Miyawaki Forest in Bengaluru Metro: ಜಪಾನ್‌ ರೀತಿ ಕಾಡು ಸೃಷ್ಟಿಗೆ ನಮ್ಮ ಮೆಟ್ರೋ ಚಿಂತನೆ!

Published : Feb 21, 2022, 08:56 AM IST
Miyawaki Forest in Bengaluru Metro: ಜಪಾನ್‌ ರೀತಿ ಕಾಡು ಸೃಷ್ಟಿಗೆ ನಮ್ಮ ಮೆಟ್ರೋ ಚಿಂತನೆ!

ಸಾರಾಂಶ

*ಒಂದು ಮರ ಕಡಿದರೆ 10 ಸಸಿ ನೆಡಬೇಕೆಂಬ ನಿಯಮ ಹಿನ್ನೆಲೆ *ಸಸಿ ನೆಡುವ ಬದಲು ಅರಣ್ಯವನ್ನೇ ಬೆಳೆಸಲು ಚಿಂತನೆ *ಜಪಾನಿನ ಮಿಯಾವಾಕಿ ಮಾದರಿ: ತನ್ನದೇ ಕಡಿಮೆ ಜಾಗದಲ್ಲಿ ಹೆಚ್ಚು ಸಸಿ 

ಬೆಂಗಳೂರು (ಫೆ. 21): ನಮ್ಮ ಮೆಟ್ರೋ ನಿಗಮ ತನಗೆ ಸೇರಿದ ಕಡಿಮೆ ಜಾಗದಲ್ಲೇ ಜಪಾನಿನ ‘ಮಿಯವಾಕಿ’ ಮಾದರಿಯಲ್ಲಿ ದಟ್ಟಕಾಡು ಬೆಳೆಸುವ ಮೂಲಕ ನಗರವನ್ನು ಹಸಿರೀಕರಣ ಮಾಡುವ ನಿಟ್ಟಿನಲ್ಲಿ ತನ್ನ ಕೊಡುಗೆ ನೀಡಲು ಚಿಂತನೆ ನಡೆಸಿದೆ. ಅರ್ಧ, ಒಂದು ಎಕರೆ ಜಾಗದಲ್ಲಿ ನೂರಾರು ಗಿಡಗಳನ್ನು ನೆಟ್ಟು ಕಾಡನ್ನಾಗಿ ರೂಪಿಸುವುದು ನಿಗಮದ ಯೋಜನೆಯಾಗಿದ್ದು, ಇದಕ್ಕಾಗಿ ಜಪಾನಿನ ಮಿಯಾವಾಕಿ ಮಾದರಿಯನ್ನು ಅನುಸರಿಸಲು ನಿಗಮ ಮುಂದಾಗಿದೆ.

ಅತ್ಯಂತ ಕಡಿಮೆ ಜಾಗದಲ್ಲಿ ಅತಿ ಹೆಚ್ಚು ಸ್ಥಳೀಯ ಪ್ರಬೇಧಕ್ಕೆ ಸೇರಿದ ಗಿಡಗಳನ್ನು ನೆಟ್ಟು ದಟ್ಟಕಾಡು ರೂಪಿಸುವ ತಂತ್ರವನ್ನು ಜಪಾನಿನ ಸಸ್ಯಶಾಸ್ತ್ರಜ್ಞ ಅಕಿರಾ ಮಿಯಾವಾಕಿ ರೂಪಿಸಿದ್ದ. ಇದನ್ನು ‘ಮಿಯಾವಾಕಿ ವಿಧಾನ’ ಎಂದೇ ಜನಪ್ರಿಯವಾಗಿದೆ. ಹೆಚ್ಚು ಕಡಿಮೆ ಇದೇ ವಿಧಾನ ಬಳಸಿಕೊಂಡು ಕಾಡು ಬೆಳೆಸುವ ಬಗ್ಗೆ ನಿಗಮ ಗಂಭೀರ ಚಿಂತನೆ ನಡೆಸಿದ್ದು, ಮುಂದಿನ ವಾರ ಈ ಬಗ್ಗೆಗಿನ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ.

ಇದನ್ನೂ ಓದಿ: ಪ್ರಪಂಚದ 90 ದೇಶಗಳಲ್ಲಿ ಒಟ್ಟು 44 ಮಿಲಿಯನ್ ಮರಗಳು: 73,300 ಪ್ರಭೇದಗಳನ್ನು ಗುರುತಿಸಿದ ವಿಜ್ಞಾನಿಗಳು!

