Bengaluru: ಡಿಸೆಂಬರ್‌ನಲ್ಲಿ ಬೊಮ್ಮಸಂದ್ರಕ್ಕೆ ನಮ್ಮ ಮೆಟ್ರೋ: ಶೇ.80ರಷ್ಟು ಟ್ರ್ಯಾಕ್‌ ಅಳವಡಿಕೆ ಪೂರ್ಣ

Published : May 24, 2023, 07:42 AM IST
Bengaluru: ಡಿಸೆಂಬರ್‌ನಲ್ಲಿ ಬೊಮ್ಮಸಂದ್ರಕ್ಕೆ ನಮ್ಮ ಮೆಟ್ರೋ: ಶೇ.80ರಷ್ಟು ಟ್ರ್ಯಾಕ್‌ ಅಳವಡಿಕೆ ಪೂರ್ಣ

ಸಾರಾಂಶ

ನಮ್ಮ ಮೆಟ್ರೋದ ‘ಆರ್‌.ವಿ.ರಸ್ತೆ- ಬೊಮ್ಮಸಂದ್ರ’ ಹಳದಿ ಮಾರ್ಗದ ಅಂತಿಮ ಹಂತದ ಕಾಮಗಾರಿ ನವೆಂಬರ್‌ಗೆ ಪೂರ್ಣಗೊಂಡು ಡಿಸೆಂಬರ್‌ನಲ್ಲಿ ಜನಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆಯಿದೆ. 

ಬೆಂಗಳೂರು (ಮೇ.24): ನಮ್ಮ ಮೆಟ್ರೋದ ‘ಆರ್‌.ವಿ.ರಸ್ತೆ- ಬೊಮ್ಮಸಂದ್ರ’ ಹಳದಿ ಮಾರ್ಗದ ಅಂತಿಮ ಹಂತದ ಕಾಮಗಾರಿ ನವೆಂಬರ್‌ಗೆ ಪೂರ್ಣಗೊಂಡು ಡಿಸೆಂಬರ್‌ನಲ್ಲಿ ಜನಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆಯಿದೆ. ಕೆ.ಆರ್‌.ಪುರ-ವೈಟ್‌ಫೀಲ್ಡ್‌ ಮಾರ್ಗದ ಬಳಿಕ ಮೆಟ್ರೋದ ಎರಡನೇ ಟೆಕ್‌ ಕಾರಿಡಾರ್‌ ಎಂದು ಹಳದಿ ಮಾರ್ಗವನ್ನು ಪರಿಗಣಿಸಲಾಗಿದೆ. ನಿರೀಕ್ಷೆಯಂತೆ ಕಾಮಗಾರಿ ಪೂರ್ಣಗೊಂಡರೆ ಏಳು ತಿಂಗಳಲ್ಲಿ ಈ ಮಾರ್ಗ ಬಳಕೆಗೆ ಸಿಗಲಿದ್ದು, ಐಟಿ-ಬಿಟಿ ಮಂದಿಗೆ ಹೆಚ್ಚಿನ ಅನುಕೂಲವಾಗಲಿದೆ.

2018ರಲ್ಲಿ ಎರಡನೇ ಹಂತದಲ್ಲಿ ಕೈಗೊಂಡಿರುವ ಈ ಮಾರ್ಗದ ಕಾಮಗಾರಿ ಮೂರು ಪ್ಯಾಕೇಜ್‌ನಲ್ಲಿ ನಡೆಯುತ್ತಿದ್ದು ಎಲ್ಲವೂ ಪೂರ್ಣಗೊಳ್ಳುವತ್ತ ಸಾಗಿದೆ. ಕೋವಿಡ್‌ ಕಾರಣದಿಂದ ವಿಳಂಬವಾಗಿದ್ದ ಕಾಮಗಾರಿ ಕಳೆದೊಂದು ವರ್ಷದಿಂದ ವೇಗ ಪಡೆದು ಅಂತಿಮ ಹಂತ ತಲುಪಿದೆ. ವಯಡಕ್ಟ್ ಅಳವಡಿಕೆ, ನಿಲ್ದಾಣಗಳ ಸಿವಿಲ್‌ ಕಾಮಗಾರಿ ಪೂರ್ಣಗೊಂಡಿದ್ದು, ಶೇ. 80ರಷ್ಟು ಟ್ರ್ಯಾಕ್‌ ಅಳವಡಿಕೆಯಾಗಿದೆ. ಸಿಗ್ನಲಿಂಗ್‌ ಕಾಮಗಾರಿ ಪ್ರಗತಿಯಲ್ಲಿದೆ.

