3 ತಿಂಗಳು ಬೆಂಗಳೂರಿನ ಗೂಡ್ಸ್‌ಶೆಡ್ ರಸ್ತೆ ಬಂದ್ : ಪರ್ಯಾಯ ಮಾರ್ಗವಿಲ್ಲಿದೆ

By Kannadaprabha NewsFirst Published Aug 22, 2021, 1:33 PM IST
Highlights
  • ಮೈಸೂರು ರಸ್ತೆಯಿಂದ ಮೆಜೆಸ್ಟಿಕ್ ಕಡೆಗೆ ಸಂಪರ್ಕ ಕಲ್ಪಿಸುವ ಗೂಡ್ಸ್ ಶೆಡ್  ರಸ್ತೆ
  • ಬಿಬಿಎಂಪಿ ವೈಟ್ ಟಾಪಿಂಗ್‌ ಕಾಮಗಾರಿ ಕೈಗೊಳ್ಳಲಿರುವ ಹಿನ್ನೆಲೆಯಲ್ಲಿ ಸದರಿ ರಸ್ತೆ ಬಂದ್
  • ಇಂದು ತಡರಾತ್ರಿಯಿಂದ  ಮುಂದಿನ 90 ದಿನಗಳು ಬಂದ್

ಬೆಂಗಳೂರು (ಆ.22): ಮೈಸೂರು ರಸ್ತೆಯಿಂದ ಮೆಜೆಸ್ಟಿಕ್ ಕಡೆಗೆ ಸಂಪರ್ಕ ಕಲ್ಪಿಸುವ ಗೂಡ್ಸ್ ಶೆಡ್  ರಸ್ತೆಯಲ್ಲಿ ಬಿಬಿಎಂಪಿ ವೈಟ್ ಟಾಪಿಂಗ್‌ ಕಾಮಗಾರಿ ಕೈಗೊಳ್ಳಲಿರುವ ಹಿನ್ನೆಲೆಯಲ್ಲಿ ಸದರಿ ರಸ್ತೆಯನ್ನು ಇಂದು ತಡರಾತ್ರಿಯಿಂದ  ಮುಂದಿನ 90 ದಿನಗಳು ಬಂದ್  ಮಾಡುತ್ತಿರುವುದರಿಂದ ವಾಹನ ಸಂಚಾರ ನಿಷೇಧಿಸಲಾಗಿದೆ. 

ಬಾಲಗಂಗಾಧರನಾಥ ಸ್ವಾಮಿಜಿ ಮೇಲ್ಸೇತುವೆಯ ಅಂಬೇಡ್ಕರ್‌ ಟೌನ್‌ ರ್ಯಾಂಪ್‌ನಿಂದ ಡಾ.ಟಿಸಿಎಂ ರಾಯನ್‌ ರಸ್ತೆಯ ಜಂಕ್ಷನ್ವರೆಗೆ 1.3 ಕಿಮೀ ಉದ್ದ ಗೂಡ್ಸ್ ಶೆಡ್  ರಸ್ತೆಗೆ ವೈಟ್ ಟಾಪಿಂಗ್‌ ಮಾಡಲು ಎರಡು ಹಂತದಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಸಲು ಉದ್ದೇಶಿಸಿರುವ ಪಾಲಿಕೆ ಮೂರು ತಿಂಗಳಲ್ಲಿ ಕಾಮಗಾರಿ ಮುಗಿಸುವ ಗುರಿ ಹಾಕಿಕೊಂಡಿದೆ. 

ಮೊದಲ ಹಂತದಲ್ಲಿ ಡೌನ್ ರ್ಯಾಂಪ್‌ನಿಂದ ಬೇಲಿಮಠದ ರಸ್ತೆವರೆಗೆ ಕಾಮಗಾರಿ ನಡೆಯಲಿದೆ. ಬಳಿಕ ಕಾಟನ್‌ಪೇಟೆಯ ಅಡ್ಡರಸ್ತೆವರೆಗೆ ಕಾಮಗಾರಿ ಜರುಗಲಿದೆ. ಹಿಗಾಗಿ ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ. 

