
ಬೆಂಗಳೂರು-ಮುಂಬೈ ನಡುವಿನ ವಂದೇ ಭಾರತ್ ಸ್ಲೀಪರ್ ರೈಲನ್ನು ಕಲಬುರಗಿ ಮಾರ್ಗವಾಗಿ ಸಂಚರಿಸುವಂತೆ ಕೇಂದ್ರ ಸರ್ಕಾರ ಅಧಿಕೃತವಾಗಿ ಘೋಷಿಸಿದ್ದರೂ, ಇದೀಗ ಆ ಮಾರ್ಗವನ್ನು ಹುಬ್ಬಳ್ಳಿ-ಬೆಳಗಾವಿ ಕಡೆಗೆ ಬದಲಾಯಿಸಲು ನಡೆಯುತ್ತಿರುವ ಯತ್ನವನ್ನು ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಹಾಗೂ ಟೀಮ್ ಯುವಾ ಸಂಘಟನೆಯ ಸಂಚಾಲಕ ವಿನಯ್ ಕುಮಾರ್ ಮಾಳಗೆ ತೀವ್ರವಾಗಿ ಖಂಡಿಸಿದ್ದಾರೆ.
ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಏ.27, 2026ರಂದು ಕಲಬುರಗಿ ಮಾರ್ಗವಾಗಿ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಸಂಚರಿಸಲಿದೆ ಎಂದು ಅಧಿಕೃತವಾಗಿ ಘೋಷಿಸಿದ್ದರು. ಆದರೆ, ಕೆಲವೇ ತಿಂಗಳಲ್ಲಿ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಅವರು ಈ ಮಾರ್ಗವನ್ನು ಹುಬ್ಬಳ್ಳಿ-ಬೆಳಗಾವಿ ಕಡೆಗೆ ಬದಲಾಯಿಸಲು ಒತ್ತಡ ಹೇರುತ್ತಿರುವುದು ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಮಾಡುತ್ತಿರುವ ದೊಡ್ಡ ಅನ್ಯಾಯ ವಾಗಿದೆ ಎಂದು ಆರೋಪಿಸಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಬಿಜೆಪಿ ನಾಯಕರು ನಿರಂತರವಾಗಿ ಅಡ್ಡಿಯಾಗುತ್ತಿದ್ದಾರೆ ಎಂದು ಆರೋಪಿಸಿದ ಮಾಳಗೆ, ಈ ಹಿಂದೆ ರಾಯಚೂರಿಗೆ ಮಂಜೂರಾಗಬೇಕಿದ್ದ ಐಐಟಿ ಹಾಗೂ ಏಮ್ಸ್ ಸಂಸ್ಥೆಗಳನ್ನು ಹುಬ್ಬಳ್ಳಿ - ಧಾರವಾಡಕ್ಕೆ ಸ್ಥಳಾಂತರಿಸುವ ಮೂಲಕ ಈ ಭಾಗದ ಯುವಕರಿಗೆ ಅನ್ಯಾಯ ಮಾಡ ಲಾಗಿದೆ ಎಂದು ಟೀಕಿಸಿದರು.
ಬೀದರ್ ಜಿಲ್ಲೆಯಲ್ಲಿಯೂ ಹೆಚ್‌ಎಎಲ್ ಹೆಲಿಕಾಪ್ಟರ್ ತಯಾರಿಕಾ ಘಟಕ, ಬಿಎಸ್‌ಎಫ್ ತರಬೇತಿ ಕೇಂದ್ರ ಹಾಗೂ ರಾಷ್ಟ್ರೀಯ ಹೂಡಿಕೆ ಮತ್ತು ಉತ್ಪಾದನಾ ವಲಯ (ಎನ್‌ಐಎಂಜೆಡ್) ಯೋಜನೆಗಳು ಬಿಜೆಪಿ ನಾಯಕರ ನಿರ್ಲಕ್ಷ್ಯದಿಂದ ಕೈತಪ್ಪಿವೆ ಎಂದು ಆರೋಪಿಸಿದರು.
ಬೆಂಗಳೂರು - ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಯಾವುದೇ ಕಾರಣಕ್ಕೂ ಕಲಬುರಗಿ ಮಾರ್ಗದಿಂದ ಬದಲಾಗಬಾರದು. ಕಲ್ಯಾಣ ಕರ್ನಾಟಕದ ಎಲ್ಲ ಸಂಸದರು, ಶಾಸಕರು ಹಾಗೂ ಪಕ್ಷಾತೀತ ನಾಯಕರು ಒಗ್ಗಟ್ಟಿನಿಂದ ಈ ಪ್ರಸ್ತಾವನೆಯನ್ನು ವಿರೋಧಿಸಿ, ಕೇಂದ್ರ ರೈಲ್ವೆ ಸಚಿವರನ್ನು ಭೇಟಿ ಮಾಡಿ ಕಲಬುರಗಿ ಮಾರ್ಗವನ್ನೇ ಅಂತಿಮಗೊಳಿಸುವಂತೆ ಒತ್ತಾಯಿಸಬೇಕು ಎಂದು ಅವರು ಆಗ್ರಹಿಸಿದರು. ಒಂದು ವೇಳೆ ಕೇಂದ್ರ ಸರ್ಕಾರ ರಾಜಕೀಯ ಒತ್ತಡಕ್ಕೆ ಮಣಿದು ರೈಲು ಮಾರ್ಗ ಬದಲಾಯಿಸಿದರೆ, ಕಲ್ಯಾಣ ಕರ್ನಾಟಕ ಭಾಗದಾದ್ಯಂತ ಸಾರ್ವಜನಿಕರು, ಯುವಕರು ಹಾಗೂ ವಿವಿಧ ಸಂಘಟನೆಗಳನ್ನು ಒಗ್ಗೂಡಿಸಿ ಉಗ್ರ ಹೋರಾಟ ಮತ್ತು ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ವಿನಯ್ ಕುಮಾರ್ ಮಾಳಗೆ ಎಚ್ಚರಿಕೆ ನೀಡಿದ್ದಾರೆ.