ಒಂದು ವರ್ಷದಲ್ಲಿ ಲಕ್ಷಗಟ್ಟಲೇ ಮೆಟ್ರೋ ನಿಯಮ ಉಲ್ಲಂಘನೆ ಕೇಸ್‌ ದಾಖಲು! ನೀವು ಆ ತಪ್ಪು ಮಾಡಬೇಡಿ!

Kannadaprabha News   | Kannada Prabha
Published : Feb 01, 2026, 06:36 AM IST
namma metro

ಸಾರಾಂಶ

ಕಳೆದ ವರ್ಷ ಬೆಂಗಳೂರು ಮೆಟ್ರೋದಲ್ಲಿ ಜೋರಾಗಿ ಸಂಗೀತ ಕೇಳುವುದು, ಮೀಸಲು ಆಸನಗಳ ಅತಿಕ್ರಮಣ ಮತ್ತು ಆಹಾರ ಸೇವನೆಯಂತಹ ಲಕ್ಷಕ್ಕೂ ಹೆಚ್ಚು ನಿಯಮ ಉಲ್ಲಂಘನೆ ಪ್ರಕರಣಗಳು ವರದಿಯಾಗಿವೆ. ಸಹ ಪ್ರಯಾಣಿಕರಿಗೆ ಆಗುವ ತೊಂದರೆ ತಪ್ಪಿಸಲು, ಬಿಎಂಆರ್‌ಸಿಎಲ್‌ ಜಾಗೃತಿ ಅಭಿಯಾನ ಆರಂಭಿಸಿದೆ.

ಬೆಂಗಳೂರು: ಮೆಟ್ರೋದಲ್ಲಿ ಸಹ ಪ್ರಯಾಣಿಕರಿಗೆ ಕಿರಿಕಿರಿ ಎನ್ನಿಸುವಂತೆ ಜೋರಾಗಿ ಮ್ಯೂಸಿಕ್‌ ಕೇಳುವ, ವೃದ್ಧರು ಅಂಗವಿಕಲರ ಆಸನ ಅತಿಕ್ರಮಣ ಮಾಡಿದ, ಆಹಾರ ಸೇವಿಸಿದಂತಹ ಪ್ರಕರಣಗಳು ಕಳೆದ ವರ್ಷ ಲಕ್ಷ ದಾಟಿವೆ!

ಸಹ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುವ ನಡವಳಿಕೆ ಮಾಡಬಾರದೆಂಬ ನಿಯಮಗಳನ್ನು ಪಾಲಿಸುವಂತೆ ಬಿಎಂಆರ್‌ಸಿಎಲ್‌ ಸಾಕಷ್ಟು ಬಾರಿ ಸೂಚಿಸಿದೆ. ಮೆಟ್ರೋ ರೈಲಿನಲ್ಲೂ ಈ ಬಗ್ಗೆ ಎಚ್ಚರಿಕೆ ನೀಡಲಾಗುತ್ತಿದೆ. ಆದರೂ ಪ್ರತಿನಿತ್ಯ ಒಂದಲ್ಲ ಒಂದು ಮಾರ್ಗದಲ್ಲಿ ಕಾನೂನು ಉಲ್ಲಂಘಿಸುವ ಪ್ರಕರಣಗಳು ನಡೆಯುತ್ತಿವೆ. ಇದಕ್ಕಾಗಿ ಪ್ರಯಾಣಿಕರ ನಡುವೆ ಜಗಳ, ತಳ್ಳಾಟ, ನೂಕಾಟಗಳೂ ನಡೆದಿವೆ. ಕೊನೆಗೆ ಮೆಟ್ರೋ ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಿ ಗಲಾಟೆ ನಿಲ್ಲಿಸಿದ ಪ್ರಕರಣಗಳೂ ಸಾಕಷ್ಟಿವೆ.

