
ಬೆಂಗಳೂರಿನ ಕೆ.ಆರ್. ಪುರದ ಎನ್‌ಆರ್‌ಐ ಲೇಔಟ್‌ನಲ್ಲಿ ಗುರುವಾರ ಸಂಜೆ ಭೀಕರ ಬೆಂಕಿ ಅವಘಡ ಸಂಭವಿಸಿದ್ದು, ಪಾರ್ಕಿಂಗ್ ಆವರಣದಲ್ಲಿದ್ದ 400ಕ್ಕೂ ಹೆಚ್ಚು ಎಲೆಕ್ಟ್ರಿಕ್ (EV) ದ್ವಿಚಕ್ರ ವಾಹನಗಳು ಸಂಪೂರ್ಣವಾಗಿ ಭಸ್ಮವಾಗಿವೆ. ಈ ವಾಹನಗಳನ್ನು 'ಇವೀಸ್' (Evis) ಕಂಪನಿಯು ಝೆಪ್ಟೋ (Zepto), ಸ್ವಿಗ್ಗಿ (Swiggy) ಹಾಗೂ ಝೊಮ್ಯಾಟೊ (Zomato) ಮುಂತಾದ ಪ್ರಮುಖ ಡೆಲಿವರಿ ಸಂಸ್ಥೆಗಳ ಸಿಬ್ಬಂದಿಗೆ ದಿನಬಾಡಿಗೆ ಆಧಾರದ ಮೇಲೆ ನೀಡುತ್ತಿತ್ತು.
ಸಂಜೆ ಸುಮಾರು 7 ಗಂಟೆಯ ವೇಳೆಗೆ ವಾಹನಗಳಿದ್ದ ಆವರಣದ ಗೇಟ್ ಲಾಕ್ ಮಾಡಿದ ಕೆಲವೇ ಕ್ಷಣಗಳಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಸ್ಥಳೀಯರ ಪ್ರಕಾರ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದ್ದರೂ, ಘಟನೆಯ ನಿಜವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಕೆಲಸ ಮುಗಿಸಿ ಪಾರ್ಕಿಂಗ್‌ಗೆ ತಂದಿದ್ದ ಹಾಗೂ ಸರ್ವೀಸ್‌ಗಾಗಿ ಕಾಯ್ದಿರಿಸಲಾಗಿದ್ದ ನೂರಾರು ವಾಹನಗಳು ಬೆಂಕಿಯ ಜ್ವಾಲೆಗೆ ಸಿಲುಕಿ ಸಂಪೂರ್ಣ ನಾಶವಾಗಿವೆ.
ಇವೀಸ್ ಕಂಪನಿಯ ಅಡ್ಮಿನ್ ಹರೀಶ್ ಪ್ರತಿಕ್ರಿಯೆ ನೀಡಿ, ಸಂಜೆ 7 ಗಂಟೆಯ ಸುಮಾರಿಗೆ ಜಾಗದ ಮಾಲೀಕರು ಫೋನ್ ಮಾಡಿ ಬೆಂಕಿ ಹೊತ್ತಿಕೊಂಡಿರುವ ವಿಷಯ ತಿಳಿಸಿದರು. ತಕ್ಷಣವೇ ನಾವು ಸ್ಥಳಕ್ಕೆ ಧಾವಿಸಿದೆವು. ದಿನನಿತ್ಯ ಕೆಲಸ ಮುಗಿದ ನಂತರ ವಾಹನಗಳನ್ನು ಪಾರ್ಕ್ ಮಾಡಲು ಮತ್ತು ಸರ್ವೀಸ್‌ಗೆ ಬಂದ ಗಾಡಿಗಳನ್ನು ಇಡಲು ಈ ಜಾಗವನ್ನು ಬಾಡಿಗೆಗೆ ಪಡೆದಿದ್ದೆವು. ಈ ಹಿಂದೆ ಎಂದೂ ಇಂತಹ ಘಟನೆ ನಡೆದಿಲ್ಲ. ಇದು ಶಾರ್ಟ್ ಸರ್ಕ್ಯೂಟ್‌ನಿಂದ ನಡೆದ ಅಪಘಾತವಲ್ಲ, ಬದಲಿಗೆ ಯಾರೋ ಬೇಕಂತಲೇ ಕಿಡಿಗೇಡಿತನದಿಂದ ಬೆಂಕಿ ಹಚ್ಚಿದ್ದಾರೆ ಎಂಬ ಶಂಕೆ ಇದೆ ಎಂದಿದ್ದಾರೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರಾದರೂ, ಅದಾಗಲೇ ಕೋಟ್ಯಂತರ ರೂಪಾಯಿ ಮೌಲ್ಯದ ವಾಹನಗಳು ಸುಟ್ಟು ಬೂದಿಯಾಗಿದ್ದವು. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಘಟನೆಗೆ ಶಾರ್ಟ್ ಸರ್ಕ್ಯೂಟ್ ಕಾರಣವೇ ಅಥವಾ ಯಾರಾದರೂ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿದ್ದಾರೆಯೇ ಎಂಬ ಆಯಾಮದಲ್ಲಿ ತನಿಖೆ ಮುಂದುವರಿಸಿದ್ದಾರೆ.
