
ಬೆಂಗಳೂರು: ಕಳೆದ ಶನಿವಾರ ಎರಡು ಬಿಎಂಟಿಸಿ ಬಸ್‌ಗಳ ಮಧ್ಯೆ ಭೀಕರ ಅಪಘಾತವಾಗಿ ಆತಂಕ ಸೃಷ್ಟಿಸಿತ್ತು. ಈ ಘಟನೆಯಲ್ಲಿ ಹಲವರು ಗಾಯಗೊಂಡಿದ್ದರು. ಇದೀಗ ಸಿಲಿಕಾನ್ ಸಿಟಿಯ ರಸ್ತೆಗಳಲ್ಲಿ ಪರಿಸರಸ್ನೇಹಿ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಇವಿ (ಎಲೆಕ್ಟ್ರಿಕ್) ಬಸ್‌ಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಸದ್ಯ ನಗರದಲ್ಲಿ ಸುಮಾರು 1,650 ರಿಂದ 1,700 ಇವಿ ಬಸ್‌ಗಳು ಕಾರ್ಯಾಚರಣೆ ನಡೆಸುತ್ತಿದ್ದು, ಇವುಗಳನ್ನು ಓಡಿಸಲು ಸುಮಾರು 3,000 ಚಾಲಕರನ್ನು ನಿಯೋಜಿಸಲಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಇವಿ ಬಸ್‌ಗಳು ಸಾಲು ಸಾಲು ಅಪಘಾತಗಳನ್ನು ಸೃಷ್ಟಿಸುತ್ತಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿವೆ. ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸುರಕ್ಷತಾ ಸೌಲಭ್ಯಗಳಿದ್ದರೂ ಇವಿ ಬಸ್‌ಗಳು ಇಷ್ಟೊಂದು ಪ್ರಮಾಣದಲ್ಲಿ ಅಪಘಾತಕ್ಕೀಡಾಗುತ್ತಿರುವುದು ಯಾಕೆ? ಎಂಬ ಪ್ರಶ್ನೆಗೆ ಈಗ ಕೆಲವು ಆಘಾತಕಾರಿ ಕಾರಣಗಳು ಬಯಲಿಗೆ ಬಂದಿವೆ. ಇವಿ ಬಸ್‌ಗಳ ಸರಣಿ ಅಪಘಾತಗಳ ಹಿಂದೆ ಅಡಗಿರುವ ಆ 5 ಪ್ರಮುಖ ಆಘಾತಕಾರಿ ಕಾರಣಗಳು ಯಡವಟ್ಟಿಗೆ ಗಂಭೀರ ಕಾರಣ ಎಂಬ ಆರೋಪವಿದೆ. ಈ ಆರೋಪಗಳು ಈ ಕೆಳಗಿನಂತಿದೆ.
ಸಾಮಾನ್ಯವಾಗಿ ಬಿಎಂಟಿಸಿ (BMTC) ಹಾಗೂ ಕೆಎಸ್‌ಆರ್‌ಟಿಸಿ (KSRTC) ಸಂಸ್ಥೆಗಳು ಚಾಲಕರನ್ನು ನೇಮಿಸಿಕೊಳ್ಳುವಾಗ ಅತ್ಯಂತ ಕಠಿಣವಾದ ಚಾಲನಾ ಪರೀಕ್ಷೆಗಳನ್ನು (Driving Tests) ನಡೆಸುತ್ತವೆ. ಆದರೆ, ಇವಿ ಬಸ್ ಚಾಲಕರ ನೇಮಕಾತಿಯಲ್ಲಿ ಈ ಯಾವುದೇ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುತ್ತಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಕೇವಲ ಹೆವಿ ಡ್ರೈವಿಂಗ್ ಲೈಸೆನ್ಸ್ ಮತ್ತು ಮೂರು ವರ್ಷಗಳ ಚಾಲನಾ ಅನುಭವ ಇದ್ದರೆ ಸಾಕು, ಅಂತವರಿಗೆ ನೇರವಾಗಿ ಅತ್ಯಾಧುನಿಕ ಇವಿ ಬಸ್‌ಗಳನ್ನು ಓಡಿಸುವ ಜವಾಬ್ದಾರಿಯನ್ನು ನೀಡಲಾಗುತ್ತಿದೆ. ಇದು ಸಾರ್ವಜನಿಕರ ಜೀವದೊಂದಿಗೆ ಆಟವಾಡಿದಂತಾಗಿದೆ.
ಸಾಮಾನ್ಯ ಬಿಎಂಟಿಸಿ ಚಾಲಕರಿಗೆ ಸಂಸ್ಥೆಯಿಂದ ಕನಿಷ್ಠ 6 ತಿಂಗಳ ಕಾಲ ಕಠಿಣ ತರಬೇತಿ ನೀಡಲಾಗುತ್ತದೆ. ಬೆಂಗಳೂರಿನಂತಹ ಅತ್ಯಂತ ದಟ್ಟಣೆಯ ಟ್ರಾಫಿಕ್‌ನಲ್ಲಿ ಬೃಹತ್ ಬಸ್‌ಗಳನ್ನು ಹೇಗೆ ನಿಯಂತ್ರಿಸಬೇಕು ಎಂಬ ಪ್ರಾಯೋಗಿಕ ಶಿಕ್ಷಣವನ್ನು ಅವರಿಗೆ ಕಲಿಸಲಾಗುತ್ತದೆ. ಆದರೆ, ಇವಿ ಬಸ್ ಚಾಲಕರಿಗೆ ನೀಡಲಾಗುತ್ತಿರುವುದು ಕೇವಲ 15 ದಿನಗಳ ಅಲ್ಪಾವಧಿ ತರಬೇತಿ ಮಾತ್ರ! ತಂತ್ರಜ್ಞಾನ ಆಧಾರಿತ ಇವಿ ಬಸ್‌ಗಳ ವೇಗವರ್ಧನೆ (Acceleration) ಮತ್ತು ಬ್ರೇಕಿಂಗ್ ವ್ಯವಸ್ಥೆ ಸಾಮಾನ್ಯ ಬಸ್‌ಗಳಿಗಿಂತ ಭಿನ್ನವಾಗಿರುತ್ತದೆ. ಕೇವಲ 15 ದಿನಗಳ ತರಬೇತಿ ಪಡೆದ ಚಾಲಕರು ಇವುಗಳನ್ನು ಟ್ರಾಫಿಕ್‌ನಲ್ಲಿ ನಿಯಂತ್ರಿಸಲು ಪರದಾಡುತ್ತಿದ್ದಾರೆ.
ಇವಿ ಬಸ್ ಓಡಿಸುವ ಬಹುತೇಕ ಚಾಲಕರು ಈ ಹಿಂದೆ ಹೆದ್ದಾರಿಗಳಲ್ಲಿ (Highways) ಲಾರಿ ಅಥವಾ ಇತರ ಹೆವಿ ವೆಹಿಕಲ್‌ಗಳನ್ನು ಓಡಿಸುತ್ತಿದ್ದವರಾಗಿದ್ದಾರೆ ಎಂಬ ಆರೋಪವಿದೆ. ಹೈವೇಗಳಲ್ಲಿ ವಾಹನ ಚಲಾಯಿಸುವುದಕ್ಕೂ, ಬೆಂಗಳೂರಿನ ಗಿಜಿಗುಡುವ ಸಿಟಿ ರಸ್ತೆಗಳಲ್ಲಿ ವಾಹನ ಚಲಾಯಿಸುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಸಿಟಿ ಟ್ರಾಫಿಕ್‌ನ ಅನುಭವ ಇಲ್ಲದ ಕಾರಣ, ಸಡನ್ ಆಗಿ ಬ್ರೇಕ್ ಹಾಕಬೇಕಾದ ಸಂದರ್ಭಗಳಲ್ಲಿ ಇವರು ನಿಯಂತ್ರಣ ಕಳೆದುಕೊಂಡು ಅಪಘಾತಗಳನ್ನು ಉಂಟುಮಾಡುತ್ತಿದ್ದಾರೆ.
ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಚಾಲಕರಿಗೆ ಪ್ರತಿ ವರ್ಷ ಹೆಲ್ತ್ ಫಿಟ್ನೆಸ್ ಸರ್ಟಿಫಿಕೇಟ್ ಕಡ್ಡಾಯವಾಗಿರುತ್ತದೆ. ಚಾಲಕರ ದೃಷ್ಟಿದೋಷ, ಮಾನಸಿಕ ಸ್ಥಿತಿ ಎಲ್ಲವನ್ನೂ ಪರೀಕ್ಷಿಸಲಾಗುತ್ತದೆ. ಆದರೆ, ಇವಿ ಬಸ್ ಚಾಲಕರಿಗೆ ಇಂತಹ ಯಾವುದೇ ಕಡ್ಡಾಯ ನಿಯಮಗಳಿಲ್ಲ. ಚಾಲಕರ ಕನಿಷ್ಠ ರಕ್ತದೊತ್ತಡ (BP) ಮತ್ತು ಮಧುಮೇಹ (Sugar) ಮಟ್ಟವನ್ನು ಸಹ ಪರಿಶೀಲಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಚಾಲನೆ ಮಾಡುವಾಗ ಚಾಲಕರಿಗೆ ಆರೋಗ್ಯ ಕೈಕೊಟ್ಟರೆ ನೂರಾರು ಪ್ರಯಾಣಿಕರ ಗತಿ ಏನು ಎಂಬ ಪ್ರಶ್ನೆ ಮೂಡಿದೆ.
ಮಳೆಗಾಲದ ಸಮಯದಲ್ಲಿ ಬೆಂಗಳೂರಿನ ರಸ್ತೆಗಳು ಜಲಾವೃತಗೊಳ್ಳುವುದು ಸಾಮಾನ್ಯ. ಈ ವೇಳೆ ನೀರಿನಲ್ಲಿ ಇವಿ ಬಸ್‌ಗಳು ಸಂಚರಿಸುವಾಗ ಅವುಗಳ ಬ್ಯಾಟರಿ ಮತ್ತು ವಿದ್ಯುತ್ ವ್ಯವಸ್ಥೆಯಲ್ಲಿ (Electrical System) ತಾಂತ್ರಿಕ ದೋಷಗಳು ತಲೆದೂರುತ್ತಿವೆ. ಶಾರ್ಟ್ ಸರ್ಕ್ಯೂಟ್ ಅಥವಾ ಬ್ಯಾಟರಿ ಮ್ಯಾನೇಜ್‌ಮೆಂಟ್ ಸಿಸ್ಟಮ್ ಕೈಕೊಡುವುದರಿಂದ, ತುರ್ತು ಸಂದರ್ಭಗಳಲ್ಲಿ ಬಸ್ ಅನ್ನು ಸಡನ್ ಆಗಿ ನಿಯಂತ್ರಿಸಲು ಚಾಲಕರಿಗೆ ಸಾಧ್ಯವಾಗುತ್ತಿಲ್ಲ.
ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಇವಿ ಬಸ್‌ಗಳ ಬಳಕೆ ಸ್ವಾಗತಾರ್ಹ. ಆದರೆ, ಸೂಕ್ತ ತರಬೇತಿ, ಕಟ್ಟುನಿಟ್ಟಿನ ನೇಮಕಾತಿ ಪ್ರಕ್ರಿಯೆ ಮತ್ತು ಚಾಲಕರ ದೈಹಿಕ ಫಿಟ್ನೆಸ್ ಕಡೆಗಣಿಸಿದರೆ ಈ 'ಸ್ಮಾರ್ಟ್ ಬಸ್'ಗಳು ರಸ್ತೆಯಲ್ಲಿ ಸಾವಿಗೆ ದಾರಿಯಾಗುವುದರಲ್ಲಿ ಸಂಶಯವಿಲ್ಲ. ಸಾರಿಗೆ ಇಲಾಖೆ ಮತ್ತು ಬಿಎಂಟಿಸಿ ತಕ್ಷಣವೇ ಎಚ್ಚೆತ್ತುಕೊಂಡು ಇವಿ ಬಸ್ ಚಾಲಕರಿಗೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಬೇಕಿದೆ.