Mandya: RTO ಅಧಿಕಾರಿಗಳ ಎಡವಟ್ಟಿಗೆ ಮೂವರು ಬಲಿ; ಟಿಪ್ಪರ್‌ಗೆ ಅಪ್ಪಳಿಸಿದ ಥಾರ್ ಜೀಪ್!

Published : Nov 29, 2026, 11:34 AM IST
Expressway Accident

ಸಾರಾಂಶ

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್-ವೇನಲ್ಲಿ ಟಿಪ್ಪರ್‌ಗೆ ಥಾರ್ ಜೀಪ್ ಡಿಕ್ಕಿಯಾಗಿ ಕೇರಳ ಮೂಲದ ಮೂವರು ದುರ್ಮರಣ ಹೊಂದಿದ್ದಾರೆ. ಆರ್‌ಟಿಓ ಅಧಿಕಾರಿಗಳು ಟಿಪ್ಪರ್ ಅನ್ನು ಏಕಾಏಕಿ ತಡೆದದ್ದೇ ಈ ಅಪಘಾತಕ್ಕೆ ಕಾರಣ ಎಂದು ಆರೋಪಿಸಲಾಗಿದೆ.

ಮಂಡ್ಯ: ಆರ್‌ಟಿಓ ಅಧಿಕಾರಿಗಳ ಎಡವಟ್ಟಿನಿಂದಾಗಿ ಜಲ್ಲಿ ತುಂಬಿದ್ದ ಟಿಪ್ಪರ್‌ಗೆ ಹಿಂದಿನಿಂದ ಥಾರ್ ಜೀಪ್ ಅಪ್ಪಳಿಸಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಇಂಡುವಾಳು ಬಳಿ ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್-ವೇನಲ್ಲಿ ನಡೆದಿದೆ.

ಕೇರಳಂ ರಾಜ್ಯದ ಕೋಜಿಕೋಡ್ ಮೂಲದವರಾದ ಬಾಸಿಲ್ (೨೧), ಸಪ್ನಾ (೨೨), ಲಿಫೈಲ್ (೨೫) ಮೃತ ದುರ್ದೈವಿಗಳು, ಥಾರ್ ಜೀಪು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಅಪಘಾತ ಸಂಭವಿಸುತ್ತಿದ್ದಂತೆ ಆರ್‌ಟಿಓ ಅಧಿಕಾರಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಅಧಿಕಾರಿಗಳ ಬೇಜವಾಬ್ದಾರಿತನದ ವರ್ತನೆಗೆ ಇಂಡುವಾಳು ಗ್ರಾಮಸ್ಥರು ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆ ವಿವರ:

ಕೋಜಿಕೊಡ್ ಮೂಲದವರಾದ ಬಾಸಿಲ್, ಲಿಫೈಲ್ ಮತ್ತು ಸಪ್ನಾ ಅವರು ತಮ್ಮ ಥಾರ್ ಕಾರಿನಲ್ಲಿ ಕ್ಯಾಲಿಕಟ್‌ನಿಂದ ಬೆಂಗಳೂರಿಗೆ ತೆರಳುತ್ತಿದ್ದರು. ಬೆಂಗಳೂರು- ಮೈಸೂರು ಹೆದ್ದಾರಿಯ ಎಕ್ಸ್‌ಪ್ರೆಸ್-ವೇನಲ್ಲಿ ಇಂಡುವಾಳು ಸಮೀಪ ಹೆದ್ದಾರಿಯ ಒಂದು ಪಥದಲ್ಲಿ ಜಲ್ಲಿ ತುಂಬಿದ್ದ ಟಿಪ್ಪರ್ ಲಾರಿ ಸಾಗುತ್ತಿತ್ತು. ನಿಗದಿಗಿಂತ ಹೆಚ್ಚು ಜಲ್ಲಿ ತುಂಬಿದೆ ಎಂಬ ಕಾರಣಕ್ಕೆ ಆರ್‌ಟಿಓ ಅಧಿಕಾರಿಗಳು ತಮ್ಮ ವಾಹನದಲ್ಲಿ ಟಿಪ್ಪರ್ ಲಾರಿಯನ್ನು ಬೆನ್ನಟ್ಟಿ ಚಾಲಕನಿಗೆ ಪಕ್ಕಕ್ಕೆ ವಾಹನ ನಿಲ್ಲಿಸುವಂತೆ ಸೂಚಿಸಿದ್ದಾರೆ.

