ಬಿಎಂಟಿಸಿ ಬಸ್ ಅಡ್ಡಗಟ್ಟಿ ಮಿಡಲ್ ಫಿಂಗರ್ ತೋರಿಸಿದ ಯುವಕ; ಪೊಲೀಸರು ಕೊಟ್ರು ನೋಡಿ ಟ್ವಿಸ್ಟೆಡ್ ಶಾಕ್!

Published : Mar 03, 2026, 07:08 PM IST
Bengaluru Road Rage on BMTC Bus

ಸಾರಾಂಶ

ಬೆಂಗಳೂರಿನ ಇಂದಿರಾನಗರದಲ್ಲಿ ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಬಿಎಂಟಿಸಿ ಬಸ್ ತಡೆದು, ಚಾಲಕನಿಗೆ ಅಸಭ್ಯವಾಗಿ ವರ್ತಿಸಿ ರಂಪಾಟ ಮಾಡಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ, ಬೆಂಗಳೂರು ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ದಂಡ ವಿಧಿಸಿದ್ದಾರೆ.

ಬೆಂಗಳೂರು (ಮಾ.03): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರಸ್ತೆ ಮೇಲಿನ ಆಕ್ರೋಶ ಅಥವಾ 'ರೋಡ್ ರೇಜ್' (Road Rage) ಪ್ರಕರಣಗಳು ದಿನೇ ದಿನೇ ಮಿತಿಮೀರುತ್ತಿವೆ. ಇತ್ತೀಚೆಗಷ್ಟೇ ಇಂದಿರಾನಗರದಲ್ಲಿ ಮದ್ಯವ್ಯಸನಿಯೊಬ್ಬ ಬಿಎಂಟಿಸಿ ಬಸ್ ಚಾಲಕನಿಗೆ ಅಡ್ಡಿಪಡಿಸಿ, ಅಸಭ್ಯವಾಗಿ ವರ್ತಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ಈ ವಿಡಿಯೋ ಆಧರಿಸಿ ತಕ್ಷಣವೇ ಕಾರ್ಯಪ್ರವೃತ್ತರಾದ ಬೆಂಗಳೂರು ನಗರ ಸಂಚಾರಿ ಪೊಲೀಸರು, ಆರೋಪಿಯನ್ನು ಪತ್ತೆಹಚ್ಚಿ ಬಿಸಿ ಮುಟ್ಟಿಸಿದ್ದಾರೆ.

ಘಟನೆಯಲ್ಲಿ ನಡೆದಿದ್ದೇನು?

ಬೆಂಗಳೂರಿನ ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಒಂದಾದ ಇಂದಿರಾನಗರದ ರಸ್ತೆಯಲ್ಲಿ ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಚಲಿಸುತ್ತಿದ್ದ ಬಿಎಂಟಿಸಿ (BMTC) ಬಸ್ ಅನ್ನು ತಡೆದು ನಿಲ್ಲಿಸಿದ್ದಾನೆ. ಬಸ್ ಮುಂದೆ ನಿಂತು ಚಾಲಕನಿಗೆ ಅಶ್ಲೀಲವಾಗಿ ಕೈಸನ್ನೆ ಮಾಡಿದ್ದಲ್ಲದೆ, ಮಧ್ಯದ ಬೆರಳು (Middle Finger) ತೋರಿಸಿ ಪ್ರಚೋದಿಸಲು ಯತ್ನಿಸಿದ್ದಾನೆ. ಅಷ್ಟೇ ಅಲ್ಲದೆ, ಅಡ್ಡಾದಿಡ್ಡಿಯಾಗಿ ಗಾಡಿ ಓಡಾಡಿಸುತ್ತಾ, ಗೂಂಡಾ ರೀತಿಯಲಲಿ ವರ್ತಿಸುತ್ತಾ ಸಾರ್ವಜನಿಕ ಸಾರಿಗೆಗೆ ಅಡ್ಡಿಪಡಿಸಿದ್ದಾನೆ. ಆತನ ಈ ಬೇಜವಾಬ್ದಾರಿಯುತ ವರ್ತನೆಯಿಂದಾಗಿ ಬಸ್‌ನಲ್ಲಿದ್ದ ಪ್ರಯಾಣಿಕರು ಹಾಗೂ ಇತರ ವಾಹನ ಸವಾರರು ಕೆಲಕಾಲ ಆತಂಕಕ್ಕೊಳಗಾಗಿದ್ದರು.

