ಲಾರಿ ಮರಳಿಗೆ 40 ರಿಂದ 50 ಸಾವಿರ ಹಣ| ಅಕ್ರಮ ಸಾಗಾಣೆಯಾದರೂ ತಪಾಸಣೆ ಇಲ್ಲ| ತುಂಗಭದ್ರಾ ನದಿಯ ಮರಳಿಗೆ ಭಾರಿ ಬೇಡಿಕೆ| ಮರಳಿಗೆ ಬಂಗಾರದ ಬೆಲೆ|
ಚಂದ್ರು ಕೊಂಚಿಗೇರಿ
ಹೂವಿನಹಡಗಲಿ(ಜ.20): ಮರಳು ಮಾಫಿಯಾ ತಡೆಗೆ ಜಾರಿಯಾದ ಹೊಸ ನೀತಿ ಅನುಷ್ಠಾನವೇ ಆಗುತ್ತಿಲ್ಲ. ಅಧಿಕಾರಿಗಳು ಎಷ್ಟೋ ದಾಳಿ ಮಾಡಿದ್ದರೂ, ನಿಯಂತ್ರಣಕ್ಕೆ ಬರುತ್ತಿಲ್ಲ. ಇತ್ತೀಚೆಗೆ ಬಂದ ಬಿಜೆಪಿ ಸರ್ಕಾರ ತಮಿಳುನಾಡು ಮಾದರಿಯ ಮರಳು ನೀತಿ ಜಾರಿಗೆ ಬರಲಿದೆ ಎಂದು ಹೇಳುತ್ತಿದೆ. ಆದರೆ ಈ ವರೆಗೂ ಮರಳು ದಂಧೆಕೋರರ ವಿರುದ್ಧ ಕಠಿಣ ಕ್ರಮವಿಲ್ಲದೇ ಜಾರಿಯಾಗುವ ಮರಳು ನೀತಿ ಹಲ್ಲು ಕಿತ್ತ ಹಾವಿನಂತಾಗಿದೆ.
ಅಕ್ರಮ ಮರಳು ಮಾಫಿಯಾ ದಂಧೆಕೋರರ ವಿರುದ್ಧ ಗೂಂಡಾ ಕಾಯ್ದೆ ಪ್ರಕರಣ ದಾಖಲು ಮಾಡಬೇಕೆಂದು ಈ ಹಿಂದೆ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವೇ ಎಚ್ಚರಿಕೆ ನೀಡಿತ್ತು. ಆದರೆ ಎಲ್ಲಿಯೂ ಅನುಷ್ಠಾನ ಆಗಲಿಲ್ಲ. ರಾಜ್ಯದಲ್ಲಿ ಅಧಿಕಾರ ಹಿಡಿದ ಎಲ್ಲ ಸರ್ಕಾರಗಳು ವಿನೂತನ ಮರಳು ನೀತಿ ಜಾರಿಗೆ ಬರುತ್ತಿರುವುದರಿಂದ ಮರಳು ಅಕ್ರಮ ಸಾಗಾಣೆ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮವಿಲ್ಲದಂತಾಗಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ತುಂಗಭದ್ರಾ ನದಿಯ ಮರಳಿಗೆ ಭಾರಿ ಬೇಡಿಕೆ ಇರುವ ಕಾರಣ ಮರಳಿಗೆ ಬಂಗಾರದ ಬೆಲೆ ಬಂದಿದೆ. ಬಳ್ಳಾರಿ ಜಿಲ್ಲೆಯ ಗಡಿ ಭಾಗದ ಮರಳನ್ನು ಹಾವೇರಿ ಜಿಲ್ಲೆಯ ಮರಳು ದಂಧೆಕೋರರು, ಉತ್ತರಪ್ರದೇಶ ಹಾಗೂ ಬಿಹಾರ ಮೂಲಕ 200ರಿಂದ 300 ಅಮಾಯಕ ಕಾರ್ಮಿಕರನ್ನು ಕರೆತಂದು ತೆಪ್ಪದ ಮೂಲಕ ಮರಳು ಲೂಟಿಗೆ ಮುಂದಾಗಿದ್ದಾರೆ.
