Bengaluru: ಪ್ರೇಮಿಯೊಂದಿಗೆ ಸರಸಕ್ಕೆ ಸಾಲ ಮಾಡಿದ ಪ್ರೇಯಸಿ; ಪ್ರಶ್ನೆ ಮಾಡಿದ ಅಪ್ಪ-ಅಮ್ಮ-ತಂಗಿಯ ಕೊಲೆ ಮಾಡಿದ ಮಗಳು!

Published : Jun 23, 2026, 04:16 PM IST
Bengaluru family murder Case

ಸಾರಾಂಶ

ಬೆಂಗಳೂರಿನ ಕೆ.ಆರ್. ಪುರಂನಲ್ಲಿ, ಮಗಳೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ 30 ಲಕ್ಷ ರೂಪಾಯಿ ಸಾಲದ ವಿಚಾರಕ್ಕೆ ಹೆತ್ತ ತಂದೆ, ತಾಯಿ ಮತ್ತು ತಂಗಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾಳೆ. ಈ ಭೀಕರ ತ್ರಿವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು (ಜೂ.23) ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಾನವ ಸಂಬಂಧಗಳನ್ನೇ ಬೆಚ್ಚಿಬೀಳಿಸುವಂತಹ ಘೋರ ಕೃತ್ಯವೊಂದು ಬೆಳಕಿಗೆ ಬಂದಿದೆ. ಕೇವಲ ಹಣದ ಹಪಾಹಪಿ ಹಾಗೂ ಸಾಲದ ವಿಚಾರಕ್ಕೆ ಹೆತ್ತ ತಂದೆ, ತಾಯಿ ಮತ್ತು ಒಡಹುಟ್ಟಿದ ತಂಗಿಯನ್ನೇ ಮಗಳು ತನ್ನ ಪ್ರಿಯತಮನೊಂದಿಗೆ ಸೇರಿ ಅತ್ಯಂತ ಕ್ರೂರವಾಗಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಭೀಕರ ಘಟನೆ ಕೆ.ಆರ್. ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸೋಮಸುಂದರ್ (55), ಅವರ ಪತ್ನಿ ಮುತ್ತು ಲಕ್ಷ್ಮಿ (48) ಹಾಗೂ ಕಿರಿಯ ಮಗಳು ಸುಪ್ರಿಯಾ (20) ಕೊಲೆಯಾದ ದುರ್ದೈವಿಗಳು. ಸೋಮಸುಂದರ್ ಅವರ ಹಿರಿಯ ಮಗಳು ಶ್ವೇತಾ ಹಾಗೂ ಆಕೆಯ ಲಿವ್-ಇನ್ ಪಾರ್ಟ್‌ನರ್ ಕೆನತ್ ಈ ಭೀಕರ ತ್ರಿವಳಿ ಕೊಲೆ ಮಾಡಿದ ಪಾಪಿಗಳಾಗಿದ್ದಾರೆ.

ಕೊಲೆಗೆ ಕಾರಣವಾಗಿದ್ದು 30 ಲಕ್ಷ ಸಾಲದ ನೋಟಿಸ್!

ಪೊಲೀಸ್ ಮೂಲಗಳ ಪ್ರಕಾರ, ಶ್ವೇತಾ ಹಾಗೂ ಆಕೆಯ ಪ್ರಿಯತಮ ಕೆನತ್ ಕಳೆದ ಒಂದೂವರೆ ತಿಂಗಳಿಂದ ಕೆ.ಆರ್. ಪುರಂನ ಭಟ್ರಹಳ್ಳಿಯ ವೈಟ್ ಪರ್ಲ್ ಸಿಟಿ ಲೇಔಟ್‌ನಲ್ಲಿರುವ 'ಸಾಯಿ ಗ್ರೀನ್ ಅಪಾರ್ಟ್‌ಮೆಂಟ್'ನಲ್ಲಿ ಲೀವ್-ಇನ್ ರಿಲೇಶನ್‌ಶಿಪ್‌ನಲ್ಲಿದ್ದರು. ಇವರಿಬ್ಬರ ಸಂಬಂಧಕ್ಕೆ ಪೋಷಕರ ತೀವ್ರ ವಿರೋಧವಿತ್ತು. ಇದರ ನಡುವೆ ಶ್ವೇತಾ ತನ್ನ ಪ್ರಿಯತಮ ಕೆನತ್ ಜೊತೆ ಸೇರಿ ಸುಮಾರು 30 ಲಕ್ಷ ರೂಪಾಯಿಗೂ ಅಧಿಕ ಸಾಲ ಮಾಡಿಕೊಂಡಿದ್ದಳು. ಶ್ವೇತಾ ಹೆಸರಿನಲ್ಲಿದ್ದ ಈ ಸಾಲದ ನೋಟಿಸ್ ಮಾರತ್‌ಹಳ್ಳಿಯಲ್ಲಿದ್ದ ತಂದೆ-ತಾಯಿಯ ಮನೆಗೆ ತಲುಪಿತ್ತು. 'ಯಾಕಮ್ಮಾ ಇಷ್ಟೊಂದು ಸಾಲ ಮಾಡಿದ್ದೀಯಾ?' ಎಂದು ಪೋಷಕರು ಪ್ರಶ್ನಿಸಿದ್ದೇ ಇವರಿಬ್ಬರ ಆಕ್ರೋಶಕ್ಕೆ ಕಾರಣವಾಗಿತ್ತು.

ಪ್ಲಾಟ್‌ಗೆ ಕರೆಸಿಕೊಂಡು ರಕ್ತಪಿಪಾಸುಗಳಾದ ಪ್ರೇಮಿಗಳು!

ಸಾಲದ ನೋಟಿಸ್ ವಿಷಯವಾಗಿ ಮಾತನಾಡಲು ಶ್ವೇತಾ ತನ್ನ ತಂದೆ-ತಾಯಿಯನ್ನು ತಾನು ವಾಸವಿದ್ದ ಅಪಾರ್ಟ್‌ಮೆಂಟ್‌ಗೆ ಕರೆಸಿಕೊಂಡಿದ್ದಳು. ಅಪಾರ್ಟ್‌ಮೆಂಟ್ ಸೆಕ್ಯುರಿಟಿಗೆ ತನ್ನ ಪೋಷಕರು ಬರುತ್ತಿರುವ ಬಗ್ಗೆ ಮೊದಲೇ ಮಾಹಿತಿ ನೀಡಿದ್ದಳು. ಅದರಂತೆ ನಿನ್ನೆ ಸಂಜೆ ತಂದೆ ಸೋಮಸುಂದರ್, ತಾಯಿ ಮುತ್ತು ಲಕ್ಷ್ಮಿ ಹಾಗೂ ತಂಗಿ ಸುಪ್ರಿಯಾ ಸಾಯಿ ಗ್ರೀನ್ ಅಪಾರ್ಟ್‌ಮೆಂಟ್‌ಗೆ ಬಂದಿದ್ದಾರೆ.

ಆ ಸಮಯದಲ್ಲಿ ತಂದೆ ಮತ್ತು ತಂಗಿ ಯಾವುದೋ ಕೆಲಸಕ್ಕೆ ಹೊರಗೆ ಹೋದಾಗ, ಮನೆಯಲ್ಲಿ ತಾಯಿ ಮುತ್ತು ಲಕ್ಷ್ಮಿ ಮಾತ್ರ ಇದ್ದರು. ಈ ವೇಳೆ ಸಾಲದ ವಿಚಾರವಾಗಿ ತಾಯಿ ಮತ್ತು ಮಗಳ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಕೋಪೋದ್ರಿಕ್ತರಾದ ಶ್ವೇತಾ ಮತ್ತು ಕೆನತ್ ತಾಯಿ ಮುತ್ತು ಲಕ್ಷ್ಮೀಯನ್ನು ಮಚ್ಚಿನಿಂದ ಭೀಕರವಾಗಿ ಕೊಚ್ಚಿ ಕೊಂದಿದ್ದಾರೆ. ನಂತರ ಸಾಕ್ಷ್ಯ ನಾಶಪಡಿಸಲು ಬಾತ್ ರೂಮ್‌ನಲ್ಲಿ ರಕ್ತದ ಕಲೆಗಳನ್ನು ತೊಳೆದಿದ್ದಾರೆ.

