Yakshagana : 'ರೂಪಾಂತರಗೊಂಡರೂ ಮೂಲತನ ಉಳಿಸಿಕೊಳ್ಳುವ ಶಕ್ತಿ ಯಕ್ಷಗಾನಕ್ಕಿದೆ'

By Kannadaprabha News  |  First Published Feb 21, 2022, 4:23 AM IST

* ರೂಪಾಂತರಗೊಂಡರೂ ಮೂಲತನ ಉಳಿಸಿಕೊಳ್ಳುವ ಶಕ್ತಿ ಯಕ್ಷಗಾನಕ್ಕಿದೆ

* 2020ನೇ ಸಾಲಿನ ಪಾರ್ತಿಸುಬ್ಬ, ಯಕ್ಷ ಸಿರಿ, ಗೌರವ ಪ್ರಶಸ್ತಿ ಪ್ರದಾನ

*ಯಕ್ಷಗಾನ ಎಲ್ಲಿಯವರೆಗೂ ಉಳಿಯುತ್ತದೆಯೋ ಅಲ್ಲಿಯವರೆಗೆ ಕನ್ನಡ ಭಾಷೆ ಮತ್ತು ಸಂಸ್ಕೃತಿ ಉಳಿಯುತ್ತದೆ


ಶಿರಸಿ(ಫೆ. 21)  ಯಕ್ಷಗಾನ ಕಲೆ ಯುವ ತಲೆಮಾರಿನಲ್ಲಿ ಹೊಸ ಸೇರ್ಪಡೆಯೊಂದಿಗೆ ರೂಪಾಂತರಗೊಂಡರೂ ತನ್ನ ಮೂಲತನ ಉಳಿಸಿಕೊಳ್ಳಲು ಪ್ರತಿ ದಾಳಿ ನಡೆಸುವ ಶಕ್ತಿ ಈ ಕಲೆಗೆ ಇದೆ ಎಂದು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಜಿ.ಎಲ್‌. ಹೆಗಡೆ ಹೇಳಿದರು.

ನಗರದ ಟಿಆರ್‌ಸಿ ಸಭಾಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ 2020ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿ, ಯಕ್ಷ ಸಿರಿ ಪ್ರಶಸ್ತಿ ಹಾಗೂ ಗೌರವ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಅವರು ಮಾತನಾಡಿದರು.

Tap to resize

Latest Videos

ಜನ ಈ ಕಲೆಯನ್ನು ಉಳಿಸಿದ್ದಾರೆ. ಕಲಾವಿದರ ಬಗ್ಗೆ ಪ್ರೀತಿ​-ಗೌರವ ನಾಡಿನ ಜನತೆಗೆ ಇದೆ. ಪ್ರಶಸ್ತಿಗಳನ್ನು ಯಾರಿಗೆ ಕೊಡಬಹುದು ಎಂಬ ಬಗ್ಗೆ ತ್ವರಿತವಾಗಿ ನಿರ್ಣಯಕ್ಕೆ ಬರಲಾಗದಷ್ಟುಸಂಖ್ಯೆಯ ಕಲಾವಿದರು ನಮ್ಮಲ್ಲಿದ್ದಾರೆ. ಯಕ್ಷಗಾನಕ್ಕಾಗಿಯೇ ಇದ್ದ ಸಭಾಯತ, ಹಾಸ್ಯಗಾರ ಇನ್ನಿತರ ಮನೆತನಗಳು ತಮ್ಮ ಮನೆತನದ ಹೆಸರಿನಲ್ಲಿಯೇ ಪ್ರಶಸ್ತಿಗಳನ್ನು ನೀಡಬೇಕು. ಇದರಿಂದ ಇನ್ನಷ್ಟುಕಲಾವಿದರನ್ನು ಸನ್ಮಾನಿಸಲು, ಗೌರವಿಸಲು ಸಾಧ್ಯವಾಗುತ್ತದೆ ಎಂದರು.#