ಅಂಡರ್‌ಪಾಸಲ್ಲಿ ನೀರು ತುಂಬಿದರೆ ಮೊಳಗಲಿದೆ ಸೈರನ್‌: ಬಿಬಿಎಂಪಿ ಚಿಂತನೆ

ಶೇ.99 ಕಾಮಗಾರಿ ಪೂರ್ಣ: 468 ಕೋಟಿ ವೆಚ್ಚದಲ್ಲಿ ನಡೆದಿರುವ ಬೊಮ್ಮಸಂದ್ರದಿಂದ ಬೆರಟೇನ ಅಗ್ರಹಾರ ತನಕದ ಮೊದಲ ಪ್ಯಾಕೇಜ್‌ನ ಸಿವಿಲ್‌ ಕಾಮಗಾರಿ ಶೇ. 99.77ರಷ್ಟು ಪೂರ್ಣಗೊಂಡಿದೆ. 492 ಕೋಟಿ ವೆಚ್ಚದ ಬೆರಟೇನ ಅಗ್ರಹಾರದಿಂದ ಬೊಮ್ಮನಹಳ್ಳಿ ತನಕದ ಎರಡನೇ ಪ್ಯಾಕೇಜ್‌ ಸಿವಿಲ್‌ ಕಾಮಗಾರಿ ಶೇ 99.31ರಷ್ಟು ಪೂರ್ಣಗೊಂಡಿದೆ. 797.29 ಕೋಟಿ ಮೊತ್ತದ ಬೊಮ್ಮನಹಳ್ಳಿಯಿಂದ ಆರ್‌.ವಿ.ರಸ್ತೆ ತನಕದ ಮೂರನೇ ಪ್ಯಾಕೇಜ್‌ ಕಾಮಗಾರಿ ಶೇ. 99.53ರಷ್ಟು ಮುಗಿದಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ಎಲೆಕ್ಟ್ರಾನಿಕ್‌ ಸಿಟಿ ಬಳಿಯ ನಿಲ್ದಾಣವನ್ನು ವಿಶೇಷ ವಿನ್ಯಾಸದಿಂದ ನಿರ್ಮಿಸಲಾಗಿದೆ. ಈ ನಿಲ್ದಾಣವನ್ನು ಇಸ್ಫೋಸಿಸ್‌ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡುತ್ತಿದ್ದು, ಐಟಿ ಕಂಪನಿಗಳ ಕಟ್ಟಡಗಳ ಹೋಲಿಕೆಯಿದೆ. ಟೆಕ್ಕಿಗಳನ್ನು ಆಕರ್ಷಿಸಲು ಈ ರೀತಿ ಕಟ್ಟಡ ನಿರ್ಮಿಸಲಾಗಿದೆ. ಈ ಮಾರ್ಗದಲ್ಲಿ ಆರ್‌.ವಿ.ರಸ್ತೆ, ಬಿಟಿಎಂ ಬಡಾವಣೆ, ಸಿಲ್‌್ಕ ಬೋರ್ಡ್‌, ಎಚ್‌ಎಸ್‌ಆರ್‌ ಬಡಾವಣೆ, ಆಕ್ಸ್‌ಫರ್ಡ್‌ ಕಾಲೇಜು, ಮುನೇಶ್ವರ ನಗರ, ಚಿಕ್ಕಬೇಗೂರು, ಬಸಾಪುರ ರಸ್ತೆ, ಹೊಸ ರೋಡ್‌, ಎಲೆಕ್ಟ್ರಾನಿಕ್‌ ಸಿಟಿ-1, ಎಲೆಕ್ಟ್ರಾನಿಕ್‌ ಸಿಟಿ-2, ಹುಸ್ಕೂರು ರಸ್ತೆ, ಹೆಬ್ಬಗೋಡಿ, ಬೊಮ್ಮಸಂದ್ರ ನಿಲ್ದಾಣಗಳಿವೆ.

ಮಳೆ ಬಗ್ಗೆ ಮುನ್ನೆಚ್ಚರಿಕೆ ವಹಿಸಿ. ಇದು ಸೂಚನೆ ಅಲ್ಲ, ಎಚ್ಚರಿಕೆ: ಸಿದ್ದರಾಮಯ್ಯ

ಒಂದೇ ಹಂತದಲ್ಲಿ ಉದ್ಘಾಟನೆ, ಪರ್ವೇಜ್‌: ‘ಕನ್ನಡಪ್ರಭ’ ಜೊತೆ ಮಾತನಾಡಿದ ಬಿಎಂಆರ್‌ಸಿಎಲ್‌ ಎಂಡಿ ಅಂಜುಮ್‌ ಪರ್ವೇಜ್‌, ಹಳದಿ ಮಾರ್ಗವನ್ನು ಎರಡು ಹಂತಗಳಲ್ಲಿ ಮೆಟ್ರೋ ರೈಲು ಕಾರ್ಯಾಚರಣೆ ಆರಂಭಿಸಲು ನಿರ್ಧರಿಸಿತ್ತು. ಮೊದಲ ಹಂತದಲ್ಲಿ ಜೂನ್‌ ತಿಂಗಳಲ್ಲಿ ಬೊಮ್ಮಸಂದ್ರದಿಂದ ಸಿಲ್‌್ಕಬೋರ್ಡ್‌ ಹಾಗೂ 2ನೇ ಹಂತದಲ್ಲಿ ಡಿಸೆಂಬರ್‌ನಲ್ಲಿ ಸೆಂಟ್ರಲ್‌ ಸಿಲ್‌್ಕಬೋರ್ಡ್‌ನಿಂದ ಆರ್‌.ವಿ ರಸ್ತೆವರೆಗೆ ರೈಲುಗಳ ಸಂಚಾರಕ್ಕೆ ನಿರ್ಧರಿಸಲಾಗಿತ್ತು. ಆದರೆ, ಇದೀಗ ಒಂದೇ ಹಂತದಲ್ಲಿ ಪೂರ್ಣಗೊಳಿಸಲು ನಿರ್ಧರಿಸಿದ್ದೇವೆ. ಇದರಿಂದ ಹೆಚ್ಚಿನ ಪ್ರಯಾಣಿಕರನ್ನು ಏಕಕಾಲಕ್ಕೆ ಸೆಳೆಯಬಹುದು ಎಂದು ಹೇಳಿದರು.

PREV
Read more Articles on
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