ಟಿಪ್ಪರ್ ಲಾರಿ ಚಾಲಕ ಗಾಬರಿಯಿಂದ ವಾಹನವನ್ನು ತಾನು ಸಾಗುತ್ತಿದ್ದ ಪಥದಿಂದ ಪಕ್ಕದ ಪಥಕ್ಕೆ ಲಾರಿಯನ್ನು ತಿರುಗಿಸಿದ ವೇಳೆ ಹಿಂದಿನಿಂದ ಅತಿ ವೇಗವಾಗಿ ಬರುತ್ತಿದ್ದ ಥಾರ್ ಜೀಪ್ ಟಿಪ್ಪರ್ ಲಾರಿಗೆ ಬಂದು ಅಪ್ಪಳಿಸಿದೆ. ಅಪಘಾತ ಸಂಭವಿಸುತ್ತಿದ್ದಂತೆ ಆರ್‌ಟಿಓ ಅಧಿಕಾರಿಗಳು ತಮ್ಮ ವಾಹನದಲ್ಲಿ ವೇಗವಾಗಿ ಪರಾರಿಯಾಗಿದ್ದಾರೆ.

ಟಿಪ್ಪರ್ ಲಾರಿಗೆ ಹೊಡೆದ ಡಿಕ್ಕಿಯ ರಭಸಕ್ಕೆ ಬಾಸಿಲ್, ಸಪ್ನಾ ಅವರು ಸ್ಥಳದಲ್ಲೇ ಮೃತಪಟ್ಟರು. ಗಂಭೀರವಾಗಿ ಗಾಯಗೊಂಡಿದ್ದ ಲಿಫೈಲ್ ಎಂಬಾತನನ್ನು ಮಿಮ್ಸ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಘಟನೆಯಿಂದ ಎಕ್ಸ್‌ಪ್ರೆಸ್ ವೇನಲ್ಲಿ ಕೆಲಸಮಯದವರೆಗೆ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ.ವಿ.ಜೆ.ಶೋಭಾರಾಣಿ, ಡಿವೈಎಸ್ಪಿ ಲಕ್ಷ್ಮೀನಾರಾಯಣ ಸೇರಿದಂತೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಾಹನದೊಳಗೆ ಸಿಲುಕಿದ್ದ ಮೃತದೇಹಗಳನ್ನು ಹೊರತೆಗೆದು ಶವಾಗಾರಕ್ಕೆ ಸಾಗಿಸಿದರು. ಹೆದ್ದಾರಿಯಲ್ಲಿದ್ದ ವಾಹನವನ್ನು ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಮಂಡ್ಯ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆರ್‌ಟಿಓ ಅಧಿಕಾರಿಗಳ ದುಂಡಾವರ್ತನೆಗೆ ಆಕ್ರೋಶ

ಎಕ್ಸ್‌ಪ್ರೆಸ್-ವೇನಲ್ಲಿ ಚಲಿಸುವ ವಾಹನಗಳು ಅತಿ ವೇಗದಲ್ಲಿರುತ್ತವೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಕಾನೂನುಬಾಹಿರವಾಗಿ ಗಣಿ ಸಾಮಗ್ರಿಗಳನ್ನು ತುಂಬಿಕೊಂಡು ಸಾಗುವ ವಾಹನಗಳನ್ನು ನಿರ್ಗಮನ ದ್ವಾರ ಅಥವಾ ಟೋಲ್‌ಗಳಲ್ಲಿ ಹಿಡಿಯುವುದು ಸರಿಯಾದ ಕ್ರಮ. ಅದನ್ನು ಬಿಟ್ಟು ಎಕ್ಸ್‌ಪ್ರೆಸ್-ವೇನಲ್ಲಿ ಬೆನ್ನಟ್ಟಿಕೊಂಡು ಬಂದು ವಾಹನಗಳನ್ನು ನಿಲ್ಲಿಸುವಂತಹ ದುಂಡಾವರ್ತನೆ ಪ್ರದರ್ಶಿಸಿದ್ದರಿಂದ ಮೂವರು ಅಮಾಯಕ ಜೀವಗಳು ಬಲಿಯಾಗುವಂತಾಗಿದೆ.

