ಬೆಂಗಳೂರಿಗೆ ಭೀಕರ ಜಲಕ್ಷಾಮ ಭೀತಿಯ ವರದಿ, 65 ವಾರ್ಡ್‌ಗಳಲ್ಲಿ ಆತಂಕಕಾರಿ ಕುಸಿತ, ಜಲಮಂಡಳಿಯಲ್ಲಿ ಹೈವೋಲ್ಟೇಜ್ ಸಭೆ!

Published : Mar 04, 2026, 12:04 PM IST
Bengaluru Faces Groundwater Crisis

ಸಾರಾಂಶ

ಐಐಎಸ್ಸಿ ಅಧ್ಯಯನದ ಪ್ರಕಾರ, ಬೆಂಗಳೂರಿನ 65 ವಾರ್ಡ್‌ಗಳಲ್ಲಿ ಅಂತರ್ಜಲ ಮಟ್ಟ ಗಣನೀಯವಾಗಿ ಕುಸಿದಿದೆ. ಬೇಸಿಗೆಯಲ್ಲಿ ತೀವ್ರ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದ್ದು, ಇದನ್ನು ತಡೆಯಲು ಜಲಮಂಡಳಿ ವಿಶೇಷ ಕಾರ್ಯಯೋಜನೆ ರೂಪಿಸುತ್ತಿದೆ.

ಬೆಂಗಳೂರು: ಬೇಸಿಗೆ ಪೂರ್ಣ ಪ್ರಮಾಣದಲ್ಲಿ ಆರಂಭವಾಗುವ ಮುನ್ನವೇ ನಗರಕ್ಕೆ ಅಂತರ್ಜಲ ಸಂಕಷ್ಟದ ಭೀತಿ ಎದುರಾಗಿದೆ. ನಗರದ ಹಲವು ಪ್ರತಿಷ್ಠಿತ ವಾರ್ಡ್‌ಗಳಲ್ಲಿ ಅಂತರ್ಜಲ ಮಟ್ಟ ಈಗಾಗಲೇ ಗಣನೀಯವಾಗಿ ಕುಸಿದಿದ್ದು, ಮುಂದಿನ ತಿಂಗಳುಗಳಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವ ಸಾಧ್ಯತೆ ಇದೆ ಎಂಬ ಆತಂಕಕಾರಿ ಮಾಹಿತಿ ಹೊರಬಿದ್ದಿದೆ.

ಐಐಎಸ್ಸಿ (IISc) ವಿಜ್ಞಾನಿಗಳು, ಕೇಂದ್ರ ಅಂತರ್ಜಲ ಸಂಸ್ಥೆ ಅಧಿಕಾರಿಗಳು, ರಾಜ್ಯ ಭೂ ವಿಜ್ಞಾನ ಇಲಾಖೆ ಹಾಗೂ ಸಂಬಂಧಿತ ತಾಂತ್ರಿಕ ತಜ್ಞರ ಜಂಟಿ ಅಧ್ಯಯನದಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಮತ್ತು ಇಂಟರ್ನೆಟ್ ಆಫ್ ಥಿಂಗ್ಸ್ (IoT) ಆಧಾರಿತ ಮಾಹಿತಿ ಸಂಗ್ರಹ ಹಾಗೂ ವಿಶ್ಲೇಷಣೆಯ ಮೂಲಕ ಅಂತರ್ಜಲ ಮಟ್ಟದಲ್ಲಿ ಸಂಭವಿಸಿರುವ ಕುಸಿತವನ್ನು ಗುರುತಿಸಲಾಗಿದೆ.

