ಬೆಂಗಳೂರಿನಲ್ಲಿ ಮೇ 5ರ ಶುಕ್ರವಾರ ಎಲ್ಲ ಮಾದರಿಯ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟವನ್ನು ನಿಷೇಧಿಸಿ ಬಿಬಿಎಂಪಿ ಆದೇಶ ಹೊರಡಿಸಿದೆ.
ಬೆಂಗಳೂರು (ಮೇ 3): ಬುದ್ಧ ಪೂರ್ಣಿಮೆ ಪ್ರಯುಕ್ತ ಪ್ರಾಣಿ ವಧೆ ಮತ್ತು ಮಾಂಸ ಮಾರಾಟ ನಿಷೇಧಿಸಿ ಬಿಬಿಎಂಪಿ ಆದೇಶ ಹೊರಡಿಸಿದೆ. ಮೇ 5ರ ಶುಕ್ರವಾರದಂದು ಬುದ್ಧ ಪೂರ್ಣಿಮೆ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ಕಸಾಯಿಖಾನೆಯಲ್ಲಿ ಪ್ರಾಣಿವಧೆ ಹಾಗೂ ಮಾರಾಟ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಬಿಬಿಎಂಪಿ ಪಶುಪಾಲನೆ ವಿಭಾಗದ ಜಂಟಿ ನಿರ್ದೇಶಕರಿಂದ ಆದೇಶ ಹೊರಡಿಸಿದ್ದಾರೆ.
ಪ್ರಾಣಿ ವಧೆ ಮಾಡಿದರೆ ಲೈಸೆನ್ಸ್ ರದ್ದು: ಬಿಬಿಎಂಪಿ ವ್ಯಾಪ್ತಿಯ ಕಾಸಾಯಿಖಾನೆಯಲ್ಲಿ ಪ್ರಾಣಿವಧೆ ಹಾಗೂ ಮಾರಾಟ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಬಿಬಿಎಂಪಿ ಪಶುಪಾಲನೆ ವಿಭಾಗದ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಮಾಂಸದ ಅಂಗಡಿಗಳನ್ನು ತೆರೆದಿದ್ದಲ್ಲಿ ಪಾಲಿಕೆಯಿಂದ ಅವರ ಲೈಸೆನ್ಸ್ ರದ್ದು ಪಡಿಸಿ, ಸರ್ಕಾರದ ನಿಯಮಗಳನ್ವಯ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಪಾಲಿಕೆಯ ಮುಖ್ಯ ಪಶುವೈದ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೇ 10 ರಂದು ನಂದಿ ಗಿರಿಧಾಮಕ್ಕೆ ಪ್ರವೇಶ ನಿಷೇಧ
ನಂದಿ ಬೆಟ್ಟಕ್ಕೆ ಪ್ರವಾಸಿಗರ ನಿಷೇಧ: ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ಹಿನ್ನೆಲೆಯಲ್ಲಿ ಮೇ 10 ರಂದು ಮತದಾನ ನಡೆಯಲಿದೆ. ಈ ವೇಳೆ ಎಲ್ಲ ಮತದಾರರು ಕೂಡ ಕಡ್ಡಾಯವಾಗಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕಾದ ಉದ್ದೇಶದಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗಿರಿಧಾಮಕ್ಕೆ ಮೇ 10ರಂದು ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಲಾಗಿದೆ. ರಾಜ್ಯದಲ್ಲಿ ಬೆಂಗಳೂರು ಸೇರಿದಂತೆ ಎಲ್ಲೆಡೆ ಮತದಾನ ಪ್ರಮಾಣವನ್ನು ಹೆಚ್ಚಿಸಲು ಚುನಾವಣಾ ಆಯೋಗ ಹೆಚ್ಚು ಜಾಗೃತಿಯನ್ನು ಮೂಡಿಸುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ನಿವಾಸಿಗಳು ಒಂದು ದಿನ ರಜೆ ಸಿಕ್ಕರೂ ಕೂಡ ಪಕ್ಕದಲ್ಲಿಯೇ ಇರುವ ನಂದಿ ಗಿರಿಧಾಮಕ್ಕೆ ಪ್ರವಾಸಕ್ಕೆ ಹೋಗುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಆದರೆ, ಮತದಾನ ಪ್ರಕ್ರಿಯೆ ದಿನವೂ ಕೂಡ ಜನರು ಮತದಾನದಲ್ಲಿ ಭಾಗವಹಿಸುವುದು ಬಿಟ್ಟು ನಂದಿ ಗಿರಿಧಾಮಕ್ಕೆ ಬರಬಹುದು ಎಂದು ನಿರೀಕ್ಷಿಸಿ, ಮತದಾನದ ದಿನದಂದು ಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ನಾನು 15 ವರ್ಷ ಸಾಕಿದ್ದ ಗಿಣಿನಾ ಕಾಂಗ್ರೆಸ್ ಕಿತ್ಕೊಂಡಿದೆ: ಜನರೇ ಹದ್ದಾಗಿ ಕುಕ್ಕುತಾರೆ!
ಬೆಳಗ್ಗೆ 5 ರಿಂದ ರಾತ್ರಿ 8 ಗಂಟೆವರೆಗೂ ಪ್ರವೇಶವಿಲ್ಲ: ಮತದಾನ ಪ್ರಕ್ರಿಯೆಯಲ್ಲಿ ಮತದಾರರೆಲ್ಲರೂ ಕಡ್ಡಾಯವಾಗಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕೆಂಬ ಚುನಾವಣಾ ಆಯೋಗದ ನಿರ್ದೇಶನ ಮತ್ತು ಸಾರ್ವಜನಿಕರ ಹಿತದೃಷ್ಠಿಯಿಂದ ಚಿಕ್ಕಬಳ್ಳಾಪುರ ತಾಲ್ಲೂಕಿನ ಪ್ರಸಿದ್ದ ಪ್ರವಾಸಿ ತಾಣವಾದ ನಂದಿ ಗಿರಿಧಾಮಕ್ಕೆ ಮೇ 10 ರಂದು ಸಾರ್ವಜನಿಕ ಪ್ರವೇಶಕ್ಕೆ ನಿಷೇಧವನ್ನು ವಿಧಿಸುವುದು ಅವಶ್ಯಕತೆಯಿದೆ. ದಂಡ ಸಂಹಿತೆ ಪ್ರಕ್ರಿಯೆ ಸಂಹಿತೆ (ಸಿ.ಆರ್.ಪಿ.ಸಿ) 1973 ಕಲಂ 144 ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಚಿಕ್ಕಬಳ್ಳಾಪುರ ತಾಲ್ಲೂಕಿನ ಪ್ರಸಿದ್ದ ಪ್ರವಾಸಿ ತಾಣವಾದ ನಂದಿ ಗಿರಿಧಾಮಕ್ಕೆ ಮೇ 10 ರಂದು ಬೆಳಿಗ್ಗೆ 5:00 ಗಂಟೆಯಿಂದ ರಾತ್ರಿ 08:00 ಗಂಟೆಯವರೆಗೆ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧವನ್ನು ವಿಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎನ್.ಎಂ.ನಾಗರಾಜ್ ಅವರು ಆದೇಶವನ್ನು ಹೊರಡಿಸಿರುತ್ತಾರೆ.