ದೊಡ್ಡಬಳ್ಳಾಪುರ: ಇಲ್ಲಿನ ಮುಕ್ತಾಂಬಿಕಾ ರಸ್ತೆಯ ತಮಿಳ್‌ನಾಡ್ ಮರ್ಕಂಟೈಲ್ ಬ್ಯಾಂಕ್‌ನ ನೆಲಮಹಡಿಯಲ್ಲಿದ್ದ ಸೈಕಲ್ ಗೋದಾಮಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಲಕ್ಷಾಂತರ ರುಪಾಯಿ ಮೌಲ್ಯದ ಸೈಕಲ್ ಹಾಗೂ ಇತರೆ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಸೈಕಲ್ ಗೋದಾಮಿಗೆ ಬೆಂಕಿ ಹೊತ್ತಿಕೊಂಡಿರಬಹುದು ಎನ್ನಲಾಗಿದೆ. ಘಟನೆಯಲ್ಲಿ ಲಕ್ಷಾಂತರ ರು. ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.
ಗಾಣಿಗರಪೇಟೆ ಬಳಿಯ ಕಾಳಮ್ಮ ದೇವಸ್ಥಾನದ ರಸ್ತೆಯಲ್ಲಿರುವ ಶ್ರೀಕೃಷ್ಣ ಸ್ಟೋರ್ ಮಾಲೀಕರಿಗೆ ಸೇರಿದ ಗೋದಾಮು ಇದಾಗಿದೆ. ಸೋಮವಾರ ಗೋದಾಮಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕೆಲವೇ ಕ್ಷಣಗಳಲ್ಲಿ ಬೆಂಕಿಯ ಕೆನ್ನಾಲಿಗೆ ಗೋದಾಮಿನಲ್ಲಿದ್ದ ಸೈಕಲ್‌ಗಳು ಹಾಗೂ ಇತರೆ ವಸ್ತುಗಳಿಗೆ ವ್ಯಾಪಿಸಿದೆ. ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ದೊಡ್ಡಬಳ್ಳಾಪುರನಗರ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಸುಮಾರು 6 ಟ್ಯಾಂಕರ್‌ಗಳಷ್ಟು ನೀರು ಬಳಸಿದ್ದು, ಬೆಂಕಿ ನಿಯಂತ್ರಣಕ್ಕೆ ತರಲು ಹರಸಾಹಸ ನಡೆಸಿದರು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.
ಮಂಗಳೂರು: ಸುರತ್ಕಲ್‌ನ ಗುಡ್ಡೆಕೊಪ್ಲದಲ್ಲಿರುವ ಆವಿಷ್ಕಾರ್ ಗ್ರಾಫಿಕ್ಸ್ ಸೆಂಟರ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಸುಮಾರು 1.60 ಕೋಟಿ ರು. ನಷ್ಟ ಸಂಭವಿಸಿದೆ ಎಂದು ಹೇಳಲಾಗಿದೆ. ಅಗ್ನಿ ಅವಘಡದಲ್ಲಿ ಮುದ್ರಣ ಕೇಂದ್ರದಲ್ಲಿದ್ದ ಹಲವು ಮುದ್ರಣ ಯಂತ್ರಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಘಟನೆಯಿಂದ ಮುದ್ರಣ ಕೇಂದ್ರಕ್ಕೆ ಭಾರೀ ಪ್ರಮಾಣದ ಹಾನಿಯಾಗಿದೆ. ರಾತ್ರಿ ವೇಳೆ ಸ್ಥಳೀಯ ನಿವಾಸಿಗಳು ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿರುವುದನ್ನು ಗಮನಿಸಿ ತಕ್ಷಣ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಘಟನೆಯ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಬೆಂಕಿ ಅವಘಡಕ್ಕೆ ನಿಖರ ಕಾರಣ ಕುರಿತು ಪರಿಶೀಲನೆ ನಡೆಯುತ್ತಿದೆ.