ಮಿಯಾವಾಕಿ ವಿಧಾನದಲ್ಲಿ ಅತ್ಯಂತ ಕಡಿಮೆ ಸಮಯದಲ್ಲಿ ಗಿಡಗಳು ಬೆಳೆದು ಎರಡ್ಮೂರು ವರ್ಷದಲ್ಲಿ ಕಾಡಾಗಲಿದೆ. ಇದು ವಾತಾವರಣದಲ್ಲಿನ ಉಷ್ಣತೆ, ಶಬ್ದ ಮತ್ತು ವಾಯು ಮಾಲಿನ್ಯ ಕಡಿಮೆ ಮಾಡಲು ಅನುಕೂಲಕಾರಿ. ಅದರ ಜೊತೆ ಜೊತೆಗೆ ಹಕ್ಕಿಗಳು, ಚಿಟ್ಟೆಗಳನ್ನು ತಮ್ಮೆಡೆಗೆ ಸೆಳೆಯುತ್ತ ನಗರ ಜೀವ ವೈವಿಧ್ಯ ಹೆಚ್ಚಳಕ್ಕೆ ಕಾರಣವಾಗುತ್ತದೆ. ಈಗಾಗಲೇ ಬಿಡದಿ ಬಳಿ ಮಿಯಾವಾಕಿ ಅರಣ್ಯವಿದ್ದು ನಗರದಲ್ಲಿಯೂ ಇಂತಹ ಅರಣ್ಯ ಸೃಷ್ಟಿಸಬೇಕು ಎಂಬುದು ಮೆಟ್ರೋದ ಉದ್ದೇಶ.

ನಗರದ ಮಹಾಲಕ್ಷ್ಮಿ ಬಡಾವಣೆಯಲ್ಲಿ ಇಸ್ಕಾನ್‌ ದೇವಾಲಯದ ಸಮೀಪ, ಪೀಣ್ಯ ಡಿಪೋ, ಏರೋಸ್ಪೇಸ್‌ ಪಾರ್ಕ್ನಲ್ಲಿ ಮೆಟ್ರೋಗೆ ಸೇರಿದ ಜಾಗದಲ್ಲಿ ಅರಣ್ಯೀಕರಣ ಮಾಡಲು ಗುರುತಿಸಲಾಗಿದೆ. ಈ ವಾರ ಜಾಗವನ್ನು ಅಂತಿಮಗೊಳಿಸುತ್ತೇವೆ ಎಂದು ಮೆಟ್ರೋ ನಿಗಮದ ಹಿರಿಯ ಅಧಿಕಾರಿಗಳು ಹೇಳುತ್ತಾರೆ.

ಈ ಯೋಜನೆಯ ಬಗ್ಗೆ ಮಾಹಿತಿ ಹಂಚಿಕೊಂಡ ಮೆಟ್ರೋ ನಿಗಮದ ಪರಿಸರ ನಿರ್ವಹಣೆ ವಿಭಾಗದ ವ್ಯವಸ್ಥಾಪಕ ನಿರ್ದೇಶಕಿ ದಿವ್ಯಾ ಹೊಸೂರು, ಮಿಯಾವಾಕಿ ಮಾದರಿಯಲ್ಲಿ ದಟ್ಟಕಾಡು ಬೆಳೆಸಲು ಅರ್ಧ ಅಥವಾ ಒಂದು ಎಕರೆ ಜಾಗ ಸಿಕ್ಕರೂ ಸಾಕು. ಅಲ್ಲಿ ನೂರಾರು ಗಿಡಗಳನ್ನು ನೆಡುತ್ತೇವೆ. 

ಇದನ್ನೂ ಓದಿ: 2030ರ ವೇಳೆಗೆ 50 ಲಕ್ಷ ಟನ್ ಗ್ರೀನ್ ಹೈಡ್ರೋಜನ್ ಉತ್ಪಾದಿಸುವ ಗುರಿ: ಕೇಂದ್ರ ಸರ್ಕಾರದ ಮಹತ್ವದ ನೀತಿ!

