
ಬೆಂಗಳೂರು (ಜೂ. 26): ಮದ್ಯ ಸೇವನೆ ಮಾಡಿದ ನಶೆಯಲ್ಲಿದ್ದ ಯುವಕನೊಬ್ಬ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ ಹಿಂಭಾಗದ ಎಂಬೆಸಿ ಅಪಾರ್ಟ್‌ಮೆಂಟ್ ಕಾಂಪೌಂಡ್‌ನಲ್ಲಿದ್ದ 70 ಅಡಿ ಎತ್ತರದ ಮರವನ್ನೇರಿದ್ದಾನೆ. ಕೂಡಲೇ ಭದ್ರತಾ ಸಿಬ್ಬಂದಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರ ಬಳಿ ನನಗೊಂದು ಸಿಗರೇಟ್ ಬೇಕು ಎಂದು ಹಠ ಮಾಡಿದ್ದಾನೆ. ಪೊಲೀಸರು ಲಾಠಿ ತೋರಿಸಿ ಬೆದರಿಕೆ ಹಾಕುತ್ತಿದ್ದಂತೆ 50 ಅಡಿ ಮೇಲಿಂದ ಜಿಗಿದಿದ್ದಾನೆ. ಪೊಲೀಸರು ಟಾರ್ಪಲ್ ಹಿಡಿದು ಆತನನ್ನು ರಕ್ಷಣೆ ಮಾಡಲು ಮುಂದಾದರೂ, ನೆಲಕ್ಕೆ ಬಿದ್ದಾಗ ಸೊಂಟ ಮುರಿದು ಹೋಗಿದೆ.
ಈ ಘಟನೆ ಪೊಲೀಸ್ ಆಯುಕ್ತರ ಕಚೇರಿ ಹಿಂಭಾಗದ ಎಂಬೆಸಿ ಅಪಾರ್ಟ್‌ಮೆಂಟ್ ಬಳಿಯಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ. ಕುಡಿದ ಮತ್ತಿನಲ್ಲಿ ಮರ ಹತ್ತಿ ಹುಚ್ಚಾಟ ಮೆರೆದ ಯುವಕನೊಬ್ಬ 50 ಅಡಿಗೂ ಹೆಚ್ಚು ಎತ್ತರದಿಂದ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾನೆ. ಘಟನೆ ನಡೆದ ವೇಳೆಯು ಮರದ ಮೇಲಿನಿಂದ ನೆಲಕ್ಕೆ ಬಿದ್ದ ರಭಸಕ್ಕೆ ಸುತ್ತಲಿನ ಜನ ಬೆಚ್ಚಿಬಿದ್ದರು. ಪ್ರತ್ಯಕ್ಷದರ್ಶಿಗಳ ಪ್ರಕಾರ, ನಶೆಯಲ್ಲಿದ್ದ ಯುವಕ ಅಪಾರ್ಟ್‌ಮೆಂಟ್‌ನ ಹಿಂಭಾಗದ ಬೃಹತ್ ಮರವೊಂದನ್ನು ಹತ್ತಿ ಮೇಲೆ ಕೂತು ಕೂಗಾಡುತ್ತಿದ್ದನು. 'ನನಗೆ ಸಿಗರೇಟ್ ಕೊಡಿ' ಎಂದು ಜೋರಾಗಿ ಕಿರುಚುತ್ತಿದ್ದನು. ಈ ಸ್ಥಿತಿಯಲ್ಲಿ ಅಪಾರ್ಟ್‌ಮೆಂಟ್‌ನ ಭದ್ರತಾ ಸಿಬ್ಬಂದಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಪೊಲೀಸರು ಸ್ಥಳಕ್ಕೆ ತಕ್ಷಣ ಧಾವಿಸಿ, ಯುವಕನಿಗೆ ಮರದಿಂದ ಇಳಿಯುವಂತೆ ಮನವೊಲಿಸಲು ಮುಂದಾದರು. ಆದರೆ, ಆತನು ಗಮನಿಸದೇ ಮತ್ತೆ ಮರದ ಎತ್ತರದ ಸ್ಥಾನಕ್ಕೆ ಹತ್ತಿದ್ದಾನೆ. ಪೊಲೀಸರು ನಾವು ಹತ್ತಿ ಬಂದರೆ ನಿನಗೆ ಲಾಠಿಯ ಪೆಟ್ಟು ಬೀಳುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಆದರೆ, ಪೊಲೀಸರಿಗೆ ಹೆದರಿ ಮರದ ಕೊಂಬೆಯನ್ನು ಹಿಡಿದು ನೇತಾಡಲು ಶುರುಮಾಡಿದ್ದಾನೆ. ನಂತರ ಹೆಚ್ಚಿನ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಪರಿಸ್ಥಿತಿ ಗಂಭೀರವಾಗುತ್ತಿರುವುದನ್ನು ಕಂಡು ಕೂಡಲೇ ಅಲ್ಲಿಂದ ಜಿಗಿಯಲು ಮುಂದಾಗಿದ್ದಾನೆ. ತಕ್ಷಣವೇ ಅಲ್ಲಿದ್ದ ಪೊಲೀಸರೊಬ್ಬರು ಟಾರ್ಪುಲಿನ್ ತಂದು ಕೆಳಗೆ ಹಿಡಿದು ಯುವಕನನ್ನು ರಕ್ಷಣೆ ಮಾಡಲು ಹರಸಾಹಸ ನಡೆಸಿದರು.
ಆದರೆ, ಅವರ ಯತ್ನ ಯಶಸ್ವಿಯಾಗದೇ, ಯುವಕ ಮರದಿಂದ ನೆಲಕ್ಕೆ ಬಿದ್ದು ತೀವ್ರ ಪೆಟ್ಟಿಗೆ ಒಳಗಾಗಿದ್ದಾಎ. ಹೆಚ್ಚಿನ ಪೆಟ್ಟು ಸೊಂಟ ಭಾಗಕ್ಕೆ ಆಗಿದ್ದು, ಸೊಂಟ ಮುರಿದುಕೊಂಡಿದೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಇನ್ನು ಸ್ಥಳದಲ್ಲಿದ್ದ ಪೊಲೀಸರು ತಕ್ಷಣ ಆತನನ್ನು ಆಸ್ಪತ್ರೆಗೆ ಸಾಗಿಸಿದರು. ಯುವಕನ ಹೆಸರು ಹಾಗೂ ಹಿನ್ನೆಲೆ ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಆದರೆ, ಪ್ರಾಥಮಿಕ ಮಾಹಿತಿಯಂತೆ ಆತ ಮದ್ಯ ಸೇವನೆಯ ನಶೆಯಲ್ಲಿದ್ದನು ಎಂಬುದು ತಿಳಿದುಬಂದಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.