
ಬೆಂಗಳೂರು (ಸೆ.01): ಸಿಲಿಕಾನ್ ಸಿಟಿ ಬೆಂಗಳೂರು ನಗರದಲ್ಲಿ ಮತ್ತೊಂದು ದುರಂತ ಘಟನೆ ಬೆಳಕಿಗೆ ಬಂದಿದೆ. ಸುದ್ದಗುಂಟೆ ಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ದುರ್ಗಾ ಲೇಡೀಸ್ ಪಿಜಿಯಲ್ಲಿ ಕಳೆದ 29 ನೇ ತಾರೀಖು ಮುಂಜಾನೆ 3 ಗಂಟೆಯ ಸುಮಾರಿಗೆ ಯುವತಿಗೆ ಲೈಂಗಿಕ ದೌರ್ಜನ್ಯ ನಡೆಸಿ, ಆಕೆಯ ಬಳಿಯಿದ್ದ ಹಣ ಕಳ್ಳತನ ಮಾಡಿದ ಘಟನೆ ನಡೆದಿದೆ.
ಘಟನೆಯ ವಿವರ ಪ್ರಕಾರ, ಮುಂಜಾನೆ 3.30ರ ಸುಮಾರಿಗೆ ಮುಖಕ್ಕೆ ಬಟ್ಟೆ ಸುತ್ತಿಕೊಂಡು ಮಹಿಳಾ ಪಿಜಿಯೊಳಗೆ ನುಗ್ಗಿದ ಕಳ್ಳ ಮೊದಲು ಎಲ್ಲ ಡೋರ್‌ಗಳನ್ನು ತಳ್ಳಿ ನೋಡಿದ್ದಾನೆ. ಆಗ ಒಂದು ರೂಮಿನ ಲಾಕ್ ಆಗದಿರುವುದನ್ನು ಗಮನಿಸಿ, ಆ ರೂಮಿನೊಳಗೆ ನುಗ್ಗಿದ್ದಾನೆ. ಆಗ ಕೆಲಸಕ್ಕೆ ಹೋಗಿದ್ದ ತನ್ನ ರೂಮೇಟ್ ತಡವಾಗಿ ಬಂದಿರಬಹುದು ಎಂದು ರೂಮಿನಲ್ಲಿದ್ದ ಯುವತಿ ಬಾಗಿಲು ಶಬ್ದವಾದರೂ ಸುಮ್ಮನೆ ಮಲಗಿದ್ದಾಳೆ. ಆಗ ಮಲಗಿದ್ದ ಯುವತಿಯ ಬಳಿ ಹೋಗಿದ್ದಾನೆ. ಆಗಲೂ ಆಕೆ ಎಚ್ಚರ ಆಗದಿದ್ದಾಗ, ಪುನಃ ಬಾಗಿಲು ತೆಗೆದು ಹೊರಗೆ ಬಂದಿದ್ದಾನೆ.
ಅಲ್ಲಿಂದ ಸೀದಾ ಬಂದು ಪಿಜಿಯಲ್ಲಿನ ಎಲ್ಲ ಮಹಡಿಗಳಲ್ಲಿರುವ ಎಲ್ಲಾ ರೂಮ್‌ಗಳ ಬಾಗಿಲುಗಳನ್ನು ಹೊರಗಿನಿಂದ ಲಾಕ್ ಮಾಡಿದ್ದಾನೆ. ಯಾರೇ ಕೂಗಿಕೊಂಡರೂ ಹೊರಗೆ ಬಾರದಂತೆ ಎಚ್ಚರಿಕೆವಹಿಸಿದ್ದಾನೆ. ಇದಾದ ನಂತರ ಸೀದಾ ಒಬ್ಬಂಟಿ ಯುವತಿ ಮಲಗಿದ್ದ ರೂಮಿನೊಳಗೆ ಆರೋಪಿಯು ಬಂದು ಒಳಗಿನಿಂದ ಬಾಗಿಲು ಹಾಕಿಕೊಂಡು ನೇರವಾಗಿ ಯುವತಿಯ ಹತ್ತಿರಕ್ಕೆ ಬಂದು ಮೈಕೈ ಮುಟ್ಟಲು ಯತ್ನಿಸಿದ್ದಾನೆ. ನಂತರ ಆಕೆಯ ಕಾಲನ್ನು ಸವರಲಾರಂಭಿಸಿದ್ದಾನೆ. ಇದರಿಂದ ಗಾಬರಿಗೊಂಡ ಯುವತಿ ಎಚ್ಚರಗೊಂಡು ಎದ್ದು ಯಾರೆಂದು ನೋಡಿದ್ದಾಳೆ.