ಈ ವರ್ಷ ಒಂದು ಕಡೆ ಮಿಯಾವಾಕಿ ಮಾದರಿ ಕಾಡು ನಿರ್ಮಿಸುವ ಬಗ್ಗೆ ಚಿಂತನೆ ನಡೆಸಿದ್ದೇವೆ. ಮುಂಗಾರಿನ ಜುಲೈ ತಿಂಗಳಲ್ಲಿ ಗಿಡ ನೆಡಬೇಕು ಎಂಬ ಚಿಂತನೆ ನಡೆಸಿದ್ದೇವೆ. ಗಿಡ ನೆಟ್ಟು ಆರೇಳು ತಿಂಗಳಲ್ಲಿ ಅದರ ಬೆಳವಣಿಗೆಯನ್ನು ಗಮನಿಸಿ ನಗರದ ಬೇರೆ ಬೇರೆ ಭಾಗದಲ್ಲಿ ಈ ರೀತಿ ಮಾಡಬಹುದೇ ಎಂದು ತೀರ್ಮಾನಿಸುತ್ತೇವೆ ಎಂದು ಹೇಳುತ್ತಾರೆ.

ಒಂದು ಗಿಡ ಕಡಿದರೆ ಹತ್ತು ಗಿಡ ನೆಡಬೇಕು ಎಂಬ ನಿಯಮವಿದೆ. ಆದರೆ ಈ ನಿಯಮದಡಿ ಗಿಡ ನೆಟ್ಟು ಸಲಹುವ ಬಗ್ಗೆ ಕಟ್ಟುನಿಟ್ಟದ ನಿಯಮಗಳಿವೆ. ಈ ನಿಯಮಗಳ ಪ್ರಕಾರ ಒಂದು ಎಕರೆ ಜಾಗದಲ್ಲಿ ಸುಮಾರು 160 ಗಿಡಗಳನ್ನು ಮಾತ್ರ ನಾವು ನೆಡಬಹುದು. ಆದ್ದರಿಂದ ಕಡಿದ ಮರಕ್ಕೆ ಗಿಡ ನೆಡಬೇಕು ಎಂಬ ನಿಯಮದ ಹೊರತಾಗಿ ಅರಣ್ಯೀಕರಣದ ಬಗ್ಗೆಗಿನ ಮೆಟ್ರೋದ ಬದ್ಧತೆಯ ಭಾಗವಾಗಿ ನಾವು ಈ ಪ್ರಯತ್ನ ಮಾಡುತ್ತಿರುವುದಾಗಿ ಅವರು ಹೇಳುತ್ತಾರೆ.

ಯಾವ ಗಿಡ ನೆಡುವ ಬಗ್ಗೆ ಶೀಘ್ರ ನಿರ್ಧಾರ: ಮಾವು, ಹಲಸು ಸೇರಿದಂತೆ ಹೂ ಬಿಡುವ, ಹಣ್ಣು ನೀಡುವ ಗಿಡಗಳನ್ನು ಬೆಳೆಸಬೇಕು ಎಂಬುದು ನಮ್ಮ ಆಶಯ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ನೆರವು ಪಡೆಯುತ್ತೇವೆ. ಆದರೆ ಯಾವ ಗಿಡಗಳನ್ನು ನೆಡಬೇಕು. ಹೇಗೆ ಯೋಜನೆ ಜಾರಿಗೆ ತರಬೇಕು ಎಂಬುದರ ಬಗ್ಗೆ ಮುಂದಿನ ವಾರ ತೀರ್ಮಾನಕ್ಕೆ ಬರುತ್ತೇವೆ ಎಂದು ದಿವ್ಯಾ ಹೊಸೂರು ಹೇಳುತ್ತಾರೆ.

-ರಾಕೇಶ್‌ ಎನ್‌.ಎಸ್‌, ಕನ್ನಡಪ್ರಭ ವಾರ್ತೆ

PREV
Read more Articles on
click me!

Recommended Stories

ಧರ್ಮಸ್ಥಳ ನೂರಾರು ಶವ ಹೂಳಿದ ಕೇಸ್: ಬುರುಡೆ ಗ್ಯಾಂಗ್ ಷಡ್ಯಂತ್ರ ಬಯಲು - SIT ವರದಿಯಲ್ಲಿ ಒಬ್ಬರಿಗೆ ಕ್ಲೀನ್ ಚಿಟ್!
ಚಿಕ್ಕಬಳ್ಳಾಪುರದಲ್ಲಿ ಮಾನವ ಹಕ್ಕುಗಳ ದಿನಾಚರಣೆ: ಸಾವಿರಾರು ಜನರಲ್ಲಿ ನಾಯಕತ್ವ ಬಿತ್ತಿದ ನವಶಕ್ತಿ ನಾಟಕ