ಕೆಲಸಕ್ಕೆ ರಜೆ ಹಾಕಿದ ಯುವತಿಗೆ ರೋಡಲ್ಲೇ ಬಟ್ಟೆ ಬಿಚ್ಚಿ ಹೊಡಿತೀನೆಂದ ಮಾಲೀಕ; ಆರೋಪಿ ಸೈಯದ್ ಪೊಲೀಸರ ವಶ!

Published : Jan 24, 2026, 12:40 PM IST
Bengaluru Cyber center Owner

ಸಾರಾಂಶ

ಕೆಂಗೇರಿಯಲ್ಲಿ, ಐದು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಯುವತಿ ರಜೆ ಹಾಕಿದ್ದಕ್ಕೆ ಸೈಬರ್ ಸೆಂಟರ್ ಮಾಲೀಕ ಸೈಯದ್ ಸಾರ್ವಜನಿಕವಾಗಿ ಅಶ್ಲೀಲ ಪದಗಳಿಂದ ನಿಂದಿಸಿ, ಪ್ರಾಣ ಬೆದರಿಕೆ ಹಾಕಿದ್ದಾನೆ. ಸ್ಥಳೀಯರ ಮಧ್ಯಪ್ರವೇಶದಿಂದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರು (ಜ.24): ಐದು ವರ್ಷದಿಂದ ಒಂದೇ ಕಡೆ ಕೆಲಸ ಮಾಡುತ್ತಿದ್ದರೂ, ಕೆಲಸಕ್ಕೆ ರಜೆ ಹಾಕಿದ ವಿಷಯಕ್ಕೆ ಸಂಬಂಧಿಸಿದಂತೆ ಸೈಬರ್ ಸೆಂಟರ್ ಮಾಲೀಕನೋರ್ವ ಯುವತಿಗೆ ಅಶ್ಲೀಲ ಪದಗಳಿಂದ ನಿಂದಿಸಿ, ಪ್ರಾಣ ಬೆದರಿಕೆ ಹಾಕಿರುವ ಆಘಾತಕಾರಿ ಘಟನೆ ರಾಜಧಾನಿಯ ಕೆಂಗೇರಿಯಲ್ಲಿ ನಡೆದಿದೆ. ಯುವತಿಯ ಸ್ವಾಭಿಮಾನಕ್ಕೆ ಧಕ್ಕೆ ತರುವ ರೀತಿಯಲ್ಲಿ ಮಾತನಾಡಿದ ಮುಸ್ಕಾನ್ ಟೈಮ್ಸ್ ಸೈಬರ್ ಸೆಂಟರ್ ಮಾಲೀಕ ಸೈಯದ್‌ನನ್ನು ಕೆಂಗೇರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಘಟನೆಯ ವಿವರ

ಕಳೆದ ಐದು ವರ್ಷಗಳಿಂದ ಲಕ್ಷ್ಮಿ ಎಂಬ ಯುವತಿ ಕೆಂಗೇರಿಯಲ್ಲಿರುವ ಸೈಯದ್ ಎಂಬುವವರಿಗೆ ಸೇರಿದ 'ಮುಸ್ಕಾನ್ ಟೈಮ್ಸ್' ಸೈಬರ್ ಸೆಂಟರ್‌ನಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದರು. ಆದರೆ, ವೈಯಕ್ತಿಕ ಕಾರಣಗಳಿಂದಾಗಿ ಲಕ್ಷ್ಮಿ ಅವರು ಕಳೆದ ಕೆಲವು ದಿನಗಳಿಂದ ಕೆಲಸಕ್ಕೆ ಗೈರಾಗಿದ್ದರು. ಇದರಿಂದ ತೀವ್ರವಾಗಿ ಕೆರಳಿದ್ದ ಮಾಲೀಕ ಸೈಯದ್, ಯುವತಿಯ ವಿರುದ್ಧ ದ್ವೇಷ ಸಾಧಿಸಲು ಶುರು ಮಾಡಿದ್ದ ಎನ್ನಲಾಗಿದೆ.

ನಡುರಸ್ತೆಯಲ್ಲಿ ಉದ್ದಟತನ

ಜನವರಿ 22 ರಂದು ರಾತ್ರಿ ಸುಮಾರು 7:30 ರ ಹೊತ್ತಿಗೆ ಲಕ್ಷ್ಮಿ ಅವರು ರಸ್ತೆಯಲ್ಲಿ ಹೋಗುತ್ತಿದ್ದಾಗ, ಅವರನ್ನು ಅಡ್ಡಗಟ್ಟಿದ ಸೈಯದ್ ಸಾರ್ವಜನಿಕವಾಗಿ ನಿಂದಿಸಲು ಶುರು ಮಾಡಿದ್ದಾನೆ. 'ನಿನಗೆ ಬಟ್ಟೆ ಬಿಚ್ಚಿ ಹೊಡೆಯುತ್ತೇನೆ, ರಸ್ತೆಯಲ್ಲಿಯೇ ಕತ್ತರಿಸಿ ಹಾಕುತ್ತೇನೆ' ಎಂಬ ಅತಿ ವಿಕೃತ ಮಾತುಗಳನ್ನಾಡಿ ಯುವತಿಯನ್ನು ಬೆದರಿಸಿದ್ದಾನೆ. '"ನಿನ್ನಿಂದ ನನ್ನ ದುಡ್ಡೆಲ್ಲಾ ಹೋಯಿತು, ನನ್ನ ತಲೆ ಕೆಡಿಸಬೇಡ' ಎಂದು ಕೂಗಾಡಿ ಅಸಭ್ಯವಾಗಿ ವರ್ತಿಸಿದ್ದಾನೆ.

ಸ್ಥಳೀಯರ ಮಧ್ಯಪ್ರವೇಶ

ಸೈಯದ್ ಅರಚಾಟ ಮತ್ತು ಬೆದರಿಕೆ ಮಾತುಗಳನ್ನು ಕೇಳಿ ಸ್ಥಳದಲ್ಲಿ ಜಮಾಯಿಸಿದ ಸಾರ್ವಜನಿಕರು ಆತನ ವರ್ತನೆಯನ್ನು ಕಂಡು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಒಬ್ಬ ಮಹಿಳೆಯ ಜೊತೆ ವರ್ತಿಸುವ ರೀತಿ ಇದಲ್ಲ ಎಂದು ಬುದ್ಧಿ ಹೇಳಿದ ಸ್ಥಳೀಯರು, ಸೈಯದ್‌ನನ್ನು ತರಾಟೆಗೆ ತೆಗೆದುಕೊಂಡರು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಸ್ಥಳೀಯರೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನು ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಕೆಂಗೇರಿ ಪೊಲೀಸರು ಆರೋಪಿ ಸೈಯದ್‌ನನ್ನು ವಶಕ್ಕೆ ಪಡೆದಿದ್ದಾರೆ. ಯುವತಿಗೆ ಪ್ರಾಣ ಬೆದರಿಕೆ ಮತ್ತು ಮಾನಹಾನಿ ಮಾಡಿದ ಆರೋಪದಡಿ ಪ್ರಕರಣ ದಾಖಲಾಗಿದ್ದು, ಸದ್ಯದ ಮಾಹಿತಿಯ ಪ್ರಕಾರ ಆರೋಪಿಯು ಸ್ಟೇಷನ್ ಬೇಲ್ ಮೇಲೆ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಐದು ವರ್ಷಗಳ ಕಾಲ ದುಡಿದ ಸಿಬ್ಬಂದಿಯ ಬಗ್ಗೆ ಕಿಂಚಿತ್ತೂ ಗೌರವವಿಲ್ಲದೆ, ಮಾಲೀಕನೋರ್ವ ಇಷ್ಟು ಕೆಳಮಟ್ಟಕ್ಕೆ ಇಳಿದು ವರ್ತಿಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಸದ್ಯ ಕೆಂಗೇರಿ ಪೊಲೀಸರು ಈ ಕುರಿತು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

PREV
Read more Articles on
click me!

Recommended Stories

Vijayapura: 48 ಕೇಸ್‌ಗಳ 14 ಆರೋಪಿಗಳ ಬಂಧನ; ₹1.17 ಕೋಟಿ ಮೌಲ್ಯದ ಬಂಗಾರ, ನಗದು, ಕಾರು, ಬೈಕ್‌ ವಶ
ಪ್ರಾಮಾಣಿಕ ಫಾರ್ಮಾಸಿಸ್ಟ್ ಜೀವ ತೆಗೆದ ವಿಡಿಯೋ; ಅವಧಿ ಮುಗಿದ ಔಷಧಿ ಕೊಟ್ಟರೆಂದು ವಿಡಿಯೋ ಹರಿಬಿಟ್ಟ ಮೂವರು ಅರೆಸ್ಟ್!