ಗಾಳಿ ಆಂಜನೇಯ ದೇಗುಲ ಆಡಳಿತ ಮಂಡಳಿಗೆ ವಾಪಸ್: ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ

Published : Jul 13, 2025, 04:43 PM ISTUpdated : Jul 13, 2025, 05:13 PM IST
Gaali Anjaneya Temple

ಸಾರಾಂಶ

ಹುಂಡಿ ಹಣದ ಅವ್ಯವಹಾರದ ಹಿನ್ನೆಲೆಯಲ್ಲಿ ಗಾಳಿ ಆಂಜನೇಯ ದೇವಸ್ಥಾನವನ್ನು ಸರ್ಕಾರ ತನ್ನ ವಶಕ್ಕೆ ಪಡೆದಿದೆ. ಇದೀಗ ದೇವಾಲಯವನ್ನು ಯಾವುದೇ ಅವ್ಯವಹಾರ ಮಾಡದೇ ಸರಿಯಾಗಿ ನಡೆಸಿಕೊಂಡು ಹೋಗುವ ಭರವಸೆ ನೀಡಿದರೆ ವಾಪಸ್ ಆಡಳಿತ ಮಂಡಳಿಗೆ ನೀಡಲಾಗುವುದು ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಮಂಗಳೂರು/ಬೆಂಗಳೂರು (ಜು.13):  ಬೆಂಗಳೂರಿನ ಐತಿಹಾಸಿಕ ಗಾಳಿ ಆಂಜನೇಯ ದೇವಸ್ಥಾನದಲ್ಲಿ ಹುಂಡಿ ಎಣಿಕೆಯ ಹಣವನ್ನು ಕಂತೆ ಕಂತೆಯಾಗಿ ಎತ್ತಿಕೊಂಡು ಹೋಗುವ ಅವ್ಯವಹಾರ ವಿಡಿಯೋ ಸಾಕ್ಷಿ ಮೂಲಕ ಸಾಬೀತಾದ ಬೆನ್ನಲ್ಲಿಯೇ ಮುಜರಾಯಿ ಇಲಾಖೆಯ ಸುಪರ್ದಿಗೆ ಪಡೆಯಲಾಗಿದೆ. ಈಗಲೂ ಆಡಳಿತ ಮಂಡಳಿಯವರು ಚೆನ್ನಾಗಿ ದೇವಸ್ಥಾನ ಆಡಳಿತ ಮಂಡಳಿಯನ್ನು ನಡೆಸಿಕೊಂಡು ಹೋಗುತ್ತೇವೆ ಎಂದು ಹೇಳಿದರೆ ಅವರ ಸುಪರ್ದಿಗೆ ವಾಪಸ್ ಕೊಡುತ್ತೇವೆ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಮಂಗಳೂರಿನಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಮಂಗಳೂರು ಪ್ರವಾಸದಲ್ಲಿ ಈ ಬಗ್ಗೆ ಭಾನುವಾರ ಮಾತನಾಡಿದ ಅವರು, ಬೆಂಗಳೂರು ನಗರದ ವೃಷಭಾವತಿ ನದಿ ತಟದಲ್ಲಿದ್ದ ಐತಿಹಾಸಿಕ ಮತ್ತು ಪ್ರಸಿದ್ಧ ಗಾಳಿ ಆಂಜನೇಯ ದೇವಸ್ಥಾನದಲ್ಲಿ ನಡೆದಿರುವ ಆರ್ಥಿಕ ಅವ್ಯವಹಾರ ಹಿನ್ನೆಲೆಯಲ್ಲಿ ದೇವಸ್ಥಾನವನ್ನು ತಾತ್ಕಾಲಿಕವಾಗಿ ಸರ್ಕಾರದ ವಶಕ್ಕೆ ತೆಗೆದುಕೊಳ್ಳಲಾಗಿದೆ. ರಾಜ್ಯದಲ್ಲಿ 1.85 ಲಕ್ಷ ದೇವಸ್ಥಾನಗಳಿದ್ದು, ಅದರಲ್ಲಿ 35,000 ದೇವಸ್ಥಾನಗಳು ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಬರುವವು. ಉಳಿದ 1.5 ಲಕ್ಷಕ್ಕೂ ಹೆಚ್ಚು ದೇವಾಲಯಗಳು ಖಾಸಗಿ ಸ್ವಾಮ್ಯದಲ್ಲಿವೆ ಎಂದು ಸಚಿವರು ತಿಳಿಸಿದರು.