ಹಾವೇರಿ ಜಿಲ್ಲೆಯ ಮೇವುಂಡಿ, ತೆರದಹಳ್ಳಿ, ಗಳಗನಾಥ, ಹಾವನೂರು, ಹುಳ್ಯಾಳ, ಕಂಚರಗಟ್ಟಿ, ಅರಳಿಹಳ್ಳಿ ಸೇರಿದಂತೆ ತುಂಗಭದ್ರಾ ನದಿ ತೀರದ ಗ್ರಾಮಗಳಲ್ಲಿ ಅಕ್ರಮ ಮರಳು ದಂಧೆಕೋರರು ಉತ್ತರ ಪ್ರದೇಶ ಹಾಗೂ ಬಿಹಾರದ ಪರಿಣತ ಈಜುಗಾರರಿಂದ ನೀರಿನಲ್ಲಿ ಮುಳುಗಿ ಮರಳನ್ನು ಬಕೆಟ್ ಮೂಲಕ ತೆಪ್ಪದಲ್ಲಿ ಹಾಕಿ ಸಾಗಾಣಿಕೆ ಮಾಡುತ್ತಿದ್ದಾರೆ.
ನದಿಯಲ್ಲಿ ನಿತ್ಯ 40 ರಿಂದ 50 ತೆಪ್ಪಗಳಲ್ಲಿ ಮರಳು ಅಕ್ರಮವಾಗಿ ಹಾವೇರಿ ಜಿಲ್ಲೆಯ ಕಡೆಗೆ ಸಾಗಿಸುತ್ತಾರೆ. ತೆಪ್ಪವೊಂದಕ್ಕೆ 4 ರಿಂದ 5 ಸಾವಿರ ಹಣ ಸಂಪಾದಿಸುತ್ತಾರೆ. ಕಾರ್ಮಿಕರು ತಂದ ಮರಳನ್ನು ದಂಧೆಕೋರರು ಒಂದೆಡೆ ಸಂಗ್ರಹಿಸಿ ರಾತ್ರಿ ವೇಳೆ ಲಾರಿಗಳ ಮೂಲಕ ಹಾವೇರಿ, ಧಾರವಾಡ, ಹುಬ್ಬಳ್ಳಿ, ರಾಣಿಬೆನ್ನೂರು, ಗದಗ ಇತರೆ ಮಹಾನಗರಗಳಲ್ಲಿ ಲಾರಿ ಮರಳಿಗೆ 40 ರಿಂದ 50 ಸಾವಿರಕ್ಕೆ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಲಾರಿಯಲ್ಲಿನ ಮರಳು ಪರವಾನಗಿ ಪಾಸ್ ಇದೆಯೋ ಇಲ್ಲವೋ ಎಂಬುದನ್ನು ತಪಾಸಣೆ ಮಾಡುತ್ತಿಲ್ಲ. ಇದರಿಂದ ನಿತ್ಯ ಲಕ್ಷಾಂತರ ರು. ಮರಳು ಲೂಟಿಯಾಗಿ ಸರ್ಕಾರಕ್ಕೆ ಬೊಕ್ಕಸಕ್ಕೆ ತಿಂಗಳಿಗೆ ಕೋಟ್ಯಂತರ ರು. ನಷ್ಟವಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ.
ನದಿ ತೀರದಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ದಂಧೆಯ ಮೇಲೆ ಹಿರೇಹಡಗಲಿ ಪೊಲೀಸ್ ಠಾಣೆಯ ಪಿಎಸ್‌ಐ ರಾಮಣ್ಣ ನಾಯ್ಕ ನೇತೃತ್ವದ ತಂಡವು ಭಾನುವಾರ ಬೆಳಗ್ಗೆ ದಾಳಿ ಮಾಡಿದ್ದಾರೆ. ಈ ವೇಳೆ 8 ತೆಪ್ಪಗಳನ್ನು ವಶಪಡಿಸಿಕೊಂಡಿದ್ದಾರೆ. ಉಳಿದಂತೆ ಕಾರ್ಮಿಕರು ನೀರಿನಲ್ಲಿ ಈಜಿ ಪರಾರಿಯಾಗಿದ್ದಾರೆ.
