
ಬೆಂಗಳೂರು: ವಿದೇಶಿ ಪ್ರಜೆಗಳಿಗೆ ಮನೆ ಬಾಡಿಗೆ ನೀಡುವ ಸಂದರ್ಭದಲ್ಲಿ ಕಾನೂನುಬದ್ಧ ನಿಯಮಗಳನ್ನು ಪಾಲಿಸದ ಪ್ರಕರಣವೊಂದು ಕೊತ್ತನೂರಿನಲ್ಲಿ ಬೆಳಕಿಗೆ ಬಂದಿದೆ. ನಿಯಮ ಉಲ್ಲಂಘನೆ ಆರೋಪದ ಮೇಲೆ ಮನೆ ಮಾಲೀಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೊತ್ತನೂರು ಠಾಣಾ ವ್ಯಾಪ್ತಿಯಲ್ಲಿರುವ ಮನೆಯನ್ನು ರಿಯಾಜ್ ಹುಸೇನ್ ಎಂಬುವವರು ಬಾಡಿಗೆಗೆ ನೀಡಿದ್ದು, ಆ ಮನೆಯಲ್ಲಿ ಸುಡಾನ್ ದೇಶದ ಇಬ್ಬರು ವಿದೇಶಿ ಪ್ರಜೆಗಳು ವಾಸವಾಗಿದ್ದರು ಎಂದು ತಿಳಿದುಬಂದಿದೆ. ಆದರೆ, ವಿದೇಶಿ ಪ್ರಜೆಗಳಿಗೆ ಮನೆ ಬಾಡಿಗೆ ನೀಡಿದ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ಕಡ್ಡಾಯವಾಗಿ ನೀಡಬೇಕಾದ ಮಾಹಿತಿಯನ್ನು ಮನೆ ಮಾಲೀಕ ರಿಯಾಜ್ ನೀಡಿರಲಿಲ್ಲ ಎಂಬುದು ಪೊಲೀಸ್ ಪರಿಶೀಲನೆಯ ವೇಳೆ ಬೆಳಕಿಗೆ ಬಂದಿದೆ.
ಪೊಲೀಸರು ನಡೆಸಿದ ನಿಯಮಿತ ತಪಾಸಣೆಯ ವೇಳೆ ಈ ನಿಯಮ ಉಲ್ಲಂಘನೆ ಪತ್ತೆಯಾಗಿದ್ದು, ಇದರ ಹಿನ್ನೆಲೆಯಲ್ಲಿ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಫಾರಿನರ್ಸ್ ಆ್ಯಕ್ಟ್ ಅಡಿಯಲ್ಲಿ ಮನೆ ಮಾಲೀಕ ರಿಯಾಜ್ ಹುಸೇನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ವಿದೇಶಿ ಪ್ರಜೆಗಳಿಗೆ ಮನೆ ಬಾಡಿಗೆ ನೀಡುವ ಮನೆ ಮಾಲೀಕರು ಸ್ಥಳೀಯ ಪೊಲೀಸ್ ಠಾಣೆಗೆ ಮುಂಚಿತವಾಗಿ ಮಾಹಿತಿ ನೀಡುವುದು ಕಾನೂನಿನ ಪ್ರಕಾರ ಕಡ್ಡಾಯವಾಗಿದೆ. ಸಾರ್ವಜನಿಕ ಸುರಕ್ಷತೆ ಹಾಗೂ ಕಾನೂನು ಪಾಲನೆ ದೃಷ್ಟಿಯಿಂದ ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದು, ವಿದೇಶಿ ಪ್ರಜೆಗಳ ದಾಖಲೆಗಳು ಹಾಗೂ ವಾಸದ ವಿವರಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.