ಖಾಸಗಿ ದೇವಾಲಯಗಳಲ್ಲಿ ಅವ್ಯವಹಾರ ಕಂಡುಬಂದಾಗ ಸರ್ಕಾರಕ್ಕೆ 5 ವರ್ಷಗಳ ಕಾಲ ದೇವಸ್ಥಾನವನ್ನು ವಶಕ್ಕೆ ಪಡೆಯುವ ಅಧಿಕಾರವಿದೆ. ಗಾಳಿ ಆಂಜನೇಯ ದೇವಸ್ಥಾನದಲ್ಲಿ ಹಣವನ್ನು ಯಾರೋ ತೆಗೆದುಕೊಂಡು ಹೋಗುತ್ತಿದ್ದ ವಿಡಿಯೋ ಎಲ್ಲರೂ ನೋಡಿದ್ದೀರಿ. ಇಂತಹ ಪ್ರಕರಣಗಳು ಮುಂದೆ ಬಂದರೆ ನಾವು ಕ್ರಮ ಕೈಗೊಳ್ಳುವುದು ಅನಿವಾರ್ಯ. 5 ವರ್ಷಗಳ ಕಾಲ ಸರ್ಕಾರ ವಶಕ್ಕೆ ತೆಗೆದುಕೊಂಡು, ಅವ್ಯವಹಾರ ಸರಿಹೊಂದಿದ ನಂತರ, ತಿರುಗಿ ನೀಡುವ ವ್ಯವಸ್ಥೆ ಇರುತ್ತದೆ' ಎಂದು ಸ್ಪಷ್ಟಪಡಿಸಿದರು.

ಸಚಿವರು ತಮ್ಮ ಹೇಳಿಕೆಯಲ್ಲಿ ಬಿಜೆಪಿ ಸರ್ಕಾರದ ಕಾಲದಲ್ಲಿಯೂ ಈ ರೀತಿಯ ಕ್ರಮಗಳನ್ನು ಕೈಗೊಂಡಿದ್ದ ಉದಾಹರಣೆಗಳನ್ನು ನೆನಪಿಸಿದರು. 'ಅಂದು 8 ದೇವಸ್ಥಾನಗಳನ್ನು ವಶಪಡಿಸಿಕೊಂಡಿದ್ದರು. ಇದೀಗ ನಾವು ಗಾಳಿ ಆಂಜನೇಯ ದೇವಸ್ಥಾನ ಕುರಿತು ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಅಂದರೆ ಈ ಬಗ್ಗೆ ಅನಗತ್ಯವಾಗಿ ಆಕ್ರೋಶ ವ್ಯಕ್ತಪಡಿಸುವುದು ಸಮ್ಮತವಲ್ಲ. ಎಲ್ಲವನ್ನೂ ಸಮಾನ ಶ್ರದ್ಧೆಯಿಂದಲೇ ನಡೆಸಿಕೊಳ್ಳಲಾಗುತ್ತಿದೆ. ಇದೀಗಲೂ ದೇವಸ್ಥಾನದ ಆಡಳಿತ ಮಂಡಳಿ ‘ನಾವು ಸರಿಯಾಗಿ ಆಡಳಿತ ನಡೆಸುತ್ತೇವೆ’ ಎಂದು ಸ್ಪಷ್ಟಪಡಿಸಿದರೆ, ಮತ್ತೆ ದೇವಸ್ಥಾನವನ್ನು ಅವರಿಗೆ ವಾಪಾಸು ನೀಡುವ ನಿರ್ಧಾರವಿದೆ' ಎಂದು ಸಚಿವರು ತಿಳಿಸಿದರು.

ಗಾಳಿ ಆಂಜನೇಯ ದೇವಸ್ಥಾನವು ಭಕ್ತರ ನಂಬಿಕೆಯ ಕೇಂದ್ರವಾಗಿದೆ. ಇಂತಹ ದೇವಾಲಯಗಳಲ್ಲಿ ಅವ್ಯವಹಾರ ನಡೆಯುವುದೇ ತೀವ್ರವಾಗಿ ಖಂಡನಾರ್ಹ. ಸರ್ಕಾರದ ಈ ನಿರ್ಧಾರ ಭದ್ರ ಮತ್ತು ಪಾರದರ್ಶಕ ದೇವಾಲಯ ನಿರ್ವಹಣೆಗೆ ಪಾಠವಾಗಬಹುದು ಎಂಬ ನಿರೀಕ್ಷೆ ವ್ಯಕ್ತವಾಗಿದೆ.

PREV
Read more Articles on
click me!

Recommended Stories

ನಾದಬ್ರಹ್ಮ ಇಡ್ಲಿ ಸೆಂಟರ್‌ ಮಾಲೀಕ, 28 ವರ್ಷದ ಸಂದೇಶ್‌ ಹೃದಯಾಘಾತದಿಂದ ಸಾವು
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