
ಬೆಂಗಳೂರು: ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಅತಿವೇಗ ಹಾಗೂ ಅಜಾಗರೂಕ ಚಾಲನೆ ಮಾಡಿದ ಲ್ಯಾಂಬೋರ್ಗಿನಿ ಕಾರು ಚಾಲಕನಿಗೆ ಕರ್ನಾಟಕ ಹೈಕೋರ್ಟ್ ಅಪರೂಪದ ರೀತಿಯ ಸಮುದಾಯ ಸೇವಾ ಶಿಕ್ಷೆಯನ್ನು ವಿಧಿಸಿದೆ. ಹಸಿರು ಬಣ್ಣದ ಲ್ಯಾಂಬೋರ್ಗಿನಿ ಕಾರಿನಲ್ಲಿ ತೆರಳಿ ರಸ್ತೆ ಗುಡಿಸಿ, ಸ್ವಚ್ಛತಾ ಕಾರ್ಯ ನಡೆಸಿ, ಅದೇ ಕಾರಿನಲ್ಲಿ ವಾಪಸ್ ಬರಬೇಕು ಎಂದು ಹೈಕೋರ್ಟ್ ಪೀಠ ಆದೇಶ ನೀಡಿರುವುದು ಗಮನಾರ್ಹವಾಗಿದೆ.
ಜನವರಿ 20ರಂದು ಆರೋಪಿಯಾಗಿರುವ ಚಿರಂತನ್ ಎಂಬಾತ ಲ್ಯಾಂಬೋರ್ಗಿನಿ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾವಣೆ ಮಾಡಿದ್ದ. ಈ ಹಿನ್ನೆಲೆಯಲ್ಲಿ ಕೆಂಗೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 281 ಹಾಗೂ ಐಎಂವಿ ಕಾಯ್ದೆಯ ಸೆಕ್ಷನ್ 177 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ಶುಕ್ರವಾರ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠದ ಮುಂದೆ ನಡೆಯಿತು. ವಿಚಾರಣೆ ವೇಳೆ ಆರೋಪಿ ಪರ ವಕೀಲರು, ತಮ್ಮ ಕ್ಲೈಂಟ್‌ಗೆ ತನ್ನ ತಪ್ಪಿನ ಬಗ್ಗೆ ಅರಿವಾಗಿ ಪಶ್ಚಾತ್ತಾಪ ಉಂಟಾಗಿದೆ ಎಂದು ತಿಳಿಸಿ, ಬಿಎನ್‌ಎಸ್ ಕಾಯ್ದೆಯಡಿ ಇರುವ ಅವಕಾಶಗಳನ್ನು ಪರಿಗಣಿಸಿ ಸಮುದಾಯ ಸೇವೆ ಪ್ರಕಾರ ಮಕ್ಕಳಿಗೆ ಸಂಚಾರ ನಿಯಮಗಳ ಪಾಠ ಮಾಡ್ತಾರೆ. ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಲು ಸಿದ್ಧನಿದ್ದಾನೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಆದರೆ ಸರ್ಕಾರದ ಪರ ವಕೀಲರಾದ ಎಸ್‌ಪಿಪಿ ಅವರು, ಸಂಚಾರ ನಿಯಮ ಉಲ್ಲಂಘನೆ ಮಾಡಿದ ವ್ಯಕ್ತಿಯೇ ಮಕ್ಕಳಿಗೆ ಪಾಠ ಮಾಡುವುದು ಎಷ್ಟು ಸಮಂಜಸ ಎಂಬ ಪ್ರಶ್ನೆ ಎತ್ತಿದರು. ಬದಲಾಗಿ, ಸಾರ್ವಜನಿಕ ಹಿತದೃಷ್ಟಿಯಿಂದ ಗಿಡಗಳನ್ನು ನೆಡುವಂತಹ ಕಾರ್ಯಗಳಲ್ಲಿ ತೊಡಗಿಸುವುದು ಹೆಚ್ಚು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಎರಡೂ ಕಡೆಯವರ ವಾದಗಳನ್ನು ಆಲಿಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠ, ವಿಭಿನ್ನ ರೀತಿಯ ಶಿಕ್ಷೆಯನ್ನು ವಿಧಿಸುವ ಮೂಲಕ ಗಮನ ಸೆಳೆದಿದೆ. ಆರೋಪಿಗೆ ತನ್ನದೇ ಲ್ಯಾಂಬೋರ್ಗಿನಿ ಕಾರಿನಲ್ಲಿ ತೆರಳಿ ರಸ್ತೆ ಗುಡಿಸಿ ಸ್ವಚ್ಛತಾ ಕಾರ್ಯ ನಡೆಸುವಂತೆ ಸೂಚಿಸಿದ್ದು, ಅದೇ ಕಾರಿನಲ್ಲಿ ಹಿಂದಿರುಗುವಂತೆ ಆದೇಶ ನೀಡಿದೆ. ಈ ಮೂಲಕ, ವೈಭವದ ಜೀವನಶೈಲಿ ಮತ್ತು ಸಾರ್ವಜನಿಕ ಜವಾಬ್ದಾರಿಯ ನಡುವಿನ ವ್ಯತ್ಯಾಸವನ್ನು ಅರಿಯುವಂತ ಸಂದೇಶ ನೀಡಲಾಗಿದೆ.
ಹೈಕೋರ್ಟ್ ಈ ಶಿಕ್ಷೆಯನ್ನು ಮೌಖಿಕವಾಗಿ ಘೋಷಿಸಿದ್ದು, ಸಮುದಾಯ ಸೇವೆ ನೆರವೇರಿಸಬೇಕಾದ ದಿನಾಂಕ ಮತ್ತು ಸಮಯವನ್ನು ಆದೇಶ ಪತ್ರದಲ್ಲಿ ವಿವರವಾಗಿ ಉಲ್ಲೇಖಿಸುವುದಾಗಿ ತಿಳಿಸಿದೆ. ಈ ಪ್ರಕರಣವು ಸಂಚಾರ ನಿಯಮ ಉಲ್ಲಂಘನೆಗೆ ವಿರುದ್ಧವಾಗಿ ಕಠಿಣ ಮತ್ತು ಸೃಜನಾತ್ಮಕ ಕ್ರಮಗಳನ್ನು ಕೈಗೊಳ್ಳುವ ಅಗತ್ಯತೆಯನ್ನು ಮತ್ತೊಮ್ಮೆ ಹೈಲೈಟ್ ಮಾಡಿದ್ದು, ಸಾರ್ವಜನಿಕರಲ್ಲಿ ಕಾನೂನು ಪಾಲನೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಸಂದೇಶ ನೀಡಿದೆ. ಜೊತೆಗೆ ಶ್ರೀಮಂತಿಕೆಯ ದರ್ಪದಲ್ಲಿ ಮರೆಯುವವರಿಗೆ ಜನಸಾಮಾನ್ಯರ ಜೀವನ ಅರ್ಥ ಮಾಡಿಸುವ ಒಂದು ಉತ್ತಮ ಕಾರ್ಯ ಇದಾಗಿದೆ ಎಂಬ ಅಭಿಪ್ರಾಯವಿದೆ.