ಬೀದಿ ನಾಯಿಗಳಿಗೆ ಊಟ ಹಾಕಿದ್ದು ತಪ್ಪೆಂದು ಬೆಂಗಳೂರಿನಲ್ಲಿ ಮಹಿಳೆ ಮೇಲೆ ಗ್ಯಾಂಗ್ ಹಲ್ಲೆ!

Published : Sep 01, 2025, 03:44 PM IST
Stray dogs

ಸಾರಾಂಶ

ಚೂಡಸಂದ್ರದಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದ್ದ ಮಹಿಳೆಯ ಮೇಲೆ ಹಲ್ಲೆ ನಡೆದಿದೆ. ನೆರೆಹೊರೆಯವರ ಗುಂಪೊಂದು ಈ ಕೃತ್ಯ ಎಸಗಿದೆ ಎಂದು ಆರೋಪಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಘಟನೆ ಪ್ರಾಣಿ ಪ್ರಿಯರಲ್ಲಿ ಆತಂಕ ಮೂಡಿಸಿದೆ.

ಬೆಂಗಳೂರು: ನಗರ ದಕ್ಷಿಣ ಭಾಗದ ಚೂಡಸಂದ್ರ ಪ್ರದೇಶದಲ್ಲಿ ನಡೆದ ಕಳವಳಕಾರಿ ಘಟನೆಯೊಂದು ಸಾಮಾಜಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ನೇಹಾ ಪರ್ವೀನ್ ಎಂಬ ಮಹಿಳೆ, ನಿಯಮಿತವಾಗಿ ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದ್ದ ಕಾರಣಕ್ಕೇ, ತನ್ನದೇ ಅಪಾರ್ಟ್‌ಮೆಂಟ್ ಸಂಕೀರ್ಣದ ಕೆಲ ನಿವಾಸಿಗಳ ಗುಂಪಿನಿಂದ ಹಲ್ಲೆಗೆ ಒಳಗಾಗಿದ್ದಾರೆ ಆರೋಪ ಕೇಳಿಬಂದಿದೆ. ಘಟನೆ ಆಗಸ್ಟ್ 27ರಂದು ಸಂಜೆ 4 ಗಂಟೆ ಸುಮಾರಿಗೆ ನಡೆದಿದೆ. ಪ್ರತಿ ದಿನದಂತೆ ಬೀದಿ ನಾಯಿಗಳಿಗೆ ಆಹಾರ ನೀಡಲು ನೆರೆಹೊರೆಯ ಬೀದಿಗೆ ಬಂದಿದ್ದ ನೇಹಾ ಅವರ ಜೊತೆ ತಂದೆಯೂ ಇದ್ದರು. ನಾಲ್ಕು ವರ್ಷಗಳಿಂದ ಯಾವುದೇ ಸಮಸ್ಯೆ ಎದುರಾಗದೆ ಈ ಕಾರ್ಯ ಮಾಡುತ್ತಿದ್ದೇನೆ ಎಂದು ನೇಹಾ ಬೇಸರ ವ್ಯಕ್ತಪಡಿಸಿದರು.