ತಂಗಿಯ ಕೈ ಹಿಡಿದ ಶ್ವೇತಾ, ಮಚ್ಚಿನಿಂದ ಇರಿದ ಕೆನತ್!

ಅಷ್ಟರಲ್ಲೇ ಹೊರಗೆ ಹೋಗಿದ್ದ ತಂದೆ ಸೋಮಸುಂದರ್ ಹಾಗೂ ತಂಗಿ ಸುಪ್ರಿಯಾ ರೂಮಿಗೆ ವಾಪಸ್ ಬಂದಿದ್ದಾರೆ. ಕಣ್ಣೆದುರೇ ತಾಯಿಯ ಹೆಣ ಬಿದ್ದಿರುವುದನ್ನು ಕಂಡು ಅವರು ದಿಕ್ಕಾಪಾಲಾಗಿದ್ದಾರೆ. ಈ ವೇಳೆ ಕ್ರೂರಿಯಾದ ಶ್ವೇತಾ, ತನ್ನ ಸ್ವಂತ ತಂಗಿ ಸುಪ್ರಿಯಾ ತಪ್ಪಿಸಿಕೊಳ್ಳದಂತೆ ಆಕೆಯ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾಳೆ. ಪ್ರಿಯತಮ ಕೆನತ್ ಮಚ್ಚಿನಿಂದ ಸುಪ್ರಿಯಾಳನ್ನು ಅಮಾನವೀಯವಾಗಿ ಕೊಚ್ಚಿ ಕೊಂದಿದ್ದಾನೆ.

ಘಟನೆಯ ಭೀಕರತೆ: ತಾಯಿ, ತಂಗಿಯ ಹತ್ಯೆ ಕಂಡು ತಂದೆ ಸೋಮಸುಂದರ್ ಪ್ರಾಣಭಯದಿಂದ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ತಕ್ಷಣವೇ ಅಪಾರ್ಟ್‌ಮೆಂಟ್‌ನವರು ಪೊಲೀಸ್ ತುರ್ತು ಸಂಖ್ಯೆ 112 ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಸೋಮಸುಂದರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಪೊಲೀಸರ ಭೇಟಿ, ತನಿಖೆ ತೀವ್ರ

ನಿನ್ನೆ ರಾತ್ರಿ ಸುಮಾರು 9 ಗಂಟೆಯ ಸುಮಾರಿಗೆ ಈ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ ಎಂದು ಅಪಾರ್ಟ್‌ಮೆಂಟ್ ಸೆಕ್ಯುರಿಟಿ ಸಿಬ್ಬಂದಿ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಕೆ.ಆರ್. ಪುರಂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಆರೋಪಿಗಳಾದ ಶ್ವೇತಾ ಹಾಗೂ ಕೆನತ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ. ಹೆತ್ತ ಕರುಳನ್ನೇ ಇರಿದು ಕೊಂದ ಮಗಳ ಕ್ರೌರ್ಯಕ್ಕೆ ಇಡೀ ಸಿಲಿಕಾನ್ ಸಿಟಿ ಬೆಚ್ಚಿಬಿದ್ದಿದೆ.

PREV
Read more Articles on
click me!

Recommended Stories

ದಿಢೀರ್ ಕುಸಿದ ಅಡಕೆ ಧಾರಣೆ: ಬರಗಾಲದಲ್ಲಿಯೂ ಕಷ್ಟಪಟ್ಟು ಬೆಳೆದ ಅಡಿಕೆ ಬೆಲೆ ₹12 ಸಾವಿರ ಕುಸಿತ
ರಾಜ್ಯದಲ್ಲಿ ಭೀಕರ ಬರಗಾಲದ ನಡುವೆಯೂ 4 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್, ಹಲವೆಡೆ ಭಾರಿ ಮಳೆ ಮುನ್ಸೂಚನೆ!