ದಾಳಿಯಿಂದ ತಪ್ಪಿಸಿಕೊಳ್ಳುತ್ತಾರೆ:
ತೆಪ್ಪದಲ್ಲಿ ಮರಳು ಸಾಗಿಸುವ ಕಾರ್ಮಿಕರು ಪೊಲೀಸ್ ಹಾಗೂ ಅಧಿಕಾರಿಗಳು ದಾಳಿ ಮಾಡಿದಾಗ ತೆಪ್ಪಗಳನ್ನು ನೀರಿನಲ್ಲಿ ಬಿಟ್ಟು ಈಜಿ ದಡ ಸೇರುತ್ತಾರೆ. ಅಧಿಕಾರಿಗಳು ಬಂದಾಗ ತಪ್ಪಿಸಿಕೊಳ್ಳುವ ಚಾಣಾಕ್ಷತೆಯನ್ನು ಕಾರ್ಮಿಕರಿಗೆ ಮರಳು ದಂಧೆಕೋರರು ತರಬೇತಿ ನೀಡಿದ್ದಾರೆ. ಒಂದು ವೇಳೆ ಸಿಕ್ಕರೂ ಅಕ್ರಮ ಮರಳು ದಂಧೆಕೋರರ ಹೆಸರು ಹೇಳುವುದಿಲ್ಲ. ನದಿಯಲ್ಲಿನ ಮರಳಿನ ಸಂಪತ್ತನ್ನು ಇನ್ನಾದರೂ ಅಧಿಕಾರಿಗಳು ಜಂಟಿ ದಾಳಿ ಮಾಡಿ ರಕ್ಷಣೆ ಮಾಡಬೇಕಿದೆ ಎಂದು
ನದಿ ತೀರದ ಗ್ರಾಮಸ್ಥರ ಮನವಿ.
ಈ ಬಗ್ಗೆ ಮಾತನಾಡಿದ ಹೂವಿನಹಡಗಲಿ ತಹಸೀಲ್ದಾರ್ ಕೆ. ರಾಘವೇಂದ್ರ ರಾವ್ ಅವರು,ಬಳ್ಳಾರಿ ಭಾಗದ ತುಂಗಭದ್ರಾ ನದಿ ತೀರದಲ್ಲಿನ ಮರಳು ಮಾಫಿಯಾ ತಡೆಗಟ್ಟಲು ಈಗಾಗಲೇ ಪೊಲೀಸ್ ಇಲಾಖೆ ಅಧಿಕಾರಿಗಳು ಪ್ರಯತ್ನ ಮಾಡುತ್ತಿದ್ದಾರೆ. ಜತೆಗೆ ಹಾವೇರಿ ಭಾಗದಲ್ಲಿ ತೆಪ್ಪದ ಮೂಲಕ ಅಕ್ರಮವಾಗಿ ಸಂಗ್ರಹಿಸಿರುವ ಮರಳನ್ನು ವಶಪಡಿಸಿಕೊಳ್ಳುವಂತೆ ಈಗಾಗಲೇ ಹಾವೇರಿ ತಹಸೀಲ್ದಾರ್ ಜತೆಗೆ ಚರ್ಚಿಸಿದ್ದೇವೆ ಎಂದು ಹೇಳಿದ್ದಾರೆ.
ನಂದಿಗಾವಿ ಬಳಿ ಹಾವೇರಿ ಭಾಗದ ಮರಳು ದಂಧೆಕೋರರು ಕಾರ್ಮಿಕರಿಂದ ತೆಪ್ಪದ ಮೂಲಕ ಮರಳು ಸಾಗಾಣಿಕೆ ವೇಳೆ ದಾಳಿ ಮಾಡಿದ್ದೇವೆ. 8 ತೆಪ್ಪಗಳನ್ನು ಮೀನುಗಾರರ ಸಹಾಯದಿಂದ ವಶಪಡಿಸಿಕೊಳ್ಳಲಾಗಿದೆ. ಆದರೆ ತೆಪ್ಪಗಳನ್ನು ಬಿಟ್ಟು ಕಾರ್ಮಿಕರು ಹಾವೇರಿ ಭಾಗಕ್ಕೆ ಈಜಿಕೊಂಡು ಪರಾರಿಯಾಗಿದ್ದಾರೆ. ಈ ಕುರಿತು ಹಿರೇಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡುತ್ತೇವೆ ಎಂದು ಹಿರೇಹಡಗಲಿ ಪೊಲೀಸ್ ಠಾಣೆ ಪಿಎಸ್‌ಐ ರಾಮಣ್ಣ ನಾಯ್ಕ ಹೇಳಿದ್ದಾರೆ.