ನೇಹಾ ಹೇಳಿಕೆಯ ಪ್ರಕಾರ, ನಾಯಿಗಳಿಗೆ ಆಹಾರ ನೀಡುತ್ತಿದ್ದ ವೇಳೆ ಕೆಲ ಅಪಾರ್ಟ್‌ಮೆಂಟ್ ನಿವಾಸಿಗಳು ಅವರ ಕಾರ್ಯಕ್ಕೆ ವಿರೋಧ ವ್ಯಕ್ತಪಡಿಸಿದರು. ಮಾತಿನ ಚಕಮಕಿ ದೈಹಿಕ ಹಲ್ಲೆಯ ಮಟ್ಟಕ್ಕೆ ತಲುಪಿದ್ದು, ಸಲೀಂ, ಸುಧಾ, ಕವಿತಾ, ಅಮೀನುಲ್ ರೆಹಮಾನ್ ಮತ್ತು ವಿನೋದ್ ಎಂಬ ಐವರು ನೆರೆಹೊರೆಯವರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಘಟನೆಯ ನಂತರ ನೇಹಾ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದ್ದು, ಪೊಲೀಸರು ಪ್ರಾಣಿ ಹಿಂಸೆ ತಡೆ ಕಾಯ್ದೆ ಹಾಗೂ ಇತ್ತೀಚೆಗೆ ಜಾರಿಗೆ ತಂದಿರುವ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಪ್ರಕರಣದ ತನಿಖೆ ಮುಂದುವರಿದಿದ್ದು, ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು ಹಾಗೂ ಸ್ಥಳದಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. “ಮಹಿಳೆಯ ಮೇಲೆ ಹಲ್ಲೆ ನಡೆದಿದೆ ಎಂಬ ದೂರು ನಮಗೆ ಸಿಕ್ಕಿದೆ. ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆ ಪ್ರಾಣಿ ಕಲ್ಯಾಣ ಕಾರ್ಯಕರ್ತರಲ್ಲಿ ಗಂಭೀರ ಕಳವಳ ಮೂಡಿಸಿದ್ದು, “ಬೀದಿ ಪ್ರಾಣಿಗಳಿಗೆ ಆಹಾರ ನೀಡುವ ನಾಗರಿಕರನ್ನು ಬೆಂಬಲಿಸಬೇಕು, ಶಿಕ್ಷಿಸಬಾರದು” ಎಂದು ಅವರು ಒತ್ತಾಯಿಸುತ್ತಿದ್ದಾರೆ.

2023-24ನೇ ವರ್ಷಕ್ಕೆ ಹೋಸಲಿದರೆ 2025ರಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗಿದೆ. ಹಾವಳಿ ಕೂಡ ತೀವ್ರವಾಗಿದೆ. ಚಿಕ್ಕಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರು ಓಡಾಡಲು ಭಯಪಡುತ್ತಿದ್ದಾರೆ.

ಇತ್ತೀಚೆಗೆ ಬೀದಿನಾಯಿ ಕಡಿತದ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್‌, ದೆಹಲಿ ವ್ಯಾಪ್ತಿಯಲ್ಲಿರುವ ಎಲ್ಲಾ ಬೀದಿನಾಯಿಗಳನ್ನು ಶೀಘ್ರದಲ್ಲೇ ಶೆಡ್‌ಗೆ ಸೇರಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಅಲ್ಲದೆ, ಇದನ್ನು ತಡೆಯುವ ಪ್ರಾಣಿಪ್ರಿಯರು ಅಥವಾ ಸ್ವಯಂಸೇವಾ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆಯೂ ಖಡಕ್‌ ಸೂಚನೆ ನೀಡಿತ್ತು. ಇದರ ಜೊತೆಗೆ ಕರ್ನಾಟಕದಲ್ಲಿ ಬೀದಿ ನಾಯಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆಯೂ ಒತ್ತಾಯ ಕೇಳಿ ಬಂದಿತ್ತು, ಬೆಂಗಳೂರಿನಲ್ಲಿ ಬೀದಿ ನಾಯಿಗಳಿಗೆ ಬಿರಿಯಾನಿ ಭಾಗ್ಯ ನೀಡುವ ಯೋಜನೆಯನ್ನು ರೂಪಿಸಲು ಚಿಂತನೆ ನಡೆಸಲಾಗಿದೆ ಇದು ಕೂಡ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

 

PREV
Read more Articles on
click me!

Recommended Stories

ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್
ರೈತನಿಗೆ ಪರಿಹಾರ ನೀಡದ ಶಿವಮೊಗ್ಗ ಡಿಸಿ ಕಚೇರಿ, ಕಾರು ಜಪ್ತಿಗೆ ಕೋರ್ಟ್ ಆದೇಶ! ಏನಿದು ಪ್ರಕರಣ?