65 ವಾರ್ಡ್‌ಗಳಲ್ಲಿ ಕುಸಿತದ ಎಚ್ಚರಿಕೆ

ಮಲ್ಲೇಶ್ವರಂ, ಸಂಜಯನಗರ, ಹೆಬ್ಬಾಳ ಸೇರಿದಂತೆ ಒಟ್ಟು 65 ವಾರ್ಡ್‌ಗಳಲ್ಲಿ ಅಂತರ್ಜಲ ಮಟ್ಟ ಕುಸಿತ ಕಂಡುಬಂದಿದೆ. ಬೇಸಿಗೆ ಗರಿಷ್ಠ ಅವಧಿಯಲ್ಲಿ ಈ ಪ್ರದೇಶಗಳಲ್ಲಿ ಅಂತರ್ಜಲ ಸಾವಿರಾರು ಅಡಿ ಮಟ್ಟಕ್ಕೆ ಕುಸಿಯುವ ಸಾಧ್ಯತೆ ಇರುವುದಾಗಿ ವರದಿ ಎಚ್ಚರಿಸಿದೆ. ಅಂತರ್ಜಲ ಸಮಸ್ಯೆ ತೀವ್ರಗೊಳ್ಳುವ ಸಾಧ್ಯತೆ ಇರುವ ವಾರ್ಡ್‌ಗಳಲ್ಲಿ ಜಕ್ಕೂರು (ಹಳೆ ವಾರ್ಡ್ ನಂ.5), ದೊಡ್ಡಬೊಮ್ಮಸಂದ್ರ (10), ಶೆಟ್ಟಿಹಳ್ಳಿ, ಮಲ್ಲಸಂದ್ರ, ಟಿ.ದಾಸರಹಳ್ಳಿ, ಜಾಲಹಳ್ಳಿ, ಸಂಜಯನಗರ, ಹೆಬ್ಬಾಳ, ನಾಗವಾರ, ಹೊರಮಾವು, ರಾಮಮೂರ್ತಿ ನಗರ, ಕಮ್ಮನಹಳ್ಳಿ, ಕಾಡುಗೊಂಡನಹಳ್ಳಿ, ಕಾವಲ್ ಬೈರಸಂದ್ರ, ಮನೋರಾಯನಪಾಳ್ಯ, ದೊಡ್ಡಬಿದರಕಲ್ಲು, ಪೀಣ್ಯ ಕೈಗಾರಿಕಾ ಪ್ರದೇಶ, ನಂದಿನಿ ಲೇಔಟ್, ಜೆ.ಸಿ.ನಗರ, ಲಿಂಗರಾಜಪುರ, ಕೆ.ಆರ್.ಪುರ, ಎ.ನಾರಾಯಣಪುರ, ಕಾಡು ಮಲ್ಲೇಶ್ವರ, ಮಹಾಲಕ್ಷ್ಮೀ ಪುರಂ, ಅಗ್ರಹಾರ ದಾಸರಹಳ್ಳಿ, ಅಗರಂ, ಬಿನ್ನಿಪೇಟೆ, ಕೆಂಪಾಪುರ ಅಗ್ರಹಾರ ಸೇರಿದಂತೆ ಹಲವಾರು ಪ್ರಮುಖ ಪ್ರದೇಶಗಳು ಸೇರಿವೆ.

ಜಲಮಂಡಳಿಯಲ್ಲಿ ತುರ್ತು ಸಭೆ

ಐಐಎಸ್ಸಿ ವರದಿ ಹೊರಬಿದ್ದ ಬೆನ್ನಲ್ಲೇ ಬೆಂಗಳೂರು ಜಲಮಂಡಳಿ ಅಧಿಕಾರಿಗಳೊಂದಿಗೆ ಹೈವೋಲ್ಟೇಜ್ ಸಭೆ ನಡೆಸಲಾಗಿದೆ. ನಗರಾಭಿವೃದ್ಧಿ ಇಲಾಖೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರು ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನಗಳನ್ನು ನೀಡಿದ್ದಾರೆ. ಬೇಸಿಗೆಯಲ್ಲಿ ಯಾವುದೇ ರೀತಿಯ ನೀರಿನ ತೊಂದರೆ ಉಂಟಾಗದಂತೆ ಮುಂಚಿತವಾಗಿ ಕ್ರಮ ಕೈಗೊಳ್ಳಬೇಕೆಂದು ಸೂಚಿಸಲಾಗಿದೆ. ಅಂತರ್ಜಲ ಕುಸಿತ ಹೆಚ್ಚಾಗಿರುವ 65 ವಾರ್ಡ್‌ಗಳಿಗೆ ವಿಶೇಷ ಕಾರ್ಯಯೋಜನೆ ರೂಪಿಸುವಂತೆ ಆದೇಶಿಸಲಾಗಿದೆ.

ವಿಶೇಷ ಕಾರ್ಯಯೋಜನೆ

ಅಂತರ್ಜಲ ಕುಸಿಯುವ ಸಾಧ್ಯತೆ ಇರುವ 65 ವಾರ್ಡ್‌ಗಳನ್ನು ಜಿಬಿಎ (GBA) ವ್ಯಾಪ್ತಿಯ ಐದು ವಲಯಗಳಿಗೆ ವಿಂಗಡಿಸಿ ಪ್ರತಿ ವಾರ್ಡ್‌ಗೆ ಪ್ರತ್ಯೇಕ ಅಭಿಯಂತರರನ್ನು ನಿಯೋಜಿಸಲು ತೀರ್ಮಾನಿಸಲಾಗಿದೆ. ನಿಯೋಜಿತ ಅಭಿಯಂತರರು ಕಚೇರಿಗಳಲ್ಲಿ ಕುಳಿತುಕೊಳ್ಳದೇ, ಕ್ಷೇತ್ರದಲ್ಲೇ ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕೆಂದು ಸೂಚಿಸಲಾಗಿದೆ. ಹೊರವಲಯ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಮತ್ತಷ್ಟು ಕುಸಿಯುವ ಸಾಧ್ಯತೆ ಇರುವುದರಿಂದ ಪರಿಸ್ಥಿತಿ ಗಂಭೀರವಾಗುವ ಮೊದಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ.

RO ಘಟಕಗಳ ಪೂರ್ಣ ಕಾರ್ಯನಿರ್ವಹಣೆ

ನಗರಾದ್ಯಂತ ಇರುವ ರಿವರ್ಸ್ ಆಸ್ಮೋಸಿಸ್ (RO) ಘಟಕಗಳು ಶೇ.100 ಕಾರ್ಯನಿರ್ವಹಿಸುವಂತೆ ತಕ್ಷಣ ದುರಸ್ತಿ ಹಾಗೂ ನಿರಂತರ ಮೇಲ್ವಿಚಾರಣೆ ಮಾಡಲು ನಿರ್ದೇಶಿಸಲಾಗಿದೆ. ನೀರಿನ ಕೊರತೆ ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಬಲಪಡಿಸುವಂತೆ ಸೂಚಿಸಲಾಗಿದೆ. ಇದೇ ವೇಳೆ ಬೇಸಿಗೆ ಗರಿಷ್ಠ ಅವಧಿ ಆರಂಭವಾಗುವ ಮುನ್ನವೇ ಹೊಸ ನೀರು ಸಂಪರ್ಕಗಳ ಪ್ರಕ್ರಿಯೆಯನ್ನು ವೇಗಗೊಳಿಸಬೇಕು. ಅಗತ್ಯ ಮೂಲಸೌಕರ್ಯ ಸಿದ್ಧಪಡಿಸಿ, ನೀರು ಸರಬರಾಜು ವ್ಯವಸ್ಥೆಯನ್ನು ಬಲಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಬೇಸಿಗೆಯಲ್ಲೇ ತೀವ್ರ ಸಂಕಷ್ಟದ ಭೀತಿ

ನಗರದಲ್ಲಿ ಈಗಾಗಲೇ ಅಂತರ್ಜಲ ಮಟ್ಟ ಕುಸಿತ ಕಂಡುಬಂದಿರುವ ಹಿನ್ನೆಲೆ, ಮುಂದಿನ ತಿಂಗಳುಗಳಲ್ಲಿ ನೀರಿನ ಸಮಸ್ಯೆ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇದೆ. ವಿಶೇಷವಾಗಿ ಹೊರವಲಯ ಮತ್ತು ವೇಗವಾಗಿ ವಿಸ್ತರಿಸುತ್ತಿರುವ ಪ್ರದೇಶಗಳಲ್ಲಿ ಪರಿಸ್ಥಿತಿ ಸಂಕಷ್ಟಕರವಾಗುವ ಭೀತಿ ವ್ಯಕ್ತವಾಗಿದೆ. ಬೆಂಗಳೂರು ನಗರವು ಮತ್ತೆ ಭೀಕರ ನೀರಿನ ಸಂಕಷ್ಟವನ್ನು ಎದುರಿಸದಂತೆ, ಮುನ್ನೆಚ್ಚರಿಕೆ ಕ್ರಮಗಳನ್ನು ತಕ್ಷಣ ಜಾರಿಗೆ ತರಬೇಕೆಂಬುದು ತಜ್ಞರ ಅಭಿಪ್ರಾಯವಾಗಿದೆ. ಸರ್ಕಾರ ಹಾಗೂ ಸಂಬಂಧಿತ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿದಲ್ಲಿ ಮಾತ್ರ ಬೇಸಿಗೆಯಲ್ಲಿನ ನೀರಿನ ತೊಂದರೆಯನ್ನು ನಿಯಂತ್ರಿಸಲು ಸಾಧ್ಯವೆಂದು ಹೇಳಲಾಗಿದೆ.

 

PREV
Read more Articles on
click me!

Recommended Stories

ಚಿಕ್ಕಮಗಳೂರು: ಚೀಲದಲ್ಲಿ ಗೋವಿನ ಕಳೇಬರ ತುಂಬಿ ರಸ್ತೆಗೆಸೆದು ಹೋದ ದುಷ್ಕರ್ಮಿಗಳು : ಪ್ರತಿಭಟಿಸಿದವರ ವಿರುದ್ಧ FIR
ಬೆಂಗಳೂರು: ನಿಧಿಯಾಸೆಗೆ 900 ವರ್ಷಗಳ ಪುರಾತನ ದೇಗುಲದ ಗರ್ಭಗುಡಿ ಅಗೆದ ಆಂಧ್ರದ ರಿಯಲ್ ಎಸ್ಟೇಟ್ ಉದ್ಯಮಿ!