ಬೆಂಗಳೂರಲ್ಲಿ ಮೊಳಗಿದ ಘಂಟಾನಾದ, ಚಪ್ಪಾಳೆ: BSY, ದೇವೇಗೌಡರಿಂದ ಅಭಿನಂದನೆ

By Kannadaprabha NewsFirst Published Mar 23, 2020, 10:13 AM IST
Highlights

ಸಿಎಂ ಬಿಎಸ್‌ವೈ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಸಚಿವರು, ಅಧಿಕಾರಿಗಳು, ಕಲಾವಿದರಿಂದ ಕರತಾಡನ| ಸಂಜೆ 5ಕ್ಕೆ ಹೊರಬಂದ ಗಣ್ಯರು, ಜನರಿಂದ 5 ನಿಮಿಷ ಜಾಗಟೆ, ಗಂಟೆ, ಚಪ್ಪಾಳೆ| ಭಾರತಾಂಭೆಗೆ ಜಯ ಘೋಷಣೆ|

ಬೆಂಗಳೂರು[ಮಾ.23]: ಕೊರೋನಾ ವೈರಸ್‌ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿ, ಸಾರಿಗೆ, ಪೌರ ಕಾರ್ಮಿಕರು, ಸೈನಿಕರು, ಪೊಲೀಸರು ಹಾಗೂ ಮಾಧ್ಯಮ ಸಿಬ್ಬಂದಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಸೇರಿದಂತೆ ಸಚಿವರು, ಶಾಸಕರು, ಹಿರಿಯ ಅಧಿಕಾರಿಗಳು, ಕಲಾವಿದರು, ಉದ್ಯಮಿಗಳು, ಸಮಾಜದ ವಿವಿಧ ವಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗಣ್ಯರು, ಸಾರ್ವಜನಿಕರು, ಮಹಿಳೆಯರು ಮಕ್ಕಳು ನಗರದಲ್ಲಿ ಏಕ ಕಾಲದಲ್ಲಿ ಕರತಾಡನದ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

ಸಂಜೆ ಐದು ಗಂಟೆಯಾಗುತ್ತಿದ್ದಂತೆ ಬೆಳಗ್ಗೆಯಿಂದ ಮನೆಯಲ್ಲಿದ್ದ ಜನರು ಹೊರಗಡೆ ಬಂದು ಏಕಕಾಲಕ್ಕೆ ಐದು ನಿಮಿಷಗಳ ಕಾಲ ನಡೆಸಿದ ಜಾಗಟೆ, ಘಂಟನಾದ, ಡೋಲು, ಚಪ್ಪಾಳೆ ಸದ್ದು ನಗರದ ಎಲ್ಲೆಡೆ ಮೊಳಗಿತು. ಅನೇಕರು ಭಾರತ್‌ ಮಾತಾಕಿ ಜೈ, ವಂದೇ ಮಾತರಂ ಘೋಷಣೆ ಕೂಗಿದರು.

ಕೊರೋನಾ ಭೀತಿ: ಕಳೆದ ಎರಡು ದಿನದಲ್ಲಿ ವಿದೇಶದಿಂದ ಬೆಂಗಳೂರಿಗೆ 1406 ಮಂದಿ

ಪ್ರಧಾನಿ ನರೇಂದ್ರ ಮೋದಿ ನೀಡಿದ ಕರೆ ಮೇರೆಗೆ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ. ಸಿ.ಎನ್‌.ಅಶ್ವತ್ಥನಾರಾಯಣ, ಸಚಿವರಾದ ಬಸವರಾಜ ಬೊಮ್ಮಾಯಿ, ಸುರೇಶ್‌ಕುಮಾರ್‌, ಆರ್‌.ಅಶೋಕ್‌, ಶ್ರೀರಾಮುಲು, ಡಾ. ಸುಧಾಕರ್‌ ತಮ್ಮ ಕುಟುಂಬದ ಜತೆಯಾಗಿ ಚಪ್ಪಾಳೆ ತಟ್ಟುವ ಮೂಲಕ ಸೇವಾ ಕ್ಷೇತ್ರಗಳಿಗೆ ಧನ್ಯವಾದ ಸಮರ್ಪಿಸಿದ್ದಾರೆ. 

ಬಿಬಿಎಂಪಿ ಮೇಯರ್‌ ಗೌತಮ್‌ಕುಮಾರ್‌ ಜೈನ್‌, ಪಾಲಿಕೆ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ಚಪ್ಪಾಳೆ ಮೂಲಕ ಕೃತಜ್ಞತೆ ಸಲ್ಲಿಸಿದರು. ಬೆಳಗ್ಗೆಯಿಂದ ತಮ್ಮ ಮನೆಗಳಲ್ಲಿಯೇ ಇದ್ದ ನಗರದ ಜನತೆ ಸಂಜೆ ಐದು ಗಂಟೆಗೆ ಮನೆ ಬಾಗಿಲುಗಳು, ಕಿಟಕಿ, ಬಾಲ್ಕನಿ, ಮನೆಗಳ ಟೆರಸ್‌ ಹಾಗೂ ಬೀದಿಗಳಲ್ಲಿ ಐದರಿಂದ ಹತ್ತು ನಿಮಿಷಗಳ ತಮ್ಮ ಕೃತಜ್ಞತಾ ಚಪ್ಪಾಳೆ ತಟ್ಟಿದ್ದಾರೆ.

ಮೊಳಗಿದ ಶಂಖನಾದ:

ಪ್ರಧಾನಿ ಮೋದಿ ಚಪ್ಪಾಳೆ ತಟ್ಟುವ ಮೂಲಕ ಗೌರವಿಸುವಂತೆ ಕರೆ ನೀಡಿದ್ದರು. ಆದರೆ, ನಗರದ ಜನತೆ ಒಂದು ಹೆಜ್ಜೆ ಮುಂದೆ ಹೋಗಿ ಶಂಖ, ಜಾಗಟೆ ಹಾಗೂ ಡೋಲು ಬಡಿದು ಹಬ್ಬದ ರೀತಿಯಲ್ಲಿ ಸಂಭ್ರಮಿಸಿದರು. ಯಶವಂತಪುರ, ಮಲ್ಲೇಶ್ವರಂ, ಶೇಷಾದ್ರಿಪುರ, ಹನುಮಂತನಗರ, ಬನಶಂಕರಿ, ಬಸವೇಶ್ವರ ನಗರ ಸೇರಿದಂತೆ ನಗರದ ಹತ್ತಾರು ಕಡೆ ಶಂಖನಾದ ಮೊಳಗಿಸಿದರು.

ಸಿಎಂ ನಿವಾಸದಲ್ಲಿ ಚಪ್ಪಾಳೆ

ಡಾಲರ್ಸ್‌ ಕಾಲೋನಿ ನಿವಾಸದಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಕುಟುಂಬ ಸಮೇತ ಚಪ್ಪಾಳೆ ತಟ್ಟುವ ಮೂಲಕ ಅಭಿನಂದನೆ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ಕೋವಿಡ್‌-19 ವಿರುದ್ಧ ಹೋರಾಡಲು ತಮ್ಮ ಜೀವ ಪಣಕ್ಕಿಟ್ಟು ಮಾಡುತ್ತಿರುವ ಎಲ್ಲಾ ವೈದ್ಯರು, ಪೊಲೀಸರು, ಸಾರಿಗೆ ಸಿಬ್ಬಂದಿ, ಮಾಧ್ಯಮ ಸೇರಿದಂತೆ ಪ್ರತಿಯೊಬ್ಬರಿಗೂ ಧನ್ಯವಾದ ಸಲ್ಲಿಸಿದರು. ಪ್ರಧಾನಿ ಅವರ ಕರೆಗೆ ಇಡೀ ದೇಶವೇ ಈ ರೀತಿಯಲ್ಲಿ ಸ್ಪಂದಿಸಿರುವ ಮತ್ತೊಂದು ಉದಾಹರಣೆ ಇಲ್ಲ. ಹೀಗಾಗಿ, ಅಭೂತಪೂರ್ವವಾಗಿ ಸ್ಪಂದಿಸಿರುವ ನಾಗರಿಕರಿಗೂ ಅಭಿನಂದಿಸಿದರು.

ಜಾಗಟೆ ಬಡಿದು 'ಕೊರೋನಾ ಯೋಧ'ರ ಗೌರವಿಸಿದ ಪಿಎಂ ಮೋದಿ ತಾಯಿ!

ಇದೇ ರೀತಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ಪದ್ಮನಾಭನಗರದ ನಿವಾಸದಲ್ಲಿ ಬಾಲ್ಕನಿಯಲ್ಲಿ ನಿಂತು ಚಪ್ಪಾಳೆ ತಟ್ಟುವ ಮೂಲಕ ಪ್ರಧಾನಿ ಮೋದಿ ಕರೆಗೆ ಸ್ಪಂದಿಸಿದರು.

ಇಸ್ಕಾನ್‌ನಲ್ಲಿ ಘಂಟಾನಾದ:

ರಾಜಾಜಿನಗರದ ಇಸ್ಕಾನ್‌ ದೇವಾಲಯದಲ್ಲಿ ಘಂಟೆಯನ್ನು ಬಾರಿಸುವ ಮೂಲಕ ತಮ್ಮ ಗೌರವ ಸಲ್ಲಿಸಲಾಯಿತು. ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಸರ್ಕಾರ ನಿರ್ದೇಶಿಸಿರುವ ನಿಯಮವನ್ನು ತಪ್ಪದೇ ಪಾಲಿಸಿ. ದೇವಾಲಯದಲ್ಲಿಯೂ ಸ್ಯಾನಿಟೈಸರ್‌ ಬಳಸುವ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ ಎಂದು ಇಸ್ಕಾನ್‌ (ಬೆಂಗಳೂರು) ಅಧ್ಯಕ್ಷ ಮಧು ಪಂಡಿತ್‌ ದಾಸ್‌ ತಿಳಿಸಿದರು.

ಬಿಜೆಪಿ ಕಚೇರಿ

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಾರ್ಯಾಲಯದ ಮುಂಭಾಗ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಎನ್‌. ರವಿಕುಮಾರ್‌, ಅರುಣ್‌ಕುಮಾರ್‌, ಮಾಧ್ಯಮ ಸಂಚಾಲಕ ಆನಂದ್‌ ಹಾಗೂ ಕಾರ್ಯಕರ್ತರು ಚಪ್ಪಾಳೆ ಮತ್ತು ಜಾಗಟೆಗಳ ಮೂಲಕ ಅಭಿನಂದನೆ ಸಲ್ಲಿಸಿದರು.

ಮೇಯರ್‌ ಗೌತಮ್‌ ಕುಮಾರ್‌ ಜೋಗುಪಾಳ್ಯ ನಿವಾಸದಲ್ಲಿ ಹಾಗೂ ಗೋವಿಂದರಾಜನಗರ ವಾರ್ಡ್‌ ಬಿಬಿಎಂಪಿ ಸದಸ್ಯ ಕೆ. ಉಮೇಶ್‌ ಶೆಟ್ಟಿಅವರು ಕುಟುಂಬದ ಸದಸ್ಯರು ಹಾಗೂ ಕಾರ್ಯಕರ್ತರ ಜತೆ ಜಾಗಟೆ, ಗಂಟೆ ಮತ್ತು ಚಪ್ಪಾಳೆ ಬಾರಿಸಿ ಆರೋಗ್ಯ ಸೈನಿಕರಿಗೆ ಕೃತಜ್ಞತಾ ಚಪ್ಪಾಳೆ ತಟ್ಟಿದರು.

ಸಿನಿರಂಗದಿಂದಲೂ ಸಾಥ್‌:

