಿರ್ಮಿಸುತ್ತಿದ್ದರು. ಇದಕ್ಕೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗಿದೆ. ನಕ್ಷೆ ಮಂಜೂರಾತಿ ನಿಯಮವನ್ನು ಉಲ್ಲಂಘಿಸಿದರೆ ಎರಡು ಪಟ್ಟು ತೆರಿಗೆ ಪಾವತಿಸಬೇಕು. ನಿರ್ಮಿಸಿರುವ ಕಟ್ಟಡವನ್ನು ತೆರವುಗೊಳಿಸುವವರೆಗೆ ದುಪಟ್ಟು ತೆರಿಗೆ ಪಾವತಿಸಬೇಕು ಎಂದು ಹೇಳಿದರು.

ಚಿತ್ರಗಳು: ಈ ಬಾರಿಯ ಲಾಲ್ ಬಾಗ್‌ ಪುಷ್ಪ ಪ್ರದರ್ಶನದಲ್ಲಿ ಎದ್ದು ನಿಂತ ವಿವೇಕಾನಂದ..

ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳಿಗೆ ಈ ನಿಯಮ ಅನ್ವಯವಾಗುತ್ತಿತ್ತು. ಆದರೆ, ಬಿಬಿಎಂಪಿಗೆ ಮಾತ್ರ ಅನ್ವಯವಾಗುತ್ತಿರಲಿಲ್ಲ. ಹೀಗಾಗಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಇದರಿಂದ ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳಿಗೆ ಒಂದೇ ನಿಯಮ ಜಾರಿ ಮಾಡಿದಂತಾಗಿದೆ. ಇದರಿಂದ ಮನಬಂದಂತೆ ಮಹಡಿಗಳನ್ನು ನಿರ್ಮಿಸುವುದಕ್ಕೆ ನಿರ್ಬಂಧ ಹೇರಿದಂತಾಗಿದೆ ಎಂದರು.

click me!