
ಬೆಂಗಳೂರು (ಡಿ.26): ರಾಜಧಾನಿಯ ಕುಮಾರಸ್ವಾಮಿ (ಕೆ.ಎಸ್) ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಗತಿಪುರದಲ್ಲಿ ನಡೆದಿದ್ದ ಸ್ಟಾಫ್ ನರ್ಸ್ ಮಮತಾ (39) ಅವರ ಬರ್ಬರ ಹತ್ಯೆ ಪ್ರಕರಣವನ್ನು ಪೊಲೀಸರು ಕೇವಲ 24 ಗಂಟೆಗಳಲ್ಲಿ ಭೇದಿಸಿದ್ದಾರೆ. ಮಮತಾ ಅವರನ್ನು ಪ್ರೀತಿಸುತ್ತಿದ್ದ ಸಹೋದ್ಯೋಗಿ ಸುಧಾಕರ್ ಎಂಬಾತನೇ ಈ ಕೃತ್ಯ ಎಸಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಮೂಲತಃ ಚಿತ್ರದುರ್ಗದ ಹಿರಿಯೂರು ತಾಲೂಕಿನವರಾದ ಮಮತಾ, ಕಳೆದ ಒಂದು ವರ್ಷದಿಂದ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಇದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಸುಧಾಕರ್ ಎಂಬಾತನೊಂದಿಗೆ ಮಮತಾಗೆ ಸ್ನೇಹ ಉಂಟಾಗಿ, ಅದು ಪ್ರೀತಿಗೆ ತಿರುಗಿತ್ತು. ಮಮತಾ ಅವರಿಗಿಂತ ವಯಸ್ಸಿನಲ್ಲಿ ಚಿಕ್ಕವನಾಗಿದ್ದ ಸುಧಾಕರ್‌ಗೆ ಆಕೆಯ ನಿಜವಾದ ವಯಸ್ಸು ಆರಂಭದಲ್ಲಿ ತಿಳಿದಿರಲಿಲ್ಲ ಎನ್ನಲಾಗಿದೆ.
ಇತ್ತೀಚೆಗೆ ಸುಧಾಕರ್‌ನ ಕುಟುಂಬಸ್ಥರು ಆತನಿಗೆ ಬೇರೆ ಯುವತಿಯ ಜೊತೆ ಮದುವೆ ನಿಶ್ಚಯಿಸಿದ್ದರು. ಈ ವಿಷಯ ತಿಳಿದ ಮಮತಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. 'ನನ್ನನ್ನೇ ಮದುವೆಯಾಗಬೇಕು, ಇಲ್ಲದಿದ್ದರೆ ನಿನ್ನ ಹಾಗೂ ನಿನ್ನ ಕುಟುಂಬದವರ ಹೆಸರು ಬರೆದಿಟ್ಟು ಆತ್ಮ*ಹತ್ಯೆ ಮಾಡಿಕೊಳ್ಳುತ್ತೇನೆ. ಎಲ್ಲರೂ ಜೈಲಿಗೆ ಹೋಗುವಂತೆ ಮಾಡುತ್ತೇನೆ' ಎಂದು ಮಮತಾ ಸುಧಾಕರ್‌ಗೆ ಎಚ್ಚರಿಕೆ ನೀಡಿದ್ದರು. ಇದರಿಂದ ಹೆದರಿದ ಸುಧಾಕರ್, ಮಮತಾಳನ್ನು ತನ್ನ ದಾರಿಯಿಂದ ದೂರವಿಟ್ಟರೆ ಮಾತ್ರ ತಾನು ನೆಮ್ಮದಿಯಾಗಿರಲು ಸಾಧ್ಯ ಎಂದು ಭಾವಿಸಿ ಕೊಲೆಗೆ ಸಂಚು ರೂಪಿಸಿದ್ದನು.
ದಿನಾಂಕ 24ರಂದು ರಾತ್ರಿ ಮಮತಾ ಅವರ ಸ್ನೇಹಿತೆ ಊರಿಗೆ ಹೋಗಿದ್ದ ಸಂದರ್ಭದಲ್ಲಿ ಮಮತಾ ಒಬ್ಬರೇ ಇರುವುದನ್ನು ಖಚಿತಪಡಿಸಿಕೊಂಡ ಸುಧಾಕರ್ ಪ್ರಗತಿಪುರದ ಮನೆಗೆ ಬಂದಿದ್ದನು. ಈ ವೇಳೆ ಮದುವೆ ವಿಚಾರವಾಗಿ ಇಬ್ಬರ ನಡುವೆ ಮತ್ತೆ ಮಾತಿನ ಚಕಮಕಿ ನಡೆದಿದೆ. ಕೋಪಗೊಂಡ ಸುಧಾಕರ್, ಮನೆಯಲ್ಲಿದ್ದ ಚಾಕುವಿನಿಂದ ಮಮತಾ ಅವರ ಕತ್ತು ಸೀಳಿ ಸ್ಥಳದಿಂದ ಪರಾರಿಯಾಗಿದ್ದನು. ಮರುದಿನ ವಿಷಯ ಬೆಳಕಿಗೆ ಬಂದಾಗ ಕೆ.ಎಸ್ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸರ್ ಅವರ ಮಾರ್ಗದರ್ಶನದಲ್ಲಿ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಮಮತಾ ಅವರ ಮೊಬೈಲ್ ಸಿಡಿಆರ್ (CDR) ಮತ್ತು ಟವರ್ ಡಂಪ್ ವಿವರಗಳನ್ನು ಸಂಗ್ರಹಿಸಿದ್ದರು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಸುಧಾಕರ್ ಮನೆಗೆ ಬಂದು ಹೋಗಿರುವುದು ದೃಢಪಟ್ಟಿದೆ. ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಸುಧಾಕರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಒಟ್ಟಿನಲ್ಲಿ ಮದುವೆಯ ಒತ್ತಡ ಮತ್ತು ಬೆದರಿಕೆಗೆ ಹೆದರಿ ಯುವಕನೊಬ್ಬ ತನ್ನ ಪ್ರೇಯಸಿಯನ್ನೇ ಕೊಂದ ಘಟನೆ ನಗರದಲ್ಲಿ ಸಂಚಲನ ಮೂಡಿಸಿದೆ.