
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸ್ಥಳೀಯ ಕನ್ನಡಿಗರ ಮೇಲೆ ಪರಭಾಷಿಕರ ದರ್ಪ ಹಾಗೂ ಗೂಂಡಾಗಿರಿ ದಿನೇ ದಿನೇ ಮಿತಿಮೀರುತ್ತಿದೆ. ಇತ್ತೀಚೆಗಷ್ಟೇ ಉತ್ತರ ಭಾರತೀಯರ ಕೆಲ ಪುಂಡಾಟಿಕೆಗಳ ಬೆನ್ನಲ್ಲೇ, ಈಗ ಮಲಯಾಳಿ ಮೂಲದ ಇಬ್ಬರು ಯುವಕರು ಡ್ರಗ್ಸ್ ಅಮಲಿನಲ್ಲಿ ಸ್ಥಳೀಯರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಅಟ್ಟಹಾಸ ಮೆರೆದಿರುವ ಆಘಾತಕಾರಿ ಘಟನೆ ನಗರದ ಎಲೆಕ್ಟ್ರಾನಿಕ್ಸ್ ಸಿಟಿ ಎರಡನೇ ಹಂತದಲ್ಲಿ (Electronic City Phase 2) ನಡೆದಿದೆ. ಖಾಸಗಿ ಜಾಗಕ್ಕೆ ಅನಧಿಕೃತವಾಗಿ ನುಗ್ಗಿದ್ದನ್ನು ಪ್ರಶ್ನಿಸಿದ ಕಾರಣಕ್ಕೆ ನಿವೃತ್ತ ಬಿಎಂಟಿಸಿ ಕಂಡಕ್ಟರ್ ಸೇರಿದಂತೆ ಮೂವರ ಮೇಲೆ ಚಾಕು ಹಾಗೂ ಗಾಜಿನ ಬಾಟಲಿಗಳಿಂದ ಹಲ್ಲೆ ನಡೆಸಲಾಗಿದ್ದು, ಸದ್ಯ ಇಬ್ಬರು ಮಲಯಾಳಿ ಕಿಡಿಗೇಡಿಗಳನ್ನು ಸ್ಥಳೀಯರು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.
ಶುಕ್ರವಾರ ಸಂಜೆ ಎಲೆಕ್ಟ್ರಾನಿಕ್ಸ್ ಸಿಟಿ ಹಂತ-2 ರ ವ್ಯಾಪ್ತಿಯಲ್ಲಿ ಕ್ಯಾಬ್‌ನಲ್ಲಿ ಬಂದಿದ್ದ ಇಬ್ಬರು ಮಲಯಾಳಿ ಯುವಕರು, ಅಲ್ಲಿನ ಖಾಸಗಿ ಜಮೀನೊಂದರ ಒಳಗೆ ಅನಧಿಕೃತವಾಗಿ ಪ್ರವೇಶ ಮಾಡಿದ್ದರು. ಈ ಜಮೀನು ಬಿಎಂಟಿಸಿಯ ನಿವೃತ್ತ ಕಂಡಕ್ಟರ್ ಆಗಿರುವ ರಾಮಚಂದ್ರ ಅವರಿಗೆ ಸೇರಿದ್ದಾಗಿತ್ತು. ತಮ್ಮ ಜಾಗಕ್ಕೆ ಅಪರಿಚಿತರು ಅಕ್ರಮವಾಗಿ ನುಗ್ಗಿದ್ದನ್ನು ಗಮನಿಸಿದ ರಾಮಚಂದ್ರ ಅವರು ಯುವಕರನ್ನು ತಡೆದು, ಒಳಗೆ ಬಂದಿದ್ದರ ಕುರಿತು ಪ್ರಶ್ನಿಸಿದ್ದಾರೆ. ಮಾದಕ ವಸ್ತುವಿನ (ಡ್ರಗ್ಸ್) ತೀವ್ರ ಅಮಲಿನಲ್ಲಿದ್ದ ಆ ಯುವಕರು ರಾಮಚಂದ್ರ ಅವರೊಂದಿಗೆ ಏಕಾಏಕಿ ವಾಗ್ವಾದಕ್ಕಿಳಿದಿದ್ದಾರೆ. ಮಾತಿನ ಚಕಮಕಿ ತಾರಕಕ್ಕೇರಿದ ಬೆನ್ನಲ್ಲೇ, ಕಿಡಿಗೇಡಿ ಯುವಕರು ತಮ್ಮ ಬಳಿಯಿದ್ದ ಚಾಕುವಿನಿಂದ ರಾಮಚಂದ್ರ ಅವರ ಮೇಲೆ ಮನಸೋಇಚ್ಛೆ ಇರಿದು ಭೀಕರವಾಗಿ ಹಲ್ಲೆ ನಡೆಸಿದ್ದಾರೆ.
ರಾಮಚಂದ್ರ ಅವರಿಗೆ ಚಾಕುವಿನಿಂದ ಇರಿದ ಬಳಿಕ, ಹಲ್ಲೆಕೋರರು ತಾವು ಬಂದಿದ್ದ ಕ್ಯಾಬ್‌ನಲ್ಲೇ ಸ್ಥಳದಿಂದ ಪರಾರಿಯಾಗಲು ಯತ್ನಿಸಿದರು. ಆದರೆ, ಬೆಂಗಳೂರಿನ ಎಂದಿನ ರಸ್ತೆ ಸಂಚಾರ ದಟ್ಟಣೆಯಿಂದಾಗಿ (Traffic Jam) ಇವರ ಕ್ಯಾಬ್ ಮುಂದೆ ಚಲಿಸಲಾಗದೆ ರಸ್ತೆಯಲ್ಲೇ ಸಿಲುಕಿಕೊಂಡಿದೆ. ಈ ವೇಳೆ ಸಾರ್ವಜನಿಕರು ತಮ್ಮನ್ನು ಹಿಡಿಯಲು ಬರುತ್ತಿರುವುದನ್ನು ಕಂಡ ಯುವಕರು ಕ್ಯಾಬ್‌ನಿಂದ ಇಳಿದು ಪಕ್ಕದಲ್ಲೇ ಇದ್ದ ಬೇಕರಿಯೊಂದರ ಒಳಗೆ ನುಗ್ಗಿದ್ದಾರೆ.
ಬೇಕರಿಯೊಳಗೆ ನುಗ್ಗಿದ ಯುವಕರು ಅಲ್ಲಿ ಕೈಗೆ ಸಿಕ್ಕ ಸಿಕ್ಕ ಗಾಜಿನ ಬಾಟಲಿಗಳನ್ನು ಹಿಡಿದು ಸಾರ್ವಜನಿಕರ ಮೇಲೆ ಎಸೆಯುತ್ತಾ ಅಟ್ಟಹಾಸ ಮೆರೆದಿದ್ದಾರೆ. ಅಷ್ಟೇ ಅಲ್ಲದೆ, ಪ್ರಾದೇಶಿಕ ನಿಂದನೆ ಹಾಗೂ ದ್ವೇಷ ಕಾರುತ್ತಾ, "ನಾನು ಮಲಯಾಳಿ, ನನ್ನ ಸಹಾಯಕ್ಕೆ ಇಲ್ಲಿ ಯಾರಾದರೂ ಮಲಯಾಳಿಗಳಿದ್ದರೆ ಬನ್ನಿ" ಎಂದು ಗಟ್ಟಿಯಾಗಿ ಕಿರುಚಾಡುತ್ತಾ ಸ್ಥಳದಲ್ಲಿ ಭೀತಿ ಸೃಷ್ಟಿಸಿದ್ದಾರೆ. ಈ ವೇಳೆ ಗಲಾಟೆ ಬಿಡಿಸಲು ಹಾಗೂ ಇವರನ್ನು ನಿಯಂತ್ರಿಸಲು ಮುಂದಾದ ಹರೀಶ್ ಮತ್ತು ಶಿವ ಎಂಬ ಇಬ್ಬರು ಸ್ಥಳೀಯ ಯುವಕರ ಮೇಲೂ ಈ ಪುಂಡರು ಮಾರಣಾಂತಿಕ ಹಲ್ಲೆ ನಡೆಸಿದ್ದು, ಇಬ್ಬರೂ ತೀವ್ರವಾಗಿ ಗಾಯಗೊಂಡಿದ್ದಾರೆ.
ಕಿಡಿಗೇಡಿ ಯುವಕರನ್ನು ಹಿಡಿಯಲು ಹೋದ ಸಾರ್ವಜನಿಕರ ಮೇಲೆಲ್ಲಾ ಅವರು ಸಿಕ್ಕ ಸಿಕ್ಕ ವಸ್ತುಗಳಿಂದ ದಾಳಿ ನಡೆಸಿದ್ದಾರೆ. ಆದರೂ ಧೈರ್ಯ ಗುಂದದ ಸ್ಥಳೀಯರು, ಇಬ್ಬರನ್ನೂ ಬೇಕರಿಯೊಳಗೇ ಹಾಕಿ ಲಾಕ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ತಕ್ಷಣವೇ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಹಲ್ಲೆಕೋರರನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತ ಮಲಯಾಳಿ ಯುವಕರ ಬ್ಯಾಗ್‌ಗಳನ್ನು ತಪಾಸಣೆ ನಡೆಸಿದಾಗ ಪೊಲೀಸರಿಗೆ ಸಣ್ಣ ಸಣ್ಣ ಅನುಮಾನಾಸ್ಪದ ಪ್ಯಾಕೆಟ್‌ಗಳು ಪತ್ತೆಯಾಗಿದ್ದು, ಇವು ತೀವ್ರ ನಶೆ ನೀಡುವ ಮಾದಕ ವಸ್ತುಗಳು (Synthetic Drugs) ಇರಬಹುದು ಎಂದು ಶಂಕಿಸಲಾಗಿದೆ. ಈ ಇಡೀ ಗೂಂಡಾಗಿರಿಯ ದೃಶ್ಯಗಳು ಹತ್ತಿರದ ಸಿಸಿಟಿವಿ (CCTV) ಕ್ಯಾಮೆರಾಗಳಲ್ಲಿ ಸೆರೆಯಾಗಿವೆ.
ಚಾಕು ಇರಿತದಿಂದ ತೀವ್ರವಾಗಿ ಗಾಯಗೊಂಡಿರುವ ನಿವೃತ್ತ ಬಿಎಂಟಿಸಿ ಕಂಡಕ್ಟರ್ ರಾಮಚಂದ್ರ ಹಾಗೂ ಇತರ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ, ಸಾರ್ವಜನಿಕ ಶಾಂತಿ ಭಂಗ ಹಾಗೂ ಎನ್‌ಡಿಪಿಎಸ್ (NDPS) ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.