ಆಗ ಯಾರೋ ಅಪರಿಚಿತ ತನ್ನ ರೂಮಿನೊಳಗೆ ಬಂದು ಮೈ-ಕೈ ಮುಟ್ಟುವುದನ್ನು ಗಮನಿಸಿ ವಿರೋಧಿಸಿದ್ದಾಳೆ. ಇದರಿಂದ ಆತಂಕಗೊಂಡ ಆರೋಪಿ ತನ್ನ ಬಳಿಯಿದ್ದ ಚಾಕು ಹೊರತೆಗೆದು, ಯುವತಿಗೆ ತೋರಿಸುತ್ತಾ ಕೂಗಿಕೊಂಡರೆ, ಕಿರುಚಾಡಿದರೆ, ಒದ್ದಾಡಿದರೆ ಚಾಕು ಚುಚ್ಚಿಬಿಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಆದರೂ, ಅಕ್ಕ-ಪಕ್ಕದ ರೂಮಿನವರ ಸಹಾಯಕ್ಕೆಂದು ಯುವತಿ ಕೂಗಿಕೊಂಡಿದ್ದಾಳೆ. ಇದಾದ ನಂತರ ಯುವತಿಯ ಕೆನ್ನೆಗೆ ಹೊಡೆದು, ಆಕೆಯನ್ನು ಎಳೆದಾಡಿದ್ದಾನೆ. ಈ ವೇಳೆ ಯುವತಿ ಕೂಗಾಟ ಜೋರಾಗಿದ್ದು, ಆತನ ಮೇಲೆಯೇ ತಿರುಗಿ ದಾಳಿ ಮಾಡಲು ಮುಂದಾಗಿದ್ದಾಳೆ.
ಭಯಗೊಂಡ ಆರೋಪಿ ಯುವತಿಗೆ ಕಿರುಕುಳ ನೀಡುವ ಉದ್ದೇಶ ಈಡೇರದಿದ್ದಾಗ, ತನ್ನ ಕುಲಕಸುಬು ಕಳ್ಳತನವನ್ನಾದರೂ ಮಾಡಿಕೊಂಡು ಹೋಗೋಣವೆಂದು ಟೇಬಲ್ ಮೇಲೆ ಇಟ್ಟಿದ್ದ ಪರ್ಸಿನೊಳಗಿದ್ದ 2,500 ರೂ. ಹಣವನ್ನು ಕಸಿದುಕೊಂಡು ಅಲ್ಲಿಂದ ಬಾಗಿಲು ತೆಗೆದು ಹೊರಬಂದಿದ್ದಾನೆ. ಇಷ್ಟಕ್ಕೂ ಬಿಡದ ಯುವತಿ ಆತನನ್ನು ಹೊರಗೆ ಬಂದಾಗಲೂ ಅಟ್ಟಿಸಿಕೊಂಡು ಕಿರುಚಾಡುತ್ತಾ, ಆತನ ಮೇಲೆ ದಾಳಿ ಮಾಡಿದ್ದಾಳೆ. ಆರೋಪಿ ಪುನಃ ಯುವತಿಯ ಬಳಿಗೆ ಹೋಗಿ ಹಲ್ಲೆಗೆ ಯತ್ನಿಸಿದ್ದಾನೆ. ಆಕೆ ಇನ್ನೂ ಜೋರಾಗಿ ಸಹಾಯಕ್ಕೆ ಕೂಗಿಕೊಂಡಿದ್ದು, ಕೂಡಲೇ ಆಕೆಯನ್ನು ಬಿಟ್ಟು ಪಿಜಿಯಿಂದ ಪರಾರಿ ಆಗಿದ್ದಾನೆ. ಈ ಘಟನೆಯ ಸಂಪೂರ್ಣ ದೃಶ್ಯ ಪಿಜಿ ಆವರಣದಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ಘಟನೆ ನಡೆದ ಬಳಿಕ ಯುವತಿ ಪೊಲೀಸರಿಗೆ ದೂರು ನೀಡಿದ್ದು, ಸುದ್ದಗುಂಟೆಪಾಳ್ಯ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಆದರೆ, ಘಟನೆ ನಡೆದ ಎರಡು ದಿನ ಕಳೆದರೂ ಆರೋಪಿ ಪತ್ತೆಯಾಗದಿರುವುದು ಸಂತ್ರಸ್ತ ಯುವತಿಗೆ ಆತಂಕ ಹೆಚ್ಚಿಸಿದೆ. ನಗರದ ಹೃದಯಭಾಗದಲ್ಲೇ ಪಿಜಿ ಗಳ ಸುರಕ್ಷತೆ ಪ್ರಶ್ನಾರ್ಹವಾಗಿರುವ ಈ ಘಟನೆ ವಿದ್ಯಾರ್ಥಿನಿಯರು, ವೃತ್ತಿಪರ ಯುವತಿಯರು ಹಾಗೂ ಅವರ ಪೋಷಕರಲ್ಲಿ ಭಾರೀ ಆತಂಕ ಉಂಟುಮಾಡಿದೆ. ಪೊಲೀಸರು ಆರೋಪಿ ಶೀಘ್ರ ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.