ಜಾಗೃತಿ ಅಭಿಯಾನ: 

ಮೆಟ್ರೋ ರೈಲ್ವೆಸ್ (ಆಪರೇಷನ್ ಅಂಡ್ ಮೆಂಟೆನನ್ಸ್) ಕಾಯ್ದೆ, 2002ರ ಅಡಿಯಲ್ಲಿ, ಸಹ ಪ್ರಯಾಣಿಕರಿಗೆ ತೊಂದರೆ ಉಂಟು ಮಾಡಿದಲ್ಲಿ ಕೆಲ ಅಪರಾಧಗಳು ದಂಡಕ್ಕೆ ಒಳಪಡುತ್ತವೆ. ಈ ಹಿನ್ನೆಲೆಯಲ್ಲಿ ನಿಗಮ ಪ್ರಯಾಣಿಕರ ಜವಾಬ್ದಾರಿಯುತ ವರ್ತನೆ ಹಾಗೂ ಪ್ರಯಾಣದಲ್ಲಿ ಪಾಲಿಸಬೇಕಾದ ನಿಯಮಗಳ ಬಗ್ಗೆ ವಿಶೇಷ ಜಾಗೃತಿ ಅಭಿಯಾನವನ್ನು ಕೈಗೊಂಡಿದೆ.

ಮೆಟ್ರೋ ರೈಲುಗಳಲ್ಲಿ ಹೆಡ್ ಫೋನ್ ಇಲ್ಲದೆ ಸಂಗೀತ ಕೇಳುವುದು, ಆಹಾರ ಸೇವಿಸುವುದು ಅಥವಾ ತಂಬಾಕು ಸೇವನೆ ಮಾಡುವುದು ಸಹ ಪ್ರಯಾಣಿಕರಿಗೆ ತೊಂದರೆಯನ್ನು ಉಂಟು ಮಾಡುತ್ತದೆ. ಅದೇ ರೀತಿ, ಹಿರಿಯ ನಾಗರಿಕರಿಗೆ, ಗರ್ಭಿಣಿಯರಿಗೆ, ಅಂಗವಿಕಲರಿಗೆ ಮತ್ತು ಅಗತ್ಯವಿರುವವರಿಗೆ ಮೀಸಲು ಆಸನಗಳನ್ನು ಬಿಟ್ಟುಕೊಡುವುದು ಎಲ್ಲರ ಕರ್ತವ್ಯವಾಗಿದೆ. ಇದನ್ನು ಉಲ್ಲಂಘಿಸಿದರೆ ದಂಡ ವಿಧಿಸಲಾಗುವುದು ಎಂದು ಬಿಎಂಆರ್‌ಸಿಎಲ್‌ ಎಚ್ಚರಿಕೆ ನೀಡಿದೆ.

ಇಬ್ಬರು ಗೃಹ ರಕ್ಷಕರನ್ನು ಒಳಗೊಂಡ (ಹೋಮ್ ಗಾರ್ಡ್‌) ವಿಶೇಷ ತಂಡಗಳನ್ನು ಮೆಟ್ರೋ ರೈಲುಗಳಲ್ಲಿ ನಿಯೋಜಿಸಿ, ಪ್ರಯಾಣಿಕರಿಗೆ ತಿಳಿವಳಿಕೆ ನೀಡುವ ಹಾಗೂ ಜಾಗೃತಿ ಮೂಡಿಸುವ ಕಾರ್ಯ ನಡೆಸಲಾಗಿದೆ.

ಒಂದು ವರ್ಷದಲ್ಲಿ ಲಕ್ಷ ಜನರಿಗೆ ಎಚ್ಚರಿಕೆ !

ಕಳೆದ ಒಂದು ವರ್ಷದಲ್ಲಿ ರೈಲಿನಲ್ಲಿ 57,538 ಪ್ರಯಾಣಿಕರು ಜೋರಾಗಿ ಸಂಗೀತ ಕೇಳುವುದನ್ನು ಪತ್ತೆ ಮಾಡಿ ನಿಲ್ಲಿಸುವಂತೆ ಸೂಚಿಸಲಾಗಿದೆ. ಮೀಸಲಾಗಿದ್ದ ಆಸನಗಳನ್ನು ಅತಿಕ್ರಮಿಸಿದ್ದ 37,038 ಪ್ರಯಾಣಿಕರಿಗೆ ಎಚ್ಚರಿಕೆ ನೀಡಿ ಅಗತ್ಯವಿರುವವರಿಗೆ ಮೀಸಲು ಆಸನಗಳನ್ನು ಭದ್ರತಾ ಸಿಬ್ಬಂದಿ ಕೊಡಿಸಿದ್ದಾರೆ. ಜತೆಗೆ 1,907 ಪ್ರಯಾಣಿಕರು ರೈಲುಗಳೊಳಗೆ ಆಹಾರ ಸೇವಿಸುತ್ತಿರುವಾಗ ಪತ್ತೆ ಮಾಡಿದ್ದಾರೆ. ಜತೆಗೆ ಹಲವರಿಗೆ ದಂಡ ವಿಧಿಸಲಾಗಿದೆ. ಇನ್ನು ರೈಲಿನ ಒಳಗಡೆ ಗುಟ್ಕಾ, ಪಾನ್‌ ಸೇರಿ ತಂಬಾಕು ಉತ್ಪನ್ನ ಸೇವನೆ ಮಾಡುತ್ತಿದ್ದ 1,677 ಜನರನ್ನು ಕಂಡು ಹಿಡಿದು ಅವರಿಗೆ ಎಚ್ಚರಿಕೆ ನೀಡಲಾಗಿದೆ.

ರೈಲುಗಳೊಳಗೆ, ಸಂಗೀತ ಕೇಳುವಾಗ ಇಯರ್‌ಫೋನ್‌ ಬಳಸುವುದು, ಅಗತ್ಯವಿರುವವರಿಗೆ ಮೀಸಲು ಆಸನ ನೀಡುವುದು, ಆಹಾರ ಸೇವನೆ ಮಾಡದಿರುವುದು ಮತ್ತು ತಂಬಾಕು ಸೇವನೆ ಮಾಡದಿರುವುದು ಕಡ್ಡಾಯ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

ಯಾವ್ಯಾವ ಪ್ರಕರಣಗಳು?

- 57,538 ಪ್ರಯಾಣಿಕರು ಜೋರಾಗಿ ಹಾಡು ಕೇಳುವುದು ಪತ್ತೆ

-37,038 ಪ್ರಯಾಣಿಕರಿಂದ ವೃದ್ಧರು,ಅಂಗವಿಕಲರ ಆಸನ ಅತಿಕ್ರಮಣ

-1,907 ಪ್ರಯಾಣಿಕರಿಂದ ರೈಲುಗಳೊಳಗೆ ಆಹಾರ ಸೇವನೆ ಪತ್ತೆ

-1,677 ಪ್ರಯಾಣಿಕರಿಂದ ಗುಟ್ಕಾ, ಪಾನ್‌ ಪದಾರ್ಥ ಸೇವನೆ

PREV
Read more Articles on
click me!

Recommended Stories

ಚಂದಿರನ ಮೇಲೆ ಮನೆ ಕಟ್ಟಲು ಬೆಂಗಳೂರಿನ ಮಣ್ಣೇ ಚೆಂದ: ಗಗನಯಾತ್ರಿ ಶುಭಾಂಶು ಶುಕ್ಲಾ
ಮಲಪ್ರಭಾ ಡ್ಯಾಂನಿಂದ ಕೃಷಿಗೆ ಹರಿಸುವ ನೀರು ಬಂದ್‌ ಮಾಡುವ ದಿನಾಂಕ ಪ್ರಕಟಿಸಿದ ಇಲಾಖೆ