Accident: ಅಸು ನೀಗಿದ ಯಕ್ಷಗಾನ ಕಲಾವಿದನಿಗೆ ಯಕ್ಷಧ್ರುವ ಫೌಂಡೇಶನ್‌ನಿಂದ ಪರಿಹಾರ

ಯಕ್ಷಗಾನ ಎಲ್ಲಿಯವರೆಗೂ ಉಳಿಯುತ್ತದೆಯೋ ಅಲ್ಲಿಯವರೆಗೆ ಕನ್ನಡ ಭಾಷೆ ಮತ್ತು ಸಂಸ್ಕೃತಿ ಉಳಿಯುತ್ತದೆ. ಯಕ್ಷಗಾನದ ವಿಶ್ವಕೋಶ ಆಗಬೇಕಿದೆ. ಇಪ್ಪತ್ತಕ್ಕೂ ಅಧಿಕ ವಿದ್ವಾಂಸರು ಒಂದು ವರ್ಷಗಳ ಕಾಲ ಕುಳಿತು ಕೆಲಸ ಮಾಡಬೇಕಾಗಿದೆ. ಸಾಹಿತ್ಯ ಸಮ್ಮೇಳನಗಳು ನಡೆಯುವಂತೆ ರಾಜ್ಯಮಟ್ಟದ ಯಕ್ಷಗಾನ ಸಮ್ಮೇಳನ ಆಗಬೇಕಿದೆ. ಅಕಾಡೆಮಿ ಉಳಿಯಬೇಕು ಎಂದರೆ ಯಕ್ಷಗಾನ ಪ್ರಸಂಗಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯಬೇಕು. ಗುಂಡುಬಾಳದಲ್ಲಿ ಪ್ರತಿ ದಿನ ಯಕ್ಷಗಾನ ನಡೆಯುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ. ಯಕ್ಷಗಾನವನ್ನು ಜಗತ್ತೇ ಗುರುತಿಸಿದೆ. ಯಕ್ಷಗಾನ ಎಂದಿಗೂ ನಶಿಸಲು ಸಾಧ್ಯವಿಲ್ಲ. ಅದು ನಮ್ಮ ಸಂಸ್ಕೃತಿಯೊಂದಿಗೆ ಬೆಳೆದುಬಂದಿದೆ. ಆದರೆ, ಕೆಲವೆಡೆ ರೂಪಾಂತರ ನಡೆದಿದೆ. ಆದರೆ, ರೂಪಾಂತರ ಯಕ್ಷಗಾನ ಉಳಿಯುವುದಿಲ್ಲ ಎಂದರು.

ಪಾರ್ತಿಸುಬ್ಬ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಿ.ಎಸ್‌. ಶ್ರೀಧರ, ಅಕಾಡೆಮಿ ಅಧ್ಯಕ್ಷರಾಗಿದ್ದ ಎಂ.ಎ. ಹೆಗಡೆ ಅವರೂ ಪ್ರಶಸ್ತಿಗೆ ಯೋಗ್ಯ ವ್ಯಕ್ತಿ ಆಗಿದ್ದರು. ಪ್ರಶಸ್ತಿ ಸಿಗುವುದಕ್ಕಿಂತ ಆ ಮಟ್ಟದ ಪ್ರದರ್ಶನ ನಮ್ಮಿಂದ ಬರಬೇಕಿದೆ. ಪಾರ್ತಿಸುಬ್ಬ ಯಕ್ಷಗಾನದ ಆದ್ಯಪ್ರವರ್ತಕರಾಗಿದ್ದರು. ಈ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ನಮ್ಮಿಂದ ಆಗಬೇಕಾದ ಕೆಲಸ ಇನ್ನೂ ಇದೆ ಎಂಬುದನ್ನು ತೋರಿಸಿಕೊಟ್ಟಿದೆ ಎಂದರು.

ಗೌರವ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ವಿಜಯನಳಿನಿ ರಮೇಶ ಪ್ರಶಸ್ತಿಯ ಹಣವನ್ನು ಯಕ್ಷಗಾನ ಕ್ಷೇತ್ರಕ್ಕೆ ಸಮರ್ಪಿಸುವುದಾಗಿ ತಿಳಿಸಿದರು. ಬಿ. ಪರಶುರಾಮ ಎಂ.ಎ. ಹೆಗಡೆ ಅವರ ನಿಧನದ ನಂತರ ಸಹಜವಾಗಿಯೇ ಆತಂಕವಿತ್ತು. ಜಿ.ಎಲ್‌. ಹೆಗಡೆ ಅಕಾಡೆಮಿಯನ್ನು ಉತ್ತಮವಾಗಿ ಮುನ್ನಡೆಸುತ್ತಿದ್ದಾರೆ. ಉತ್ತರ ಕರ್ನಾಟಕ ಶೈಲಿಯಲ್ಲಿಯೂ ಯಕ್ಷಗಾನವನ್ನು ಜನತೆಗೆ ಪರಿಚಯಿಸೋಣ ಎಂದರು.

ಯಕ್ಷ ಸಿರಿ ಪ್ರಶಸ್ತಿ ಸ್ವೀಕರಿಸಿದ ಕಲಾವಿದರು ತಮ್ಮ ಅನಿಸಿಕೆ ಹಂಚಿಕೊಂಡರು. ವಿಟ್ಲ ಶಂಭು ಶರ್ಮಾ ಮಾತನಾಡಿ, ಸಮಾಜದಲ್ಲಿ ಒಳ್ಳೆಯ ಎಂಜಿನಿಯರ್‌, ಡಾಕ್ಟರು ಸಿಗ್ತಾರೆ ಆದ್ರೆ ಒಳ್ಳೆ ಮನುಷ್ಯರು ಸಿಗುವುದು ಕಷ್ಟ. ನಮ್ಮನ್ನು ನಾವೇ ಗುರುತಿಸಿಕೊಳ್ಳುವಂತಾಯಿತು. ಯಕ್ಷಗಾನದಿಂದ ಗೌರವ ಸಂಭಾವನೆ ಮಾತ್ರ ಸಿಗ್ತಿತ್ತು, ಆದರೆ, ಗುರುತಿಸುವಿಕೆಯ ಆನಂದ ಸಿಗ್ತಿರಲಿಲ್ಲ. ಸಭಿಕರ ಆಶೀರ್ವಾದ ಈ ಮೂಲಕ ಸಿಕ್ಕಿದೆ ಎಂದರು.

ಎಂ.ಆರ್‌. ಹೆಗಡೆ, ಮೂಡಲಪಾಯ ಮತ್ತು ಪಡುವಲ ಪಾಯವನ್ನು ಒಂದಾಗಿಸಿ ರಾಜ್ಯದಾದ್ಯಂತ ಯಕ್ಷಗಾನ ವಿಸ್ತರಿಸಬೇಕು. ಅಕಾಡೆಮಿಗಳ ಅವಧಿಯನ್ನು ಸರ್ಕಾರ ಐದು ವರ್ಷಗಳ ಅವಧಿಗೆ ವಿಸ್ತರಿಸಬೇಕು. ಅಕಾಡೆಮಿಗೆ ನೀಡುವ ಅನುದಾನ ಜಾಸ್ತಿಗೊಳಿಸಬೇಕು ಎಂದರು.

ಸುಬ್ರಹ್ಮಣ್ಯ ಧಾರೇಶ್ವರ ಮಾತನಾಡಿ, ರಾಜ್ಯದ ಪ್ರಾತಿನಿಧಿಕ ಕಲೆಯಾಗಿ ರಾರಾಜಿಸಲಿ. ನಮ್ಮೊಂದಿಗಿರುವ ವಿದ್ವಾಂಸರನ್ನು ನಾವು ಬಳಸಿಕೊಳ್ಳಬೇಕಿದೆ ಎಂದರು.  ಗೋಪಾಲ ಆಚಾರ್ಯ, ಈ ಸನ್ಮಾನಗಳು ಪಾತ್ರಗಳಿಗೆ ಸಲ್ಲುತ್ತದೆ ಎಂದರು. ಕೆ. ತಿಮ್ಮಪ್ಪ ಗುಜರನ್‌ ಅವರ ಪತ್ನಿ, ಮಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಕಾಡೆಮಿ ಸದಸ್ಯೆ ನಿರ್ಮಲಾ ಹೆಗಡೆ ಗೋಳಿಕೊಪ್ಪ, ರಜಿಸ್ಟ್ರಾರ್‌ ಎಚ್‌.ಎಸ್‌. ಶಿವರುದ್ರಪ್ಪ ಇತರರಿದ್ದರು.

click me!