ಪೊಲೀಸರಿಗೆ ತಲುಪಿದ ದೂರು:

ಈ ಘಟನೆಯ ದೃಶ್ಯವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆಹಿಡಿದು, ಬೆಂಗಳೂರು ನಗರ ಪೊಲೀಸರು ಹಾಗೂ ಹಿರಿಯ ಅಧಿಕಾರಿಗಳಿಗೆ ಎಕ್ಸ್ (ಟ್ವಿಟರ್) ಮೂಲಕ ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದರು. 'ಸಾರ್ವಜನಿಕ ರಸ್ತೆಗಳಲ್ಲಿ ಮದ್ಯಪಾನ ಮಾಡಿ ಇಂತಹ ಅಸಭ್ಯ ವರ್ತನೆ ತೋರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ' ಎಂದು ನೆಟ್ಟಿಗರು ಆಗ್ರಹಿಸಿದ್ದರು.

ಪೊಲೀಸರ ಮಿಂಚಿನ ಕಾರ್ಯಾಚರಣೆ:

ಸಾಮಾಜಿಕ ಜಾಲತಾಣದಲ್ಲಿ ದೂರು ಬಂದ ಕೆಲವೇ ಗಂಟೆಗಳಲ್ಲಿ ಇಂದಿರಾನಗರ ಸಂಚಾರ ಪೊಲೀಸರು ಅಲರ್ಟ್ ಆಗಿದ್ದಾರೆ. ವಿಡಿಯೋ ಆಧಾರದ ಮೇಲೆ ಆರೋಪಿಯನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ. ಆತನಿಗೆ ಭಾರಿ ಮೊತ್ತದ ದಂಡ ವಿಧಿಸಿರುವುದಲ್ಲದೆ, ಇನ್ನು ಮುಂದೆ ಇಂತಹ ಕೃತ್ಯಗಳಲ್ಲಿ ತೊಡಗಬಾರದೆಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

 

ರೋಡ್ ರೇಜ್ ಮಾಡುವವರಿಗೆ ಪೊಲೀಸರ ವಾರ್ನಿಂಗ್:

ಈ ಘಟನೆಯ ಬೆನ್ನಲ್ಲೇ ಬೆಂಗಳೂರು ನಗರ ಪೊಲೀಸರು ಸಾರ್ವಜನಿಕರಿಗೆ ಕಟುವಾದ ಎಚ್ಚರಿಕೆಯನ್ನು ರವಾನಿಸಿದ್ದಾರೆ. 'ರಸ್ತೆಯ ಮೇಲಿನ ಆಕ್ರೋಶ (ರೋಡ್ ರೇಜ್) ಎನ್ನುವುದು ಒಂದು ಮನೋಧೋರಣೆಯಲ್ಲ; ಬದಲಾಗಿ ಅದು ಒಂದು ಗಂಭೀರ ಅಪರಾಧ. ರಸ್ತೆಗಳಲ್ಲಿ ನಿರ್ಲಕ್ಷ್ಯ ಮತ್ತು ಆಕ್ರಮಣಕಾರಿ ವರ್ತನೆಯ ಮೂಲಕ ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟುಮಾಡುವವರ ವಿರುದ್ಧ ಬೆಂಗಳೂರು ನಗರ ಪೊಲೀಸರು 'ಶೂನ್ಯ ಸಹಿಷ್ಣುತೆ' (Zero Tolerance) ನೀತಿಯನ್ನು ಅನುಸರಿಸುತ್ತಾರೆ. ಬಿಸಿಪಿ (BCP) ನಿಮ್ಮ ಪ್ರತಿಯೊಂದು ಚಲನವಲನವನ್ನು ಗಮನಿಸುತ್ತಿದೆ, ಎಚ್ಚರ!' ಎಂದು ಅಧಿಕಾರಿಗಳು ಸಂದೇಶ ನೀಡಿದ್ದಾರೆ.

ಸಾರ್ವಜನಿಕ ಆಸ್ತಿ ಮತ್ತು ಸಾರಿಗೆ ಸಿಬ್ಬಂದಿಯನ್ನು ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಮದ್ಯದ ಅಮಲಿನಲ್ಲಿ ಅಥವಾ ಆವೇಶದಲ್ಲಿ ರಸ್ತೆಗಳಲ್ಲಿ ರಂಪಾಟ ಮಾಡುವವರು ಜೈಲು ಪಾಲಾಗುವುದು ಗ್ಯಾರಂಟಿ ಎಂದು ಪೊಲೀಸರು ತಿಳಿಸಿದ್ದಾರೆ.

PREV
Read more Articles on
click me!

Recommended Stories

'ಗ್ರಾಮೀಣ ಜ್ಞಾನ ಸಮುಚ್ಚಯ' ಪುಸ್ತಕ ಲೋಕಾರ್ಪಣೆ: ರಾಜೇಂದ್ರಕುಮಾರ್ ಆಡಳಿತದ ಸಾಧನೆ ಕೊಂಡಾಡಿದ ಹೊರಟ್ಟಿ
ಚಂದ್ರ ಗ್ರಹಣದ ದಿನವೇ ಚಿಕ್ಕಮಗಳೂರಿನಲ್ಲಿ ಹೊತ್ತಿ ಉರಿದ ಸರ್ಕಾರಿ ಬಸ್: 32 ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪಾರು!