ಚಿತ್ರದುರ್ಗ: ಹರಳಯ್ಯ ಮಠದ ಸ್ವಾಮೀಜಿ ಮೇಲೆ ಯುವಕನಿಂದ ಹಲ್ಲೆ, ಪೊಲೀಸ್ ಠಾಣೆಯಲ್ಲೂ ಶ್ರೀಗಳ ಎದೆಗೆ ಒದ್ದು ದಾಂಧಲೆ!

Published : Jul 06, 2026, 08:00 AM IST
Chitradurga Haralayya Swamiji

ಸಾರಾಂಶ

ಚಿತ್ರದುರ್ಗದ ಐಮಂಗಲದಲ್ಲಿ ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ಹರಳಯ್ಯ ಮಠದ ಸ್ವಾಮೀಜಿ ಮೇಲೆ ದುಷ್ಕರ್ಮಿಗಳು ಭೀಕರ ಹಲ್ಲೆ ನಡೆಸಿದ್ದಾರೆ. ಬಳಿಕ, ದೂರು ನೀಡಲು ಹೋದ ಸ್ವಾಮೀಜಿಯನ್ನು ಪೊಲೀಸ್ ಠಾಣೆಯೊಳಗೆ ಬೆನ್ನಟ್ಟಿ ಅಲ್ಲೂ ದೌರ್ಜನ್ಯ ಎಸಗಿದ್ದು, ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ಐಮಂಗಲ ಗ್ರಾಮದಲ್ಲಿ ತಡರಾತ್ರಿ ಭೀಕರ ಘಟನೆಯೊಂದು ಸಂಭವಿಸಿದೆ. ಇಲ್ಲಿನ ಶಿವಶರಣ ಹರಳಯ್ಯ ಮಠಕ್ಕೆ ಏಕಾಏಕಿ ನುಗ್ಗಿದ ದುಷ್ಕರ್ಮಿಗಳ ತಂಡವೊಂದು, ಮಠದ ಪೀಠಾಧಿಪತಿಗಳಾದ ಶ್ರೀ ಬಸವ ಹರಳಯ್ಯ ಸ್ವಾಮೀಜಿ ಹಾಗೂ ಶಾಲಾ ಬಸ್ ಚಾಲಕನ ಮೇಲೆ ಭೀಕರವಾಗಿ ಹಲ್ಲೆ ನಡೆಸಿದೆ. ಅಷ್ಟೇ ಅಲ್ಲದೆ, ನ್ಯಾಯ ಕೇಳಲು ಠಾಣೆಗೆ ಹೋದ ಸ್ವಾಮೀಜಿಯನ್ನು ಬೆನ್ನಟ್ಟಿ ಪೊಲೀಸ್ ಠಾಣೆಯ ಒಳಗೇ ನುಗ್ಗಿ ದಾಂಧಲೆ ನಡೆಸಿರುವ ಘಟನೆ ಈಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಮಠದ ಪ್ರವೇಶ ದ್ವಾರದ ಜಾಗಕ್ಕೆ ಸಂಬಂಧಿಸಿದಂತೆ ಹರಳಯ್ಯ ಶ್ರೀಗಳು ಹಾಗೂ ಸ್ಥಳೀಯ ನಿವಾಸಿ ಸಿದ್ದೇಶ್ವರ್ ಕುಟುಂಬದ ನಡುವೆ ಕಳೆದ ಕೆಲವು ಸಮಯದಿಂದ ತೀವ್ರ ವ್ಯಾಜ್ಯವಿದೆ. ಸದ್ಯ ಈ ಜಾಗದ ವಿಚಾರವು ನ್ಯಾಯಾಲಯದ ಮೆಟ್ಟಿಲೇರಿದ್ದು, ಕಾನೂನು ಹೋರಾಟ ಮುಂದುವರಿದಿದೆ. ಪ್ರಕರಣ ನ್ಯಾಯಾಲಯದ ಹಂತದಲ್ಲಿದ್ದರೂ ಸಹ, ಸಿದ್ದೇಶ್ವರ್ ಮತ್ತು ಆತನ ಕಡೆಯವರು ಪದೇಪದೇ ದಬ್ಬಾಳಿಕೆ ನಡೆಸುತ್ತಿದ್ದರು. ಕೆಲವು ತಿಂಗಳುಗಳ ಹಿಂದೆಯೂ ಮಠದ ಪ್ರವೇಶ ದ್ವಾರಕ್ಕೆ ಬೇಲಿ ಹಾಕಿ ದರ್ಪ ತೋರಲಾಗಿತ್ತು ಎಂದು ಆರೋಪಿಸಲಾಗಿದೆ.

ರಾತ್ರಿ ನಡೆದಿದ್ದೇನು?

ನಿನ್ನೆ ರಾತ್ರಿ ಸಿದ್ದೇಶ್ವರ ಮತ್ತು ಇತರರು ಮಠದ ಆವರಣಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಾರೆ. ಮಠದ ಜಾಗದ ವಿಚಾರವಾಗಿ ಗಲಾಟೆ ಆರಂಭಿಸಿ, ಜಾತಿನಿಂದನೆ ಮಾಡುತ್ತಾ ಹರಳಯ್ಯ ಶ್ರೀಗಳ ಮೇಲೆ ಒದ್ದು, ತಿವಿದು ಏಕಾಏಕಿ ಹಲ್ಲೆ ನಡೆಸಿದ್ದಾರೆ. ಈ ವೇಳೆ ಶ್ರೀಗಳ ಮೂಗು ಮತ್ತು ಬಾಯಿಯಲ್ಲಿ ರಕ್ತ ಬಂದಿದೆ. ಶ್ರೀಗಳ ರಕ್ಷಣೆಗೆ ಬಂದ ಮಠದ ಶಾಲಾ ಬಸ್ ಚಾಲಕ ಭೀಮರಾಜ್ ಎಂಬುವವರ ಮೇಲೂ ದುಷ್ಕರ್ಮಿಗಳು ನಿರ್ದಕ್ಷಿಣ್ಯವಾಗಿ ಹಲ್ಲೆ ನಡೆಸಿದ್ದಾರೆ. "ನಿನ್ನನ್ನು ಕೊಂದೇ ನಾನು ಸಾಯುತ್ತೇನೆ" ಎಂದು ಸಿದ್ದೇಶ್ವರ್ ಸ್ವಾಮೀಜಿಗೆ ಪ್ರಾಣ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.

ಪೊಲೀಸ್ ಠಾಣೆಯಲ್ಲೇ ರೌಡಿಸಂ!

ದುಷ್ಕರ್ಮಿಗಳ ದಾಳಿಯಿಂದ ತಪ್ಪಿಸಿಕೊಂಡು ಹರಳಯ್ಯ ಶ್ರೀಗಳು ತಕ್ಷಣವೇ ರಕ್ಷಣೆ ಕೋರಿ ಹಾಗೂ ದೂರು ನೀಡಲು ಐಮಂಗಲ ಪೊಲೀಸ್ ಠಾಣೆಗೆ ತೆರಳಿದ್ದಾರೆ. ಆದರೆ, ಆರೋಪಿಗಳು ಕಾನೂನಿಗೂ ಹೆದರದೆ ಶ್ರೀಗಳನ್ನು ಬೆನ್ನಟ್ಟಿಕೊಂಡು ಪೊಲೀಸ್ ಠಾಣೆಯ ಒಳಗೇ ನುಗ್ಗಿದ್ದಾರೆ. ಪೊಲೀಸರ ಸಮ್ಮುಖದಲ್ಲೇ ಶ್ರೀಗಳ ಎದೆಗೆ ಒದ್ದು ದೌರ್ಜನ್ಯ ಎಸಗಿದ್ದಲ್ಲದೆ, ಠಾಣೆಯಲ್ಲಿದ್ದ ಕುರ್ಚಿಗಳನ್ನು ಮುರಿದು ಹಾಕಿದ್ದಾರೆ. ಸದ್ಯ ತೀವ್ರವಾಗಿ ಗಾಯಗೊಂಡಿರುವ ಹರಳಯ್ಯ ಶ್ರೀಗಳು ಹಾಗೂ ಬಸ್ ಚಾಲಕ ಭೀಮರಾಜ್ ಅವರನ್ನು ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನಾ ಸ್ಥಳಕ್ಕೆ ಐಮಂಗಲ ಠಾಣೆಯ ಸಿಪಿಐ ಗುಡ್ಡಪ್ಪ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಜಿಲ್ಲಾಸ್ಪತ್ರೆಯಲ್ಲಿ ಹರಳಯ್ಯ ಶ್ರೀಗಳ ಆಕ್ರೋಶದ ನುಡಿಗಳು:

ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹರಳಯ್ಯ ಶ್ರೀಗಳು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಸ್ಥಳೀಯ ಪೊಲೀಸ್ ವ್ಯವಸ್ಥೆಯ ವಿರುದ್ಧ ತೀವ್ರ ಕಿಡಿಕಾರಿದ್ದಾರೆ. "ಮಠದ ಜಾಗದ ವಿವಾದ ನ್ಯಾಯಾಲಯದಲ್ಲಿದೆ. ಹೀಗಿದ್ದರೂ ಸಿದ್ದೇಶ್ವರ್ ಯಾರದ್ದೋ ಕುಮ್ಮಕ್ಕಿನಿಂದ ಪದೇಪದೇ ನಮ್ಮ ಮೇಲೆ ದೌರ್ಜನ್ಯ ಮಾಡುತ್ತಿದ್ದಾನೆ. ಕೆಲವು ತಿಂಗಳ ಹಿಂದೆ ಮಠದ ದ್ವಾರಕ್ಕೆ ಬೇಲಿ ಹಾಕಿದಾಗ ದೂರು ನೀಡಲು ಹೋದರೂ ಪೊಲೀಸರು ದೂರನ್ನು ಸ್ವೀಕರಿಸದೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಪೊಲೀಸರ ನಿರ್ಲಕ್ಷ್ಯವೇ ಇಷ್ಟೆಲ್ಲಾ ನಡೆಯಲು ಕಾರಣ. ಐಮಂಗಲ ಠಾಣೆಯ ಒಳಗೇ ನುಗ್ಗಿ ನನ್ನ ಮೇಲೆ ಒದ್ದು, ಕುರ್ಚಿ ಮುರಿದು ದರ್ಪ ತೋರಿದ್ದಾರೆ ಎಂದರೆ ಇಲ್ಲಿ ಕಾನೂನು ಸುವ್ಯವಸ್ಥೆ ಎಲ್ಲಿದೆ? ತಕ್ಷಣವೇ ಐಮಂಗಲ ಠಾಣೆಯ ಮಹಿಳಾ ಪಿಎಸ್‌ಐ (PSI) ಅವರನ್ನು ಅಮಾನತುಗೊಳಿಸಬೇಕು ಮತ್ತು ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು," ಎಂದು ಶ್ರೀಗಳು ಒತ್ತಾಯಿಸಿದ್ದಾರೆ.

PREV
Read more Articles on
click me!

Recommended Stories

ಕಾಡಂಚಿನ ಶಾಲಾ ಶಿಕ್ಷಕರಿಗೆ ಕಂಠಕ ತಂದ 'ಕರ್ತವ್ಯ' ಆ್ಯಪ್‌; ಆನ್‌ಲೈನ್ ಹಾಜರಾತಿ ದುಸ್ತರ
Bengaluru: 4 ವರ್ಷದ ಮಗು ಜತೆ ಕಟ್ಟಡದ ಮೇಲೆ ನಿಂತು ಆತ್ಮ*ಹತ್ಯೆಗೆ ಯತ್ನಿಸಿದ ಮಹಿಳೆ