ಬಹು ನಿರೀಕ್ಷಿತ ಮೈಸೂರು ರಸ್ತೆ-ಕೆಂಗೇರಿ ಮೆಟ್ರೋ ಸಂಚಾರಕ್ಕೆ ಮುಹೂರ್ತ ಫಿಕ್ಸ್

ಗೂಡ್ಸ್‌ಶೆಡ್ ರಸ್ತೆಯಲ್ಲಿ 2 ಹಂತದದಲ್ಲಿ ವೈಟ್ ಟಾಪಿಂಗ್‌  ನಡೆಯಲಿದೆ. ಇದರೊಂದಿಗೆ ಪಾದಚಾರಿ ಮಾರ್ಗ. ಒಳಚರಂಡಿ, ನೀರಿನ ಸಂಪರ್ಕ, ರಾಜಕಾಲುವೆ ಕಾಮಗಾರಿಗಳು ನಡೆಯಲಿದೆ.  ಮೂರು ತಿಂಗಳಲ್ಲಿ ಕಾಮಗಾರಿ ಮುಗಿಸಲು ಗುರಿ ಹಾಕಿಕೊಂಡಿದ್ದೇವೆ. ಶನಿವಾರ ತಡರಾತ್ರಿಯಿಂದಲೇ  ರಸ್ತೆ ಬಂದ್ ಆಗಲಿದ್ದು, ವಾಹನಗಳು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಲು ಸೂಚಿಸಲಾಗಿದೆ ಎಂದು ಪಾಲಿಕೆ ಮುಖ್ಯ ಎಂಜಿನಿಯರ್ ಲೋಕೆಶ್ ಹೇಳಿದರು. 

ಸಾರ್ವಜನಿಕ ರಸ್ತೆಯೇ ಪಬ್‌ ಪಾರ್ಕಿಂಗ್! ಕಣ್ಮುಚ್ಚಿ ಕುಳಿತ ಪೊಲೀಸರು

ಪರ್ಯಾಯ ಮಾರ್ಗ : ಮೈಸೂರು ರಸ್ತೆ ಕಡೆಯಿಂದ ಮೆಜೆಸ್ಟಿಕ್‌ ಕಡೆಗೆ ಸಾಗುವ ವಾಹನಗಳು ಮೈಸೂರು ರಸ್ತೆಯ ಬಾಡಿ ಬಿಲ್ಡರ್‌ ಜಂಕ್ಷನ್‌ ಬಂದು ಬಳಿಕ ಎಡತಿರುವುದು ಪಡೆದು ಬಿನ್ನಿ ಮಿಲ್ ಟ್ಯಾಂಕ್ ಬಂಡ್ ರಸ್ತೆ ಬಾಳೇಕಾಯಿ ಮಂಡಿ ಜಂಕ್ಷನ್‌ಗೆ ಬಂದು ಬಿನ್ನಿಮಿಲ್‌ ಸರ್ಕಲ್‌ನಲ್ಲಿ ಬಲ ತಿರುವು ಪಡೆದು ರಾಯನ್‌ ರಸ್ತೆ ಜಂಕ್ಷನ್‌ ಮಾರ್ಗವಾಗಿ ಗೂಡ್ಸ್‌ ಶೆಡ್ ರಸ್ತೆಯ ಮೂಲಕ ಶಾಂತಲಾ ಜಂಕ್ಷನ್‌ ಮೂಲಕ ಮೆಜೆಸ್ಟಿಕ್ ತಲುಪಬೇಕು. 

ಮೈಸೂರು ರಸ್ತೆಯಿಂದಲೆ ಬಿಜಿಎಸ್‌ ಮೇಲ್ಸೇತುವೆಯಲ್ಲಿ ಬರುವ ವಾಹನ ಸವಾರರು ಪುರಭವನ, ಕಾರ್ಪೊರೇಷನ್ ಮಾರ್ಗವಾಗಿ ಕೆ.ಜಿ ರಸ್ತೆಯ ಮೂಲಕ ಮೆಜೆಸ್ಟಿಕ್ ತಲುಪಬೇಕು. ಅಂತೆಯೇ ಬಿಜಿಎಸ್ ಮೆಲ್ಸೇತುವೆಯ  ಕೆಲ ರಸ್ತೆಯಲ್ಲಿ ಬರುವ ವಾಹನ ಸವಾರರು ಬಿವಿಕೆ ಅಯ್ಯಂಗಾರ್‌ ರಸ್ತೆಯಲ್ಲಿ ಸಾಗಿ ಕೆ.ಜಿ ರಸ್ತೆ ಸಂಪರ್ಕ ಪಡೆದು ಮೆಜೆಸ್ಟಿಕ್‌ ಕಡೆಗೆ ಬರಬಹುದು.

click me!