ಆರ್‌ಟಿಓ ಅಧಿಕಾರಿಗಳು ಎಕ್ಸ್‌ಪ್ರೆಸ್-ವೇಗೆ ಇಳಿದು ಟಿಪ್ಪರ್ ಲಾರಿಯನ್ನು ತಡೆಯುವ ಪ್ರಯತ್ನ ನಡೆಸದಿದ್ದರೆ ಮೂರು ಜೀವಗಳು ಉಳಿಯುತ್ತಿದ್ದವು. ಆರ್‌ಟಿಓ ಇನ್ಸ್‌ಪೆಕ್ಟರ್ ಸಿ.ಎಂ.ಗೌಡ ಹಾಗೂ ಜೀಪ್ ಚಾಲಕ ಪಾಣಿ ಅವರು ಬಲವಂತವಾಗಿ ಏಕಾಏಕಿ ಟಿಪ್ಪರ್‌ವಾಹನವನ್ನು ತಡೆದಿದ್ದರಿಂದಲೇ ಧಾರುಣ ಘಟನೆ ಸಂಭವಿಸುವಂತಾಗಿದೆ. ಇದಕ್ಕೆ ಆರ್‌ಟಿಓ ಅಧಿಕಾರಿಗಳೇ ನೇರ ಹೊಣೆ ಎಂದು ಆರೋಪಿಸಿ ಇಂಡುವಾಳು ಗ್ರಾಮಸ್ಥರು ಹೆದ್ದಾರಿಯಲ್ಲಿ ವಾಹನ ತಡೆದು ಆಕ್ರೋಶ ವ್ಯಕ್ತಪಡಿಸಿದರು.

ಸಂಚಾರ ನಿಯಂತ್ರಣ ಮತ್ತು ವಾಹನಗಳ ತಪಾಸಣೆ ಹೆಸರಿನಲ್ಲಿ ಹೆದ್ದಾರಿಗಳಲ್ಲಿ ವಾಹನಗಳನ್ನು ತಡೆದು ನಡೆಸುವ ಕಾರ್ಯಾಚರಣೆಗಳು ಸಾರ್ವಜನಿಕರ ಜೀವಕ್ಕೆ ಅಪಾಯ ತಂದೊಡ್ಡುವಂತಿರಬಾರದು. ಅಧಿಕಾರಿಗಳ ಕರ್ತವ್ಯ ನಿರ್ವಹಣೆಯಲ್ಲಿನ ನಿರ್ಲಕ್ಷ್ಯ ಅಥವಾ ನಿಯಮ ಉಲ್ಲಂಘನೆ ಯಾರದೇ ಆಗಿದ್ದರೂ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದರು.

PREV
Read more Articles on
click me!

Recommended Stories

ಡಾ.ಅಂಬೇಡ್ಕರ್‌ ದಲಿತರ ಪ್ರತಿನಿಧಿ ಎಂಬುದು ತಪ್ಪು: ಕಅಪ್ರಾ ಸದ್ಯಸ್ಯ ಡಾ.ನಿಹ ಹೇಳಿದ್ದೇನು?
ಇದೇ ಮೊದಲ ಬಾರಿಗೆ ಸಕಲೇಶಪುರದಲ್ಲಿ ಅಂತಾರಾಷ್ಟ್ರೀಯ ಮ್ಯಾರಥಾನ್‌! ಭರ್ಜರಿ ಸಿದ್ಧತೆ, ದಿನಾಂಕ, ಸಮಯ, ಸ್ಥಳದ ವಿವರ ಇಲ್ಲಿದೆ