ಅದೇ ರೀತಿ ಕನ್ನಡ ಚಿತ್ರರಂಗದ ನಾಯಕ ನಟ, ನಟಿಯರು, ಕಲಾವಿದರು ತಮ್ಮ ಮನೆಗಳಲ್ಲಿಯೇ ಚಪ್ಪಾಳೆ ತಟ್ಟಿಇಡೀ ಸ್ಯಾಂಡಲ್‌ವುಡ್‌ ಸಾಥ್‌ ನೀಡಿದೆ. ನಟರಾದ ಶಿವರಾಜ್‌ಕುಮಾರ್‌, ರಮೇಶ್‌ ಅರವಿಂದ್‌, ಅರ್ಜನ್‌ ಸರ್ಜಾ, ವಿನೋದ್‌ ರಾಜ್‌, ಜಗ್ಗೇಶ್‌, ಸಂಚಾರಿ ವಿಜಯ್‌, ವಸಿಷ್ಠ ಸಿಂಹ, ಪ್ರಥಮ್‌, ಭುವನ್‌ ಪೊನ್ನಣ್ಣ, ಲೀಲಾವತಿ, ತಾರಾ ಅನುರಾಧಾ, ರಾಗಿಣಿ, ಮಾಳವಿಕಾ ಅವಿನಾಶ್‌, ಜೊತೆ ಜೊತೆಯಲಿ ಅನು, ಶ್ವೇತಾ ಶ್ರೀವಾತ್ಸವ್‌, ಗ್ರೀಷ್ಮಾ, ಪ್ರಿಯಾ ಹೆಗ್ಡೆ, ಅಕ್ಷತಾ ಶ್ರೀನಿವಾಸ್‌, ದೀಪಿಕಾ ದಾಸ್‌ ಸೇರಿದಂತೆ ಹತ್ತಾರು ಕಲಾವಿದರು ಬೆಂಬಲ ಸೂಚಿಸಿದರು.

ಐಟಿ ದಿಗ್ಗಜರ ಬೆಂಬಲ;

ಐಟಿ ದಿಗ್ಗಜರಾದ ಬಯೋಕಾನ್‌ ವ್ಯವಸ್ಥಾಪಕ ನಿರ್ದೇಶಕಿ ಕಿರಣ್‌ ಮಜುಂದಾರ್‌ ಶಾ ಅವರು ಗಂಟೆ ಬಾರಿಸುವ ಮೂಲಕ ಬೆಂಬಲ ಸೂಚಿಸಿದ್ದಾರೆ. ಅದೇ ರೀತಿಯಲ್ಲಿ ಐಟಿ ಬಿಟಿ ಉದ್ಯೋಗಿಗಳು ಹೆಚ್ಚು ನೆಲೆಸಿರುವ ಮಾರತ್ತಹಳ್ಳಿ, ಎಲೆಕ್ಟ್ರಾನಿಕ್‌ ಸಿಟಿ ಮುಂತಾದ ಕಡೆಗಳಲ್ಲಿರುವ ಅಪಾರ್ಟ್‌ಮೆಂಟ್‌ ನಿವಾಸಿಗಳು ಚಪ್ಪಾಳೆ, ಶಂಖನಾದ, ಹರ್ಷೋದ್ಘಾರ ಹಾಗೂ ರಾಷ್ಟ್ರಧ್ವಜ ಹಾರಾಡಿಸಿ ಸಂಭ್ರಮಿಸಿದರು.

ಪೊಲೀಸರಿಂದಲೂ ಸಾಥ್‌

ನಗರ ಪೊಲೀಸ್‌ ಆಯುಕ್ತ ಎಸ್‌. ಭಾಸ್ಕರರಾವ್‌ ನಗರ ಪೊಲೀಸ್‌ ಆಯುಕ್ತ ಕಚೇರಿ, ರಾಜ್ಯ ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗಳ ಇಲಾಖೆಯ ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ ಸುನೀಲ್‌ ಅಗರ್‌ವಾಲ್‌ ಅವರು ಸ್ವಾತಂತ್ರ್ಯ ಉದ್ಯಾನ ಎದುರಿನ ಅಗ್ನಿಶಾಮಕ ಠಾಣೆಯಲ್ಲಿ ಗಂಟೆ ಬಾರಿಸುವ ಮೂಲಕ ಧನ್ಯವಾದ ಸಲ್ಲಿಸಿದರು.

ಇಷ್ಟೇ ಅಲ್ಲದೆ ಶೇಷಾದ್ರಿಪುರದಲ್ಲಿ ಎಬಿವಿಪಿ ಸಂಘಟನೆ, ಮೆಜೆಸ್ಟಿಕ್‌ ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮಾನವ ಸರಪಳಿ ರಚಿಸಿ ಚಪ್ಪಾಳೆ ತಟ್ಟಿವೈದ್ಯರ ಸೇವೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. 

click me!