ಇತಿಹಾಸ ಸೃಷ್ಟಿಸಿದ ‘ಮೋದಿ ಮಸೀದಿ’ : ಎಲ್ಲರಿಗೂ ಪ್ರವೇಶ

By Kannadaprabha NewsFirst Published Jan 20, 2020, 9:51 AM IST
Highlights

ಬೆಂಗಳೂರಿನಲ್ಲಿರುವ ಪ್ರಸಿದ್ಧ ಮೋದಿ ಮಸೀದಿಯು ಇತಿಹಾಸವನ್ನೇ ಸೃಷ್ಟಿ ಮಾಡಿದೆ.  ಮುಸ್ಲಿಮೇತರರಿಗೂ ಬಾಗಿಲು ತೆರೆಯುವ ಮೂಲಕ ಹೊಸ ಸಂದೇಶ ಸಾರಿದೆ. 

ಬೆಂಗಳೂರು [ಜ.20]:  ನಗರದ ಹೃದಯ ಭಾಗದಲ್ಲಿರುವ 170 ವರ್ಷಕ್ಕೂ ಹಳೆಯದಾದ ಮೋದಿ ಮಸೀದಿ, ಮುಸ್ಲಿಮೇತರರಿಗೂ ಬಾಗಿಲು ತೆರೆಯುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿತು.ಹಿಂದೂ, ಕ್ರಿಶ್ಚಿಯನ್‌, ಸಿಖ್ಖರು, ಮುಸ್ಲಿಮರು ಭೇದ ಭಾವವಿಲ್ಲದೆ ಒಂದೆಡೆ ಸೇರಿ ಏಕತೆಯ ಸಂದೇಶ ಸಾರಿದರು. ಇಂಥ ಅಪರೂಪದ ಸೌಹಾರ್ದಯುತ ಹಾಗೂ ಏಕತೆಯ ಸಂಕೇತಕ್ಕೆ ಭಾನುವಾರ ಶಿವಾಜಿನಗರ ಟಸ್ಕರ್‌ ಟೌನ್‌ನ ‘ಮೋದಿ ಮಸೀದಿ’ ಸಾಕ್ಷಿಯಾಗಿತ್ತು!

ಅಂತರ್‌ ಧರ್ಮಗಳ ನಡುವಿನ ಸಂವಾದವನ್ನು ಉತ್ತೇಜಿಸುವುದು ಹಾಗೂ ಮುಸ್ಲಿಮೇತರರಿಗೂ ತಮ್ಮ ಧರ್ಮ, ಧಾರ್ಮಿಕತೆ ಹಾಗೂ ಮಸೀದಿಯ ಕಾರ್ಯ ಚಟುವಟಿಕೆಗಳನ್ನು ಅರ್ಥ ಮಾಡಿಸುವ ಉದ್ದೇಶದಿಂದ ಭಾನುವಾರ ಮೋದಿ ಮಸೀದಿಯನ್ನು ಎಲ್ಲ ವರ್ಗದವರಿಗೂ ಮುಕ್ತವಾಗಿಸಲಾಗಿತ್ತು.

ಥಾಣೆ ಮತ್ತು ಬೆಂಗಳೂರಿನ ರಹಮತ್‌ ಸಮೂಹ ‘ವಿಸಿಟ್‌ ಮೈ ಮಸೀದಿ ಡೇ’ ಹೆಸರಿನ ಕಾರ್ಯಕ್ರಮವನ್ನು ಏರ್ಪಡಿಸುತ್ತಿದ್ದು, ಇತ್ತೀಚೆಗೆ ಮುಸ್ಲಿಮೇತರ ಸಮುದಾಯದ ನಡುವೆ ಸಾಮರಸ್ಯ ಬೆಳೆಸುವಲ್ಲಿ ಯಶಸ್ಸು ಸಾಧಿಸಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲೂ ಈ ಕಾರ್ಯಕ್ರಮವನ್ನು ಸಂಘಟಿಸಲಾಗಿತ್ತು. ಸಂಘಟಕರು ಕೇವಲ 170 ಮುಸ್ಲಿಮೇತರರಿಗೆ ಮಾತ್ರ ಮಸೀದಿಗೆ ಪ್ರವೇಶ ಸೀಮಿತಗೊಳಿಸಿದ್ದರು. ಆದರೆ, ಸುಮಾರು 400ಕ್ಕೂ ಹೆಚ್ಚು ಜನರು ಮಧ್ಯಾಹ್ನದ ಹೊತ್ತಿಗೆ ಮಸೀದಿಗೆ ಆಗಮಿಸಿದರು.

Fact Check: ಬೆಂಗಳೂರಿನ ಈ ಮಸೀದಿಗೆ ಮೋದಿ ಹೆಸರು?...

ದೇಶದ ಎಲ್ಲಾ ಭಾಷೆಗಳಲ್ಲಿ ಇತರೆ ಧರ್ಮೀಯರನ್ನು ಸ್ವಾಗತಿಸಿದರು. ಆದರೆ ಸಂದರ್ಶಕರಿಗೆ ಮಸೀದಿ ಪ್ರವೇಶದ ವೇಳೆ ಕೇಂದ್ರ ಸರ್ಕಾರದ ನೂತನ ‘ಪೌರತ್ವ ತಿದ್ದುಪಡಿ ಮಸೂದೆ’, ‘ನಾಗರಿಕ ರಾಷ್ಟ್ರೀಯ ನೋಂದಣಿ ಕಾಯ್ದೆ’ ಸೇರಿದಂತೆ ಯಾವುದೇ ರಾಜಕೀಯ ವಿಚಾರವನ್ನು ಮಾತನಾಡಬಾರದು. ಸೂಕ್ಷ್ಮವಿಚಾರಗಳ ಕುರಿತು ಚರ್ಚೆ ನಡೆಸಬಾರದು ಎಂದು ಕಟ್ಟುನಿಟ್ಟಾಗಿ ಸೂಚಿಸಲಾಗಿತ್ತು.

ಈ ಕಾರ್ಯಕ್ರಮ ದೇಶದ ಪ್ರಸ್ತುತ ಯಾವುದೇ ರಾಜಕೀಯ ಘಟನೆಗಳೊಂದಿಗೆ ಸಂಬಂಧ ಹೊಂದಿಲ್ಲ. ಇದೊಂದು ಸಂಪೂರ್ಣ ರಾಜಕೀಯ ರಹಿತ ಕಾರ್ಯಕ್ರಮ. ಇತರೆ ಧರ್ಮೀಯರು ಇಸ್ಲಾಂ ಮತ್ತು ಮಸೀದಿಯ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಬೇಕು, ಮಸೀದಿ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದು ಜನರಿಗೆ ಅರಿವಿಲ್ಲ. ಹೀಗಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಇಂತಹ ಹಲವು ಕಾರ್ಯಕ್ರಮಗಳನ್ನು ನಡೆಸಲು ಚಿಂತಿಸಲಾಗಿದೆ ಎಂದು ಸಂಘಟಕರು ಮಾಹಿತಿ ನೀಡಿದರು.

click me!